ಕೆ.ವಿ.ಸುಬ್ಬಣ್ಣ ಎಂಬ ರಂಗ ಗಾರುಡಿಗ
ರಂಗಭೂಮಿಯ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು ಕೆ.ವಿ.ಸುಬ್ಬಣ್ಣನವರು.ನಿನಾಸಂ ಸಂಸ್ಥೆಯನ್ನು ಸ್ಥಾಪಿಸಿ ಕುಗ್ರಾಮದಲ್ಲಿ ನಾಟಕ ಪ್ರದರ್ಶನ ನಿರಂತರವಾಗಿ ನಡೆಯುವಂತೆ ಮಾಡಿದವರು. ಇಂತಹ ಮಹಾನ್ ವ್ಯಕ್ತಿಯ ಒಡನಾಟ ದೊರಕುವುದೇ ಒಂದು ಪುಣ್ಯ ಅವರ ಒಡನಾಟದ ಮೆಲಕುಗಳು ಇಲ್ಲಿವೆ ನೋಡಿ…..
ಸುಮಾರು ಮೂರು ದಶಕಗಳ ಹಿಂದಿನ ಕಥೆ; ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿದ್ದ ಕಮ್ಮಟವೊಂದಕ್ಕೆ ನಾನು ಆಯ್ಕೆಯಾಗಿ ಬೆಂಗಳೂರಿಗೆ ಹೋಗಬೇಕಾಗಿ ಬಂತು. ಪತ್ರಿಕೆಯಲ್ಲಿ ಬಂದ ಕಮ್ಮಟದ ಕುರಿತಾಗಿ ವಿವರ ತಿಳಿದು ಕೋರಿಕೊಂಡಿದ್ದ ನನಗೆ ಅದು ಹೇಗೋ ಅವಕಾಶ ದೊರಕಿಬಿಟ್ಟಿತ್ತು.
ನನಗೆ ಆಗ ಯಾವ ಸಾಹಿತಿಗಳದ್ದಾಗಲೀ, ರಂಗಕರ್ಮಿಗಳದ್ದಾಗಲೀ ಪರಿಚಯವಿರಲಿಲ್ಲ. ಮಾತ್ರವಲ್ಲ ರಂಗಭೂಮಿಯ ಗಂಧ ಗಾಳಿಯೂ ತಿಳಿದಿರಲಿಲ್ಲ. ನಮ್ಮೂರ ಸುತ್ತಲಿನ ಹಳ್ಳಿಗಳ ಹವ್ಯಾಸಿ ಕಲಾವಿದರ ನಾಟಕ, ಕೆಲವೊಮ್ಮೆ ಸಿದ್ದಾಪುರಕ್ಕೆ ಬರುತ್ತಿದ್ದ ಕಂಪನಿ ನಾಟಕಗಳನ್ನ ನೋಡಿದ್ದು, ನಮ್ಮೂರ ವಾಚನಾಲಯದಲ್ಲಿದ್ದ ನಾಲ್ಕಾರು ನಾಟಕ ಪುಸ್ತಕ ಓದಿದ್ದು ಬಿಟ್ಟರೆ ಆಧುನಿಕ ನಾಟಕಗಳ ಬಗ್ಗೆ ತಿಳಿದೇ ಇರಲಿಲ್ಲ.
