ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಕಾನಸೂರು ಅರಣ್ಯವ್ಯಾಪ್ತಿಯ
ಬಾಳೆಕೈ – ಬಿಳೆಗೋಡನಲ್ಲಿ ಅರಣ್ಯ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದನ್ನು ತೆರವುಗೊಳಿಸಲು ಸೂಚಿಸಿದ ಅರಣ್ಯಾಧಿಕಾರಿ ಮೇಲೆ ಮಹಾಬಲೇಶ್ವರ ಚಂದು ಮರಾಠೆ ಎನ್ನುವವನು ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೊಪಿಸಲಾಗಿದ್ದು ಆರೋಪಿಯನ್ನು ಪೊಲೀಸ್ರು ಬಂಧಿಸಿದ್ದಾರೆ.ತೀವ್ರಗಾಯಗೊಂಡಿದ್ದ ಉಪವಲಯಾರಣ್ಯಾಧಿಕಾರಿ ವಿಶ್ವನಾಥ ತಿಮ್ಮಾ ನಾಯ್ಕರವರನ್ನು ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ಸೇರಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ.
ಕಾನಸೂರು ಗ್ರಾಪಂ ವ್ಯಾಪ್ತಿಯ ಬಾಳೆಕೈ ಬಿಳೆಗೋಡಿನ ಮಹಾಬಲೇಶ್ವರ ಚಂದು ಮರಾಠೆ ಎನ್ನುವವನ ಮಾಲ್ಕಿ ಜಾಗದ ಪಕ್ಕದಲ್ಲಿ ಸರ್ವೆನಂ.25ರಲ್ಲಿ ಹೊಸ ಅತಿಕ್ರಮಣವನ್ನು ನಡೆಸಿ ಗುಡಿಸಲು ನಿರ್ಮಿಸಿದ್ದ. ಇದನ್ನು ತೆರವುಗೊಳಿಸುವಂತೆ ಸಾಕಷ್ಟು ಬಾರಿ ಅರಣ್ಯ ಇಲಾಖೆಯವರು ಸೂಚಿಸಿದ್ದರೂ ಅವನು ನಿರ್ಲಕ್ಷಿಸಿದ್ದಾನೆ. ಗುರುವಾರ ಉಪವಲಯಾರಣ್ಯಾಧಿಕಾರಿ ವಿಶ್ವನಾಥ ನಾಯ್ಕ, ಗಾರ್ಡಗಳಾದ ರಾಜೇಶ ಗೌಡ,ಮಣಿಕಂಠ,ರೋಹಿತ ನಾಯ್ಕ,ವಾಚರ್ ಗೋಪಾಲ ನಾಯ್ಕ ಇವರು ಗಡಿ ಗಸ್ತು ತಿರುಗಲು ಹೋಗಿದ್ದಾಗ ಗುಡಿಸಲು ತೆರವುಗೊಳಿಸದಿದ್ದದ್ದು ಕಂಡುಬಂದಿದೆ. ಈ ಬಗ್ಗೆ ಮಹಾಬಲೇಶ್ವರ ಮರಾಠೆಯನ್ನು ಪ್ರಶ್ನಿಸಿದಾಗ ಆರೋಪಿ ಏಕಾಏಕಿ ಕತ್ತಿ ಹಿಡಿದು ಬಂದು ಎದುರಿಗೆ ಇದ್ದ ವಿಶ್ವನಾಥ ನಾಯ್ಕರತ್ತ ಮೇಲೆ ಬೀಸಿದ್ದಾನೆ. ಅವರು ಬಲಗೈ ಅಡ್ಡ ಹಿಡಿದಿದ್ದರಿಂದ ಅವರ ಕೈಗೆ ತೀವ್ರಗಾಯವಾಗಿದೆ. ತಕ್ಷಣ ಉಳಿದ ಸಿಬ್ಬಂದಿಗಳು ಆರೊಪಿಯನ್ನು ಹಿಡಿದು ಕಟ್ಟಿಹಾಕಿ ಪೊಲೀಸ್ರಿಗೆ ತಿಳಿಸಿದ್ದಾರೆ.ಪೊಲೀಸ್ರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.