ಆದ್ಯೋತ್ ವಿಶೇಷ ಅಂಕಣ

ಜನವಿರೋಧಿ ನದಿ ತಿರುವು ಯೋಜನೆ
ಬಜೆಟ್ ನಲ್ಲಿ ಘೋಷಣೆಯಾದ ಒಂದು ಯೋಜನೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ವಿರೋಧಕ್ಕೆ ಕಾರಣವಾಗಿದೆ. ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನದಿ ತಿರುವು ಯೋಜನೆಗೆ ಸರ್ಕಾರ ಇದೀಗ ಆಸಕ್ತಿ ವಹಿಸಿ ಯೋಜನೆಯ ಬಗ್ಗೆ ಸಮಿತಿ ರಚಿಸೋಕೆ ಮುಂದಾಗಿರೋದೇ ಇದಕ್ಕೆ ಕಾರಣ.

ಮಲೆನಾಡನ್ನ ಬರಿದು ಮಾಡಿ, ನದಿ ತಿರುವು ಮಾಡಿ ನದಿ ಜೋಡಣೆಗೆ ಕೈ ಹಾಕೋ ಸರ್ಕಾರದ ನಿರ್ಧಾರಕ್ಕೆ ಇದೀಗ ಮಲೆನಾಡಿಗರ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಾಗಿದ್ರೆ ಯೋಜನೆ ಏನು? ವಿರೋಧ ಯಾಕೆ ಅನ್ನೋದನ್ನ ನೋಡಿ..
ಸಾಮಾನ್ಯವಾಗಿ ನದಿಗಳು ಒಂದೇ ದಿಕ್ಕಿನಲ್ಲಿ ಹರಿದುಹೋಗಿ ಸಮುದ್ರವನ್ನು ಸೇರುತ್ತವೆ. ಅದೇ ರೀತಿ ಮಲೆನಾಡಿನ ಹಲವಾರು ನದಿಗಳು ಪಶ್ಚಿಮಘಟ್ಟದಲ್ಲಿ ಹುಟ್ಟಿ ಮಲೆನಾಡಿನ ಜೀವನದಿಗಳಾಗಿ ಭೂಮಿಗೆ ನೀರನ್ನುಣಿಸಿ ಹರಿಯುತ್ತಾ ಕರಾವಳಿಯ ಜನರ ಜೀವನಾಡಿಯಾಗಿ ನಂತರ ಸಮುದ್ರವನ್ನು ಸೇರುತ್ತವೆ. ಆದ್ರೆ ಹೀಗೆ ಹರಿಯೋ ನದಿಗಳ ದಿಕ್ಕನ್ನೇ ಬದಲಿಸಿ ಬೇರೇ ನದಿಗಳ ಜೊತೆ ಸೇರಿಸೋದನ್ನ ನೋಡಿದ್ರಾ? ಇಲ್ಲ..

ಆದರೆ ಇಂತದ್ದೊಂದು ಯೋಜನೆ ಕಳೆದ ಕೆಲವು ವರ್ಷಗಳ ಹಿಂದೆ ಪ್ರಸ್ತಾಪಕ್ಕೆ ಬಂತು. ರಾಷ್ಟ್ರಮಟ್ಟದಲ್ಲಿ ಗಂಗಾ ಕಾವೇರಿ ನದಿ ತಿರುವು ಮತ್ತೆ ಜೋಡಣೆ ಪ್ರಸ್ತಾಪ ಬಂದಾಗ ಇದಕ್ಕೆ ವಿರೋಧ ವ್ಯಕ್ತವಾಯಿತು. ಆಗ ಸರ್ಕಾರ ಆ ಯೋಜನೆಯನ್ನ ಅಲ್ಲಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಅದೇ ರೀತಿ ರಾಜ್ಯದಲ್ಲೂ ಕೂಡ ನದಿಗಳ ಜೋಡಣೆ ಪ್ರಸ್ತಾಪ ಬಂದಾಗಲೆಲ್ಲಾ ಅದಕ್ಕೆ ವಿರೋಧ ವ್ಯಕ್ತವಾಗ್ತಾನೇ ಇದೆ. ಈಗ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ನದಿ ತಿರುವು ಯೋಜನೆಗೆ ಪ್ರಥಮ ಹಂತದಲ್ಲಿ ವರದಾ-ಬೇಡ್ತಿ ಯೋಜನೆಯನ್ನ ಕೈಗೆತ್ತಿಕೊಳ್ಳಲಾಗುವುದು ಅಂತ ಬಜೆಟ್ ನಲ್ಲಿ ಘೋಷಿಸಿರೋದು ಮಲೆನಾಡಿನಲ್ಲಿ ಹೋರಾಟದ ಕಿಚ್ಚನ್ನ ಹೊತ್ತಿಸಿದೆ.