ಒಮ್ಮೆ ಬೇಸಿಗೆ ರಜದಲ್ಲಿ ಊರಲ್ಲಿದ್ದಾಗ ಸುಮಾರು ನಾಲ್ಕು ಗಂಟೆಯ ವೇಳೆಗೆ ಪೇಟೆಯಿಂದ ಬಂದವರೊಬ್ಬರು ಮಾತಿನ ಮಧ್ಯೆ ಇವತ್ತು ಸಂಜೆ ಸಿ.ಆರ್.ಹಾಲ್‍ನಲ್ಲಿ ಬೆಂಗಳೂರಿನವರದ್ದು ಉಚಿತವಾಗಿ ನಾಟಕ ಪ್ರದರ್ಶನ ಇದೆ ಎಂದರು. ಅದನ್ನು ಕೇಳಿಸಿಕೊಂಡ ನಾನು ನಾಲ್ಕಾರು ಗೆಳೆಯರ ಪಟಾಲಂಗೆ ಸುದ್ದಿ ಮುಟ್ಟಿಸಿ, ಎಲ್ಲರೂ ಮನೆಯಿಂದ ಒಪ್ಪಿಗೆ ಪಡೆದು ಪೇಟೆಯತ್ತ ದೌಡಾಯಿಸಿದ್ದೆವು. ನಮ್ಮೂರಿಂದ ಸಿದ್ದಾಪುರ ಐದು ಕಿಮೀ. ಅಷ್ಟೇ, ಓಡುತ್ತಲೇ ಬಂದ ನಾವು ಸಿ.ಆರ್.ಹಾಲ್ ಹೊಕ್ಕು ಪೂರ್ತಿ ತುಂಬಿಕೊಂಡಿದ್ದ ಹಾಲ್‍ನಲ್ಲಿ ನಮ್ಮ ವಯಸ್ಸಿನವರಿಗೆ ಮೀಸಲಾಗಿದ್ದ ವೇದಿಕೆಯ ಎದುರಿನ ನೆಲದ ಮೇಲೆ ಜಾಗ ಹಿಡಿದೆವು. ನಾಟಕ ಶುರುವಾದ ನಂತರ ಇದು ನಾವು ಈವರೆಗೆ ನೋಡಿದ ನಾಟಕಗಳ ರೀತಿಯದಲ್ಲ ಎನ್ನುವದು ನಿಕ್ಕಿಯಾಗಿ ಸಾಮಾಜಿಕ ನಾಟಕಗಳ ಖಳನಾಯಕ, ಹಾಸ್ಯ ಪಾತ್ರಗಳಿರುವ ಅಥವಾ ಪೌರಾಣಿಕ, ಐತಿಹಾಸಿಕ ನಾಟಕಗಳ ಅಬ್ಬರದ ಸನ್ನಿವೇಶಗಳೂ ಇರದ್ದಕ್ಕೆ ಗೆಳೆಯರಲ್ಲಿ ಕೆಲವರು ಕೊರ ಕೊರ ಅನ್ನತೊಡಗಿದ್ದರು. ನನಗೆ ಏಕೋ ಆ ನಾಟಕ ಆಪ್ತವೆನ್ನಿಸತೊಡಗಿತ್ತು. ಅಷ್ಟರೊಳಗೆ ಹೇಗೋ ಮಾಡಿ ಆ ನಾಟಕದ ಕರಪತ್ರ ಗಿಟ್ಟಿಸಿ ಮೇಲು ಮೇಲಿಂದ ಓದಿಕೊಂಡಿದ್ದೆ. ಸತ್ತವರ ನೆರಳು ಎನ್ನುವ ಹೆಸರಿನ ಜಡಭರತ (ಜಿ.ಬಿ.ಜೋಶಿ )ಎನ್ನುವವರು ಬರೆದ, ಬಿ.ವಿ.ಕಾರಂತ ಎನ್ನುವವರು ನಿರ್ದೇಶಿಸಿದ್ದ, ಆ ನಾಟಕವನ್ನು ಬೆನಕ ತಂಡದವರು ಪ್ರದರ್ಶಿಸುತ್ತಿದ್ದು, ನಾಗಾಭರಣ, ಸುಂದರರಾಜ್ ಮುಂತಾದವರು ಪಾತ್ರವಹಿಸುತ್ತಿರುವದನ್ನ ತಿಳಿದುಕೊಂಡಿದ್ದೆ. ಅವರೆಲ್ಲರ ಬಗ್ಗೆ ಆಗ ನನಗೆ ಹೆಚ್ಚಿಗೇನೂ ಗೊತ್ತಿರಲಿಲ್ಲ. ಅಪರೂಪಕ್ಕೆ ಸಿಗುತ್ತಿದ್ದ ಸುಧಾ, ತರಂಗ ಮುಂತಾದ ಪತ್ರಿಕೆಗಳಲ್ಲಿ ಹೆಸರು, ಫೋಟೊ ನೋಡಿದ್ದಷ್ಟೇ ಗೊತ್ತಿತ್ತು. ಪುರಂದರ ದಾಸರ ಕೀರ್ತನೆಗಳ ಜೊತೆಗೆ ಹೊಸ ಬಗೆಯ ಸಂಗೀತ, ಪಾತ್ರಗಳು, ವೇಷಭೂಷಣ ,ವಿನ್ಯಾಸ ಎಲ್ಲವೆಂದರೇ ಎಲ್ಲವೂ ಈವರೆಗೆ ನಾನು ನೋಡಿದ ನಾಟಕಗಳಿಗಿಂತ ಬೇರೆಯದೇ ಆಗಿತ್ತು. ಖುಷಿಯಿಂದಲೇ ಆ ನಾಟಕವನ್ನು ನೋಡಿದ್ದೆ. ಆ ನಾಟಕ ನೋಡಿ ಎಷ್ಟೋ ವರ್ಷಗಳ ನಂತರ ಕನ್ನಡದ ಹವ್ಯಾಸಿ ರಂಗಭೂಮಿಯಲ್ಲಿ ಅಜರಾಮರವಾಗಿ ಉಳಿದ ನಾಟಕಗಳಲ್ಲಿ ಅದು ಒಂದು ಎನ್ನುವದನ್ನ ತಿಳಿದು, ಆ ನಾಟಕವನ್ನ ನಮ್ಮೂರಲ್ಲಿ ನೋಡಿದ್ದಕ್ಕೆ ಹೆಮ್ಮೆ ಪಟ್ಟಿದ್ದೆ.
ಇಂಥ ಸಣ್ಣ,ಪುಟ್ಟ ಅರ್ಹತೆ ಇದ್ದದ್ದು ಬಿಟ್ಟರೆ ಮತ್ಯಾವ ಅರ್ಹತೆಯೂ ಇರದ ನಾನು ಯಾರ ಶಿಫಾರಸ್ಸು ಇಲ್ಲದೇ ಕಮ್ಮಟಕ್ಕೆ ಆಯ್ಕೆಯಾಗಿದ್ದೆ.
ಅಕಾಡೆಮಿಯಿಂದ ಪತ್ರ ಬಂದಾಗ ಅದನ್ನು ಓದಿ ನಾನೇ ಕಂಗಾಲು. ಅದರ ಹಿಂದಿನ ವರ್ಷವೂ ಸಾಹಿತ್ಯ ಅಕಾಡೆಮಿ ಕೂಡ ಶಿವಮೊಗ್ಗದಲ್ಲಿ ನಡೆಯಲಿದ್ದ ಸಾಹಿತ್ಯ ಕಮ್ಮಟಕ್ಕೆ ಆಯ್ಕೆ ಮಾಡಿ. ಇದೇ ಥರ ಶಾಕ್ ಕೊಟ್ಟಿತ್ತು; ಎಚ್.ಎಸ್.ವೆಂಕಟೇಶಮೂರ್ತಿಯವರ ನಿರ್ದೇಶನದಲ್ಲಿ ನಡೆದಿದ್ದ ಆ ಕಮ್ಮಟ ಹಿರಿಯ ಸಾಹಿತಿಗಳಾದ ಅನಂತಮೂರ್ತಿ, ಶ್ರೀಕಂಠ ಕೂಡಿಗೆ ಮುಂತಾದವರ ಪರಿಚಯಕ್ಕೂ ಕಾರಣವಾಗಿತ್ತು. ಆದರೆ ಗ್ರಹಚಾರವೆಂದರೆ ಹಿಂದಿನ ವರ್ಷವೂ ಅಷ್ಟೇ, ಈ ವರ್ಷವೂ ಅಷ್ಟೇ, ಕಮ್ಮಟ ಪ್ರಾರಂಭವಾಗುತ್ತಿದ್ದುದು