ಕೈ ಕಾಲುಗಳು ಸರಿಯಾಗಿದ್ರೂ ಕೂಡ ಕೆಲವರು ಸರಿಯಾಗಿ ವಾಹನ ಚಲಾವಣೆ ಮಾಡೋಕೆ ಹಿಂಜರಿಯುತ್ತಾರೆ. ಕುಳಿತಲ್ಲೇ ಕೆಲಸ ಆಗ್ಬೇಕು ಅನ್ನೋ ಆಲಸಿ ಪ್ರವೃತ್ತಿಯವರಿದ್ದಾರೆ. ಇನ್ನು ಕೈ, ಕಾಲಿಗೇನಾದ್ರೂ ಪೆಟ್ಟು ಬಿದ್ರೆ ಮುಗೀತು. ಇದ್ರ ನಡುವೆಯೂ ಬಾಲ್ಯದಲ್ಲೇ ಕಾಲು ಕಳೆದುಕೊಂಡು ಅಂಗವಿಕಲರಾದ ಒಬ್ರು ಸರಾಗವಾಗಿ ಕಾರು ಚಲಾಯಿಸಿಕೊಂಡು ಶಾಲೆಗೆ ಬರ್ತಾರೆ ಅಂದ್ರೆ ನಂಬೋಕಾಗಲ್ಲ ಅಲ್ವಾ..? ಹಾಗಿದ್ರೆ ಈ ಸ್ಟೋರಿ ನೋಡಿ…
ಹೌದು.. ಬಾಲ್ಯದಲ್ಲೇ ಬಂದ ಅಂಗವೈಕಲ್ಯದ ನಡುವೆಯೂ ಅದನ್ನೆಲ್ಲಾ ಮರೆತು ಸಾಮಾನ್ಯರಂತೆ ಜೀವನ ನಡೆಸುತ್ತಿರೋ ಒಬ್ಬ ಶಿಕ್ಷಕನ ಕಥೆ ಇದು. ಮೂಲತಃ ಕುಮಟಾ ತಾಲೂಕಿನ ಯಾಣದ ಸಂಡಳ್ಳಿಯವರಾದ ಸತೀಶ್ ಹೆಗಡೆ ಬಾಲ್ಯದಿಂದಲೂ ಅಂಗವಿಕಲರು. ಇವರ 2 ಕಾಲುಗಳೂ ಕೂಡ ಸ್ವಾಧೀನ ಕಳೆದುಕೊಂಡಿವೆ. ಬಲಗಾಲಲ್ಲಿ ಸ್ವಲ್ಪ ಶಕ್ತಿ ಇದ್ರೂ ಕೂಡ ನಡೆಯೋಕೆ ಆಗುವಷ್ಟು ಶಕ್ತಿ ಇಲ್ಲ. ಇವೆಲ್ಲದರ ನಡುವೆಯೂ ಈ ವ್ಯಕ್ತಿ ಜೀವನದ ಮೇಲಿನ ಭರವಸೆ ಕಳೆದುಕೊಳ್ಳಲಿಲ್ಲ. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಇವರನ್ನ ತಂದೆ ಶಿಕ್ಷಣಕ್ಕಾಗಿ ಗದಗದ ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮಕ್ಕೆ ಸೇರಿಸಿದ್ರು. ಅಲ್ಲಿ ಪದವಿ ಹಾಗೂ ಸಂಗೀತ ವಿದ್ವತ್ ಮುಗಿಸಿದ ಸತೀಶ್ ತೀರ್ಥಹಳ್ಳಿಯ ಒಂದು ಖಾಸಗೀ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇರಿಕೊಂಡ್ರು. ನಂತರ ಸರಸ್ವತೀ ವಿದ್ಯಾ ನಿಕೇತನ ಅನ್ನೋ ಸ್ವಂತ ಸಂಗೀತ ಶಾಲೆಯನ್ನ ಪ್ರಾರಂಭಿಸಿದ ಇವ್ರು 300 ರಿಂದ 400 ಜನ ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನ ಹೇಳಿಕೊಟ್ರು. ಇವರ ಸಂಗೀತ ಪ್ರತಿಭೆಯನ್ನ ಹುಡುಕಿಕೊಂಡು ಬಂದ ಸರ್ಕಾರ 2010ರಲ್ಲಿ ಇವರನ್ನ ಸರ್ಕಾರಿ ಸಂಗೀತ ಶಿಕ್ಷರನ್ನಾಗಿ ನೇಮಿಸಿತು. 2016 ರ ಕಲೋತ್ಸವ ಸ್ಪರ್ಧೆಯ ಜಾನಪದ ಕಲಾ ಪ್ರಕಾರದಲ್ಲಿ 10 ಮಕ್ಕಳನ್ನ ರಾಷ್ಟ್ರ ಮಟ್ಟಕ್ಕೆ ಕಳುಹಿಸಿದ ಗರಿಮೆ ಇವರದ್ದಾಗಿದೆ.. ಇವರ ಅಂಗವೈಕಲ್ಯ ಇವರಿಗೆ ಹಲವಾರು ಕಷ್ಟದ ಪರಿಸ್ಥಿತಿಯನ್ನ ಅನುಭವಿಸುವಂತೆ ಮಾಡಿತ್ತು. ಶಾಲೆಗೆ ದೂರ ನಡೆದುಕೊಂಡು ಹೋಗೋಕೆ ಸಾಧ್ಯವಿಲ್ಲದ ಕಾರಣದಿಂದ ಗದಗದಲ್ಲಿ ಶಿಕ್ಷಣ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಮ್ಮ ಮನೋಬಲ ಗಟ್ಟಿ ಇದ್ದಷ್ಟು ವಿಕಲಚೇತನರು ಮೇಲೆ ಬರೋಕೆ ಸಾಧ್ಯ ಅಂತಾರೆ ಸತೀಶ್ ಹೆಗಡೆ..
