ನನ್ನ ಆತ್ಮೀಯರು, ಗುರುಸ್ವರೂಪಿಗಳು ಆದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಜನವರಿ ೧೫ ರಂದು ಶಿರಸಿಯಲ್ಲಿ ನಾಗರಿಕ ಸಮ್ಮಾನ ಕಾರ್ಯವನ್ನು ಆಯೋಜಿಸಿರುವುದು ತಿಳಿದು ಅಪಾರ ಸಂತೋಷವಾಯಿತು.
ಕಳೆದ ಹತ್ತು ವರ್ಷಗಳಿಂದ ಅವರ ಆಪ್ತ ಸಹಾಯಕನಾಗಿ ಅವರ ಜೊತೆಗಿರುವುದು ನನ್ನ ಭಾಗ್ಯ ಹಾಗೂ ಪೂರ್ವ ಜನ್ಮದ ಪುಣ್ಯದ ಫಲ ಎಂದೇ ಭಾವಿಸಿದ್ದೇನೆ. ಅವರನ್ನು ಹತ್ತಿರದಿಂದ ಕಂಡ ನನಗೆ ಅನ್ನಿಸುವುದೆಂದರೆ ಅವರೊಂದು ಪುಸ್ತಕದ ಭಂಡಾರವಿದ್ದಂತೆ. ಪುಸ್ತಕದ ಪ್ರತಿ ಪುಟವೂ ನಮಗೆ ಜ್ಞಾನ ಒದಗಿಸುವಂತೆ ಅವರೊಂದಿಗಿನ ಪ್ರತಿ ದಿನವೂ ನಮಗೆ ಹೊಸ ತಿಳುವಳಿಕೆ, ಪಾಠವನ್ನು ಹೇಳಿಕೊಡುವಂತಿರುತ್ತದೆ. ವಿನಯತೆ, ವಿಧೇಯತೆ, ಸೂಕ್ಷ್ಮತೆ ಈ ಮೂರು ಪ್ರಧಾನ ಗುಣಗಳು ಶ್ರೀ ಕಾಗೇರಿಯವರಿಗೆ ವಿಶಿಷ್ಠವಾದ ವ್ಯಕ್ತಿತ್ವ ಹಾಗೂ ಶಕ್ತಿಯನ್ನು ನೀಡಿದೆ. ಉನ್ನತವಾದ ಸ್ಥಾನವನ್ನು ಅಲಂಕರಿಸಿದ್ದರೂ ಯಾವುದೇ ಹಮ್ಮಬಿಮ್ಮಗಳಿಗೆ ಆಸ್ಪದ ಕೊಡದೆ ಇದರಲ್ಲಿ ತನ್ನದೇನೂ ಇಲ್ಲ, ಪ್ರತಿಯೊಂದು ಸಮಾಜ ತನಗೆ ಬಳುವಳಿಯಾಗಿ ಕೊಟ್ಟಿದ್ದು, ಹಾಗಾಗಿ ಸಮಾಜಕ್ಕೆ ತಾನು ನೀಡುವುದು ಇನ್ನೂ ಇದೆ ಎಂಬ ಭಾವನೆ ಅವರಲ್ಲಿ ಎದ್ದು ಕಾಣಿಸುತ್ತದೆ.
ಯಾವತ್ತೂ ಅವರ ಜೊತೆಗಿರುವ ಆಪ್ತ ವಲಯದ ಸಿಬ್ಬಂದಿಗಳನ್ನು ಸೇವಕರಂತೆ ಕಾಣದೆ ತಮ್ಮ ಕುಟುಂಬದ ಸದಸ್ಯರಂತೆ ಕಾಣುವುದು ಅಷ್ಟೇ ಪ್ರೀತಿ, ಆತ್ಮೀಯತೆಯಿಂದ ವ್ಯವಹರಿಸುವುದು ಅವರ ಉದಾರ ಮನೋಭಾವವಾಗಿದೆ. ಶಿಸ್ತು, ಅಚ್ಚುಕಟ್ಟುತನ, ಪ್ರಾಮಾಣಿಕ ಪ್ರಯತ್ನ ಅವರ,ಅವರಿಗೆ ಇಷ್ಟವಾಗುವ ಸಂಗತಿಗಳು. ಎದುರಿನ ವ್ಯಕ್ತಿಗಳನ್ನು ಕಣ್ಣೋಟದಿಂದಲೇ ಅರ್ಥೈಸಿಕೊಳ್ಳುವುದು ಅವರ ಸೂಕ್ಷ್ಮ ಗುಣಕ್ಕೆ ಸಾಕ್ಷಿಯಾಗಿದೆ.
ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದರಿಂದ ಅಪಾರ ದೇಶಭಕ್ತಿ, ಧಾರ್ಮಿಕತೆ ಅವರಲ್ಲಿ ರಕ್ತಗತವಾಗಿದೆ. ಅದಕ್ಕಾಗಿಯೇ ಅವರು ಶಾಲಾಮಕ್ಕಳಲ್ಲಿ, ಯುವಕರಲ್ಲಿ ದೇಶಭಕ್ತಿ ತುಂಬುವಂತ ಮಾತುಗಳನ್ನಾಡುತ್ತಾರೆ. ಅಷ್ಟೇ ಅಲ್ಲದೇ ರಾಜಕೀಯದಲ್ಲಿಯೂ ಅವ್ಯವಸ್ಥೆಗಳು ಬದಲಾಗಬೇಕು, ಪ್ರಾಮಾಣಿಕತೆ, ಪಾರದರ್ಶಕತೆ ಬರಬೇಕೆಂದು ಹಂಬಲಿಸುತ್ತಾರೆ. ಅದಕ್ಕಾಗಿಯೇ ಚುನಾವಣೆಯಲ್ಲಿ ಸುಧಾರಣೆ ಅಗತ್ಯತೆ ಕುರಿತಂತೆ ಇಡೀ ರಾಜ್ಯವ್ಯಾಪಿ ಪ್ರವಾಸ ಮಾಡುತ್ತಾ, ಯುವಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುತ್ತಾ, ಜಾಗ್ರತಿ ಮೂಡಿಸುತ್ತಿದ್ದಾರೆ. ಸಾಮಾಜಿಕವಾಗಿ ಅವರ ನುಡಿ ಹೇಗಿದೆಯೋ ವಯಕ್ತಿಕವಾಗಿ ಅವರ ನಡೆಯೂ ಹಾಗೆಯೇ ಇದೆ. ಸುಸಂಸ್ಕೃತ ವ್ಯಕ್ತಿತ್ವವೇ ಅವರಿಗೆ ಶಕ್ತಿಯಾಗಿದೆ ಹಾಗೂ ಶ್ರೀರಕ್ಷೆಯಾಗಿದೆ.
ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ, ಆಯುಷ್ಯ, ಆರೋಗ್ಯವನ್ನು ದಯಪಾಲಿಸಲೆಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತಾ ಶ್ರೀ ಕಾಗೇರಿಯವರಿಗೆ ಶುಭ ಹಾರೈಸುತ್ತೇನೆ.
–ಅಂಬರೀಷ್ ಮಲ್ಮನೆ
ಆಪ್ತ ಸಹಾಯಕರು
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ.
######
#####
#####