ದೀಪಾವಳಿ ಹಬ್ಬವಾಗಿ ನಾಲ್ಕನೇ ದಿನಕ್ಕೆ. ಅಂದರೆ ಪಂಚಮಿಯಂದು. ಚೌತಿಯಂದು ಅಪ್ಪ ಎಷ್ಟೇ ಹಣಕಾಸಿನ ತೊಂದರೆಯಾದರೂ ಅದೆಷ್ಟೋ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಗಣಹೋಮ ನಮ್ಮ ಮನೆಯಲ್ಲಿ. ಅಪ್ಪನಿಗೆ ಅದೇ ದಿನ ನಾನು ಸಂಜೆಯೇ ಹೋಗಬೇಕಲ್ಲ ಎನ್ನುವ ಸಣ್ಣ ಕಿರಿ ಕಿರಿಯ ಜೊತೆಗೆ ಹೊಸ ಊರಿಗೆ ಪರಿಚಿತರ್ಯಾರೂ ಜೊತೆಗಿಲ್ಲದೇ ಒಬ್ಬನೇ ಹೋಗುವದರ ಬಗ್ಗೆ ಸಣ್ಣ ಅಳುಕು. ಆಗ ನಮ್ಮ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿರದಿದ್ದರೂ ಹೋಗಿ, ಬರಲು ಮತ್ತು ಸ್ವಲ್ಪ ಖರ್ಚಿಗೆ ಸಾಕಾಗುವಷ್ಟು ಹಣವನ್ನು ಕೊಟ್ಟು ಕಳುಹಿಸಿದ್ದ. ನನ್ನ ಆಸಕ್ತಿಯನ್ನ, ಆಶಯಗಳನ್ನ ಗ್ರಹಿಸಿಕೊಂಡು ಇಂಥ ಹಲವು ನೆರವುಗಳ ಮೂಲಕ ನನ್ನನ್ನ ಇಷ್ಟಾದರೂ ಬೆಳೆಸಿದ ಅಪ್ಪನೆಂದರೆ ಗೌರವ, ಅಭಿಮಾನ, ಅವನ ನೆನಪಾದರೆ ಕಣ್ಣು ಹನಿಗೂಡುತ್ತದೆ.
ನನ್ನೂರಿಗೂ, ಬೆಂಗಳೂರಿಗೂ ಬೆಸುಗೆಯಾದ ದಾಂಡೇಲಿ-ಬೆಂಗಳೂರು ಎನ್ನುವ ಬಸ್ ನಾನು ಕರ್ನಾಟಕ ರಾಜ್ಯದ ಭೂಪಟದಲ್ಲಿ ನೋಡಿದ್ದೇ ಎನ್ನುವದಕ್ಕಿಂತ ಓದಿದ್ದೇ ಎನ್ನಬಹುದಾದ ನಮ್ಮ ರಾಜಧಾನಿ ಬೆಂಗಳೂರಿಗಿಂತ ಈ ಬಸ್ಸೇ ನನಗೆ ನಿಗೂಢವಾಗಿತ್ತು. ರಾತ್ರಿ ಹತ್ತುಮುಕ್ಕಾಲು, ಹನ್ನೊಂದರ ವೇಳೆಗೆ ಸಿದ್ದಾಪುರಕ್ಕೆ ಬರುತ್ತದೆ ಎಂದು ಕೇಳಿದ್ದೆನೆ ಹೊರತು ಆ ಬಸ್ಸನ್ನು ಒಮ್ಮೆಯೂ ನೋಡುವ ಅವಕಾಶವೂ ದೊರಕಿರಲಿಲ್ಲ. ಈಗಲಾದರೆ ಬೆಂಗಳೂರೆಂದರೆ ಹಲವರಿಗೆ ನೆರೆಯ ಮನೆ, ಕೆಲವರಿಗೆ ಸ್ವಂತ ಮನೆ ಎನ್ನುವಷ್ಟು ಸಲೀಸು.
