ಸ್ಪೀಕರ್ ಕ್ಷೇತ್ರದಲ್ಲಿ ಬೆಂಗಳೂರು ಸಂಸದರಿಂದ ಸೇತುವೆ ನಿರ್ಮಾಣ: ಮಕ್ಕಳ ಸಂಕಷ್ಟ ತಪ್ಪಿಸಿದ ಸಂಸದ
ಹಲವಾರು ವರ್ಷಗಳ ಕಾಯುವಿಕೆಗೆ ವಿರಾಮ ಸಿಕ್ಕಿದ ಸ್ಟೋರಿ ಇದು. ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು, ಮರದಿಂದ ನಿರ್ಮಿಸಿದ ಸಂಕವನ್ನ ದಾಟಿ ಹೋಗುವವರ ಪಾಲಿಗೆ ಮರದ ಸಂಕದಿಂದ ಮುಕ್ತಿ ಕೊಡಿಸಿದ ಕಥೆಯಿದು. ಕ್ಷೇತ್ರ ಯಾರದ್ದೇ ಆದರೂ ಕೂಡ ಜನರಿಗೆ ಸಹಾಯ ಮಾಡಬೇಕೆಂಬ ತುಡಿತ ಇದ್ರೆ ಕೆಲಸ ಮಾಡಬಹುದು ಎಂದು ತೋರಿಸಿಕೊಟ್ಟವರ ಕಥೆ ಇದು..
ಇದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನಮನೆ ಗ್ರಾಪಂ ವ್ಯಾಪ್ತಿಯ ಹೆಗ್ಗೆಕೊಪ್ಪ ಗ್ರಾಮದ ಕತೆ.
ಇದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸ್ವಕ್ಷೇತ್ರ.ಇಲ್ಲಿಯ ಮಕ್ಕಳು ಶಾಲೆಗೆ ಹೋಗಬೇಕೆಂದರೆ ಅಡಿಕೆ ಮರದಿಂದ ಮಾಡಿದ ಕಾಲು ಸಂಕವನ್ನು ದಾಟಿ ಹೋಗಬೇಕಿತ್ತು
ಇದನ್ನು ನೋಡಿ ಮಕ್ಕಳ ಪರಿಸ್ಥಿತಿಗೆ ಮರುಕಪಟ್ಟ ಬೆಂಗಳೂರಿನ ಸಂಸದ ಜೆ.ಸಿ ಚಂದ್ರಶೇಖರ್ ಆ ಹಳ್ಳಕ್ಕೆ ಸೇತುವೆ ನಿರ್ಮಿಸೋ ಮುಖಾಂತರ ಅಭಿವೃದ್ಧಿಗೆ ಕಾರ್ಯಕ್ಷೇತ್ರದ ಇತಿಮಿತಿ ಇಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಹೆಗ್ಗೆಕೊಪ್ಪದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಮಳೆ ಬಂದರೆ ಮೈ ಜುಮ್ಮೆನ್ನುತ್ತಿತ್ತು. ಏಕೆಂದರೆ ಈ ಗ್ರಾಮದ ಮಕ್ಕಳು ಬಸರಮನೆ ಹಳ್ಳದಾಟಿ ಕಲ್ಲೂರು ಶಾಲೆಗೆ ಹೋಗಬೇಕಿತ್ತು. ಕಲ್ಲೂರು ಗ್ರಾಮದಲ್ಲಿರೋ ಶಾಲೆ ಬಿಟ್ಟರೆ ಹೆಗ್ಗೆಕೊಪ್ಪದ ವಿದ್ಯಾರ್ಥಿಗಳಿಗೆ ಸಮೀಪದಲ್ಲಿ ಯಾವುದೇ ಶಾಲೆ ಇಲ್ಲ. ಬೇಸಿಗೆಯಲ್ಲಿ ಬರಿದಾಗುವ ಈ ಹಳ್ಳದಾಟಿ ಮಕ್ಕಳು ಶಾಲೆಗೆ ಹೋಗುತ್ತಾರೆ. ಆದರೆ ಮಳೆಗಾಲ ಬಂತೆಂದರೆ ಈ ಮಕ್ಕಳಿಗೆ ಹಳ್ಳತುಂಬುವ ಭೀತಿ.
