ಆದ್ಯೋತ್ ಸುದ್ದಿನಿಧಿ:
ರಾಷ್ಟ್ರ ಸಮರ್ಪಿತ ರಾಜನೀತಿಜ್ಞ ಪಂಡಿತ್ ದೀನದಯಾಳ್ ಉಪಾದ್ಯಾಯ
ಉತ್ತರಕನ್ನಡ ಜಿಲ್ಲೆಯ ಶಿರಸಿ ನಾಡಿಗಗಲ್ಲಿಯಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯರ ಬಲಿದಾನ ದಿನದಂದು ‘ಸಮರ್ಪಣಾ ದಿನ‘ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ,ಅಂತ್ಯೋದಯ ಮತ್ತು ಏಕಾತ್ಮ ಮಾನವ ದರ್ಶನದ ಹರಿಕಾರರಾದ ಪಂಡಿತ ದೀನದಯಾಳ ಉಪಾಧ್ಯಾಯರು ಒಬ್ಬ ರಾಷ್ಟ್ರ ಸಮರ್ಪಿತ ಪುಷ್ಪ ಎಂದು ಹೇಳಿದ ಅವರು ದೀನದಯಾಳರ ಅತ್ಯಂತ ಕಷ್ಟದ ಬಾಲ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕ, ಶಿಕ್ಷಣದ ನಂತರ ನಿಸ್ವಾರ್ಥ ಸಮಾಜ ಸೇವೆ, ತ್ಯಾಗ ಮತ್ತು ಬಲಿದಾನವನ್ನು ವಿವರಿಸಿದರು.
ಭಾರತೀಯ ಜನಸಂಘದ ಸಂಸ್ಥಾಪನೆಯ ಕಾಲದಲ್ಲಿ ಸಂಘಟನೆಯ ಹಿರಿಯ ನಾಯಕರಾಗಿ ಪಕ್ಷವನ್ನು ಬಲಪಡಿಸುತ್ತಾ ರಾಷ್ಟ್ರಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ದೀನದಯಾಳ ಜೀ ಅವರ ಸರಳ ಜೀವನ ಮತ್ತು ಆದರ್ಶದ ಚಿಂತನೆಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗುರುಪ್ರಸಾದ ಹೆಗಡೆ ತಿಳಿಸಿದರು.
ಆಗಮಿಸಿದ್ದ ಎಲ್ಲಾ ಕಾರ್ಯಕರ್ತರೂ ಹಿರಿಯ ರಾಜಕೀಯ ನೇತಾರ ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದರು.
ಶಿರಸಿ ನಗರ ಮಂಡಲದ ಅಧ್ಯಕ್ಷ ರಾಜೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮೋರ್ಚಾ ಅಧ್ಯಕ್ಷರು ಹಾಗೂ ನಗರ ಸಭಾ ಸದಸ್ಯ ದೀಪಾ ಮಹಾಲಿಂಗಣ್ಣವರ್ ಸ್ವಾಗತಿಸಿದರು,
ಮಂಡಲ ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡ ನಿರ್ವಹಿಸಿದರು, ರಾಕೇಶ ತಿರುಮಲೆ ಧನ್ಯವಾದ ಸಮರ್ಪಿಸಿದರು.
ಶ್ರೀರಾಮ ನಾಯ್ಕ, ವೀಣಾ ಶೆಟ್ಟಿ, ನಾಗರಾಜ ನಾಯ್ಕ, ವಿಶಾಲ ಮರಾಠೆ, ನಗರ ಸಭೆಯ ಸದಸ್ಯರು, ಶಿರಸಿ ನಗರ ಮತ್ತು ಗ್ರಾಮೀಣ ಮಂಡಲಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
#####
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳ ಸಭೆ ನಡೆಸಿದರು.
ತಾಲೂಕಿನ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವುದರ ಜತೆಗೆ ಪ್ರತಿ ಇಲಾಖೆಯ ಅನುಧಾನ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದ
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ತಹಶೀಲ್ದಾರ ಅಧ್ಯಕ್ಷತೆಯಲ್ಲಿರುವ ಸಮಿತಿ ಸಭೆ ನಡೆಸಿ ತುರ್ತು ಅಗತ್ಯವಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಪಿಡಿಓಗಳ ಬಳಿ ವರದಿ ತರಿಸಿಕೊಂಡು ನೀರಿನ ಅಭಾವ ತಲೆದೋರುವ ಸ್ಥಳ ಗುರುತಿಸಿ ಸೂಕ್ತ ವ್ಯವಸ್ಥೆ ಮಾಡಿಕೊಂಡು ಸಿದ್ದವಾಗಿರಿ ಎಂದರು.
ನಗರದ ಜನತೆಯ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮಾರಿಗದ್ದೆ ಹಾಗೂ ಕೆಂಗ್ರೆಯಲ್ಲಿ ತಾತ್ಕಾಲಿಕ ಬಂಡ್ ನಿರ್ಮಿಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು.
ಹೈಟೆಕ್ ಆಸ್ಪತ್ರೆ ನಿರ್ಮಾಣವಾಗಲಿರುವ ಹಿನ್ನೆಲೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಕ್ವಾಟರ್ಸ್ ನಿರ್ಮಿಸಲು ಕೂಡಲೇ ಸ್ಥಳ ನೀಡುವಂತೆ ಕಂದಾಯ ಹಾಗೂ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. ಈ ವರ್ಷದ ನಿಮ್ಮ ಗುರಿಯನ್ನು ತಲುಪಿ. ಸರ್ಕಾರದ ಅನುದಾನ ವ್ಯರ್ಥವಾಗದಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಗ್ರಾಮ ಪಂಚಾಯ್ತಿ ೧೪ನೇ ಹಣಕಾಸು ಯೋಜನೆಯಡಿ ೩.೬೬ ಕೋಟಿ ಉಳಿದಿದ್ದು, ಲ್ಯಾಪ್ಸ್ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಓ ಎಫ್.ಜಿ.ಚಿನ್ನಣ್ಣನವರ್ ತಿಳಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ತಾಲೂಕಾ ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಉಪಾಧ್ಯಕ್ಷ ಚಂದ್ರು ದೇವಾಡಿಗ, ಜಿಪಂ ಸದಸ್ಯರಾದ ಬಸವರಾಜ ದೊಡ್ಮನಿ, ಜಿ.ಎನ್.ಹೆಗಡೆ, ಉಷಾ ಹೆಗಡೆ ಉಪಸ್ಥಿತರಿದ್ದರು.
ತಹಶೀಲ್ದಾರ ಹಾಗೂ ಇತರ ಅಧಿಕಾರಿಗಳು ತಮ್ಮ ಅಧಿಕಾರವನ್ನು ಸದ್ದುದ್ದೇಶಕ್ಕೆ ಬಳಸಿಕೊಳ್ಳಬೇಕು. ಬಡವರಿಗೆ ಸುಖಾ ಸುಮ್ಮನೆ ತೊಂದರೆ ಕೊಡಬೇಡಿ. ಸಾರ್ವಜನಿಕ ಹಿತವಿದ್ದರೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು.
ನಗರದ ದೇವಿಕೆರೆ ಅಭಿವೃದ್ದಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಬೇಕು ಎಂದು ಕಾಗೇರಿ ಸೂಚಿಸಿದರು.