ಆಗ ಬೆಂಗಳೂರೆಂದರೆ ವಿದೇಶವೂ ಅಲ್ಲ, ಚಂದ್ರ, ಮಂಗಳ ಮುಂತಾದ ಗ್ರಹಲೋಕವೇ!. ಆಗ ನಮ್ಮೂರಿನ ಒಬ್ಬ ನೀಲಕಂಠ ಎನ್ನುವಾತ ಬೆಂಗಳೂರಿನಲ್ಲಿ ಯಾವುದೋ ಗ್ಯಾರೇಜಿನಲ್ಲಿದ್ದ. ಅಪರೂಪಕ್ಕೆ ಅವನು ಊರಿಗೆ ಬಂದಾಗ ಅವನನ್ನು ನೋಡಲು ನಾವು ಹೋಗಿದ್ದೆವು. ಈಗ ಪ್ರತಿ ಊರಲ್ಲೂ ಮನೆಗಿಬ್ಬರಂತೂ ಬೆಂಗಳೂರಿಗರು. ಅವತ್ತು ರಾತ್ರಿ ಹತ್ತು ಗಂಟೆ ಸುಮಾರಿಗೆ ನಮ್ಮೂರ ಬಸ್ ಸ್ಟಾಂಡ್‍ಗೆ ಬಂದು ಕಾದುನಿಂತೆ. ಬರುವಾಗ ಅಪ್ಪ, ಅಮ್ಮ ಕಳವಳ, ಹೊರಗೆ ವ್ಯಕ್ತಪಡಿಸದ ಭಯ, ಮಗ ರಾಜಧಾನಿಗೆ ಹೋಗುತ್ತಿದ್ದಾನೆ ಎನ್ನುವ ಸಂತೋಷ… ಎಲ್ಲದರ ಸಮ್ಮಿಶ್ರಣದಲ್ಲಿ ನನ್ನನ್ನ ಬೀಳ್ಕೊಟ್ಟಿದ್ದರು.
ರಾತ್ರಿ,ಹಗಲು ವ್ಯತ್ಯಾಸ ಗೊತ್ತಿರದ ನಾನು ಒಂದು ದೊಡ್ಡ ಕೈ ಚೀಲದಲ್ಲಿ ಅಕಾಡೆಮಿಯವರು ತಿಳಿಸಿದಂತೆ ಒಂದು ಚಾದರ, ರಗ್‍ನ್ನು ಮತ್ತು ನನ್ನ ಬಟ್ಟೆ ಹಾಗೂ ಇನ್ನಿತರ ದಿನನಿತ್ಯದ ವಸ್ತುಗಳನ್ನು ತುರುಕಿಕೊಂಡು ಬಂದಿದ್ದೆ. ಆಗ ವಿಧ, ವಿಧದ, ಬ್ಯಾಗ್‍ಗಳಾಗಲೀ, ಬ್ಯಾಕ್ ಪ್ಯಾಕ್, ಪ್ರಂಟ್ ಬ್ಯಾಕ್‍ಗಳಾಗಲೀ, ಸೂಟ್‍ಕೇಸ್‍ಗಳಾಗಲೀ ನಮ್ಮಂಥವರಿಗೆ ಎಲ್ಲಿಂದ ದೊರೆಯಬೇಕು? ಎಷ್ಟೋ ದಿನದಿಂದ ನೋಡಬೇಕೆಂದು ಕಾತರಿಸುತ್ತಿದ್ದ ಬಸ್ ಕೊನೆಗೂ ಬಂತು. ಅಳುಕುತ್ತಲೇ ಒಳಸೇರಿದೆ.
