ಆದ್ಯೋತ್ ಸುದ್ದಿನಿಧಿ:
ಶಿರಸಿ-ಸಿದ್ದಾಪುರ ಶಾಸಕ,ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಿದ್ದಾಪುರ ತಾಲೂಕಿನಾದ್ಯಂತ ಮಂಗಳವಾರ ವಿವಿಧ ಕಾಮಗಾರಿಗಳ ಉದ್ಘಾಟನೆ ನಡೆಸಿ,ಅಸಂಘಟಿತವಲಯದ ಕಾರ್ಮಿಕರಿಗೆ ಕಿಟ್ ವಿತರಿಸಿದರು.
SSLC ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿದ್ದಾಪುರದ ರೇಷ್ಮಾ ಹೆಗಡೆ, ಎಸ್ ಎನ್ ಸುನಯ ಹಾಗೂ ಹೇಮಾ ಹೆಗಡೆ ಇವರನ್ನು ಸನ್ಮಾನಿಸಿದರು.
ಸಿದ್ದಾಪುರದ ಹಲಗೇರಿ ಪಂಚಾಯತ ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆಯಡಿ 16 ಲಕ್ಷ ರೂ ವೆಚ್ಚದಲ್ಲಿ ಶ್ರೀ ವೃಷಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಸಭಾಭವನ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಬೇಡ್ಕಣಿ ಪದವಿ ಕಾಲೇಜಿನ ಹತ್ತಿರ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವನಮಹೋತ್ಸವ ಕಾರ್ಯಕ್ರಮ ನೆರವೇರಿಸಿದರು. ನಂತರ ಬಿಳಗಿ ರೈತ ಸಂಪರ್ಕ ನೂತನ ಕಟ್ಟಡವನ್ನು ಉದ್ಘಾಟಿಸಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಿದ್ದಾಪುರದ ಅಡಿಕೆಮನೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ,ಪತ್ರಿಕಾವಿತರಕರಿಗೆ ದಿನಸಿ ಕಿಟ್ ವಿತರಿಸಿದರು.
ಪೊಲೀಸ್ ಇಲಾಖೆಯವರ 112 ಸಹಾಯವಾಣಿ ಅಗ ಕಮಲತ್ಯ ನೆರವು ಯೋಜನೆಯ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಅಟೋಗಳ ಮೇಲೆ ಅಂಟಿಸುವ ಮೂಲಕ ಚಾಲನೆ ನೀಡಿದರು.
ಮಿನಿವಿಧಾನಸೌಧದಲ್ಲಿ ಅತೀವೃಷ್ಠಿ ಮತ್ತು ಕೊವಿಡ್ ನಿಯಂತ್ರಣದ ಕುರಿತು ಅಧಿಕಾರಿಗಳ ಸಭೆ ನಡೆಸಿ ಆದಷ್ಟು ಬೇಗ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೇರಿಯವರು,ಕೊವಿಡ್ 3ನೇ ಅಲೆ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು ಈಗಾಗಲೇ ತಾಲೂಕಿನಲ್ಲಿ13 ಸಕ್ರೀಯ ಪ್ರಕರಣವಿದೆ. ಎಲ್ಲರನ್ನು ಕೊವಿಡ್ ಕೇರ್ ಕೇಂದ್ರದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಈಗಾಗಲೇ ಗ್ರಾಪಂ ಮಟ್ಟದಲ್ಲಿ ಐದು ಕಡೆಯಲ್ಲಿ ಕೊವಿಡ್‍ಕೇರ್ ಸೆಂಟರ್ ತೆರೆಯಲಾಗಿದ್ದು ಉಳಿದ ಕಡೆಯಲ್ಲಿ ತಕ್ಷಣದಲ್ಲೆ ತೆರೆಯಲು ಸೂಚಿಸಲಾಗಿದೆ. ತಾಲೂಕಿನಲ್ಲಿ ಕೊವಿಡ್ ಮೂರನೇ ಅಲೆ ಎದುರಿಸಲು ತಯಾರಿ ನಡೆಸಲಾಗಿದೆ ಆದರೂ ಬೇರೆ ಏನಾದರೂ ಅವಶ್ಯಕತೆ ಇದ್ದರೆ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸುವಂತೆ ತಹಸೀಲ್ದಾರರಿಗೆ ಹಾಗೂ ತಾಪಂ ಮುಖ್ಯಾಧಿಕಾರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ವಾಡಿಕೆ ಮಳೆಗಿಂತ 200ಮಿಮಿ ಹೆಚ್ಚು ಮಳೆಯಾಗಿದೆ ಅದರಲ್ಲೂ ಜುಲೈ 23ರಂದು ಅತಿಹೆಚ್ಚು ಮಳೆಯಾದ ಕಾರಣ ಜನರಿಗೆ ಸಾಕಷು ತೊಂದರೆಯಾಯಿತು ಆದರೆ ಸ್ಥಳೀಯ ಆಡಳಿತ,ಸಂಘ-ಸಂಸ್ಥೆಗಳ ಸಹಾಯದಿಂದ ಇದನ್ನು ಸಮರ್ಥವಾಗಿ ಎದುರಿಸಿದ್ದಾರೆ. ಒಂದು ಸಾವು ಸಂಭವಿಸಿದ್ದು 24 ಗಂಟೆಯ ಒಳಗೆ ಪರಿಹಾರ ವಿತರಿಸಲಾಗಿದೆ ಮನೆ ಕಳೆದು ಕೊಂಡವರಿಗೆ 95100ರೂ. ನೀಡಲಾಗಿದೆ. ನೀರು ನುಗ್ಗಿ ಹಾನಿಯಾಧವರಿಗೆ 3800ರೂ. ನೀಡಲಾಗಿದೆ ಮುಖ್ಯಮಂತ್ರಿಗಳು ಭೇಟಿ ನೀಡಿದಾಗ ಜಿಲ್ಲೆಗೆ 200ಕೋಟಿರೂ. ನೀಡುವ ಭರವಸೆ ನೀಡಿದ್ದಾರೆ ರಸ್ತೆಗಳು,ಸೇತುವೆಗಳು ಹಾನಿಯಾಗಿವೆ ಇವೆಲ್ಲವನ್ನು ಆದ್ಯತೆಯ ಮೇಲೆ ಸರಿಪಡಿಸಲಾಗುವುದು, ಭಾರಿಲಾರಿಗಳು ಓಡಾಡಿರುವುದರಿಂದ ಮಾವಿನಗುಂಡಿ ರಸ್ತೆ ಹಾಳಾಗಿದೆ ಅದನ್ನು ತಕ್ಷಣ ದುರಸ್ತಿಪಡಿಸುವಂತೆ ಲೊಕೋಪಯೋಗಿ ಇಲಾಖೆಯವರಿಗೆ ಸೂಚಿಸಿದ್ದೇನೆ. ಅತಿಕ್ರಮಣದಲ್ಲಿದ್ದ ಮನೆಗಳಿಗೆ ಹಾನಿಯಾದರೆ ಪರಿಹಾರ ನೀಡುವ ಬಗ್ಗೆ ಹಾಗೂ ಮನೆಗೆ ನೀರು ನುಗ್ಗಿದ್ದಕ್ಕೆ ಹತ್ತುಸಾವಿರರೂ.ನೀಡುವ ಸರಕಾರದ ಆದೇಶದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ತಾಲೂಕಿನಲ್ಲಿ 11 ಮನಿಗೆ ಹಾನಿಯಾಗಿದೆ 5 ಮನೆ ತೀವ್ರ ಹಾನಿ,25 ಮನೆ ಭಾಗಶಃ ಹಾನಿಯಾಗಿದ್ದು 64 ಮನೆಗಳಿಗೆ ಹಾನಿಯಾಗಿದೆ.25 ಹೆಕ್ಟೇರ್ ಭತ್ತದ ಪ್ರದೇಶ ಕೊಚ್ಚಿಕೊಂಡು ಹೋಗಿದ್ದರೆ 112ಹೆ.ಪ್ರದೇಶ ಹಾನಿಯಾಗಿದೆ. 70 ಹೆಕ್ಟೇರ್ ಅಡಿಕೆ ತೋಟ ಹಾನಿಯಾಗಿದೆ ಇನ್ನೂ ಸಮೀಕ್ಷೆ ನಡೆಯುತ್ತಿದೆ ಈಗಾಗಲೇ ಉದ್ಯೋಗ ಖಾತ್ರಿ ಯೋಜನೆ ಮುಗಿದಿದ್ದು ಹಾನಿಯಾದ ತೋಟ,ಗದ್ದೆಗಳ ದುರಸ್ತಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸ ಕ್ರೀಯಾಯೋಜನೆ ಮಾಡಬೇಕು ಎಂದು ಸರಕಾರದಲ್ಲಿ ಮನವಿ ಮಾಡಲಾಗಿದೆ ಎಂದು ವಿಶ್ವೆಶ್ವರ ಹೆಗಡೆ ಕಾಗೇರಿ ಹೇಳಿದರು.