ಇನ್ನು ಇವರ ವಾಹನ ಚಲಾವಣೆಯ ಕಲೆಯನ್ನ ನೋಡಿದ್ರೆ ಎಂತವರಾದ್ರೂ ಮೂಗಿನ ಮೇಲೆ ಬೆರಳಿಡುತ್ತಾರೆ. ಅಷ್ಟು ಅದ್ಭುತವಾಗಿ ಕಾರನ್ನು ಚಲಾಯಿಸುವ ಶೈಲಿಯನ್ನ ಕರಗತ ಮಾಡಿಕೊಂಡಿದ್ದಾರೆ ಇವ್ರು. ದಿನಾಲೂ ಮನೆಯಿಂದ ಪತ್ನಿಯನ್ನೂ ಕೂರಿಸಿಕೊಂಡು ಕಾಲುಗಳಿಲ್ಲದಿದ್ರೂ ಕೂಡ ಸ್ವತಃ ತಾವೇ ಕಾರನ್ನ ಚಲಾಯಿಸಿಕೊಂಡು ಬರ್ತಾರೆ ಇವ್ರು. 2 ಮರದ ಕೈ ಊರುಗೋಲುಗಳ ಸಹಾಯದಿಂದ ಇವ್ರು ಸಾಗೋದನ್ನ ನೋಡಿದಾಗ ಮನ ಕಲುಕುತ್ತದೆ. ಇವರಿಗೇ ಅಂತಾನೇ ಕಾರನ್ನ ವಿಶೇಷವಾಗಿ ವಿನ್ಯಾಸ ಮಾಡಲಾಗುತ್ತೆ. ಸ್ಟಿಯರಿಂಗ್ ವೀಲ್ ಸಮೀಪ ಎಕ್ಸಲೇಟರ್ ಹಾಗೂ ಬ್ರೇಕ್ ನ ಲಿವರ್ ವಿನ್ಯಾಸ ಮಾಡಲಾಗಿದ್ದು, ಆ ಲಿವರ್ ಅನ್ನು ಒತ್ತಿದ್ದಾಗ ಬ್ರೇಕ್ ಹಾಗೂ ಲಿವರ್ ಅನ್ನು ಮೇಲ್ಗಡೆ ಎಳೆದಾಗ ಎಕ್ಸಲೇಟರ್ ಆಗಿ ಕಾರ್ಯನಿರ್ವಹಿಸುತ್ತೆ. ಇನ್ನು 2020 ರಲ್ಲಿ ಸರ್ಕಾರಿ ಪ್ರೌಢಶಾಲೆ ಕಾನಗೋಡಿಗೆ ಸಂಗೀತ ಶಿಕ್ಷಕರಾಗಿ ವರ್ಗಾವಣೆಯಾದ ಇವ್ರು ಇಲ್ಲಿಯೂ ಕೂಡ ತಮ್ಮ ಸಂಗೀತದ ಪಾಠವನ್ನ ಮುಂದುವರೆಸಿದ್ದಾರೆ. ಇವರ ಸಾರಥ್ಯದಲ್ಲಿ ಈ ಬಾರಿ ಕೂಡ ಒಬ್ಬ ಸಂಗೀತದ ಜ್ಞಾನವಿಲ್ಲದ ಮುಸಲ್ಮಾನ ವಿದ್ಯಾರ್ಥಿನಿಯೊಬ್ಬಳು ಕಲೋತ್ಸವ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಪ್ರದರ್ಶನ ನೀಡಿದ್ದಾಳೆ. ಅಂತಹ ಒಂದು ಅದ್ಭುತ ಸಂಗೀತ ಮಾಂತ್ರಿಕರಾಗಿರೋ ಇವ್ರು ಸದಾ ಚಟುವಟಿಕೆಯಿಂದ ಇದ್ದು, ಉಳಿದ ಶಿಕ್ಷಕರಿಗೂ ಚೈತನ್ಯದ ಚಿಲುಮೆಯಾಗಿದ್ದಾರೆ..
ಒಟ್ಟಿನಲ್ಲಿ ಅಂಗವಿಕಲರಾಗಿದ್ರೂ ಕೂಡ ಅದನ್ನ ಮನಸ್ಸಿಗೆ ಹಚ್ಚಿಕೊಳ್ಳದೇ ಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದಾರೆ ಈ ಉತ್ಸಾಹಿ ವಿಕಲಚೇತನ ಶಿಕ್ಷಕ. ಸಾಧನೆ ಮಾಡ್ಬೇಕು ಅಂದ್ರೆ ವೈಕಲ್ಯಗಳನ್ನ ಮೆಟ್ಟಿ ನಿಂತು ಸಾಧಿಸಬೇಕು ಅನ್ನೋ ಛಲವಿದ್ರೆ ಏನನ್ನಾದ್ರೂ ಸಾಧಿಸಬಹುದು ಅನ್ನೋದಕ್ಕೆ ಇವ್ರು ಒಂದು ಉದಾಹರಣೆ. ಜೀವನವೇ ಸಾಕಪ್ಪಾ ಅನ್ನೋ ಎಷ್ಟೋ ಜನ್ರಿಗೆ ಇಂತವ್ರು ಸ್ಫೂರ್ತಿಯ ಚಿಲುಮೆಯಾಗಿ ಕಾಣಿಸಿಕೊಳ್ಳಲಿ ಅನ್ನೋದು ನಮ್ಮ ಆಶಯ..
########
ಶ್ರೀಧರ ಮದ್ದಿನಕೆರೆ