ಆದ್ಯೋತ್ : ವಿಶೇಷ ಅಂಕಣ

ಮತ್ತೆ ಬಂದ ಮಂಗನಖಾಯಿಲೆ: ಈಡೇರದ ಸಚೀವರ ಭರವಸೆ
ಒಂದೆಡೆ ಕೊರೊನಾದ ಎರಡನೇ ಹಂತದ ಭಯ ರಾಜ್ಯವನ್ನ ಆವರಿಸುತ್ತಿದೆ. ಆದರೆ ಇದೇ ಸಮಯದಲ್ಲಿ ಮಲೆನಾಡಿನಲ್ಲಿ ಇನ್ನೊಂದು ಖಾಯಿಲೆಯ ಆತಂಕ ಮತ್ತೀಗ ಪ್ರಾರಂಭವಾಗಿದೆ. ಕೊರೊನಾದ ಜೊತೆ ಮಂಗನಕಾಯಿಲೆಯ ಆತಂಕ ಇದೀಗ ರಾಜ್ಯವನ್ನ ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನಲ್ಲಿ ಆವರಿಸಿದೆ. ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಲಿ ಅನ್ನೋ ಹಾಗೆ ಆಗಿದೆ ಮಲೆನಾಡಿಗರ ಪರಿಸ್ಥಿತಿ..

ಈ ವರ್ಷದ ಮೊದಲ ಮಂಗನಕಾಯಿಲೆ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಕುಳಿಬೀಡಿನಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲೇ ಈ ವರ್ಷದ ಮಂಗನಕಾಯಿಲೆಯ ಪ್ರಥಮ ಪ್ರಕರಣ ಇದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕುಳಿಬೀಡಿನ 51 ವರ್ಷದ ಮಹಿಳೆಯಲ್ಲಿ ಈ ಮಂಗನಕಾಯಿಲೆ ಪ್ರಕರಣ ಪತ್ತೆಯಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಕಳೆದ ಎರಡು ವರ್ಷಗಳಿಂದ ಸಿದ್ದಾಪುರ ತಾಲೂಕಿನಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಮಂಗನಕಾಯಿಲೆ ಪ್ರಕರಣಗಳು ಈ ವರ್ಷ ಇನ್ನುವರೆಗೆ ಕಂಡುಬಂದಿಲ್ಲವಾಗಿತ್ತು. ತಾಲೂಕಿನೆಲ್ಲೆಡೆ ಈಗಾಗಲೇ ಮುಂಜಾಗೃತಾ ಕ್ರಮವಾಗಿ ಮಂಗನ ಕಾಯಿಲೆ ಲಸಿಕೆಯನ್ನ ವಿತರಿಸಲಾಗುತ್ತಿರುವುದರಿಂದ ಖಾಯಿಲೆ ಕಾಣಿಸಿಕೊಂಡಿಲ್ಲ ಎಂದು ಜನರು ಮಾತನಾಡುತ್ತಿರುವಾಗಲೇ ಮತ್ತೆ ಪ್ರತ್ಯಕ್ಷವಾಗಿದೆ.

ಲಸಿಕೆ ಪಡೆದವರಿಗೆ ಮಂಗನಖಾಯಿಲೆ ಬರುವುದಿಲ್ಲ ಎಂದು ಹೇಳಲು ಬರುವುದಿಲ್ಲ ಆದರೆ ಲಸಿಕೆ ಪಡೆದವರು ಮಂಗನಖಾಯಿಲೆಯಿಂದ ಸಾಯುವುದಿಲ್ಲ ಎಂದು ಆರೋಗ್ಯ ಇಲಾಖೆಯವರು ಹೇಳುತ್ತಾರೆ.
ಸ್ಥಳೀಯ ಆರೋಗ್ಯ ಇಲಾಖೆಯವರು ಕಳೆದ ಒಂದು ವರ್ಷದಿಂದ ವ್ಯಾಪಕವಾಗಿ ಲಸಿಕೆಯನ್ನು ನೀಡುತ್ತಿದ್ದಾರೆ
ಇದರಿಂದಾಗಿ 2019ರಲ್ಲಿ 11 ಜನರು ಈ ಖಾಯಿಲೆಯಿಂದ ಮರಣ ಹೊಂದಿದ್ದರೆ ಲಸಿಕೆ ತೆಗೆದುಕೊಂಡ ಪರಿಣಾಮ 2020ರಲ್ಲಿ100ಕ್ಕೂ ಹೆಚ್ಚು ಜನರಲ್ಲಿ ಮಂಗನಖಾಯಿಲೆ ಕಾಣಿಸಿಕೊಂಡಿದ್ದರೂ ಮರಣ ಹೊಂದಿದವರು ಒಬ್ಬರು.
ಇದರಿಂದ ಸಾರ್ವಜನಿಕರು ಲಸಿಕೆ ಪಡೆಯುವ ಮೂಲಕ ತಮ್ಮ ಪ್ರಾಣ ಉಳಿಸಿಕೊಳ್ಳಬೇಕು.
ಈವರೆಗೆ ಸಿದ್ದಾಪುರ ತಾಲೂಕಿನ 49 ಗ್ರಾಮಗಳನ್ನು ಮಂಗನಕಾಯಿಲೆಯ ಹೈ ರಿಸ್ಕ್ ಗ್ರಾಮಗಳೆಂದು ಗುರುತಿಸಲಾಗಿದ್ದು, 92 ಜನರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳಿಸಲಾಗಿದೆ.
ಈಗಾಗಲೇ ತಾಲೂಕಿನೆಲ್ಲೆಡೆ ಮಂಗಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ತಲೆಕೆಡಿಸಿಕೊಳ್ಳುವಂತಾಗಿದೆ. ಕಳೆದ 2 ವರ್ಷಗಳಿಂದ 12 ಜನ ಮಂಗನಕಾಯಿಲೆಯಿಂದ ಸಾವಿಗೀಡಾಗಿದ್ದು, ಹಲವಾರು ಜನ ಕಾಯಿಲೆಯ ಪ್ರಕೋಪದಿಂದಾಗಿ ಇನ್ನೂ ಕೂಡ ನರಳುತ್ತಿದ್ದಾರೆ. ಆದರೆ
ಸರ್ಕಾರ ಮಾತ್ರ ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿಲ್ಲ. ಮಂಗನಕಾಯಿಲೆಯ ಪತ್ತೆ ಹಾಗೂ ಚಿಕಿತ್ಸಾ ಘಟಕವನ್ನ ಸಾಗರ ಅಥವಾ ಸಿದ್ದಾಪುರದಲ್ಲಿ ಸ್ಥಾಪಿಸಬೇಕು ಅನ್ನೋ ಆಗ್ರಹ ಇದ್ದರೂ
ಕೂಡ ರಾಜಕೀಯ ಒತ್ತಡದಿಂದ ಅದನ್ನು ಶಿವಮೊಗ್ಗಕ್ಕೆ ಕೊಡಲಾಗಿದೆ.

