ಬದುಕು ಕಟ್ಟಿಕೊಳ್ಳುವತ್ತ ರಂಗಭೂಮಿ ಕಲಾವಿದರು…
ಕೊವಿಡ್ 19 ನ ಕಾರಣದಿಂದ ಕಳೆದ ಎಂಟು ತಿಂಗಳಿಂದ ಸ್ತಬ್ಧವಾಗಿದ್ದ ನಾಟಕ ಕಂಪನಿಗಳು ಮತ್ತೆ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿವೆ. ಕೊರೊನಾದಿಂದಾಗಿ ಕತ್ತಲೆ ಕವಿದಿದ್ದ ರಂಗಭೂಮಿ ಕಲಾವಿದರ ಬಾಳಿನಲ್ಲಿ ನಿಧಾನವಾಗಿ ಬೆಳಕು ಕಾಣಿಸಿಕೊಳ್ಳೋ ಭರವಸೆ ಮೂಡಿದೆ. ಶಿರಸಿ ಮಾರಿಕಾಂಬಾ ಜಾತ್ರೆಗೆ ಬಂದಿದ್ದ ಜೇವರ್ಗಿ ನಾಟಕ ಕಂಪನಿ ಇದೀಗ ನಾಟಕ ಪ್ರದರ್ಶನದ ಮೂಲಕ ಮತ್ತೆ ಜನರನ್ನು ರಂಜಿಸೋಕೆ ಮುಂದಾಗಿದೆ.
ಪ್ರತಿ ವರ್ಷದಂತೆ 2020 ರ ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿಯೂ 5 ರಿಂದ 6 ನಾಟಕ ಕಂಪನಿಗಳು ಜನರನ್ನು ರಂಜಿಸೋಕೆ ನಗರದ ವಿವಿಧ ಭಾಗಗಳಲ್ಲಿ ಟೆಂಟ್ ಹಾಕಿದ್ದವು. ಆದ್ರೆ ಕೊವಿಡ್ 19 ರೋಗದ ಸಮಸ್ಯೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ಕೇವಲ 15 ದಿನಗಳಲ್ಲಿ ಪ್ರದರ್ಶನ ಬಂದ್ ಆಗಿತ್ತು. ಆದರೆ ಈಗ ಮತ್ತೇ ಪ್ರದರ್ಶನ ಆರಂಭವಾಗಿದ್ದು, ಜನರನ್ನು ರಂಜಿಸೋಕೆ ನಾಟಕ ಕಂಪನಿ ತಯಾರಿ ನಡೆಸಿದೆ. 5 ರಿಂದ 6 ನಾಟಕ ಕಂಪನಿಗಳಲ್ಲಿ ಈಗ ಕೇವಲ ಒಂದು ಕಂಪನಿ ಮಾತ್ರ ಉಳಿದುಕೊಂಡಿದ್ದು, ಅವರು ಸಾಮಾಜಿಕ ಅಂತರ, ಸ್ಯಾನಿಟೈಸರ್, ಕಡ್ಡಾಯ ಮಾಸ್ಕ ಸೇರಿದಂತೆ ಎಲ್ಲಾ ಕೊವಿಡ್ ನಿಯಮಗಳನ್ನು ಅನುಸರಿಸಿ ನಾಟಕ ಪ್ರದರ್ಶನ ಏರ್ಪಡಿಸುತ್ತಿದ್ದಾರೆ.
ಜೇವರ್ಗಿ ನಾಟಕ ಕಂಪನಿ ಶಿರಸಿ ನಗರದಲ್ಲಿ ನಾಟಕ ಪ್ರದರ್ಶನ ನೀಡುತ್ತಿದ್ದು ನಾಟಕ ಕಂಪನಿಗಳನ್ನೇ ನಂಬಿಕೊಂಡಿರೋ ನೂರಾರು ಕಲಾವಿದರು ಕೊರೊನಾ ಹಾವಳಿಗೆ ತತ್ತರಿಸಿದ್ದರು. ಇಂತಹ ವೇಳೆಯಲ್ಲಿ ಸರ್ಕಾರ ಈಗ ನಾಟಕ ಪ್ರದರ್ಶನಕ್ಕೆ ಅನುಮತಿ ನೀಡಿದ್ದು ಎಲ್ಲರಿಗೂ ಖುಷಿ ತಂದರೂ, ಲಾಕ್ ಡೌನ್ ಸಮಯದಲ್ಲಿ ಕಲಾವಿದರ ಪರಿಸ್ಥಿತಿ ಅರಿಯಲು ಸರ್ಕಾರ ವಿಫಲವಾಯಿತು ಅನ್ನೋ ಬೇಸರವೂ ಕಲಾವಿದರಲ್ಲಿದೆ. ಕೇವಲ 2 ಸಾವಿರ ನೀಡಿದ್ದ ಸರ್ಕಾರ ಇನ್ನು ಮುಂದಾದರೂ ಕಲಾವಿದರ ನೆರವಿಗೆ ಬರಬೇಕು ಅಂತ ಜೇವರ್ಗಿ ನಾಟಕ ಕಂಪನಿಯ ಪ್ರಮುಖ ಕಲಾವಿದರು ಒತ್ತಾಯಿಸಿದ್ದು, ಕಂಪನಿಯ 40 ಕ್ಕೂ ಅಧಿಕ ಕಲಾವಿದರಿಗೆ ಈಗ ಬದುಕು ಸಿಕ್ಕಂತಾಗಿದೆ ಅಂತ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಪುನಃ ನಾಟಕ ಪ್ರದರ್ಶನ ಆರಂಭಿಸೋ ಮೂಲಕ ಕಲಾವಿದರು ಕೊರೊನಾದಿಂದ ಕತ್ತಲಾಗಿದ್ದ ಬದಕುನ್ನು ಕಟ್ಟಿಕೊಳ್ಳುವತ್ತ ಸಾಗಿದ್ದಾರೆ. ಸಾರ್ವಜನಿಕರ ಸಹಕಾರ, ಕಲಾಸಕ್ತರ ಪ್ರೋತ್ಸಾಹದಿಂದ ಜೀವನ ನಡೆಸೋ ಮೂಲಕ ಬಾಳಿನಲ್ಲಿ ಹೊಸ ಬೆಳಕು ಮೂಡುತ್ತೆ ಅನ್ನೋ ಇರಾದೆಯನ್ನು ಕಲಾವಿದರು ಹೊಂದಿದ್ದಾರೆ.
#####
ಶ್ರೀಧರ ಮದ್ದಿನಕೆರೆ