ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಭಾನ್ಕುಳಿ ಗೋಸ್ವರ್ಗದಲ್ಲಿ ಗೋದಿನ ಗೋವಿಗಾಗಿ ಆಲೆಮನೆ ಕಾರ್ಯಕ್ರಮ ಆಯೋಜಿಸಲಾಗಿದೆ.ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಗೋವಿಗಾಗಿ ವಿಶೇಷ ಸೇವೆ ಸಲ್ಲಿಸುತ್ತಿರುವ ನಾಲ್ವರಿಗೆ ಗೋಪಾಲಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು,
ನಾವು ಅನೇಕ ವಿಶೇಷ ದಿನವನ್ನು ಆಚರಿಸುತ್ತೇವೆ ಆದರೆ ನಮ್ಮ ಜೀವನಕ್ಕೆ ಆಧಾರವಾಗಿರುವ ಗೋವಿನ ದಿನವನ್ನು ಆಚರಿಸುತ್ತಿಲ್ಲ ವರ್ಷಕ್ಕೆ ಒಂದು ದಿನವನ್ನು ಗೋದಿನವಾಗಿ ಆಚರಿಸಬೇಕು.
ಗೋವಿನ ಒಂದು ಹನಿ ರಕ್ತವೂ ನಮ್ಮ ರಾಜ್ಯವಲ್ಲದೇ ಭಾರತದ ಭೂಮಿಯನ್ನು ಸೋಕಬಾರದು. ಆ ರೀತಿಯಲ್ಲಿ ಎಲ್ಲರೂ ಗೋವಿನ ಸಂರಕ್ಷಣೆಗೆ ಮುಂದಾಗಬೇಕು ಗೋವಿನ ಸಂರಕ್ಷಣೆ ನಮ್ಮ ಆದ್ಯಕರ್ತವ್ಯವಾಗಿದೆ. ಗೋವಿನ ಕುರಿತಾದ ಸೇವೆಯನ್ನು ಮಾಡುವವರಿಗೆ ಗೋಪಾಲ ಗೌರವ ಪ್ರಶಸ್ತಿ ನೀಡಲಾಗುತ್ತಿದೆ.ಈ ಪ್ರಶಸ್ತಿಗೆ ಭಾಜನರಾದವರು ನಿಸ್ಪçಹವಾಗಿ, ತ್ರಿಕರಣಪೂರ್ವಕವಾಗಿ ಗೋ ಸೇವೆ ಮಾಡಿದವರು. ಅವರಿಗೆ ಇಂದು ನೀಡಲಾಗಿರುವ ಗೋಪಾಲ ಗೌರವ ಗೋಸೇವಕರ ಶಕ್ತಿಯನ್ನು ಇಮ್ಮಡಿ,ನೂರ‍್ಮಡಿ ಮಾಡಲಿ. ಆ ಮೂಲಕ ದೇಶಿ ಗೋಸಂತತಿಯ ಔನ್ನತ್ಯವಾಗಲಿ ಎಂದು ಹೇಳಿದರು.
ಗೋಪಾಲ ಗೌರವ: ರಾಜ್ಯ ಮಟ್ಟದ “ಗೋಪಾಲ ಗೌರವ” ಪ್ರಶಸ್ತಿಯನ್ನು ಮಂಡ್ಯದ ಕೆ.ಜಿ.ಅನಂತರಾವ್, ತುಮಕೂರಿನ ಸಿ.ವಿ.ರಮಾದೇವಿ ಮಧುಗಿರಿ, ಮೂಡಿಗೆರೆಯ ನಿವೃತ್ತ ಪಶು ಪರಿವೀಕ್ಷಕ ಕ.ದಾ.ಕೃಷ್ಣರಾಜೇ ಅರಸು, ವಿಜಯಪುರ ನಿಡೋಣಿಯ ಗುರುಪಾದ ನಿಡೋಣಿ ಇವರುಗಳಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಕೆ.ಜಿ.ಅನಂತರಾವ್ ಮಾತನಾಡಿ ದೇಶಿ ಗೋವಿನ ಸಗಣಿ ಪವಿತ್ರವಷ್ಟೇ ಅಲ್ಲ, ಭೂಮಿಗೆ ಫಲವತ್ತತೆ ನೀಡುವ, ಆ ಮೂಲಕ ಬಂಜೆತನ ದೂರಮಾಡುವ ಗುಣ ಹೊಂದಿದೆ.ಈಡೀ ಮಂಡ್ಯ ಜಿಲ್ಲೆ ರಾಷ್ಟಕ್ಕೆ ಮಾದರಿಯಾಗುವಂತೆ ವಿಷಮುಕ್ತ, ಬಲಿಷ್ಠ ಮಾಡುವಲ್ಲಿ ಶ್ರಮಿಸಲು ಸಂಘಟನೆಗೆ ಮುಂದಾಗಿದ್ದೇವೆ ಎಂದರು.
