ಜನವರಿ–15ಕ್ಕೆ “ನಮ್ಮ ಕಾಗೇರಿ ನಮ್ಮ ಹೆಮ್ಮೆ” ಅಭಿನಂದನಾ ಸಮಾರಂಭ

ಆದ್ಯೋತ್ ಸುದ್ದಿನಿಧಿ:
ಶಿರಸಿಯಲ್ಲಿ ಜನವರಿ.15ಕ್ಕೆ “‘ನಮ್ಮ ಕಾಗೇರಿ ನಮ್ಮ ಹೆಮ್ಮೆ” ಜಿಲ್ಲಾ ಮಟ್ಟದ ಅಭಿನಂದನಾ ಸಮಾರಂಭ ನಡೆಯಲಿದೆ.

ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷರಾಗಿ ಕನ್ನಡ ನಾಡು ಕಂಡ ರಾಷ್ಟ್ರೀಯ ಧುರಿಣ, ಮಾದರಿ ರಾಜಕಾರಣಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಪಕ್ಷಾತೀತವಾಗಿ ಅಭಿನಂದಿಸುವ ಕಾಗೇರಿ ರಾಷ್ಟ್ರೀಯ ಅಭಿನಂದನಾ ಸಮಾರಂಭ ಇದಾಗಲಿದೆ.
ನಮ್ಮ ಕಾಗೇರಿ ನಮ್ಮ ಹೆಮ್ಮೆ ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಸಮಾರಂಭದ ಸಿದ್ದತೆ ಮಾಡಲಾಗುತ್ತಿದೆ. ನೆಲದ ಅಭಿಮಾನದ ಸಂಕೇತವಾಗಿ, ಸ್ಪೀಕರ್ ಆದ ಬಳಿಕವಂತೂ ಅವರು ಇಡೀ ಕ್ಷೇತ್ರ, ಜಿಲ್ಲೆಗೆ, ನಾಡಿಗೆ ಐಕಾನ್ ಆಗಿದ್ದಾರೆ. ಈಗ ಸಾವಿರಾರು ಜನ ಅಭಿಮಾನಿಗಳು ಹಾಗೂ ಜಿಲ್ಲೆಯ ಮುಂಚೂಣಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ವ್ಯಕ್ತಿಗಳ ಆಗ್ರಹಕ್ಕೆ ಮಣಿದು ಕಾಗೇರಿಯವರು ಈ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದ್ದಾರೆ.ಜಾಗೃತ ಸಮಾಜದ ಪ್ರತೀಕವಾಗಿ ಹಬ್ಬದ ಮಾದರಿಯಲ್ಲಿ ಸಮಾರಂಭ ನಡೆಸಲಾಗುತ್ತಿದೆ.