ಇನ್ನು ಹಿಂದಿನ ವರ್ಷ ಮಂಗನಕಾಯಿಲೆಯಿಂದ ಒಬ್ಬರು ಸಾವಿಗೀಡಾಗಿದ್ದ ಸಮಯದಲ್ಲಿ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಂಗನಕಾಯಿಲೆಯಿಂದ ಅತಿ ಹೆಚ್ಚು ಪೀಡಿತವಾಗಿದ್ದ ಸಿದ್ದಾಪುರ ತಾಲೂಕಿಗೆ ಹೆಚ್ಚುವರಿ 1 ಸಾಮಾನ್ಯ ಆಂಬ್ಯುಲೆನ್ಸ್ ಹಾಗೂ 1 ವೆಂಟಿಲೇಟರ್ ಆಂಬ್ಯುಲೆನ್ಸ್ ನೀಡೋದಾಗಿ ಘೋಷಿಸಿದ್ದರು. ಆದರೆ ಕಳೆದ ವರ್ಷ ಬೇರೆ ತಾಲೂಕಿನಿಂದ ಹೆಚ್ಚುವರಿ ಅಂಬ್ಯುಲೆನ್ಸ್ ತರಲಾಗಿತ್ತು ಆದರೆ ಒಂದು ವರ್ಷ ಕಳೆದು ಇದೀಗ ಮಂಗನಕಾಯಿಲೆ ಮತ್ತೆ ಪ್ರತ್ಯಕ್ಷವಾದ್ರೂ ಕೂಡ ಹೆಚ್ಚುವರಿ ಆಂಬ್ಯುಲೆನ್ಸ್ ಇನ್ನುವರೆಗೆ ಬಂದಿಲ್ಲ. ಕೂಡಲೇ ಈ ಭಾಗಕ್ಕೆ ಆಂಬ್ಯುಲೆನ್ಸ್ ಕೊಡ್ಬೇಕು ಅನ್ನೋದು ಸಾರ್ವಜನಿಕರ ಅಗ್ರಹವಾಗಿದೆ.

ಒಟ್ಟಿನಲ್ಲಿ ಪ್ರತಿ ವರ್ಷ ಮಂಗನಕಾಯಿಲೆಯ ಆತಂಕ ಮಲೆನಾಡು ಭಾಗದಲ್ಲಿ ಆವರಿಸಿದ್ದರೂ ಕೂಡ ಸರ್ಕಾರ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನೊಂದೆಡೆ ಲಸಿಕೆ ಪಡೆಯೋಕೆ ಸಾರ್ವಜನಿಕರೂ ಮುಂದೆ ಬರುತ್ತಿಲ್ಲ. ಲಸಿಕೆ ತೆಗೆದುಕೊಳ್ಳುವಂತೆ ಸಾರ್ವಜನಿಕರ ಮನವೊಲಿಸೋ ಕೆಲಸ ಕೂಡ ಸರ್ಕಾರದಿಂದ ಆಗ್ಬೇಕಿದೆ. ಅದೇ ರೀತಿ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡೋ ನಿಟ್ಟಿನಲ್ಲಿ ಸಂಶೋಧನಾ ಕೇಂದ್ರದ ಅಗತ್ಯವನ್ನ ಕೂಡ ಸರ್ಕಾರ ಮನಗಾಣಬೇಕಿದೆ. ಸತ್ತ ಮೇಲೆ ಪರಿಹಾರ ಕೊಡೋದಕ್ಕಿಂತ ಸಾಯೋ ಮುನ್ನ ಎಚ್ಚೆತ್ತುಕೊಳ್ಳೋದು ಒಳ್ಳೇದಲ್ವೆ ಅನ್ನೋ ಪ್ರಶ್ನೆ ಈ ಭಾಗದ ಸಾರ್ವಜನಿಕರದ್ದು..
###
ಶ್ರೀಧರ ಮದ್ದಿನಕೆರೆ

About the author

Adyot

Leave a Comment