ಆದ್ಯೋತ್ ಸುದ್ದಿ ನಿಧಿ : ಕೊರೊನಾ, ಕೆ.ಎಫ್.ಡಿ, ಮಳೆಗಾಲದ ಮುನ್ನೆಚ್ಚರಿಕೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಶಿರಸಿ ಉಪವಿಭಾಗಾಧಿಕಾರಿ ಡಾ. ಈಶ್ವರ್ ಉಳ್ಳಾಗಡ್ಡಿ ಸಿದ್ದಾಪುರದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸಿ, ಹೊರ ರಾಜ್ಯದವರು ಬಂದರೆ ಕೂಡಲೇ ತಿಳಿಸಿ. ಹೆಲ್ತ್ ಸರ್ವೇ ಆಗಬೇಕು. ರೋಗ ಲಕ್ಷಣಗಳಿದ್ದರೆ ಕೂಡಲೇ ಕ್ವಾರಂಟೈನ್ ಸೆಂಟರ್ ಗೆ ತಿಳಿಸಿ. ಪಿಡಿಓ ಗಳು ಇದರ ಬಗ್ಗೆ ಲಕ್ಷವಹಿಸಬೇಕು. ಇದರಲ್ಲಿ ನ್ಯೂನತೆ ಕಂಡುಬಂದಲ್ಲಿ ಅಂತಹ ನೋಡಲ್ ಅಧಿಕಾರಿಗಳನ್ನು ಕೂಡಲೇ ಬಿಡುಗಡೆ ಮಾಡುತ್ತೇವೆ ಅಂತ ಪಿಡಿಓ ಗಳಿಗೆ ಎಚ್ಚರಿಕೆ ನೀಡಿದರು. ಕೊರೊನಾ ಬಗ್ಗೆ ವಿಶೇಷ ಕಾಳಜಿ ವಹಿಸಿ ಮೀಟಿಂಗ್ ಮಾಡಿ. ನಿಮ್ಮ ಕಚೇರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದರು. ತಾಲೂಕಿನಲ್ಲಿ ಮಂಗನಕಾಯಿಲೆಯ 59 ಪ್ರಕರಣ ಹಾಗೂ 1 ಡೆಂಗ್ಯೂ ಮತ್ತು ಕೆ.ಎಫ್.ಡಿ ಲಕ್ಷಣವಿರುವ ಪ್ರಕರಣ ದಾಖಲಾಗಿದ್ದು, ಜನರು ಜಾಗೃತರಾಗಿರಬೇಕು ಎಂದರು.
ಮಳೆಗಾಲದ ಪೂರ್ವ ತಯಾರಿಗಾಗಿ ಅರಣ್ಯ ಇಲಾಖೆಯವರು ಎಲ್ಲೇ ಮರ ಬಿದ್ದರೂ ಕೂಡಲೇ ತೆರವು ಮಾಡಬೇಕು. ಹವಾಮಾನ ಇಲಾಖೆ ಭರ್ಜರಿ ಮಳೆಯ ಮುನ್ಸೂಚನೆ ನೀಡಿದೆ. ಆದ್ದರಿಂದ ಮಳೆಗಾಲದ ಪೂರ್ವ ತಯಾರಿಯ ಬಗ್ಗೆ ತಕ್ಷಣದ ಕ್ರಮಗಳ ಬಗ್ಗೆ ಗಮನಹರಿಸಿ. ಪ್ರಕೃತಿ ವಿಕೋಪದಲ್ಲಿ ಯಾವುದೇ ರೀತಿಯ ನಿಧಾನಗತಿಯನ್ನ ಸಹಿಸುವುದಿಲ್ಲ. ಗುಡ್ಡಕುಸಿತದ ಬಗ್ಗೆ ಕೂಡಲೇ ಗಮನಹರಿಸಿ ಮುಂಜಾಗ್ರತೆ ಕ್ರಮಗಳನ್ನ ಕೈಗೊಳ್ಳಿ ಎಂದರು. ಇನ್ನು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ಇಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಕೆ ಸಾಧ್ಯವಿದೆ. ಎಲ್ಲಾದರೂ ಕುಡಿಯುವ ನೀರಿನ ಸಮಸ್ಯೆಗಳಿದ್ದಲ್ಲಿ ಕೂಡಲೇ ಗಮನಕ್ಕೆ ತನ್ನಿ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದರು. ನಮ್ಮ ಉಪವಿಭಾಗದಲ್ಲಿ ಎಲ್ಲರ ಕೆಲಸ ಕೂಡಾ ಉತ್ತಮವಾಗಿದೆ. ನಮ್ಮ ಟೀಮ್ ವರ್ಕ್ ಜಿಲ್ಲೆಯಲ್ಲೇ ಉತ್ತಮವಾಗಿದೆ. ಏನೇ ಕಷ್ಟ ಬಂದರೂ ನನ್ನ ಗಮನಕ್ಕೆ ತನ್ನಿ. ಉತ್ತಮ ಕೆಲಸವನ್ನು ನಿರ್ವಹಿಸಿ ಎಂದರು.
ನಿಜವಾಗಿಯೂ ನಮ್ಮ ಜಿಲ್ಲೆಯ, ವಿಭಾಗದ ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳು ಕರೋನಾ ಬಗ್ಗೆ
ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಭಿನಂದನೆಗಳು.