ಅರಣ್ಯ ಅತಿಕ್ರಮಣ ಹೋರಾಟಗಾರರಿಂದ ಸಿದ್ದಾಪುರದಲ್ಲಿ ಬೃಹತ್ ಹೋರಾಟ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಅರಣ್ಯ ಅತಿಕ್ರಮಣದಾರರ ಮೇಲೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ದೌರ್ಜನ್ಯ ನಿಲ್ಲಿಸುವಂತೆ ಹಾಗು ಅರಣ್ಯ ಭೂಮಿ ಹಕ್ಕು ಕೊಡಿಸುವಂತೆ ಆಗ್ರಹಿಸಿ ಬುಧವಾರ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ನೇತೃತ್ವದಲ್ಲಿ ಬೃಹತ್ ರ‍್ಯಾಲಿ,ಪಾದಯಾತ್ರೆ,ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಬಿಳಗಿ ಮಾರಿಕಾಂಬಾ ದೇವಾಲಯದಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಸುಮಾರು ೧೫೦೦-೨೦೦೦ ಜನರು ಭಾಗವಹಿಸಿದ್ದರು. ಬೇಡ್ಕಣಿ,ತ್ಯಾರ್ಸಿ,ಹೊಸೂರು ಮಾರ್ಗವಾಗಿ ಸಾಗಿ ತಹಸೀಲ್ದಾರ ಕಚೇರಿಯ ಆವರಣದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸುಮಾರು ೩೦೦೦-೪೦೦೦ ಜನರು ಭಾಗವಹಿಸಿದ್ದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚೀವ ಕಾಗೋಡು ತಿಮ್ಮಪ್ಪ,ಎಪ್ಪತ್ತರ ದಶಕದಲ್ಲಿ ಗೇಣಿದಾರರ ಸಮಸ್ಯೆ ಕುರಿತು ಹೋರಾಟನಡೆಸಲಾಯಿತು ಆದರೆ ಗೇಣಿದಾರರಿಗೆ ನ್ಯಾಯ ಒದಗಿಸಲು ನಾನು ವಿಧಾನಸಭೆ ಪ್ರವೇಶಿಸಬೇಕಾಯಿತು.ಅದೇ ರೀತಿ ಅರಣ್ಯಭೂಮಿ ಹೋರಾಟಕ್ಕೆ ನ್ಯಾಯಸಿಗಬೇಕಾದರೆ ರವೀಂದ್ರ ನಾಯ್ಕ ಶಾಸನಸಭೆಗೆ ಹೋಗಬೇಕು ಅಲ್ಲಿ ಅತಿಕ್ರಮಣದಾರರ ಪರವಾಗಿ ಅವರು ಧ್ವನಿ ಎತ್ತುವಂತಾಗಬೇಕು ಎಂದು ಹೇಳಿದರು.

ಎ.ರವೀಂದ್ರ ನಾಯ್ಕ ಮಾತನಾಡಿ, ಅರಣ್ಯ ಅತಿಕ್ರಮಣದಾರರ ಪರವಾಗಿ ಸಾಕಷ್ಟು ಬಾರಿ ಹೋರಾಟವನ್ನು ಮಾಡಿದ್ದೇನೆ ಶಾಸಕರಿಗೆ,ಅರಣ್ಯ ಅಧಿಕಾರಿಗಳಿಗೆ ಅರಣ್ಯವಾಸಿಗಳ ಪರವಾಗಿ ಒಂದುತೀರ್ಮಾನವನ್ನು ತೆಗೆದುಕೊಳ್ಳುವಂತೆ ಕೇಳಿದ್ದೇವು ಆದರೆ ಇಲ್ಲಿಯವರೆಗೂ ಇದು ಕಾರ್ಯರೂಪಕ್ಕೆ ಬಂದಿಲ್ಲ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಸರಿಯಾದ ವಿಧಿವಿಧಾನವನ್ನು ಅನುಸರಿಸಿಲ್ಲ ಜೆಪಿಎಸ್ ಸರ್ವೆ ಅಸಮರ್ಪಕವಾಗಿದ್ದು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಜಿಪಿಎಸ್ ಜಾಗದಲ್ಲಿ ಕಂಪೌಂಡ ಹಾಕಲಾಗುತ್ತಿದೆ ಬೆಳೆದ ಬೆಳೆಯನ್ನು ನಾಶಪಡಿಸಲಾಗುತ್ತಿದೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ.ಒಮ್ಮೆ ಅರಣ್ಯವಾಸಿಗಳು ಅರ್ಜಿ ಕೊಟ್ಟಮೇಲೆ ಆ ಜಾಗದಿಂದ ಅವರನ್ನ ಒಕ್ಕಲೆಬ್ಬಿಸಬಾರದು ಎಂಬ ಕಾನೂನು ಹೇಳುತ್ತದೆ. ಕಾನೂನಿನಲ್ಲಿ ಇಲ್ಲದ್ದನ್ನು ಜನರ ಮೇಲೆ ಹೇರಲಾಗುತ್ತಿದೆ.ಸುಪ್ರೀಂ ಕೋರ್ಟ್ ನಲ್ಲಿ ೧೫ ದಿನಗಳಲ್ಲಿ ಅರಣ್ಯವಾಸಿಗಳ ಪರವಾಗಿ ಒಂದು ಅಪಿಡೆವಿಟ್ ಅನ್ನು ಸಲ್ಲಿಸಬೇಕು. ಎಂದು ಒತ್ತಾಯ ಮಾಡಿ ಅ.೨ ನೇ ತಾರೀಕು ಸಭಾದ್ಯಕ್ಷರ ಮನೆ ಮುಂದೆ ಧರಣಿ ಕಾರ್ಯಕ್ರಮ ಮಾಡಿದ್ದೆವು ಆದರೆ ಇವತ್ತಿನವರೆಗೂ ರಾಜ್ಯ ಸರ್ಕಾರವಾಗಲೀ ಕೇಂದ್ರ ಸರ್ಕಾರವಾಗಲೀ ಯಾವುದೇ ರೀತಿಯ ಅರಣ್ಯವಾಸಿಗಳ ಪರವಾಗಿ ಅಪಿಡೆವಿಟ್ ಸಲ್ಲಿಸಿಲ್ಲ ಕಾಗೇರಿಯವರೆ ನೀವು ಇನ್ನು ಮಲಗಿದರೆ ಸಿದ್ದಾಪುರದಿಂದ ನಿಮ್ಮ ಮನೆಯವರೆಗೂ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದರು.

