ಆದ್ಯೋತ್ ವಿಶೇಷ ಅಂಕಣ

ನಿಧಾನವಾಗಿ ಹರಿದಾಡ್ತಿರೋ ಉಡಗಳು, ಈಗಷ್ಟೇ ಪೊರೆ ಕಳಚಿದ ಹಾವು, ಕಿರ್ ಎಂದು ಕೂಗೋ ಗಿಳಿಗಳು, ಹಸಿರು ಮೇವು ತಿನ್ನೋ ಮೊಲ, ಬಿಳಿ ಮುಂಗುಸಿ, ಕುದುರೆ ಇನ್ನೂ ಹತ್ತು ಹಲವು ಪ್ರಾಣಿ ವೈವಿಧ್ಯ. ವಿಶೇಷ ಅಂದರೆ ಇದು ಝೂ ಅಲ್ಲ. ಪ್ರಾಣಿ ಪ್ರಿಯ ವೈದ್ಯರೊಬ್ಬರು ಸ್ವತಃ ನಡೆಸ್ತಿರೋ ಜಿಲ್ಲೆಯಲ್ಲೇ ಮೊಟ್ಟ ಮೊದಲ ಪೆಟ್ ಅಮೇಜಿಂಗ್ ಪ್ಲಾನೆಟ್ ! ಏನಿದು ಅಮೇಜಿಂಗ್ ಪ್ಲಾನೆಟ್ ಅಂದ್ಕೊಂಡ್ರಾ…ಹಾಗಾದ್ರೆ ಈ ಸ್ಟೋರಿ ನೋಡಿ.

ಪೆಟ್ ಅಮೇಜಿಂಗ್ ಪ್ಲಾನೆಟ್‘ ಹೆಸರಿಗೆ ತಕ್ಕಂತೆ ಇಲ್ಲಿರೋ ಪ್ರಾಣಿಪಕ್ಷಿಗಳೆಲ್ಲ ನೋಡುಗರಿಗೆ ಪೆಟ್ ಎನಿಸೋದ್ರಲ್ಲಿ ಸಂಶಯವೇ ಇಲ್ಲ. ಬಹುತೇಕ ಎನಿಮಲ್ ಗಳು ಹಾದಿಬೀದೀಲಿ ಗಾಯ ಮಾಡ್ಕೊಂಡ್ ಚಿಕಿತ್ಸೆಗಾಗಿ ತಂದು ಈಗ ಈ ಪ್ಲಾನೆಟ್ ಸದಸ್ಯರಾಗಿ ಬಿಟ್ಟಿದಾವೆ.

7 ವರ್ಷದಿಂದ ಪಶುವೈದ್ಯ ರಾಜೇಂದ್ರ ಶಿರಸಿಕರ ಪ್ರಯತ್ನದ ಫಲವಾಗಿ ಇವತ್ತು ಈ ಪ್ಲಾನೆಟ್ ಹಲವು ಜೀವ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಉತ್ತರ ಕನ್ನಡದ ಶಿರಸಿ- ಬನವಾಸಿ ರಸ್ತೆಯ ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿ ನೂತನವಾಗಿ ಈ ‘ಪೆಟ್ ಅಮೇಜಿಂಗ್ ಪ್ಲಾನೆಟ್’ ರೂಪುಗೊಂಡಿದೆ. ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿರುವ ಅನಾಥ ಪ್ರಾಣಿಗಳಿಗೆ ಈ ಕೇಂದ್ರ ಆಶ್ರಯ ತಾಣವಾಗಿದೆ. ಅನಾಥ ಪ್ರಾಣಿಗಳು ಅನಾರೋಗ್ಯದಿಂದ ರಸ್ತೆ ಬದಿಯಲ್ಲಿ ಬಿದ್ದ ಸುದ್ದಿ ತಿಳಿದರೂ ಸಾಕು, ತಕ್ಷಣ ಅಲ್ಲಿಗೆ ಧಾವಿಸುವ ರಾಜೇಂದ್ರ ಸಿರ್ಸಿಕರ್ ಅವರು ಅವುಗಳಿಗೊಂದು ನೆಲೆ ಒದಗಿಸುವ ಉದ್ದೇಶದಿಂದ, ಸೂರಜ್ ಸಿರ್ಸಿಕರ್ ನೇತೃತ್ವದ ಪದ್ಮ ಸೇವಾ ಟ್ರಸ್ಟ್‌ ಅಡಿಯಲ್ಲಿ ಈ ಉದ್ಯಾನವನ್ನು ಪ್ರಾರಂಭಿಸಿದ್ದಾರೆ.


