ಆದ್ಯೋತ್ :ವಿಶೇಷ ಅಂಕಣ

ಶಿರಸಿ ಜಿಲ್ಲೆಗೆ ಆಗ್ರಹಿಸಿ ಬುಧವಾರ ಶಿರಸಿ ಬಂದ್
ಮೀಸಲಾತಿ ಈಗಿನ ಹೋರಾಟದ ಟ್ರೆಂಡ್ ನಲ್ಲಿರೋ ಒಂದು ವಿಷಯವಾದರೆ ಇನ್ನೊಂದು ವಿಷಯ ಜಿಲ್ಲೆಗಾಗಿ ಹೋರಾಟಗಳು.
ವಿಜಯನಗರ ಜಿಲ್ಲೆ ಘೋಷಣೆಯಾಗುತ್ತಿದ್ದಂತೆ ಹಲವಾರು ಜಿಲ್ಲೆಗಳ ರಚನೆಯ ಹೋರಾಟಕ್ಕೆ ನಾಂದಿ ಹಾಕಿದಂತಾಗಿದೆ. ದಶಕಗಳ ಕಾಲದಿಂದ ಪ್ರತ್ಯೇಕ ಜಿಲ್ಲೆಗೆ ಹೋರಾಟ ನಡೆಸುತ್ತಿರೋ ಶಿರಸಿ ಜಿಲ್ಲಾ ಹೋರಾಟ ಸಮಿತಿ ತನ್ನ ಹೋರಾಟಕ್ಕೆ ಇನ್ನಷ್ಟು ಬಲ ನೀಡೋ ನಿರ್ಧಾರಕ್ಕೆ ಬಂದಿದೆ..

ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ..
ವಿಜಯನಗರ ಜಿಲ್ಲೆ ಘೋಷಣೆಯಾಗುತ್ತಿದ್ದಂತೆ ಶಿರಸಿ ಪ್ರತ್ಯೇಕ ಜಿಲ್ಲೆ ಬೇಡಿಕೆ ಇನ್ನಷ್ಟು ಚುರುಕು ಪಡೆದುಕೊಂಡಿದೆ. ಕಳೆದ 8 ವರ್ಷಗಳಿಂದ ಪ್ರತ್ಯೇಕ ಶಿರಸಿ ಜಿಲ್ಲೆಯ ಹೋರಾಟದ ರೂಪುರೇಷೆಗಳು ಪ್ರಾರಂಭವಾಗಿ ಶಿರಸಿ ಜಿಲ್ಲಾ ಹೋರಾಟ ಸಮಿತಿ ಕೂಡ ಅಸ್ತಿತ್ವಕ್ಕೆ ಬಂದಿತ್ತು. ಕಳೆದ 2 ವರ್ಷಗಳಿಂದ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟಗಳು ಪ್ರಾರಂಭವಾದವು. ಇದೀಗ ಜಿಲ್ಲಾ ಹೋರಾಟ ಸಮಿತಿ ಹಲವಾರು ರೀತಿಯ ವಿಭಿನ್ನ ಪ್ರತಿಭಟನೆಗಳ ಮೂಲಕ ನೂತನ ಶಿರಸಿ ಜಿಲ್ಲೆಗಾಗಿ ಅಗ್ರಹಿಸುತ್ತಾ ಬಂದಿದೆ.

ಇದಕ್ಕೆ ಕಾರಣವೂ ಇದೆ. ಜಿಲ್ಲೆಯ ಘಟ್ಟದ ಮೇಲಿನ ಮಲೆನಾಡು ತಾಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಇರೋ ಸರಾಸರಿ ದೂರ ಬರೋಬ್ಬರಿ 100 ಕಿಲೋಮೀಟರ್ ಗಳಷ್ಟು. ಯವುದಾದರೂ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಹೋದರೆ ಇಡೀ ದಿನ ಪೋಲಾಗುತ್ತೆ. ಅದರಲ್ಲೂ ಅಧಿಕಾರಿಗಳು ಸಿಗದಿದ್ದರೆ ಅಲ್ಲಿಗೆ ಆ ದಿನ ಪೂರ್ತಿ ವ್ಯರ್ಥ ಅನ್ನುವಂತ ಪರಿಸ್ಥಿತಿ ಇದೆ. ಅಲ್ಲದೆ ಜಿಲ್ಲಾ ಕೇಂದ್ರದಿಂದ ತಾಲೂಕುಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕೂಡ ಇಲ್ಲ.
ಜಿಲ್ಲಾಧಿಕಾರಿಗಳು ದೂರದ ತಾಲೂಕುಗಳಿಗೆ ಭೇಟಿ ನೀಡೋದು ತಿಂಗಳಿಗೆ ಅಥವಾ 2 ತಿಂಗಳಿಗೊಮ್ಮೆ ಆಗಿಬಿಟ್ಟಿದೆ. ಸಿದ್ದಾಪುರದಂತಹ ದೂರದ ತಾಲೂಕಿಗೆ ಎರಡು ವರ್ಷಕ್ಕೊಮ್ಮೆ ಮಾತ್ರ.