ಈ ತೊಂದರೆ ಬಗೆಹರಿಸಲು ಕಾಲು ಸಂಕ ಮಾಡುವ ಯೋಜನೆ ಹಲವು ವರ್ಷಗಳಿಂದ ಪ್ರಗತಿ ಕಾಣಲೇ ಇಲ್ಲವಾಗಿತ್ತು. ಅರ್ಧಂಬರ್ಧ ಆಗಿರುವ ಕೆಲಸದ ನಂತರ ಸ್ಥಳಿಯರು ಒಂದು ತೂಗುಸೇತುವೆ ಮಾದರಿಯ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡು ಅದರಲ್ಲೇ ಮಕ್ಕಳನ್ನು ಸಾಗಿಸುತ್ತಿದ್ದರು. ಬಡ ಹಿಂದುಳಿದ ವರ್ಗಗಳ ಜನರಿರೋ ಹೆಗ್ಗೆಕೊಪ್ಪದ ಜನತೆ ತಮ್ಮೂರಿನ ಸಂಪರ್ಕ ಸೇತುವೆ ನಿರೀಕ್ಷಿಸುತ್ತಾ ಒಂದೆರಡು ದಶಕಗಳೇ ಕಳೆದು ಹೋಗಿದ್ವು. ಆದರೆ ಇವರ ಸಮಸ್ಯೆ ಕೇಳಲು ಶಾಸಕ, ಸಂಸದ, ಸಚಿವರ್ಯಾರೂ ಮುಂದೆ ಬಂದಿಲ್ಲವಾಗಿತ್ತು.
ಆದರೆ ಈ ಕುರಿತು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಮನ ಮಿಡಿಯುವ ವರದಿಗಳು ಪ್ರಸಾರವಾಗಿದ್ವು. ಇದನ್ನು ನೋಡಿ ಎಚ್ಚೆತ್ತ ಆಗಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ನಿವೇದಿತ್ ಆಳ್ವಾ, ಸೇತುವೆಗೆ ಬೇಕಿದ್ದ ಅನುದಾನಕ್ಕಾಗಿ ಬೆಂಗಳೂರು ಕ್ಷೇತ್ರದ ಕಾಂಗ್ರೆಸ್ ಸಂಸದ ಜೆ.ಸಿ ಚಂದ್ರಶೇಖರ್ ಜೊತೆ ಚರ್ಚಿಸಿದ್ದರು. ವರದಿಗಳನ್ನು ನೋಡಿದ ಚಂದ್ರಶೇಖರ್ ಮಕ್ಕಳ ಪರಿಸ್ಥಿತಿಗೆ ಮರುಗಿ ‘ಸೇತುವೆ ಕಟ್ಟಿಸೋಣ, ಅನುದಾನವನ್ನ ನಾನು ನೀಡ್ತೇನೆ’ ಅಂತ ಹೇಳಿದ್ದರು.
ನಂತರ ಸೇತುವೆ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಸಂಸದರ ನಿಧಿಯ ಅನುದಾನವನ್ನ ನೀಡಿದ್ದರು. ಇದರ ಫಲವಾಗಿ ಇಂದು ಸೇತುವೆ ನಿರ್ಮಾಣವಾಗಿ ಉದ್ಘಾಟನೆಗೆ ಕಾಯುತ್ತಿದೆ. ಜೀವ ಕೈಯಲ್ಲಿ ಹಿಡಿದು ಶಾಲೆಗೆ ತೆರಳುತ್ತಿದ್ದ ಮಕ್ಕಳು ಹಾಯಾಗಿ ಸೇತುವೆಯ ಮೇಲೆ ಯಾವುದೇ ಅಂಜಿಕೆ, ಅಳುಕಿಲ್ಲದೆ ಸಾಗುತ್ತಿದ್ದಾರೆ. ಅಲ್ಲಿನ ಸಾರ್ವಜನಿಕರು ಕ್ಷೇತ್ರದ ಶಾಸಕ, ಸಂಸದರನ್ನ ತೆಗಳುತ್ತಿದ್ದಾರೆ..
ಶಾಸಕರು ಅಥವಾ ಸಂಸದರು ಮನಸ್ಸು ಮಾಡಿದ್ದರೆ
ಅಲ್ಲಿನ ಜನತೆಗೆ ಸೇತುವೆ ಭಾಗ್ಯ ಯಾವಾಗಲೋ
ದೊರಕಿರುತ್ತಿತ್ತು. ಆದರೆ ಅಲ್ಲಿನ ಮಕ್ಕಳ ಪರಿಸ್ಥಿತಿಯನ್ನ ನೋಡಿದ ದೂರದ ಸಂಸದರೊಬ್ಬರು ಕ್ಷೇತ್ರವನ್ನ ಲೆಕ್ಕಿಸದೆ ಅನುದಾನವನ್ನ ನೀಡಿದ್ದು, ಅಭಿವೃದ್ಧಿಗೆ ಅಥವಾ ಸಹಾಯ ಮಾಡಬೇಕು ಅನ್ನೋ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಅನ್ನೋದನ್ನ ತೋರಿಸಿಕೊಟ್ಟಿದೆ ಎನ್ನುತ್ತಾರೆ ಸ್ಥಳೀಯ ತಾಲೂಕುಪಂಚಾಯತ್ ಸದಸ್ಯ ನಾಸೀರ್ ವಲ್ಲಿ ಖಾನ್
#####
ಶ್ರೀಧರ ಮದ್ದಿನಕೆರೆ