ಆದ್ಯೋತ :ವಿಶೇಷ ಅಂಕಣ

ಆದ್ಯೋತ್ ಸುದ್ದಿನಿಧಿ
ಚಿತ್ರಕಲೆಯಲ್ಲಿ ಮೋಡಿಯ ಮಾಡೋ ಜಾದೂಗಾರ ಈತ. ಬಣ್ಣದಲ್ಲೇ ಮೋಡಿ ಮಾಡಿ ಎಂತಹವರ ದೃಷ್ಠಿಯನ್ನಾದ್ರೂ ತನ್ನ ಚಿತ್ರಗಳ ಕಡೆ ತಿರುಗುವಂತೆ ಮಾಡೋ ಚಾಕಚಕ್ಯತೆ ಈತನ ಕಲೆಯಲ್ಲಿದೆ. ಚಿತ್ರಗಳಿಗೆ ಜೀವ ತುಂಬೋ ಇವರ ಕಲೆಯನ್ನ ನೋಡಿದ ಯಾರೇ ಆಗ್ಲಿ, ಈತನ ಕಲೆಗೆ ತಲೆದೂಗೋದು ಗ್ಯಾರಂಟಿ. ಇಂತಹ ಕಲಾವಿದನ ಚಿತ್ರವೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.

ಚಿತ್ರಕಲಾ ನೈಪುಣ್ಯತೆಯಿಂದ ಹೆಸರು ಮಾಡಿರೋ ಈತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹೆಮ್ಮೆಯ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ. ಇವರ ಸಂಯೋಜಿತ ಕಲಾಕೃತಿಯೊಂದು ಇಂಡಿಯಾ ಬುಕ್ ಆ- ರೆಕಾರ್ಡ್ಸ್‌ಗೆ ಆಯ್ಕೆಯಾಗಿದೆ. ಈ ಮೂಲಕ, ಚಿತ್ರ ಕಲಾವಿದರಲ್ಲಿ ಈ ದಾಖಲೆ ಬರೆದ ಜಿಲ್ಲೆಯ ಮೊದಲ ವ್ಯಕ್ತಿ ಇವರು ಅನ್ನೋ ಅಭಿಮಾನಕ್ಕೆ ಇವ್ರು ಪಾತ್ರರಾಗಿದ್ದಾರೆ. ಸಿನಿ ರಂಗದ ಪ್ರಖ್ಯಾತ 100 ಕಲಾವಿದರ ಭಾವಚಿತ್ರಗಳನ್ನು ರಚಿಸಿ ಅವನ್ನು ಸಂಯೋಜಿಸಿ (ಕೊಲಾಜಿಂಗ್) ಕನ್ನಡದ ನಟಸಾರ್ವಭೌಮ ರಾಜಕುಮಾರ್ ಭಾವಚಿತ್ರವನ್ನು ಮೂಡಿಸಿರೋ ಕೌಶಿಕ್ ಹೆಗಡೆ ಕೌಶಲವು ಈ ದಾಖಲೆಯ ಪುಟ ಸೇರಿದೆ.

ಮೂರು ನಿಮಿಷದಲ್ಲಿ ಒಂದು ಭಾವಚಿತ್ರ ಬರೆದು ಅಂಥ ನೂರು ಚಿತ್ರಗಳನ್ನು ಸಂಯೋಜಿಸಿ ಡಾ.ರಾಜಕುಮಾರ್ ಫೋಟೊವನ್ನು ತಯಾರಿಸಿದ,
ಕೇವಲ 8 ತಾಸುಗಳ ಪರಿಶ್ರಮದ ಇವರ ಚಾಕಚಕ್ಯತೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗೋಕೆ ಪರಿಗಣಿಸಲ್ಪಟ್ಟಿರೋದು ಪ್ರಮುಖ ಅಂಶವಾಗಿದೆ. ಕಳೆದ ಅಗಸ್ಟ್‌ನಲ್ಲಿ ಇವರು ಚಿತ್ರ ರಚಿಸಿ ಕಳಿಸಿಕೊಟ್ಟಿದ್ದರು.