ಈ ಪುನರ್ವಸತಿ ಕೇಂದ್ರದಲ್ಲಿ ಈಗ ಕುದುರೆ, ಹಿಮದ ಚೀನಾ ಆಡು, ಅಮೆಜಾನ್ ಕಾಡಿನ ಗಿಳಿ, ಕೋಳಿ, ಮೊಲ ಸೇರಿದಂತೆ ಹಲವು ಜೀವಿಗಳು ಚಿಕಿತ್ಸೆ ಪಡೆಯುತ್ತಿವೆ. ಹಲವಾರು ಪ್ರಾಣಿ–ಪಕ್ಷಿಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿವೆ. ಹಲವು ಪ್ರಾಣಿ ಪಕ್ಷಿಗಳನ್ನು ಹೊರ ರಾಜ್ಯ, ವಿದೇಶಗಳಿಂದಲೂ ತಂದು ನೋಡುಗರ ವಿಶೇಷ ಸಂತಸಕ್ಕೆ ಕಾರಣರಾಗಿದ್ದಾರೆ.

ಇನ್ನು ಈ ಪ್ಲಾನೆಟ್ ದಲ್ಲಿ ಆಫ್ರಿಕಾದ ಹೆಬ್ಬಾವು, ವಿವಿಧ ಜಾತಿಯ ಪಕ್ಷಿಗಳು, ವಿಧವಿಧದ ಗಿಳಿಗಳು, ಬಾತುಕೋಳಿ, ವಿದೇಶದ ಕೋಳಿಗಳು, ವಿದೇಶದ ನವಿಲು, ಯುರೋಪಿನ ಮುಂಗುಸಿ, ಮೊಲ, ಇಗ್ವಾನಾ ಅನ್ನೋ ವಿಶೇಷ ಉಡಗಳು, ಸೈಬೀರಿಯಾದ ಮುಂಗುಸಿ ಮೊದಲಾದ 50ಕ್ಕೂ ಹೆಚ್ಚು ಬಗೆಯ ಪ್ರಾಣಿ–ಪಕ್ಷಿಗಳಿವೆ. ಪ್ಲಾನೆಟ್ನಲ್ಲಿರುವ ಎಲ್ಲವೂ ಸಾಕುಪ್ರಾಣಿಗಳು. ಇವ್ಯಾವವೂ ಅರಣ್ಯ ಕಾಯ್ದೆ ಅಡಿಯಲ್ಲಿ ಬರಲ್ಲ ಅಂತಾರೆ ರಾಜೇಂದ್ರ ಸಿರ್ಸಿಕರ್. ಒಂದು ದಶಕದಿಂದ ಅನಾಥ ಸಾಕುಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ. 1600ಕ್ಕೂ ಹೆಚ್ಚು ಆಕಳು, ನಾಯಿ, ಕುದುರೆ, ಕಾಡುಬೆಕ್ಕು, ಪಾರಿವಾಳ, ಗೂಬೆ, ಕಾಗೆ ಎಲ್ಲವನ್ನೂ ಆರೈಕೆ ಮಾಡಿದ್ದೇನೆ. ನಿರ್ದಿಷ್ಟ ಜಾಗವಿಲ್ಲದ ಕಾರಣ ಗಾಯಗೊಂಡ ಪ್ರಾಣಿಗಳಿಗೆ ರಸ್ತೆಯ ಮೇಲೆಯೇ ಚಿಕಿತ್ಸೆ ನೀಡುತ್ತಿದ್ದೆ. ಈ ಕೊರತೆ ನೀಗಿಸಲು, ಪ್ಲಾನೆಟ್ ಪ್ರಾರಂಭಿಸಿದೆ. ಚಿಕಿತ್ಸೆ ಪಡೆಯುವ ಪ್ರಾಣಿಗಳು ಗುಣಮುಖವಾದ ಮೇಲೆ ಪುನಃ ಅವುಗಳನ್ನು ನಿಸರ್ಗದ ಮಡಿಲಿಗೆ ಸೇರಿಸಲಾಗುತ್ತದೆ. ಪ್ರಾಣಿಗಳ ಸೇವೆ ನೆರವು ನೀಡುವವರು ಕಡಿಮೆ. ಚಿಕಿತ್ಸೆಯ ವೆಚ್ಚ ಭರಿಸುವುದು ಕಷ್ಟ. ಹೀಗಾಗಿ, ಉದ್ಯಾನದ ಪ್ರವೇಶಕ್ಕೆ 50 ರೂಪಾಯಿ ದರ ನಿಗದಿಪಡಿಸಿದ್ದು, ಈ ಹಣವನ್ನು ಪ್ರಾಣಿಗಳ ಚಿಕಿತ್ಸೆಗೆ ಹಾಗೂ ಆಹಾರಕ್ಕಾಗಿ ಬಳಸುತ್ತಿದ್ದಾರೆ.