ರಾತ್ರಿಯೀಡಿ ನಿದ್ದೆಯಿಲ್ಲ, ಏನೋ ದುಗುಡ, ಭೀತಿ. ಬಸ್‍ನಲ್ಲಿದ್ದವರಿಗೆಲ್ಲ ಈ ಜರ್ನಿ ಅಭ್ಯಾಸವಾಗಿರಬೇಕು ; ಆರಾಮವಾಗಿದ್ದರು. ನಾನೊಬ್ಬ ಮಾತ್ರ ಮಳೆಯಲ್ಲಿ ನೆಂದ ಒದ್ದೆ ಬೆಕ್ಕಿನಂತೆ ಮುರುಟಿ ಕೂತಿದ್ದೆ. ಅಂತೂ ನಸುಕಿನಲ್ಲೇ ಬಸ್ ಮೆಜೆಸ್ಟಿಕ್ ಸೇರಿತು. ಕೆಳಗಿಳಿದವನಿಗೆ ದಿಗಿಲು. ಅಕಾಡೆಮಿ ಕಳಿಸಿದ ಪತ್ರದಲ್ಲಿ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ಹಿಂದುಗಡೆ ಇರುವ ಸಂಸ ರಂಗ ಮಂದಿರಕ್ಕೆ ಬಂದು ತಲುಪಬೇಕೆಂದು ಸೂಚಿಸಿದ್ದರೂ ನನಗೆ ಕಲಾಕ್ಷೇತ್ರ ಎಲ್ಲಿದೆ ಎಂದು ಗೊತ್ತಿರಬೇಕಲ್ಲ? ಅಷ್ಟಲ್ಲದೇ ಬೆಂಗಳೂರಿನ ಆಟೋದವರು ಹೊಸಬರಾದರೆ ಎಲ್ಲೆಲ್ಲೋ ಓಡಾಡಿಸಿ, ಹೆಚ್ಚಿಗೆ ಹಣ ವಸೂಲು ಮಾಡುತ್ತಾರೆ ಎಂದು ಯಾರೋ ತಲೆಗೆ ಹುಳ ಬಿಟ್ಟಿದ್ದರು! ಅದರಿಂದಾಗಿ ಆಟೋ ಹತ್ತಲೂ ಭಯ. ಯಾರ್ಯಾರನ್ನೋ ಕೇಳಿಕೊಳ್ಳುತ್ತ ನಡೆದುಕೊಂಡೇ ಕಲಾಕ್ಷೇತ್ರದ ಕಡೆ ಹೆಜ್ಜೆ ಹಾಕಿದೆ. ನಿಜಕ್ಕೂ ಅಂದು ನಸುಕಿನಲ್ಲಿ ಕಂಡ ಬೆಂಗಳೂರು ಇವತ್ತಿಗೂ ಸ್ಮರಣೆಯಲ್ಲಿದೆ. ಆದರೆ ಈಗ ಆ ಬೆಂಗಳೂರು ಸಿಗುವದಕ್ಕೆ ಸಾಧ್ಯವೇ ಇಲ್ಲ. ನಿರ್ಮಲವಾದ, ವಾಹನ, ಜನದಟ್ಟಣೆಯಿಲ್ಲದ, ಸುವಾಸನೆ ಬೀರುವ ಹವೆಯ ಆ ಬೆಳಗಿನಲ್ಲಿ ನಡೆಯುತ್ತಲೇ ಕಲಾಕ್ಷೇತ್ರ ತಲುಪಿದ್ದೆ. ಈಗಲೂ ಜಗ್ಗೇಶ್ ಅವರ ಗಡಿಬಿಡಿ ಗಂಡ ಅಥವಾ ಶ್ರೀನಾಥ್, ಲೋಕೇಶ್ ಅವರ ಪಟ್ಟಣಕ್ಕೆ ಬಂದ ಪತ್ನಿಯರು ಸಿನೆಮಾದ ಕೆಲವು ಸನ್ನಿವೇಶ ನೋಡಿದಾಗ – ನನ್ನ, ಆ ಪಾತ್ರಗಳ ಸಂದರ್ಭ ಬೇರೆಯಾಗಿದ್ದರೂ- ನನ್ನ ಆ ಪಾದಯಾತ್ರೆ ನೆನಪಾಗುತ್ತದೆ.
