ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ನಾಮಧಾರಿ ಸಮಾಜ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯಭವನದ ಎರಡನೇ ಹಂತದ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಾಜಕಲ್ಯಾಣ ಸಚೀವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ,ಯಾವುದೇ ಸಮಾಜ ಏಳಿಗೆಯಾಗಬೇಕು ಎಂದಾದರೆ ಸಮಾಜದವರು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು.ಒಟ್ಟೂ ೨೦೮ ಜಾತಿಗಳಿದ್ದು ೬೨೫ ಉಪಜಾತಿಗಳಿವೆ ಅದರಲ್ಲಿ ನಮ್ಮ
ಈಡಿಗ ಸಮುದಾಯದಲ್ಲಿ ಹಲವು ಉಪಜಾತಿಗಳಿವೆ ಆದರೆ ಹಿಂದುಳಿದ ಸಮಾಜಗಳಿಗೆ ಶಿಕ್ಷಣದ ಅವಶ್ಯಕತೆ ಇದೆ ನಮ್ಮ ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆದವರ ಕೊರತೆ ಇದೆ. ಅದರ ನಿವಾರಣೆಗೆ ನಾವು ಪ್ರಯತ್ನಿಸಬೇಕಾಗಿದೆ ಇನ್ನೂ ನಾವು ಸೇಂದಿ ಇಳಿಸುತ್ತೇವೆ ಎನ್ನಬಾರದು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕೆಲಸವಾಗಬೇಕು ವಿಧಾನಸೌಧ ಸುತ್ತುವರಿದರೆ ಐದು ಜನ ನಮ್ಮ ಸಮಾಜದ ಐಎಎಸ್ ಐಪಿಎಸ್ ಅಧಿಕಾರಿಗಳು ಸಿಗುತ್ತಿಲ್ಲ ಇದಕ್ಕೆ ಕಾರಣ ನಮ್ಮ ಸಮಾಜ ಶಿಕ್ಷಣಕ್ಕೆ ಮಹತ್ವಕೊಡುತ್ತಿಲ್ಲ ಆ ದಿಸೆಯಲ್ಲಿ ಸಮಾಜದವರು ಕಾರ್ಯನಿರ್ವಹಿಸಬೇಕಾಗಿದೆ.

ಸರಕಾರ ಪ್ರಾಯೋಗಿಕವಾಗಿ ನಾಲ್ಕು ಜಿಲ್ಲೆಗಳಲ್ಲಿ ನಾರಾಯಣಗುರು ವಸತಿ ಶಾಲೆಯನ್ನು ತೆರೆಯುತ್ತಿದೆ ಇಲ್ಲಿ ಅತ್ಯುತ್ತಮ ಶಿಕ್ಷಣ ನೀಡುವ ಎಲ್ಲಾ ಕೆಲಸಗಳು ನಡೆಯಲಿದೆ. ಕೋಟಿಚನ್ನಯ್ಯ ಸೇನಾತರಬೇತಿ ಕೇಂದ್ರವನ್ನು ತೆರೆಯಲಾಗಿದೆ ಈ ಸಮುದಾಯ ಭವನ ಅತ್ಯುತ್ತಮವಾಗಿ ನಿರ್ಮಾಣವಾಗುತ್ತಿದ್ದು ಇನ್ನು ಹದಿನೈದು ದಿನದಲ್ಲಿ ಬಾಕಿ ಇರುವ ಒಂದುಕೋಟಿರೂ.ವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ನಾಮಧಾರಿ ಸಮುದಾಯ ಭವನ ನಿರ್ಮಾಣ ಆಗಬೇಕು ಎಂಬುದು ನಮ್ಮ ಬಹುದಿನದ ಕನಸಾಗಿತ್ತು. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಮಾತನಾಡಿ, ವಿಶೇಷ ಅನುದಾನದ ಅಡಿಯಲ್ಲಿ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದೇನೆ ಈಗಾಗಲೇ ೫೦ ಲಕ್ಷ ರೂ. ಖಾತೆಗೆ ಸಹ ಜಮಾ ಆಗಿದೆ.ನಮ್ಮ ನಾಮಧಾರಿ ಸಮುದಾಯ ಭವನ ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮ ನಡೆಯುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದೆ. ಈ ಸಮುದಾಯ ಭವನ ಚೆನ್ನಾಗಿ ಆಗಬೇಕು. ಈ ಸಮುದಾಯ ಭವನದ ಅಭಿವೃದ್ಧಿಗಾಗಿ ನಾನು ಎಂದೆAದಿಗೂ ನಿಮ್ಮ ಜೊತೆಗಿದ್ದೇನೆ ಊರಿಗೆ ಒಳ್ಳೆಯ ಚಟುವಟಿಕೆಯನ್ನು ನೀಡುವ ಕೇಂದ್ರ ಈ ಸಮುದಾಯ ಭವನವಾಗಲಿ. ತಾಲೂಕಿನ ಸಮಗ್ರ ಅಭಿವೃದ್ಧಿಯಾಗುತ್ತಿದೆ.ನಂಜುಂಡಪ್ಪ ವರದಿಯಲ್ಲಿ ಸಿದ್ದಾಪುರ ತಾಲೂಕಿಗೆ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಇದೆ. ಈಗ ಮತ್ತೊಮ್ಮೆ ಸಮೀಕ್ಷೆ ನಡೆದಲ್ಲಿ ತಾಲೂಕು ಮುಂದುವರೆದಿರುವ ತಾಲೂಕಿನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಲಿದೆ ಎಂದು ಹೇಳಿದರು.

