ಹಸಿರು ಸ್ವಾಮೀಜಿ ಖ್ಯಾತಿಯ ಸ್ವರ್ಣವಲ್ಲಿ ಶ್ರೀಗಳಿಂದ ವೃಕ್ಷಮಂತ್ರಾಕ್ಷತೆ

ಆದ್ಯೋತ್ ಸುದ್ದಿನಿಧಿ:
ಹಸಿರು ಸ್ವಾಮೀಜಿ ಎಂದು ಹೆಸರಾದ ಸೋಂದಾ‌ ಸ್ವರ್ಣವಲ್ಲೀ‌ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಸದ್ದಿಲ್ಲದೆ ಪರಿಸರ ಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ವನಸ್ಪತಿ ಗಿಡಗಳ‌ ಮಹತ್ವ, ಅವುಗಳ ಸಂರಕ್ಷಣೆಗೆ ಶಿಷ್ಯ, ಭಕ್ತರಲ್ಲಿ ಕೂಡ ಮುತವರ್ಜಿ ವಹಿಸಲು ಸೂಚಿಸುತ್ತಿದ್ದಾರೆ.
ಕೇವಲ‌ ಪ್ರವಚನಗಳಲ್ಲಿ ಮಾತ್ರ ಪರಿಸರ ಉಳಿಸಿ ಎಂದು ಹೇಳದ ಶ್ರೀಗಳು ಸ್ವತಃ ಗಿಡಗಳನ್ನೂ ಪವಿತ್ರ ಚಾತುರ್ಮಾಸ್ಯದ ಅವಧಿಯಲ್ಲಿ ಶಿಷ್ಯರಿಗೆ ನೀಡುವ ಮೂಲಕ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ವಿಸ್ತರಿಸುತ್ತಿದ್ದಾರೆ.
ಚಾತುರ್ಮಾಸ್ಯ ಸಂಕಲ್ಪದ ಬಳಿಕ ಶ್ರೀಮಠಕ್ಕೆ ಶಿಷ್ಯರು ಅವರವರ ಸೀಮಾ, ಭಾಗಿಯ ಆಧಾರದಲ್ಲಿ ಬಂದು ಪಾದಪೂಜೆ, ಕುಂಕುಮಾರ್ಚನೆ ಹಾಗೂ ಇತರ ಸೇವೆ ಸಲ್ಲಿಸುತ್ತಾರೆ. ಹೀಗೆ ಸೇವೆ ಸಲ್ಲಿಸಿದ ಶಿಷ್ಯರಿಗೆ‌ ಗುರುಗಳು ಪವಿತ್ರ‌ ಸಂದೇಶ ಕೂಡ ನೀಡುತ್ತಾರೆ. ಸಂದೇಶ ಪಡೆದ ಶಿಷ್ಯರು ಮಂತ್ರಾಕ್ಷತೆ ಪಡೆಯುವಾಗ ಶ್ರೀಗಳು ವೃಕ್ಷ ಮಂತ್ರಾಕ್ಷತೆ ಕೂಡ ನೀಡುತ್ತಾರೆ. ಶಿಷ್ಯರಿಗೆ ಮಂತ್ರಾಕ್ಷತೆಯ ರೂಪದಲ್ಲಿ ನೀಡಲಾದ ಗಿಡವನ್ನು ಬೆಳಸಿ ರಕ್ಷಿಸಲೂ ಶ್ರೀಗಳು ಸೂಚಿಸುತ್ತಾರೆ.