ನಾನು ಈ ಪ್ರವರವನ್ನು ಬೇಕಾಗಿಯೇ ವಿಸ್ತರಿಸಿದ್ದೇನೆ. ನನ್ನ ಅನುಭವದ ಜಗತ್ತಿಗೂ, ಈಗಿನದಕ್ಕೂ ಅಜಗಜಾಂತರ ವ್ಯತ್ಯಾಸ. ಅದು ಕಾಲನಿಯಮ. ಇಂದಿನ ಯುವ ಸಮುದಾಯದ ಅನುಭವಗಳೇ ಬೇರೆ. ದಿಕ್ಕು ಗೊತ್ತಿಲ್ಲದೇ, ದಿಕ್ಕು ಅರಸುತ್ತ, ಇಂದಿಗೂ ನನ್ನ ದಿಕ್ಕನ್ನ ನಾನು ಕಂಡುಕೊಳ್ಳಲಾಗದ ನನ್ನ ಅನುಭವವೇ ಬೇರೆ. ನನ್ನ ತಲೆಮಾರಿನ ಹಲವರ ಅನುಭವಗಳೇ ಬೇರೆ. ಇವನ್ನೆಲ್ಲ ಹಂಚಿಕೊಳ್ಳುವ ಪ್ರಯತ್ನವಾಗಿಯೇ ಇಷ್ಟೆಲ್ಲ ಪೀಠಿಕೆ ಹಾಕಿದ್ದು ಕೆ.ವಿ.ಸುಬ್ಬಣ್ಣನವರ ಬಗ್ಗೆ ಹೇಳದೇ ತನ್ನ ಬಗ್ಗೆ ಹೇಳಿದ ಅಂತಾ ಭಾವಿಸಬೇಡಿ. ಯಕ್ಷಗಾನ, ತಾಳಮದ್ದಳೆ ಪ್ರಕಾರಗಳಲ್ಲಿ ಪೀಠಿಕೆಗೆ ಕಥಾವಸ್ತುವಿನಷ್ಟೇ ಪ್ರಾಮುಖ್ಯತೆ ಇರುತ್ತದೆ. ರಂಗಭೂಮಿಗೂ ಹಾಗೆಯೇ. ಕಾಲ-ದೇಶಗಳ ಬಗ್ಗೆ ತುಂಬ ಆಳವಾಗಿ ಗ್ರಹಿಸಿದ, ಅವುಗಳ ಬದಲಾವಣೆಗಳ ಒಳಿತು- ಕೆಡುಕು ಎರಡನ್ನೂ ಬಹುಮುಖಿ ನೆಲೆಯಲ್ಲಿ ಚಿಂತನೆ ಮಾಡಿದ, ಕೆಡುಕಿನ ಪರಿಹಾರ, ಒಳಿತಿನ ಬೆಳವಣಿಗೆಗೆ ಕೊನೆತನಕ ಹಲವು ವಿಧದಲ್ಲಿ ಶ್ರಮಿಸಿದವರು ಸುಬ್ಬಣ್ಣ. ಆ ಕಾರಣದಿಂದ ಕೆ.ವಿ.ಸುಬ್ಬಣ್ಣನವರ ಕುರಿತಾದ ನನ್ನ ಅನುಭವಗಳಿಗೆ ಇಷ್ಟಾದರೂ ಪೀಠಿಕೆ ಅಗತ್ಯ ಎಂದು ಭಾವಿಸಿದ್ದೇನೆ.
ಗಂಗಾಧರ ಕೊಳಗಿ
(ಮುಂದಿನ ಭಾಗ ಜೂನ್ 28 ಭಾನುವಾರ)
ಚೆನ್ನಾಗಿದೆ. ಅಭಿನಂದನೆಗಳು