ಸಿದ್ದಾಪುರ:ಐತಿಹಾಸಿಕ ಬಿಳಗಿಯಲ್ಲಿ ಶ್ರೀ ದುರ್ಗಾಂಬಿಕಾ ಜಾತ್ರೆ

ಆದ್ಯೋತ್ ಸುದ್ದಿನಿಧಿ:
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಂದಿನ ಬಿಳಗಿ ವಿಜಯನಗರ ಅರಸರ ಕಾಲದಲ್ಲಿ “ಶ್ವೇತಪುರ” ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತ್ತು.ಅಂದು ಹೈವನಾಡಿನ ರಾಜಧಾನಿಯಾಗಿ ಮೆರೆದ ಬಿಳಗಿಯ ಸಂಸ್ಥಾನಕ್ಕೆ ಸುಮಾರು ನಾಲ್ಕುನೂರು ವರ್ಷಗಳ ಇತಿಹಾಸವಿದೆ.ಹೀಗಾಗಿಯೇ ಇಂದೂ ಸಹ ಬಿಳಗಿಯ ಪ್ರತಿಯೊಂದು ಸ್ಥಳವೂ, ಇಲ್ಲಿಯ ಒಂದೊಂದು ಶಿಲೆಯಲ್ಲೂ ಒಂದೊAದು ಇತಿಹಾಸವನ್ನು ಪ್ರತಿಧ್ವನಿಸುತ್ತಿದೆ.

ಬಿಳಗಿ ಪಟ್ಟಣದಲ್ಲಿ ಒಂದಕ್ಕೊಂದು ಹೊಂದಿಕೊAಡAತೆ ಅತ್ಯಂತ ಸನಿಹದಲ್ಲಿ ಐದಾರು ದೇವಾಲಯಗಳು ಕಂಗೊಳಿಸುತ್ತಿವೆ. ಶ್ರೀ ಮಾರಿಕಾಂಬಾ ದೇವಾಲಯ, ಶ್ರೀ ದುರ್ಗಾಂಬಿಕಾ ದೇವಾಲಯ, ವಂದಾನೆ-ಬಾಳಗೋಡ ಶ್ರೀ ಸೀತಾರಾಮಚಂದ್ರ ದೇವಾಲಯ, ಬೇಡ್ಕಣಿ ಕೋಟೆ ಆಂಜನೇಯ ದೇವಾಲಯ, ವಾದಿರಾಜ ಮಠ, ಆನೆಸಾಲ ಹನುಮಂತ ದೇವಾಲಯ, ಸೇರಿದಂತೆ ಅನೇಕ ದೇವಾಲಯಗಳು ಇಲ್ಲಿವೆ. ಬಿಳಗಿಯ ಅನೇಕ ಕಟ್ಟಡಗಳು ಕಲಾಪ್ರಜ್ಞೆ, ಇತಿಹಾಸದ ಶ್ರೇಷ್ಠ ಪರಂಪರೆ ಸಾರುತ್ತಿವೆ. ಬಿಳಗಿಯ ರತ್ನತ್ರಯ ಬಸದಿ, ವಿರೂಪಾಕ್ಷ ದೇವಾಲಯ ಮುಂತಾದವುಗಳಲ್ಲಿ ಹಲವು ಶಿಲಾಶಾಸನಗಳು ಕಂಡುಬರುತ್ತಿದ್ದು ಚರಿತ್ರೆಯ ಮೇಲೆ ಬೆಳಕುಚೆಲ್ಲುತ್ತಿವೆ. ವಿಜಯನಗರ ಸಾಮ್ರಾಜ್ಯದ ಮಾಂಡಲಿಕನಾಗಿದ್ದ ಅಂಡಣ್ಣ ಅವರ ವಂಶಸ್ಥರಿAದ ಬಿಳಗಿಯ ಅನೇಕ ತಾಣಗಳು ನಿರ್ಮಾಣವಾಯಿತೆಂದು ತಿಳಿದುಬರುತ್ತದೆ. ಈ ವಂಶಸ್ಥರು ಕ್ರಿ.ಶ.೧೪೦೦ ರಿಂದ ೧೮೦೦ ರ ವರೆಗೆ (ಸುಮಾರು ೨೮ ರಾಜರು) ರಾಜ್ಯವಾಳಿದ್ದು ಸಿದ್ದಾಪುರ ತಾಲೂಕಿನ ಐಸೂರನ್ನು ಪ್ರಥಮದಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರೆಂದೂ, ಕ್ರಿ.ಶ.೧೪೯೦ ರ ಸುಮಾರಿಗೆ ಮಧ್ಯವರ್ತಿ ಸ್ಥಳವಾದ ಬಿಳಗಿಗೆ ರಾಜಧಾನಿಯನ್ನು ಸ್ಥಳಾಂತರಿಸಿದರೆಂದು ಇತಿಹಾಸ ತಿಳಿಸುತ್ತದೆ.

