ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಅಂಕೋಲಾ ಸಮೀಪದ ಬಾಳೆಗುಳಿ ಗ್ರಾಮದಲ್ಲಿ ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಭೀಕರ ಅಪಘಾತ ನಡೆದಿದ್ದು ಕಾರನಲ್ಲಿದ್ದ ನಾಲ್ವರು ದುರ್ಮರಣ ಹೊಂದಿದ್ದಾರೆ.

ಮೃತರು ತಮಿಳುನಾಡು ಮೂಲದವರಾದ ಅರುಣ್ ಪಾಂಡ್ಯನ್, ನಿಪುಲ್, ಮೊಹಮ್ಮದ್, ಶೇಖರನ್ ಎಂದು ಗುರುತಿಸಲಾಗಿದೆ.
ಇವರು ಬಾಳೇಗುಳಿ ಕಡೆಯಿಂದ ಅಂಕೋಲಾ ಕಡೆಗೆ ಕಾರಿನಲ್ಲಿ ಬರುತ್ತಿದ್ದಾಗ, ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕ ದಾಟಿ ವಿರುದ್ಧ ದಿಕ್ಕಿಗೆ ಜೋರಾಗಿ ಬಂದಿದ್ದರಿಂದ, ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ಸಿಗೆ ಜೋರಾಗಿ ಗುದ್ದಿ ಸುಮಾರು 10 ಮೀಟರ್ ದೂರ ಚಿಮ್ಮಿದ ಪರಿಣಾಮ ಕಾರು ಸಂಪೂರ್ಣ ಜಖಂ ಗೊಂಡು ನುಜ್ಜು ಗುಜ್ಜಾಗಿದೆ.
ಓರ್ವ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದು,ಇಬ್ಬರು ಘಟನಾ ಸ್ಥಳದಲ್ಲಿ ಕಾರಿನಿಂದ ಹಾರಿಬಿದ್ದು ಮೃತಪಟ್ಟರೆ ಓರ್ವ ಕಾರಿನಲ್ಲೆ ನುಜ್ಜುಗುಜ್ಜಾಗಿದ್ದಾನೆ

ಪಿ.ಎಸ್.ಐ. ಪ್ರವೀಣ ಕುಮಾರ ಸಾರ್ವಜನಿಕರ ಸಹಾಯದಿಂದ ಕಬ್ಬಿಣದ ಸಲಾಕೆ ಬಳಸಿ ಡೋರ್ ಓಪನ್ ಮಾಡಿ ದೇಹ ಹೊರತೆಗೆದಿದ್ದಾರೆ. ಮೃತರ ವಿಳಾಸ, ಎಲ್ಲಿಂದ ಎಲ್ಲಿಗೆ ಹೊರಟಿದ್ದರು., ಘಟನೆಗೆ ಕಾರಣಗಳೇನು ಎಂಬುದು ತಿಳಿಯಬೇಕಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು , 112 ಸಿಬ್ಬಂದಿಗಳು, ಐ ಆರ್ ಬಿ ಸಿಬ್ಬಂದಿಗಳು ಹಾಜರಾಗಿ ಸ್ಥಳೀಯರ ಸಹಕಾರದಲ್ಲಿ ಮೃತ ದೇಹಗಳನ್ನು ಸಾಗಿಸಲು ಮತ್ತು ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಾರಿಗೆ ಸಂಸ್ಥೆ ಸ್ಥಳೀಯ ಘಟಕದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಪಘಾತಗೊಂಡ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿದ್ದಾರೆ.