ಇಂದಿನ ಪ್ರತಿಭಟನೆಯ ಬಗ್ಗೆ ಸ್ಥಳೀಯಅಧಿಕಾರಿಗಳಿಂದ ಹಿಡಿದು ಜಿಲ್ಲಾಮಟ್ಟದವರೆಗಿನ ಅಧಿಕಾರಿಗಳಿಗೆ ಅರ್ಜಿ ನೀಡಿದ್ದೇವು ಆದರೆ ಅರಣ್ಯವಾಸಿಗಳ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಹಾಗಂತ ನಾವು ಕಾನೂನು ಭಂಗ ಮಾಡಿಲ್ಲ ಇಂದಿನಿಂದ ಅರ್ಜಿ ಸಲ್ಲಿಸಿರುವ ಅರಣ್ಯ ಅತಿಕ್ರಮಣ ದಾರರಿಗೆ ತೊಂದರೆ ಕೊಡಬಾರದು ಅಸಮರ್ಪಕ ಜಿಪಿಎಸ್ ಆಗಿರುವುದರಿಂದ ಹೊಸದಾಗಿ ಜಿಪಿಎಸ್ ಮಾಡಬೇಕು. ಭೂಮಿ ಹಕ್ಕು ನೀಡುವ ಬಗ್ಗೆ ಅಧಿಕಾರಿಗಳು ಅರಣ್ಯವಾಸಿಗಳ ಪರವಾಗಿರಬೇಕು ಇದನ್ನು ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ನೀಡಬೇಕು ಅವರು ಸ್ಥಳಕ್ಕೆ ಬರುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ ಅಲ್ಲದೆ ತಹಸೀಲ್ದಾರ ಕಚೇರಿ,ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕುವುದರ ಜೊತೆಗೆ ರಸ್ತೆ ತಡೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಒಂದಿಷ್ಟು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದಲ್ಲದೆ ಪ್ರತಿಭಟನಾಕಾರರು ತಹಸೀಲ್ದಾರ ಕಚೇರಿಗೆ ನುಗ್ಗುವ ಪ್ರಯತ್ನವೂ ನಡೆಯಿತು. ಸಿಪಿಐ ಕುಮಾರ್ ಹಾಗೂ ತಹಸೀಲ್ದಾರ ಸಂತೋಷ ಭಂಡಾರಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ್ದಲ್ಲದೆ ಹಿರಿಯ ಅರಣ್ಯಾಧಿಕಾರಿಗಳನ್ನು ಕರೆಸುವ ಪ್ರಯತ್ನ ಮಾಡಿದರು.

ಸುಮಾರು ಒಂದುತಾಸಿನ ನಂತರ ಸ್ಥಳಕ್ಕೆ ಆಗಮಿಸಿದ ಡಿಎಪ್‌ಓ ಅಜ್ಜಯ್ಯ, ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಅರಣ್ಯವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಅಸಮರ್ಪಕ ಜೆಪಿಎಸ್ ಹಾಗೂ ಅರ್ಜಿ ತಿರಸ್ಕಾರವಾದವರು ಸಮಾಜಕಲ್ಯಾಣ ಇಲಾಖೆಯ ಮೂಲಕ ಅರ್ಜಿ ಸಲ್ಲಿಸಿದರೆ ಹೊಸ ಜಿಪಿಎಸ್ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಅರಣ್ಯ ಅತಿಕ್ರಮಣದಾರರಿಗೆ ಪುನರ್ ಪರಿಶೀಲನಾ ಅರ್ಜಿಯನ್ನು ರವೀಂದ್ರ ನಾಯ್ಕ ಉಚಿತವಾಗಿ ಹಂಚಿದ್ದಲ್ಲದೆ ಅದರ ಪರಿಶೀಲನೆ ಹಾಗು ಅದನ್ನು ಇಲಾಖೆಗೆ ತಲುಪಿಸುವ ಜವಾಬ್ದಾರಿಯನ್ನು ಒಪ್ಪಿಕೊಂಡರು.ಸಿದ್ದಾಪುರ ಪೊಲೀಸ್‌ರ ಜೊತೆಗೆ ಶಿರಸಿ ಪೊಲೀಸ್‌ರು ಪ್ರತಿಭಟನೆ ಬಂದೋಬಸ್ತಗೆ ಕೈಜೋಡಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ, ವೇದಿಕೆ ಪ್ರಧಾನ ಕಾರ್ಯದರ್ಶಿ ತಿ.ನ.ಶ್ರೀನಿವಾಸ್,ತೀರ್ಥಹಳ್ಳಿ ರೈತ ಹೋರಾಟಗಾರ ರಮೇಶ ಹೆಗಡೆ,ಆಮ್‌ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೀರಭದ್ರ ನಾಯ್ಕ ಮುಂತಾದವರು ಮಾತನಾಡಿದರು.

About the author

Adyot

Leave a Comment