ಬಿಳಗಿ ರಾಜರು ಬಿಳಗಿಯಲ್ಲಿ ವೀರ ಬಸದಿ, ರತ್ನತ್ರಯ ಬಸದಿ, ಚಾಣಕ್ಯ ತೀರ್ಥಂಕರರ ಬಸದಿ, ಮಾವಿನಮನೆಯಲ್ಲಿ ಶಾಂತೇಶ್ವರ ಬಸದಿ, ಬಳಗುಳಿಯಲ್ಲಿ ಚಂದ್ರಪ್ರಭ ಬಸದಿ ಕಟ್ಟಿಸಿದ್ದು ತಾಳಗುಪ್ಪೆಯ ಪಂಚಬಸದಿಯನ್ನು, ಬಿದುರೆಯ ತ್ರಿಭುವನ ಬಸದಿಯನ್ನು ಜೀರ್ಣೋದ್ಧಾರ ಮಾಡಿಸಿದರೆಂದು ಹೇಳಲಾಗಿದೆ. ಬಿಳಗಿಯಲ್ಲಿ ವಿರೂಪಾಕ್ಷ ದೇವಾಲಯ, ಗಂಧಕುಟೀರ ಶಾಂತೇಶ್ವರ ದೇವಾಲಯ, ಸಿದ್ದಾಪುರದಲ್ಲಿ ಸಿದ್ಧಿವಿನಾಯಕ ದೇವಾಲಯ, ಭುವನಗಿರಿಯಲ್ಲಿ ಭುವನೇಶ್ವರೀ ದೇವಾಲಯವನ್ನು ಬಿಳಗಿರಾಜರು ಕಟ್ಟಿಸಿದ್ದು, ಐಸೂರಿನ ಈಶ್ವರ ದೇವಾಲಯ, ಮಾರುಕೇರಿಯ ಈಶ್ವರ ದೇವಾಲಯಗಳನ್ನೂ ಜೀರ್ಣೋದ್ಧಾರ ಮಾಡಿದರೆಂಬ ಸಂಗತಿ ಉಲ್ಲೇಖವಾಗಿದೆ. ಶೃಂಗೇರಿಯ ಶ್ರೀ ಶಾರದಮ್ಮನವರ ಗೋಪುರಕ್ಕೆ ಸ್ವರ್ಣಕಲಶ ಸ್ಥಾಪನೆ ನಿಮಿತ್ತ ಬಿಳಗಿಯ ಅರಸು ಬಸಪ್ಪ ನಾಯಕನು ಶೃಂಗೇರಿಮಠದ ಶ್ರೀಮದಭಿನವ ಸಚ್ಚಿದಾನಂದ ಭಾರತಿಗಳಿಗೆ ೨೦೦ ಗದ್ಯಾಣ ಮತ್ತು ಅಭಿವಸ್ತçಗಳನ್ನು ಕಳುಹಿಸಿದ್ದು ಸ್ವಾಮಿಯವರು ವಿಭೂತಿ, ಪ್ರಸಾದ ಮತ್ತು ಉಡುಗೋರೆಯನ್ನು ಕಳಿಸಿದರೆಂದು ಇತಿಹಾಸ ತಿಳಿಸುತ್ತಿದ್ದು ಬಿಳಗಿ ಅರಸರು ಮಠ, ಜಗದ್ಗುರುಗಳನ್ನು ಗೌರವಿಸುತ್ತಿದ್ದರೆಂಬುದಕ್ಕೆ ಸಾಕ್ಷಿಯಾಗಿದೆ. ಇಮ್ಮಡಿ ಶಿವಪ್ಪ ನಾಯಕನು ಬಿಳಗಿಯಲ್ಲಿ ಅರಮನೆ ಕಟ್ಟಿಸಿದನೆಂದು ಹೇಳಲಾಗಿದೆ. ಸೋಮಶೇಖರ ರಾಜನು ವಿದ್ಯಾಪಕ್ಷಪಾತಿ ಹಾಗೂ ದಾನಿಯಾಗಿದ್ದು ಗೋಕರ್ಣದ ಮಹಾಬಲೇಶ್ವರ ದೇವರಿಗೆ ಪೂಜೆ-ಉತ್ಸವಗಳನ್ನು ನಡೆಸಿಕೊಂಡುಬರಲು ದಾನ ನೀಡಿದನೆಂದು ೧೬೮೬ ರ ಗೋಕರ್ಣ ತಾಮ್ರಶಾಸನ ವಿವರಿಸುವುದಾಗಿ ತಿಳಿದುಬರುತ್ತದೆ.

