ಆದ್ಯೋತ್ ಸುದ್ದಿನಿಧಿ:
ಪುಲ್ವಾಮ ಹುತಾತ್ಮ ಯೋಧರಿಗೆ ಯುವ ಸಮೂಹದಿಂದ ನಮನ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ರಾಮಕೃಷ್ಣ ಹೆಗಡೆ ವೃತ್ತದಲ್ಲಿ
ರವಿವಾರ, ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ಎರಡು ವರ್ಷಗಳ ಹಿಂದೆ ಉಗ್ರಗಾಮಿಗಳ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸ್ಥಳೀಯ ಯುವ ಸಮೂಹದ ವತಿಯಿಂದ ನಮನ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮನ ಸಲ್ಲಿಸಿ ಮಾತನಾಡಿದ ಪಪಂ ಸದಸ್ಯ ವಿಜಯೇಂದ್ರ ಗೌಡರ್, ದೇಶದ ಕುರಿತಾಗಿ ಇಂದಿನ ಯುವಕರಲ್ಲಿ ಅಭಿಮಾನ, ಜಾಗೃತಿ ಮೂಡಿರುವದು ಭವಿಷ್ಯದಲ್ಲಿ ದೇಶಕ್ಕೆ ಒಳಿತಾಗುವ ಸೂಚನೆಯನ್ನು ತೋರಿಸುತ್ತದೆ. ಯಾರ ಒತ್ತಾಯವೂಇಲ್ಲದೇ ಸ್ವಯಂಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವದು ಉತ್ತಮ ಕಾರ್ಯ. ದೇಶಕ್ಕಾಗಿ ಮಡಿದ ಯೋಧರ ಸ್ಮರಣೆ ಉಳಿಸಿಕೊಳ್ಳುವದರ ಜೊತೆಗೆ ದೇಶಕ್ಕಾಗಿ ನಾವೂ ಶ್ರಮಿಸಲು ಮುಂದಾಗೋಣ ಎಂದರು.
ಸಾಮಾಜಿಕ ಕಾರ್ಯಕರ್ತ ಅನಂತ ಪೈ ಹೆಗ್ಗಾರ ಮಾತನಾಡಿ, ನಮ್ಮ ದೇಶ ಪವಿತ್ರವಾದ ಭೂಮಿ. ಇದನ್ನು ನಾಶ ಮಾಡಲು ಹಲವಾರು ರೀತಿಯಲ್ಲಿ ಷಡ್ಯಂತ್ರಗಳು ನಡೆಯುತ್ತಿದ್ದರೂ ಅದು ಸಫಲವಾಗಿಲ್ಲ, ಆಗುವದೂ ಇಲ್ಲ. ಇಂದಿನ ಯುವಕರು ನಮ್ಮ ದೇಶದ ಕುರಿತಾಗಿ ಅಭಿಮಾನ, ಗೌರವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು. ದೇಶಕ್ಕಾಗಿ ನಮ್ಮನ್ನು ಅರ್ಪಿಸಿಕೊಳ್ಳಲು ಹಿಂಜರಿಯಬಾರದು ಎಂದರು.
ಸಂಘಟಕರಾದ ಗಣೇಶ ನಾಯ್ಕ, ಸುಜಯ ಶಾನಭಾಗ್, ತೇಜಸ್ವಿ ಹೆಗಡೆ, ದಿಲೀಪ ಜೋಗಳೇಕರ, ಆದಿತ್ಯ ಭಂಡಾರಿ, ಸಂಜೀವ ಮಡಿವಾಳ ಬಾಲಿಕೊಪ್ಪ, ಧನಂಜಯ ಬಾಲಿಕೊಪ್ಪ, ಆನಂದ ಕಾನಗೋಡ ಮುಂತಾಗಿ ಹಲವು ಸಾರ್ವಜನಿಕರು, 50ಕ್ಕೂ ಹೆಚ್ಚು ಯುವಕರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪಿ.ಎಸ್.ಐ. ಮಂಜುನಾಥ ಬಾರ್ಕಿ, ಚಂದಾವರ ಹಾಗೂ ಪೊಲೀಸ್ ಸಿಬ್ಬಂದಿ ಬಸವರಾಜ ಮುಂತಾದವರು ಪಾಲ್ಗೊಂಡು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
####
ಭುವನೇಶ್ವರಿಯ ಶಿಖರ ಪ್ರತಿಷ್ಠಾಪನೆ ಹಾಗೂ ಶತಚಂಡಿ ಹವನ ಸಂಪನ್ನ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯ ಕನ್ನಡ ತಾಯಿ ಭುವನೇಶ್ವರಿ ದೇವಾಲಯದ ಶಿಖರ ಪ್ರತಿಷ್ಠಾಪನೆ ಹಾಗೂ ಲೋಕಲ್ಯಾಣಾರ್ಥವಾಗಿ ಎರಡು ದಿನಗಳ ಕಾಲ ನಡೆದ ಶತಚಂಡಿಹವನ ಸೋಮವಾರ ಸಂಪನ್ನಗೊಂಡಿತು.