ಕೌಶಿಕ್ ಹೆಗಡೆ ಮೂಲತಃ ಶಿರಸಿ ತಾಲೂಕು ಗಡಿಹಳ್ಳಿಯವರಾಗಿದ್ದು, ದೈವೀದತ್ತವಾಗಿ ಬಂದ ಕಲಾ ಪ್ರತಿಭೆಯನ್ನು ಬೆಳೆಸಿಕೊಂಡು ಮುಂದುವರೆಯುವ ಆಸಕ್ತಿಯಿಂದ ಐ ಬಿ ವಿ ಎ ಕೋರ್ಸ್ ಪೂರೈಸಿ ಕಳೆದ 8 ವರ್ಷಗಳಿಂದ ಚಿತ್ರಕಲೆಯ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ. ಲ್ಯಾಂಡ್ ಸ್ಕೇಪ್, ಎಬ್ಸ್ರ್ಯಾಕ್ಟ್ ಪೇಂಟಿಂಗ್, ವಾಟರ್ ಕಲರ್ ಮತ್ತು ತೈಲವರ್ಣ ಬಳಕೆ , ಕಲರ್ ಪೆನ್ಸಿಲ್, ಪೆನ್ಸಿಲ್ ಶೇಡಿಂಗ್‌ನಿಂದ ಚಿತ್ರಗಳನ್ನು ರಚಿಸುತ್ತ ಬಂದಿದ್ದು, ಪೋರ‍್ಟ್ರೇಟ್ ಬರೆಯುವಲ್ಲಿ ಅಪಾರ ಆಸಕ್ತಿ ಹೊಂದಿರೋ ಕೌಶಿಕ್ ರ ಅನೇಕ ಕಲಾಕೃತಿಗಳು ನಾಡಿನ ಗಮನ ಸೆಳೆದಿವೆ. ತಮ್ಮ ಕಲಾಕೃತಿಗಳ ಮೂಲಕ ಪರಿಚಿತರಾದ ಇವ್ರು ರಾಜ್ಯದ ಉಡುಪಿ, ಮಂಗಳೂರು, ಬೆಂಗಳೂರು, ತುಮಕೂರು, ಹಂಪಿ ಅಲ್ಲದೆ ನೆರೆಯ ರಾಜ್ಯ ಗೋವಾ, ಮಹಾರಾಷ್ಟ್ರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ, ತರಬೇತಿ ಶಿಬಿರಗಳಲ್ಲಿ , ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ.

ಶಿರಸಿಯೂ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರಶಸ್ತಿ ಪಡೆದಿರೋ ಇವರ ಕಲಾಕೃತಿಗಳು ತುಮಕೂರು ಕಲಾ ಪ್ರಶಸ್ತಿ, ಕೆಮೆಲಿನ್ ಕಲಾ ಪ್ರಶಸ್ತಿ, ಅಯೋಧ್ಯಾ ಕಲಾ ಪ್ರಶಸ್ತಿಗೆ ಆಯ್ಕೆಗೊಂಡಿದ್ದು ಗಮನಾರ್ಹ ಸಂಗತಿಯಾಗಿದೆ. ಜೊತೆಗೆ ಹಳ್ಳಿಯಲ್ಲೇ ಇದ್ದು ಸಾಧನೆ ಮಾಡೋದ್ರ ಜೊತೆಗೆ ಅದನ್ನ ಮುಂದುವರಿಸಿಕೊಂಡು ಹೋಗುತ್ತಿರೋದು ಅವರ ಮನೆಯವರಿಗೆ ಅವರ ಕುರಿತು ಹೆಮ್ಮೆ ಪಡುವಂತೆ ಮಾಡಿದೆ.

ಒಟ್ಟಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಂತಹ ಪ್ರತಿಷ್ಠಿತ ಪ್ರಶಸ್ತಿ ಪಡೆದ್ರೂ ಕೂಡ ಗ್ರಾಮೀಣ ಪ್ರದೇಶದ ಮಕ್ಕಳಿಗೆ ತನ್ನ ಕಲೆಯನ್ನ ಧಾರೆ ಎರೆಯುತ್ತಿರೋ ಇಂತಹ ಕಲಾವಿದರು ಸಿಗೋದು ಅಪರೂಪ. ಇಂತಹ ಇನ್ನಷ್ಟು ವಿಭಿನ್ನ ಕಲಾಕೃತಿಗಳು ಇವರಿಂದ ರಚನೆಯಾಗಿ, ಇನ್ನು ಹೆಚ್ಚಿನ ಸಾಧನೆಯನ್ನು ಕೌಶಿಕ್ ಮಾಡ್ಲಿ ಅನ್ನೋದೇ ನಮ್ಮ ಆಶಯ.
#####
ಶ್ರೀಧರ ಮದ್ದಿನಕೆರೆ

About the author

Adyot

Leave a Comment