ಹಾಗಿದ್ರೆ ವಿರೋಧ ಏಕೆ ಅಂದ್ರೆ, ಬೇಡ್ತಿ ಹಾಗೂ ವರದಾ ನದಿಗಳಲ್ಲಿ ನೀರು ತುಂಬಾ ಕಡಿಮೆ ಇರುತ್ತೆ. ಬೇಸಿಗೆಯಲ್ಲಿ ಇಲ್ಲಿನ ಜನರಿಗೇ ಕುಡಿಯೋಕೆ ನೀರು ಸಿಗೋದು ಕಷ್ಟ. ಇನ್ನು ನದಿ ತಿರುವು ಹಾಗೂ ಜೋಡಣೆ ಆದ್ರೆ ಇಲ್ಲಿನ ಜನ ಬದುಕೋದು ಕಷ್ಟ. ಕರಾವಳಿಯಲ್ಲಿ ಮೀನುಗಾರರಿಗೆ ಇದ್ರಿಂದ ಸಂಕಷ್ಟ ತಪ್ಪಿದ್ದಲ್ಲ. ಅದೇ ರೀತಿಯಲ್ಲಿ ವೈಜ್ಞಾನಿಕವಾಗಿ ನೋಡೋದಾದ್ರೆ, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯೋ ಬೇಡ್ತಿ ನದಿಯನ್ನ ಪೂರ್ವಕ್ಕೆ ತಿರುಗಿಸಿ, ಪೂರ್ವಕ್ಕೆ ಹರಿಯೋ ವರದಾ ನದಿಗೆ ಸೇರಿಸೋದು ಅವೈಜ್ಞಾನಿಕ. ನದಿ ತಿರುವಿನಿಂದಾಗಿ ಪರಿಸರ ವಿಕೋಪಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಅಂತ ಈಗಾಗ್ಲೇ ಪರಿಸರ ವಿಜ್ಞಾನಿಗಳು ಅಧ್ಯಯನ ವರದಿಯನ್ನು ಕೂಡ ಸಲ್ಲಿಸಿದ್ದಾರೆ. ಆದ್ದರಿಂದ ಇದಕ್ಕೆ ರಾಜ್ಯಮಟ್ಟದಲ್ಲೇ ವಿರೋಧ ಇದೆ ಅನ್ನೋದು ಅಘನಾಶಿನಿ-ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿಯವರ ಹಾಗೂ ಜನರ ಅಭಿಪ್ರಾಯ.

ಒಟ್ಟಿನಲ್ಲಿ ಸರ್ಕಾರ ಇಷ್ಟೊಂದು ವಿರೋಧಗಳ ನಡುವೆಯೂ ಯೋಜನೆಗೆ ಮುಂದಾದ್ರೆ ಜನರ ವಿರೋಧವನ್ನ ಎದುರಿಸೋದಂತೂ ಸ್ಪಷ್ಟ. ಈಗಾಗ್ಲೇ ಸರ್ಕಾರ ಈ ಯೋಜನೆ ಕುರಿತಂತೆ ಬಜೆಟ್ ನಲ್ಲಿ ಘೋಷಿಸಿರೋದ್ರಿಂದ ಯೋಜನೆಯನ್ನ ತಡೆಯೋದು ಕಷ್ಟಕರವಾಗಲಿದೆ. ಆದ್ರೆ ಸರ್ಕಾರ ಯೋಜನೆಗಳನ್ನ ಮಾಡೋ ಮೊದ್ಲು ಅದರ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ಯೋಜನೆಗೆ ಮುಂದಾದ್ರೆ ಒಳ್ಳೇದು ಅನ್ನೋದು ಸಾರ್ವಜನಿಕರ ಅಭಿಪ್ರಾಯ.
###
ಶ್ರೀಧರ ಮದ್ದಿನಕೆರೆ

About the author

Adyot

Leave a Comment