ಪ್ರಶಸ್ತಿ ಪುರಸ್ಕೃತ ಕ.ದಾ. ಕೃಷ್ಣರಾಜೇ ಅರಸು ಮಾತನಾಡಿ, ಶ್ರೀ ರಾಘವೇಶ್ವರ ಭಾರತೀಯವರ ಸಹಾಯ, ಆಶೀರ್ವಾದದಿಂದ ೫೪ ಲೋಡ್‌ಗಳಷ್ಟು ಮೇವು
ದೇಶಿ ಗೋವುಗಳನ್ನು ಪ್ರೀತಿಯಿಂದ ಸಾಕುವವರಿಗೆ ಒದಗಿಸಿದ್ದೇನೆ. ಭಾರತ ದೇಶದಲ್ಲಿ ಗೋಹತ್ಯೆ ನಿಷೇಧವಾಗುವವರೆಗೂ ಕೇಶ ತೆಗೆಯುವುದಿಲ್ಲವೆಂಬ ಪ್ರತಿಜ್ಞೆ ಕೈಗೊಂಡಿದ್ದೇನೆ ಎಂದರು.
ಪ್ರಶಸ್ತಿಯ ಪ್ರಾಯೋಜಕತ್ವ ವಹಿಸಿದ್ದ ದಿನೇಶ ಶಹ್ರಾಫೌಂಡೇಶನ್ ಟ್ರಸ್ಟ್ನ ಮುಖ್ಯಸ್ಥ ದಿನೇಶ ಶಹ್ರಾ, ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ದಾನಿ ಎನ್.ಎಚ್.ಇಲ್ಲೂರ, ಡಾ.ವೈ.ವಿ.ಕೃಷ್ಣಮೂರ್ತಿ, ಶಿವಮೊಗ್ಗಾ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದ ನಿಸ್ರಾಣಿ ಮುಂತಾದವರು ಉಪಸ್ಥಿತರಿದ್ದರು.
ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಸ್ವಾಗತಿಸಿದರು. ಗೋದಿನ ಸಮಿತಿ ಅಧ್ಯಕ್ಷ ಎಂ.ಜಿ.ರಾಮಚAದ್ರ ಮರ್ಡುಮನೆ ಪ್ರಾಸ್ತಾವಿಕ ಮಾತನಾಡಿದರು. ಚಂದನ ಕಾಳಮಂಜಿ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಗೋಪಾಲಗೌರವ ಪ್ರಶಸ್ತಿಯ ಪ್ರಾಯೋಜಕರಾದ ದಿನೇಶ ಶಹ್ರಾ “ಸನಾತನ್ ವಿಸ್ಡಂ” ಕೃತಿಯನ್ನು ರಾಘವೇಶ್ವರ ಶ್ರೀಗಳು ಬಿಡುಗಡೆ ಗೊಳಿಸಿ,
ಇಂದು ವ್ಯಾಪಾರದಲ್ಲಿ ಸೋತು ಆಧ್ಯಾತ್ಮದತ್ತ ಮುಖಮಾಡಿದವರನ್ನು ಕಾಣುತ್ತೇವೆ. ಆದರೆ ದಿನೇಶ ಶಹ್ರಾ ವ್ಯಾಪಾರದಲ್ಲಿ ಗೆದ್ದು ಆಧ್ಯಾತ್ಮದತ್ತ ಹೊರಳಿದ್ದಾರೆ. ಸನಾತನ ಲೀಲಾ, ಸನಾತನ ವಿಸ್ಡಂ ಸೇರಿದಂತೆ ಹತ್ತಾರು ಆಧ್ಯಾತ್ಮಿಕ ಪುಸ್ತಕಗಳನ್ನು ಬರೆದಿರುವ ಇವರು ಆಧ್ಯಾತ್ಮದ ವಿಕಾಸಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಗೋಪಾಲಕರನ್ನು ಗೌರವಿಸುವ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ ಎಂದರು.
ಕೃತಿಕಾರ ದಿನೇಶ ಶಹ್ರಾ ಮಾತನಾಡಿ, ಗೋಸೇವೆಯಲ್ಲಿ ತಾನು ತೊಡಗಿಕೊಳ್ಳುವಂತೆ ಮಾಡುವಲ್ಲಿ ಪ್ರೇರೇಪಿಸಿದ ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರು ದೇಶೀ ಗೋವಿನ ಕುರಿತು ನನ್ನ ಕಣ್ಣು ತೆರೆಸಿದ್ದಾರೆ. ಈ ಹಿಂದೆಯೂ ನನ್ನ ಆಧ್ಯಾತ್ಮ ಕೃತಿಯನ್ನು ಬಿಡುಗಡೆ ಮಾಡಿ ಆಶೀರ್ವದಿಸಿದ್ದ ಶ್ರೀಗಳು ಇದೀಗ ಮತ್ತೊಂದು ಕೃತಿಯನ್ನು ಲೋಕಾರ್ಪಣೆ ಮಾಡುತ್ತಿರುವುದು ನನ್ನ ಸೌಭಾಗ್ಯ ಎಂದರು.