ಗೋಕರ್ಣದ ಆಗಮ ವಿದ್ವಾನ್ ಕೃಷ್ಣ ಭಟ್ಟ ಷಡಕ್ಷರಿ ನೇತೃತ್ವದಲ್ಲಿ ವಿ.ಶೇಷಗಿರಿ ಭಟ್ಟ ಗುಂಜಗೋಡ ಸಂಘಟನೆಯಲ್ಲಿ ಶೃಂಗೇರಿಯ ಡಾ.ಸುಭ್ರಾಯ ಭಟ್ಟ,ವಿ.ಚಂದ್ರಶೇಖರ ಭಟ್ಟ ಸೇರಿದಂತೆ ಸುಮಾರು 50 ಜನ ವೈದಿಕರು ಈ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಸುಮಾರು 800ಕ್ಕೂ ಹೆಚ್ಚು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮದ್ಯಾಹ್ನದ ನಂತರ ನಡೆದ ಆಶೀರ್ವಚನ ಕಾರ್ಯಕ್ರಮದಲ್ಲಿ ಷಡಕ್ಷರಿ ಕೃಷ್ಣ ಭಟ್ಟ ಮಾತನಾಡಿದರು.ಡಾ.ಸುಬ್ರಾಯ ಭಟ್ಟ ಶಿಖರ ಪ್ರತಿಷ್ಠೆ ಹಾಗೂ ಶತಚಂಡಿ ಹವನದ ಮಹತ್ವವನ್ನು ತಿಳಿಸಿದರು. ವಿ.ಚಂದ್ರಶೇಖರ ಭಟ್ಟ ಧರ್ಮದ ಮಹತ್ವವನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ 30 ವಷ್ದಷ್ಟು ದೀರ್ಘಕಾಳ ದೇವಾಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ವಿ.ಎಸ್.ಹೆಗಡೆ ಸಾತನಕೇರೆ ದಂಪತಿಗಳನ್ನು ಗೌರವಿಸಲಾಯಿತು. ಅಲ್ಲದೆ ದೇವಾಲಯದ ಗರ್ಭಗುಡಿಗೆ ತಾಮ್ರದ ಹೊದಿಕೆಗೆ ಸಹಕರಿಸಿದ ಎಲ್ಲರನ್ನು ಸ್ಮರಿಸಲಾಯಿತು.
ಸಮಿತಿಯ ಗೌರಾವಾಧ್ಯಕ್ಷ ಎ.ಪಿ.ಭಟ್ಟ ಮುತ್ತಿಗೆ ಪ್ರಾಸ್ತಾವಿಕ ಮಾತನಾಡಿದರು.ವಿ.ಎಸ್.ಹೆಗಡೆ ಸಾತನಕೇರಿ,ಶ್ರೀಕಾಂತ ಹೆಗಡೆ ಗುಂಜಗೋಡು,ಶೇಷಗಿರ ಭಟ್ಟ ಗುಂಜಗೋಡು,ಗಣಪತಿ ಹೆಗಡೆ ಗುಂಜಗೋಡು ಕಾರ್ಯಕ್ರಮ ನಿರ್ವಹಿಸಿದರು.