ಆದ್ಯೋತ್ ಸುದ್ದಿನಿಧಿ;
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜ್ಞಾನಪೀಠ ಪುರಸ್ಕೃತರು ಅಭ್ಯಸಿಸಿದ ಶಾಲೆಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಮಾರಿಕಾಂಬಾ ಪ್ರೌಢಶಾಲೆಯ ಹೊಸ ಕಟ್ಟಡದ ಕಾಮಗಾರಿಯನ್ನು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವೀಕ್ಷಿಸಿ, ಕೆಲವು ಸಲಹೆಗಳನ್ನು ನೀಡಿ, ಉತ್ತಮ ಗುಣಮಟ್ಟದಲ್ಲಿ ಕಟ್ಟಡ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ, ಪರೇಶ್ ಮೇಸ್ತಾ ಸಾವು ಕೊಲೆಯಲ್ಲ, ಆಕಸ್ಮಿಕ ಎಂದು ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ್ದರೂ ಪ್ರಕರಣವನ್ನು ಸಿಬಿಐ ಮೂಲಕ ಮರು ತನಿಖೆ ಮಾಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಪರೇಶ್ ಮೇಸ್ತಾ ಪ್ರಕರಣವನ್ನು ಮರು ತನಿಖೆ ಮಾಡುವ ಅಗತ್ಯವಿದೆ. ಇದು ಮೇಲ್ನೋಟಕ್ಕೆ ಕಂಡಂತೆ ಬಿ ರಿಪೋರ್ಟ್ ಸಲ್ಲಿಸುವ ಘಟನೆಯಲ್ಲ. ಘಟನೆಯ ಕುರಿತು ಮುಖ್ಯಮಂತ್ರಿಗಳ ಬಳಿ, ಗೃಹ ಸಚಿವರ ಬಳಿ ಮಾತನಾಡಿದ್ದೇನೆ.
ಹಿಂದೆಯೂ ಅನೇಕ ಪ್ರಕರಣಗಳು ಮರು ಪರಿಶೀಲನೆ ಬಳಿಕ ಆರೋಪಿಗಳು ಶಿಕ್ಷೆಗೆ ಒಳಗಾದ ಉದಾಹರಣೆಯಿದೆ. ಕಾರಣ ಇದನ್ನೂ ಮರು ತನಿಖೆಗೆ ಒಳಪಡಿಸಬೇಕು.ಸಾಕ್ಷ್ಯ ನಾಶವಾಗಿದೆ ಎಂದು ಮೇಸ್ತಾ ತಂದೆ ಹೇಳಿದ್ದಾರೆ. ಸಾರ್ವಜನಿಕರ ಅಭಿಪ್ರಾಯವೂ ಅದೇ ಆಗಿದೆ. ಅಂದು ಘಟನೆಯಲ್ಲಿ ಏನಾಗಿದೆ ಎನ್ನುವುದು ಕುಟುಂಬದವರಿಗೆ, ರಾಜ್ಯದ ಜನತೆಗೆ ಸ್ಪಷ್ಟತೆಯಿದೆ. ಸಿಬಿಐ ತನಿಖೆಗೆ ವಹಿಸುವ ವಿಳಂಬದಿಂದಾಗಿ ಸಾಕ್ಷ್ಯ ನಾಶ ಆಗಿರಬಹುದು ಎಂಬ ಅಭಿಪ್ರಾಯ ಎಲ್ಲರದ್ದಾಗಿದೆ ಎಂದು ಹೇಳಿದರು.