ಶಿರಸಿ ಸಮೀಪದ ಪುಟ್ಟ ಹಳ್ಳಿ ಕಾಗೇರಿಯ ಸುಸಂಸ್ಕೃತ ಮನೆತನದಿಂದ ಬಂದವರು ವಿಶ್ವೇಶ್ವರ ಹೆಗಡೆಯವರು. ಗ್ರಾಮೀಣ ಪರಿಸರದ ಸರಕಾರಿ ಶಾಲೆಯಲ್ಲಿಯೇ ಎಲ್ಲರೊಂದಿಗೆ ಒಂದಾಗಿ ವಿದ್ಯಾಭ್ಯಾಸ ಮಾಡಿ ಈ ಕ್ಷೇತ್ರಕ್ಕೆ ಹೆಜ್ಜೆ ಇಟ್ಟವರು. ಅವರು ತನ್ನ ಶಾಲಾ, ಕಾಲೇಜು ದಿನಗಳಿಂದಲೂ ಎಲ್ಲರೂ ಒಪ್ಪುವ ನಾಯಕರಾಗಿ ಬೆಳೆದದ್ದು ತಮ್ಮ ಸಹಜ ಸಜ್ಜನಿಕೆಯಿಂದ ಹಾಗೂ ದೃಢವಾದ ನಿಲುಮೆಯಿಂದ. ಒಂದು ಉದ್ದೇಶ ಸಾಧನೆಗೆ ಬೇಕಾದ ಯೋಜನಾ ಬದ್ಧ ನಡೆ ಅವರಿಗೆ ಕರಗತ. ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ರಾಜ್ಯದ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದ ಉದ್ದಗಲದಲ್ಲಿ ಓಡಾಡಿ ಸಂಘಟನೆ, ಸಮೂಹ ಸಾಧನೆಯ ಕುರಿತು ವಿಶೇಷವಾದ ಒತ್ತು ನೀಡಿ ತಾನು ವಹಿಸಿಕೊಂಡ ಜವಬ್ದಾರಿಯನ್ನು ನಿಗದಿತ ಕಾಲದಲ್ಲಿ ಜನ ಮೆಚ್ಚುವಂತೆ ನಿರ್ವಹಿಸಿದ್ದು ಅವರ ಸಾಧನೆ ಎಂಬುದು ಗಮನಾರ್ಹವಾಗಿದೆ. ವಿದ್ಯಾರ್ಥಿಗಳಲ್ಲಿ ಇರಬೇಕಾದ ಶಿಸ್ತು, ಅಧ್ಯಯನ ಪ್ರವೃತ್ತಿ ಹಾಗೂ ದೇಶಕ್ಕಾಗಿ ತಮ್ಮ ಶಕ್ತಿ ವಿನಿಯೋಗ ಆಗಬೇಕು ಎಂಬ ವಿಚಾರಗಳನ್ನು ಅತ್ಯಂತ ಖಚಿತವಾದ ಹಾಗೂ ಸರ್ವರಿಗೂ ಅಭಿಮಾನ ಮೂಡುವಂತೆ ಮಾಡಿದ್ದು ಅವರ ನಾಯಕತ್ವಕ್ಕೆ ಸಂದ ಗೌರವವಾಗಿದೆ.

ಅಂಕೋಲಾ ಕ್ಷೇತ್ರವನ್ನೂ, ನಂತರ ಶಿರಸಿ ಸಿದ್ದಾಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಗೇರಿ ಅವರು ತಾನು ಪ್ರತಿನಿಧಿಸಿದ ಕ್ಷೇತ್ರದಲ್ಲಿ ಸೂಕ್ಷ್ಮ ಅಭಿವೃದ್ಧಿ ವಿಚಾರದಿಂದ ಹಿಡಿದು, ಶಾಶ್ವತವಾದ ಅಭಿವೃದ್ಧಿ ವಿಚಾರದ ತನಕ ಖಚಿತತೆ ತಳೆದವರು. ಶಿಕ್ಷಣದ ವಿಚಾರದಲ್ಲಿ ಅಮೂಲ್ಯ ಕೊಡುಗೆ ಕೊಟ್ಟವರು. ಶೈಕ್ಷಣಿಕ ವಿಭಾಗಕ್ಕೆ ಭಾರತೀಯತೆಯ ಸ್ಪರ್ಶ ಉಂಟು ಮಾಡಿದ್ದಲ್ಲದೇ “ಸುಸಂಸ್ಕೃತ ಶಿಕ್ಷಣ ಜನ ಜೀವನದ ಆಧಾರ, ದೇಶದ ಆಸ್ತಿ ಹಾಗೂ ವ್ಯಕ್ತಿಯ ವ್ಯಕ್ತಿತ್ವದ ಆದರ್ಶ”ಎನ್ನುವ ತತ್ವವನ್ನು ಕರ್ನಾಟಕ ರಾಜ್ಯದಲ್ಲಿ ಮಾಸದಂತೆ ಮೂಡಿಸಿದ ಕೀರ್ತಿ ಕಾಗೇರಿಯವರದು.

