ಆದ್ಯೋತ್ ಸುದ್ದಿನಿಧಿ:
ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕುರಿತಂತೆ ಸರಕಾರದ ಮೇಲೆ ಉತ್ತರಕನ್ನಡ ಜಿಲ್ಲೆಯ ಜನರ ಒತ್ತಡ ಹೆಚ್ಚಾಗುತ್ತಿದ್ದು ಸರಕಾರವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.
ಮಂಗಳವಾರ ಆರೋಗ್ಯ ಸಚೀವ ಡಾ.ಸುಧಾಕರ ಜಿಲ್ಲೆಗೆ ಭೇಟಿ ನೀಡಿದ್ದು ಕುಮಟಾದ ಮಿರ್ಜಾನ ಸಮೀಪದ ಎತ್ತಿನಬೈಲ್ ಪ್ರದೇಶವನ್ನು ಪರಿಶೀಲಿಸಿದ್ದಾರೆ. ಶೀಘ್ರದಲ್ಲೆ ಆಸ್ಪತ್ರೆ ನಿರ್ಮಾಣದ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ ಎಂಬ ಸುಳಿವನ್ನೂ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸುಧಾಕರ,
ಜಿಲ್ಲೆಯ ಮಧ್ಯಭಾಗದಲ್ಲಿರುವ ಕುಮಟಾದ ಈ ಸ್ಥಳವು ರಾಹೆ-66 ರ ಪಕ್ಕದಲ್ಲಿ ಮತ್ತು ಮಿರ್ಜಾನ್ ರೈಲ್ವೆ ನಿಲ್ದಾಣಕ್ಕೆ ಸಮೀಪ ಇರುವದರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಪ್ರಶಸ್ತವಾಗಿದೆ.ರಿಜರ್ವ್ ಫಾರೆಸ್ಟ್ ಎಫ್.ಸಿ ಪಡೆದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಮುಖ್ಯಮಂತ್ರಿಗಳ ಸಲಹೆಯಂತೆ ನಿರ್ಧಾರ ಕೈಗೊಳ್ಳಲಾಗುವುದು.ಜಿಲ್ಲೆಯ ಜನರ ಒತ್ತಾಸೆಯಂತೆ ಆಸ್ಪತ್ರೆ ಸ್ಥಾಪಿಸಿ, ಉತ್ತಮ ಆರೋಗ್ಯ ಸೇವೆ ನೀಡಲು ಸರ್ಕಾರ ನಿರ್ಧರಿಸಿದೆ.ಅದಕ್ಕಾಗಿ ಬಜೆಟ್ ಪೂರ್ವದಲ್ಲಿಯೇ ಆಸ್ಪತ್ರೆ ನಿರ್ಮಾಣದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಕೋವಿಡ್ ನಂತರದಲ್ಲಿ ಜಿಲ್ಲೆಗೆ 37 ಎಂ.ಬಿ.ಬಿ.ಎಸ್, 15 ಬಿ.ಎ.ಎಂ.ಎಸ್ ವೈದ್ಯರು ಸಪ್ಟೆಂಬರ್-೨೨ ರಲ್ಲಿ 10 ಸ್ಪೆಶಲಿಸ್ಟ್, 81 ಎಂ.ಬಿ.ಬಿ.ಎಸ್ ವೈದ್ಯರನ್ನು ನೇಮಕ ಮಾಡಲಾಗಿದೆ ಎಂದರು.
ಸರಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ದೂರು ಬಂದರೆ ಪರಿಶೀಲಿಸಿ ಕ್ರಮತೆಗೆದುಕೊಳ್ಳಲಾಗುವುದು.ವೈದ್ಯರ ವರ್ಗಾವಣೆ ಮಾಡುತ್ತಿಲ್ಲ ಅಷ್ಟೆ ಅಲ್ಲ ನಸ್೯ಗಳನ್ನೂ ವರ್ಗಾವಣೆ ಮಾಡುವುದಿಲ್ಲ. ಕಳೆದ ಎರಡು ವರ್ಷದಲ್ಲಿ ಆರೋಗ್ಯ ಇಲಾಖೆಯಲ್ಲಿ ಗಣನೀಯ ಸುಧಾರಣೆಯಾಗಿದೆ.ದೇಶ ಬೇರೆ ರಾಜ್ಯಗಳಲ್ಲಿ ನೋಡಿದರೆ ನಮ್ಮ ರಾಜ್ಯದ ಆಸ್ಪತ್ರೆಗಳು ಸ್ವರ್ಗದಂತೆ ಕಾಣುತ್ತದೆ.ಮಕ್ಕಳ ಮತ್ತು ಗರ್ಭಿಣಿಯರ ಸಾವನ್ನು ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಾ.ಸುಧಾಕರ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚೀವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಜಿಲ್ಲೆಯ ಕೆಲವು ಶಾಸಕರು ಉಪಸ್ಥಿತರಿದ್ದರು.