ತಾಲೂಕು ನಾಮಧಾರಿ ಸಮಾಜ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಆನಂದ ನಾಯ್ಕ,ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್,ಸಮಾಜದ ಪ್ರಮುಖರಾದ ಬಿ.ಬಿ.ನಾಯ್ಕ,ವಿ.ಎನ್.ನಾಯ್ಕ,ಕೆ.ಜಿ.ನಾಗರಾಜ ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಉಪಸ್ಥಿತರಿದ್ದರು.
——
ಚುನಾವಣೆಯ ಹೊಸ್ತಿಲಲ್ಲಿ ಕೆಲವರು ಅರಣ್ಯವಾಸಿಗಳನ್ನು ಎತ್ತಿಗಟ್ಟಿ ಪ್ರತಿಭಟನೆ ಮೆರವಣಿಗೆ ಮಾಡುತ್ತಿದ್ದು ಸರಕಾರ ಅರಣ್ಯವಾಸಿಗಳ ಪರವಾಗಿ ನಿರಂತರವಾಗಿ ನಿಂತಿದೆ. ಜಿಪಿಎಸ್ ಆಗಿರುವ ಜಾಗದಿಂದ ಯಾವುದೇ ವ್ಯಕ್ತಿಯನ್ನು ಒಕ್ಕಲೆಬ್ಬಿಸಬಾರದು ಎಂದು ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಉಸ್ತುವಾರಿ ಸಚೀವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ದಾಖಲೆಯ ಕೊರತೆಯಿಂದ ಕೆಲವರ ಅರ್ಜಿ ತಿರಸ್ಕಾರವಾಗಿರಬಹುದು ಆದರೆ ಅವರನ್ನು ಒಕ್ಕಲೆಬ್ಬಿಸುತ್ತಿಲ್ಲ. ರಾಜ್ಯಸರಕಾರ ಈಗಾಗಲೇ ಕೇಂದ್ರಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ದೇಶದ ಎಲ್ಲಾ ಭಾಗವನ್ನು ಗಮನದಲ್ಲಿರಿಸಿ ಕೇಂದ್ರಸರಕಾರ ಶೀಘ್ರದಲ್ಲೆ ಸುಪ್ರಿಂಕೋರ್ಟಗೆ ಅಪಡಿವೇಟ್ ಸಲ್ಲಿಸಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಯಾರಿಗೂ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತಿದ್ದು ಜನರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಹೇಳಿದರು.
ಶಿರಸಿ ನೂತನ ಜಿಲ್ಲೆ ಮಾಡುವುದಕ್ಕೆ ಜನರ ಭಾವನೆಗೆ,ಅಭಿವೃದ್ಧಿಗೆ ಒತ್ತುಕೊಟ್ಟು ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಣ್ಣ ಜಿಲ್ಲೆಯಾದರೆ ಅಭಿವೃದ್ಧಿ ವೇಗವಾಗುವುದು ಶಾಸಕರ,ಜನರ ಅಭಿಪ್ರಾಯ ಪಡೆಯುತ್ತೇವೆ ನಾರಾಯಣಗುರು ನಿಗಮ ಮಾಡುವುದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು ಶೀಘ್ರದಲ್ಲೆ ನಿಗಮ ಸ್ಥಾಪನೆಯಾಗುವುದು ಎಂದು ಸಚೀವರು ಹೇಳಿದರು.
