ಆದ್ಯೋತನ್ಯೂಸ್ ಸುದ್ದಿನಿಧಿ:
ಮೇ 11 ರಿಂದ ಮ್ಯಾಮ್ಕೋಸ್, ಕ್ಯಾಂಪ್ಕೋ, ತುಮ್ಕೋಸ್ ಸೇರಿದಂತೆ ಎಲ್ಲೆಡೆಯ ಅಡಕೆ ವ್ಯವಹಾರದ ಸಂಸ್ಥೆಗಳು, ಅಡಕೆ ಮಂಡಿಗಳು ವಹಿವಾಟು ಆರಂಭಿಸಿದೆ.
ಶಿರಸಿ ಸಿದ್ದಾಪುರದ ಟಿಎಸ್‍ಎಸ್, ಟಿಎಂಎಸ್ ಸಂಸ್ಥೆಗಳಲ್ಲಿ ಈಗಾಗಲೇ ಅಡಕೆ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಕರ್ನಾಟಕ ಅರೇಕಾ ಛೇಂಬರ್ ಆಫ್ ಕಾಮರ್ಸ(ರಿ) ಇದರ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ತಿಳಿಸಿದ್ದಾರೆ.
ಈ ಕುರಿತು ಸಿದ್ದಾಪುರದ ಆಡಳಿತ ಕಚೇರಿಯಿಂದ ಪತ್ರಿಕಾ ಹೇಳಿಕೆ ನೀಡಿರುವ ಅವರು ಈಗಾಗಲೇ ಮ್ಯಾಮ್ಕೋಸ್ ಕೇಂದ್ರ ಕಚೇರಿಯಲ್ಲಿ ಅಡಕೆ ಖರೀದಿ ಕುರಿತು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಮೇ 11 ರಿಂದ ಅಡಕೆ ಮಾರುಕಟ್ಟೆ ಪ್ರಾರಂಭಿಸುವ ಮೂಲಕ ಬೆಳೆಗಾರರ ಆತಂಕ ದೂರವಾಗಲಿದೆ. ಅಡಕೆ ಕಾರ್ಯಪಡೆಯ ಅಧ್ಯಕ್ಷ ಅರಗ ಜ್ಞಾನೇಂದ್ರ ಅವರೂ ಈ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ. ಉತ್ತರ ಭಾರತದಲ್ಲಿ ಗುಟ್ಕಾ ಹಾಗೂ ಪಾನಮಸಾಲಾ ಕಂಪನಿಗಳು ಸ್ಥಗಿತಗೊಂಡಿದ್ದು ಇನ್ನು ಒಂದು ವಾರದಲ್ಲಿ ಕೆಲಸ ಪ್ರಾರಂಭಿಸಲಿವೆ. ಆ ಕಂಪನಿಗಳಲ್ಲೂ ಅಡಕೆ ದಾಸ್ತಾನಿಲ್ಲ. ಈ ಹಿನ್ನೆಲೆಯಲ್ಲಿ ಅಡಕೆ ಬೆಳೆಗಾರರು ಧೈರ್ಯದಿಂದಿರಬಹುದು. ಇದೀಗ ಅಡಕೆ ಸಂಸ್ಕರಣೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ವಿದೇಶಿ ಅಡಕೆಯೂ ಆಮದಾಗುತ್ತಿಲ್ಲ. ಕನಿಷ್ಟ ದರವನ್ನು ಕಾಯ್ದುಕೊಳ್ಳಲು ಅಡಕೆ ಖರೀದಿಯ ಪ್ರಮುಖ ಸಂಘ-ಸಂಸ್ಥೆಗಳು ಮುಂದಾಗಿವೆ. ಅಡಕೆ ಮಾರುಕಟ್ಟೆಗೆ ಯಾವುದೇ ಆತಂಕವಿಲ್ಲ.ಎಂದು ಆರ್.ಎಸ್.ಹೆಗಡೆ ಹರಗಿ ಹಾಗೂ ಕಾರ್ಯದರ್ಶಿ ಆರ್.ಎಂ.ಪಾಟೀಲ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.