ವಿಧಾನಸಭೆಯಲ್ಲಿ ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಸೂಚಿಸಲ್ಪಟ್ಟ ಹಾಗೂ ಆಯ್ಕೆಗೊಂಡ ಕಾಗೇರಿ ಹುದ್ದೆಯ ಹೊಣೆಗಾರಿಕೆಯನ್ನು ಬಹುಬೇಗ ಅರಿತುಕೊಂಡವರು. ಕರ್ನಾಟಕ ವಿಧಾನ ಸಭೆಯ ಅಧಿವೇಶನಗಳಿಗೆ ಒಂದು ಗಂಭೀರ ಸ್ವರೂಪವನ್ನು, ಬೌದ್ಧಿಕ ಮೇಲ್ಮೆಯನ್ನು ಹಾಗೂ ಗೌರವ ತರುವಂಥ ಘನತೆಯನ್ನು ಅತ್ಯಲ್ಪ ಅವಧಿಯಲ್ಲಿ ಮೂಡುವಂತೆ ಮಾಡಿದ್ದು ಮರೆಯಲಾರದ ಸಾಧನೆ.

ಕಾಗೇರಿ ಅವರು ತನ್ನ ಮೂವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಅಭಿವೃದ್ಧಿ ಹಾಗೂ ಸಾಮಾಜಿಕ ಮೌಲ್ಯಗಳ ಮಹತ್ವವನ್ನು ಅತ್ಯಂತ ಸಮರ್ಪಕವಾಗಿ ಹಾಗೂ ಕ್ರಮ ಬದ್ಧವಾಗಿ ಸಾಧಿಸಿ ತೋರಿಸಿದ್ದಾರೆ. ಅನೇಕ ರಾಷ್ಟ್ರ ಮಟ್ಟದ ಪರಿಸರ, ಸಾಮಾಜಿಕ ಹೋರಾಟ ಮಾಡಿ ಗಮನ ಸೆಳೆದಿದ್ದಾರೆ. ಹುಟ್ಟೂರಿನ ಸೀಮೆಯನ್ನು ಮೀರಿ, ಕ್ಷೇತ್ರದ ವ್ಯಾಪ್ತಿಯನ್ನು ದಾಟಿ, ರಾಜ್ಯದ ಎಲ್ಲೆಯನ್ನೂ ಮೀರಿ, ರಾಷ್ಟ್ರದ ಗಮನ ಸೆಳೆದ ನಮ್ಮ ರಾಜ್ಯದ ಕೆಲವೇ ಕೆಲವು ಸುಸಂಸ್ಕೃತ, ಪರಿಶುದ್ಧ ಹಾಗೂ ದೂರಗಾಮಿ ನಾಯಕರಾಗಿ, ಚಿಂತಕರಾಗಿ ಸಂವಿಧಾನ ಪಟುವಾಗಿ ಬೆಳೆದು ನಿಂತವರು. ತನ್ನ ವ್ಯಕ್ತಿತ್ವದಿಂದ ಸಮಸ್ತ ಜನ ಮಾನಸವನ್ನು ಪ್ರಭಾವಿಸಿದವರು.ಈಡೀ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಚುನಾವಣೆ ನಡೆಸಲು ಅಭಿಯಾನವನ್ನೂ ಮಾಡುತ್ತಿರುವವರು ನಮ್ಮ ಹೆಮ್ಮೆಯ ವಿಶ್ವೇಶ್ವರ ಹೆಗಡೆ ಕಾಗೇರಿ
ಪ್ರೋ.ಕೆ.ಎನ್.ಹೊಸ್ಮನಿ ನೇತೃತ್ವದಲ್ಲಿ ಅಭಿನಂದನಾ ಸಮಾರಂಭದ ಸಿದ್ದತೆ ನಡೆಯುತ್ತಿದ್ದು ಪಕ್ಷಾತೀತವಾಗಿ ಈ ಕಾರ್ಯಕ್ರಮದಲ್ಲಿ ನಾಯಕರು,ಸಾರ್ವಜನಿಕರು ಭಾಗವಹಿಸಲಿದ್ದಾರೆ.

About the author

Adyot

Leave a Comment