ಇನ್ನು ಈ ಪ್ಲಾನೆಟ್ ಒಂಥರಾ ಮನಸ್ಸಿಗೆ ಮುದ ನೀಡುತ್ತೆ. ಇಲ್ಲಿನ ಪ್ರಾಣಿಗಳ ಬಗ್ಗೆ ಮುಖ್ಯಸ್ಥರು ಹಾಗೂ ಓರ್ವ ಗೈಡ್ ಸುಂದರವಾದ ವಿವರಣೆ ನೀಡ್ತಾರೆ. ಗಿಳಿಗಳು ಕೈಮೇಲೆ ಆಟ ಆಡ್ತವೆ. ಹೆಬ್ಬಾವನ್ನು ಹಿಡಿದುಕೊಂಡು ಕುತ್ತಿಗೆಗೆ ಸುತ್ತಿಕೊಳ್ಳಬಹುದು. ಅದೇ ರೀತಿ ಗಿಣಿ ಹಾಗೂ ಪಾರಿವಾಳಗಳಿಗೆ ಆಹಾರಗಳನ್ನ ನಿಮ್ಮ ಕೈಯಿಂದಲೇ ಕೊಡ್ಬಹುದು. ಇಗ್ವಾನಾ ಜೊತೆ ಸೆಲ್ಫಿ ಕೂಡ ತೆಗೆಸಿಕೊಳ್ಳಬಹುದು. ಸಾಮಾನ್ಯ ಝೂ ಗಳಿಗಿಂತ ಇದು ವಿಭಿನ್ನವಾಗಿದೆ. ಬೇರೆ ಬೇರೆ ದೇಶದ ಖಂಡಗಳ ಪಕ್ಷಿ, ಪ್ರಾಣಿಗಳನ್ನ ನೀವಿಲ್ಲಿ ನೋಡ್ಬಹುದು. ಆದ್ರೆ ಇವೆಲ್ಲವೂ ಕೂಡ ಅನಾಥ ಹಾಗೂ ಚಿಕಿತ್ಸೆಗೊಳಗಾದ ಪ್ರಾಣಿ, ಪಕ್ಷಿಗಳು. ಸರ್ಕಾರದಿಂದ ಯಾವುದೇ ಸಹಾಯ ಲಭಿಸದೆ ಇದ್ದರೂ ಕೂಡ ಉತ್ತಮವಾಗಿ ಈ ಪೆಟ್ ಪ್ಲಾನೆಟ್ ನಡೆಯುತ್ತಿದೆ. ಶಿರಸಿಗೆ ಇದಕ್ಕಾಗಿಯೇ ಅಂತ ಬಂದು ಈ ವಿಶೇಷವಾದ ಪೆಟ್ ಪ್ಲಾನೆಟ್ ನೋಡುವಂತಹ ಒಂದು ಸುಂದರ ಸ್ಥಳವಿದು. ಸರ್ಕಾರ ಹಾಗೂ ದಾನಿಗಳು ಈ ಪ್ಲಾನೆಟ್ ಗೆ ಸಹಾಯ ಮಾಡಿದಲ್ಲಿ ಈ ಪೆಟ್ ಪ್ಲಾನೆಟ್ ರಾಜ್ಯ ಮಟ್ಟದಲ್ಲೂ ಹೆಸರು ಮಾಡೋದ್ರಲ್ಲಿ ಸಂಶವಿಲ್ಲ ಅಂತಾರೆ ವೀಕ್ಷಕರು..

ಇಲ್ಲಿ ಮಕ್ಕಳು, ದೊಡ್ಡವರನ್ನು ಸೆಳೆಯುವ ಅನೇಕ ಪ್ರಾಣಿಗಳಿವೆ. ಇವುಗಳ ಜೀವನ ಕ್ರಮ, ಆಹಾರ, ಮೊಟ್ಟೆಯಿಡುವ, ಮರಿ ಮಾಡುವ ವಿಧಾನ, ಪಕ್ಷಿ ಸಂಕುಲ ರಕ್ಷಣೆ ಎಲ್ಲವನ್ನೂ ಭೇಟಿ ನೀಡುವವರಿಗೆ ತಿಳಿಸಲಾಗುತ್ತದೆ. ಅತಿ ಸಮೀಪದಿಂದ ಪ್ರಾಣಿಗಳನ್ನು ನೋಡಿದ ಖುಷಿಯೂ ಸಿಗುತ್ತದೆ’ ಅಂತ ವೀಕ್ಷಣೆಗೆ ಬಂದವರು ಹೇಳ್ತಾರೆ.

ಒಟ್ಟಾರೆ ಪ್ರಾಣಿಪ್ರಿಯ ವೈದ್ಯರೊಬ್ಬರ ಉತ್ಸಾಹದಿಂದ ಒಂದೆಡೆ ತೊಂದರೆಯಲ್ಲಿರೋ ಎನಿಮಲ್ಗಳಿಗೆ ಚಿಕಿತ್ಸೆ ಸಿಕ್ಕಿದ್ರೆ, ಇನ್ನೊಂದೆಡೆ ಈ ಪ್ರಾಣಿಗಳನ್ನು ಝೂ ಬಿಟ್ಟು ಬೇರೆಡೆ ನೋಡೋ ಸಂಭ್ರಮ ನೋಡುಗರದ್ದಾಗಿದೆ. ಈ ವಿಶೇಷ ಪ್ರಯತ್ನ ಮಾಡ್ತಿರೋ ಸಿರ್ಸಿಕರ್ ಕಾರ್ಯ ಇತರರಿಗೂ ಮಾದರಿಯಾಗಿದೆ..

ಶ್ರೀಧರ್ ಮದ್ದಿನಕೇರಿ

About the author

Adyot

Leave a Comment