ಸ್ವರ್ಣವಲ್ಲೀ ಪೀಠಕ್ಕೆ ಪರಿಸರ ರಕ್ಷಣೆಯ ಬಗ್ಗೆ ಹಿಂದಿನಿಂದಲೂ ಖಾಳಜಿ ಇದೆ.ಹಿಂದಿನ ಯತಿಗಳಾದ ಶ್ರೀ ಸರ್ವಜ್ಞೇಂದ್ರ‌ ಸರಸ್ವತೀ
ಸ್ವಾಮೀಜಿಯವರು ಪರಿಸರ ಕಾಳಜಿ ಹೊಂದಿದ್ದರು.
ಶ್ರೀಗಂಗಾಧರೇಂದ್ರ‌ ಸರಸ್ವತೀ ಸ್ವಾಮೀಜಿಯವರಿಗಂತೂ ಹಸಿರು ಎಂದರೆ ಉಸಿರು ಎಂಬಂತೆ.ಪರಿಸರ ರಕ್ಷಣೆಯ ಅನೇಕ ಹೋರಾಟಕ್ಕೂ ನೇತೃತ್ವ ನೀಡಿದವರು.
ಇಲ್ಲಿ ವೃಕ್ಷಾರೋಪಣ, ಸಸ್ಯ ‌ಲೋಕ ಸೃಷ್ಟಿಯ‌ ಜೊತೆಗೆ ೨೦೦೬ರಿಂದ ಶ್ರೀಗಳು ವೃಕ್ಷ ಮಂತ್ರಾಕ್ಷತೆಯನ್ನೂ ನೀಡುತ್ತಿದ್ದಾರೆ. ಪ್ರತೀ ವರ್ಷ ಚಾತುರ್ಮಾಸ್ಯದಲ್ಲಿ ಶಿಷ್ಯರಿಗೆ ಬಿಡದೇ ವನಸ್ಪತಿ ವೃಕ್ಷ ಕೊಟ್ಟು ಹರಸುತ್ತಿದ್ದಾರೆ ಇಲ್ಲಿಯವರೆಗೆ 75 ಸಾವಿರಕ್ಕೂ ಹೆಚ್ಚು ವೃಕ್ಷವನ್ನು ಆಶೀರ್ವಾದ ರೂಪದಲ್ಲಿ ನೀಡಿದ್ದಾರೆ.
ಪ್ರತೀ ವರ್ಷದ ಚಾತುರ್ಮಾಸ್ಯದಲ್ಲೂ ಕನಿಷ್ಠ ೫ ಸಾವಿರ ವನಸ್ಪತಿ ಗಿಡಗಳನ್ನು ನೀಡಲಾಗುತ್ತದೆ. ಬಸವನಪಾದ, ಅಶೋಕ, ಹಲಸು, ಮಾವು, ರಕ್ತ ಚಂದನ ಸೇರಿದಂತೆ ಒಳ್ಳೊಳ್ಳೆ ಜಾತಿಯ ಸಸಿಗಳನ್ನು ಮಠದ ಸಸ್ಯ‌ಲೋಕದಲ್ಲಿ ಬೆಳಸಿ, ಕಡಿಮೆ‌ ಬಿದ್ದರೆ ಅರಣ್ಯ ಇಲಾಖೆಯಿಂದಲೂ ಪಡೆದು ಮಂತ್ರಾಕ್ಷತೆಯಾಗಿ ನೀಡಲಾಗುತ್ತಿದೆ ಒಟ್ಟಾರೆ ಪರಿಸರ ಖಾಳಜಿಯನ್ನು ಕೇವಲ ಬಾಯಿ ಮಾತಿನಲ್ಲಿ ಹೇಳದೆ ಅನುಷ್ಠಾನಗೊಳಿಸುತ್ತಿರುವ ಶ್ರೀಗಳ ಕಾರ್ಯ ಎಲ್ಲರಿಗೂ ಮಾದರಿಯಾಗಲಿ.
#####
ಶಿಷ್ಯರಲ್ಲಿ ವನಸ್ಪತಿ ಸಸ್ಯಗಳ ಕುರಿತು ಜಾಗೃತಿ‌ ಮೂಡಿಸಲು ವೃಕ್ಷ ಮಂತ್ರಾಕ್ಷತೆ ಆರಂಭಿಸಿದ್ದು, ಕೊಟ್ಟ ಸಸಿಯನ್ನು ಶಿಷ್ಯರು ಪ್ರತೀ ವರ್ಷ ನೆಟ್ಟು ಬಳಸುತ್ತಿದ್ದಾರೆ. ಅದೇ‌ ನಮಗೆ ಖುಷಿ.
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ.

About the author

Adyot

Leave a Comment