ಶಿರಸಿ ಈಗಾಗಲೇ ಶೈಕ್ಷಣಿಕ ಜಿಲ್ಲೆ ಕೂಡ ಆಗಿದೆ. ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಇಲಾಖೆ ಹೊರತುಪಡಿಸಿ ಜಿಲ್ಲಾ ಹಂತದ ಎಲ್ಲಾ ಕಚೇರಿಗಳೂ ಕೂಡ ಈಗಾಗಲೇ ಶಿರಸಿಯಲ್ಲಿವೆ.
ಉತ್ತರ ಕನ್ನಡ ಜಿಲ್ಲೆ ಬರೋಬ್ಬರಿ 12 ತಾಲೂಕುಗಳನ್ನು ಹೊಂದಿದ ಅತಿದೊಡ್ಡ ಜಿಲ್ಲೆಯಾಗಿದೆ. ಉಳಿದ ಜಿಲ್ಲೆಗಳಂತೆ ತಾಲೂಕಿಗೆ ಒಂದು ವಿಧಾನಸಭಾ ಕ್ಷೇತ್ರವಿಲ್ಲ. 2 ತಾಲೂಕುಗಳನ್ನು ಸೇರಿ ಒಂದು ವಿಧಾನಸಭಾ ಕ್ಷೇತ್ರವಿದೆ ಈ ಜಿಲ್ಲೆಯಲ್ಲಿ. ವಿಸ್ತಾರವಾಗಿ ಜಿಲ್ಲೆಯನ್ನು ನೋಡಿದರೆ ಆಡಳಿತಾತ್ಮಕ ಅನುಕೂಲಕ್ಕಾಗಿ ಜಿಲ್ಲೆಯನ್ನ ವಿಭಾಗಿಸೋ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ‌

ಪ್ರತ್ಯೇಕ ಶಿರಸಿ ಜಿಲ್ಲೆಯ ಕೂಗು ಜೋರಾಗುತ್ತಿದೆ. ಈ ಹಿಂದೆ ತಮಟೆ ಜಾಗೃತಿ, ಪಂಜಿನ ಮೆರವಣಿಗೆ, ಪತ್ರ ಚಳುವಳಿ ಗಳಂತಹ ಶಾಂತ ರೀತಿಯ ಹೋರಾಟಗಳ ಮೂಲಕ ಶಿರಸಿ ಜಿಲ್ಲಾ ಹೋರಾಟ ಸಮಿತಿ ಜಿಲ್ಲೆ ರಚನೆಗೆ ಸರ್ಕಾರವನ್ನ ಅಗ್ರಹಿಸುತ್ತಾ ಬಂದಿದೆ. ಇದೀಗ ಜಿಲ್ಲೆ ರಚನೆಗೆ ಆಗ್ರಹಿಸಿ ಫೆಬ್ರವರಿ 24 ರಂದು ಶಿರಸಿ ಬಂದ್ ಗೆ ಕರೆಕೊಡಲಾಗಿದೆ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗಿನ ಬಂದ್ ಗೆ ಹೋರಾಟ ಸಮಿತಿ ಕರೆಕೊಟ್ಟಿದೆ. ಅದಾದ ನಂತರ ಬೃಹತ್ ಮೆರವಣಿಗೆ ಕೂಡ ನಡೆಯಲಿದೆ. ಅದರ ಮುಂದಿನ ಹಂತವಾಗಿ ಮಲೆನಾಡಿನ ಎಲ್ಲಾ ತಾಲುಕುಗಳಿಗೂ ಬಂದ್ ವಿಸ್ತರಣೆ ಮಾಡೋ ಯೋಜನೆಯನ್ನ ಹೋರಾಟ ಸಮಿತಿ ಹಾಕಿಕೊಂಡಿದೆ. ಶಾಂತ ಪ್ರತಿಭಟನೆ ಉಗ್ರ ರೂಪ ಪಡೆಯೋ ಮುನ್ನ ಸರ್ಕಾರ ಈ ಬಜೆಟ್ ನಲ್ಲಿ ನೂತನ ಶಿರಸಿ ಜಿಲ್ಲೆಯನ್ನ ಘೋಷಣೆ ಮಾಡ್ಬೇಕು ಎಂದು ಹೋರಾಟಗಾರರು ಸರ್ಕಾರವನ್ನ ಈಗಾಗಲೇ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರಕ್ಕೆ ಒಂದರ ಹಿಂದೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಿವೆ. ಇದೀಗ ನೂತನ ಜಿಲ್ಲೆಯ ಹೋರಾಟಗಳ ತಲೆನೋವು ಸರ್ಕಾರಕ್ಕೆ ಎದುರಾಗಿದ್ದು, ಶಾಂತ ಪ್ರತಿಭಟನೆಗಳು ಉಗ್ರರೂಪ ಪಡೆದುಕೊಳ್ಳೋ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಆಡಳಿತಾತ್ಮಕ ಹಾಗೂ ಜನರ ಹಿತದೃಷ್ಟಿಯನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ನೂತನ ಜಿಲ್ಲೆಗಳ ಬಗ್ಗೆ ತೀರ್ಮಾನಕ್ಕೆ ಬರಬೇಕಾಗಿದೆ.
###
ಶ್ರೀಧರ ಮದ್ದಿನಕೆರೆ

About the author

Adyot

Leave a Comment