ಗಮನಸೆಳೆಯುವ ಆಕರ್ಷಕ ಗೋಲಬಾವಿ:
ರಾಜಮಹಾರಾಜರು ಆಳಿದ ಬಿಳಗಿಯಲ್ಲಿಯ ಅನೇಕ ಕಟ್ಟಡಗಳು ಇತಿಹಾಸ, ಶ್ರೇಷ್ಠ ಪರಂಪರೆ, ಕಲಾಪ್ರಜ್ಞೆ ಸಾರುತ್ತಿವೆ. ಬಿಳಗಿ ಬಸ್ ನಿಲ್ದಾಣದ ಸನಿಹದಲ್ಲಿ ಇರುವ ಗೋಲಬಾವಿ ತನ್ನೊಳಗೆ ಅನೇಕ ನಿಗೂಢ ಕಥೆಗಳನ್ನು ಹುದುಗಿಸಿಕೊಂಡಿದೆ. ಮೇಲ್ನೋಟಕ್ಕೆ ಚೌಕಾಕಾರದ ಆಲಯದಂತೆ ಕಂಡುಬರುವ ಗೋಲಬಾವಿಯ ಆಳದ ಮೆಟ್ಟಿಲುಗಳನ್ನು ಇಳಿಯುತ್ತಾ ಸುರಂಗ ಮಾದರಿಯ ಮಾರ್ಗದಲ್ಲಿ ಸಾಗಿದರೆ ಒಳಗಡೆಯಲ್ಲಿ ಗೋಲಬಾವಿಯ ವಿರಾಟರೂಪ ದರ್ಶನವಾಗಿ ಒಮ್ಮೆಲೇ ದಿಗ್ಭçಮೆ ಮೂಡುವಂತೆ ಮಾಡುತ್ತದೆ. ಒಳಗಡೆ ಬಾವಿಯನ್ನು ಸಂಪೂರ್ಣ ಪ್ರದಕ್ಷಿಣೆ ಮಾಡುವ ರೀತಿಯಲ್ಲಿ ವರಾಂಡಗಳನ್ನು ನಿರ್ಮಿಸಲಾಗಿದೆ. ಮೇಲ್ಛಾವಣಿಯನ್ನು ಕಮಾನಿನಾಕಾರದಲ್ಲಿ ನಿರ್ಮಿಸಿದ್ದು ವಿವಿಧ ಆಕಾರ-ಅಳತೆಯ ಕೆಂಪು ಕಲ್ಲುಗಳನ್ನು ಭದ್ರವಾಗಿ ಕೂಡ್ರಿಸಿ ಒಂದಕ್ಕೊAದನ್ನು ಬೆಸೆಯಲಾಗಿದೆ. ಗೋಲಬಾವಿಯ ಒಳಭಾಗದಲ್ಲಿರುವ ಕಮಾನುಗಳು, ಬಾವಿಯ ನಾಲ್ಕೂ ಕಡೆ ಇರುವ ಮಂಟಪಾಕಾರದ ಕೆತ್ತನೆಗಳು, ಗೋಲವನ್ನು ಸಂಕೇತಿಸುತ್ತವೆ. ಬಾವಿಯ ಹೊರಭಾಗ ಚೌಕಾಕಾರದಲ್ಲಿ ಗೋಚರಿಸುತ್ತಿದ್ದು ಈ ಬಾವಿಗೆ ಗೋಲಬಾವಿ ಎಂದು ಏಕೆ ಹೆಸರಿಟ್ಟರೆಂಬ ಕುತೂಹಲಕ್ಕೆ ಇತ್ತೀಚೆಗೆ ಗೋಲಬಾವಿಯನ್ನು ಸ್ವಚ್ಛಮಾಡಿದಾಗ ಉತ್ತರ ದೊರೆತಿದೆ. ಏಕೆಂದರೆ ಚೌಕಾಕಾರದ ಬಾವಿಯ ಅತ್ಯಂತ ಆಳದಲ್ಲಿ ಪುನ: ಗೋಲಾಕಾರವನ್ನೇ ಕೊರೆಯಲಾಗಿದ್ದು ಇದು ಬಾವಿಗೆ ತಕ್ಕ ಹೆಸರೆನಿಸುತ್ತದೆ. ಬಾವಿಯ ನಾಲ್ಕುಕಡೆಗಳಲ್ಲಿ ಆಧಾರ ಕಂಬಗಳಿದ್ದು ಅತ್ಯಂತ ಕಲಾತ್ಮಕವಾಗಿ ಇದನ್ನು ನಿರ್ಮಿಸಲಾಗಿದೆ. ಕಂಬಗಳ ಬುಡದಲ್ಲಿ ಮಾನವರ, ಪ್ರಾಣಿಗಳ ಚಿತ್ರವನ್ನು ಕೊರೆಯಲಾಗಿದೆ. ಒಂದು ತೊಲೆ ಸಿಮೆಂಟ್ ಸಹ ಬಳಸದೇ ಈ ಕಟ್ಟಡವನ್ನು ನಿರ್ಮಿಸಿದ್ದು ಅದರ ಭದ್ರತೆ ನಮ್ಮ ಹಿಂದಿನವರ ನಿರ್ಮಾಣ ಪ್ರಜ್ಞೆಯನ್ನು ಗೋಲಬಾವಿ ಸಾಕ್ಷೀಕರಿಸುತ್ತದೆ.
ಇಂದು ಗೋಲಬಾವಿಗೆ ಕಾಯಕಲ್ಪ ನೀಡಲಾಗಿದ್ದು ಆಕರ್ಷಕ ಪ್ರವಾಸಿ ತಾಣವಾಗುವ ಎಲ್ಲಾ ಲಕ್ಷಣಗಳನ್ನೂ ಅದು ಹೊಂದಿದೆ. ಗೋಲಬಾವಿಯ ಮೇಲುಭಾಗದಲ್ಲಿ ಸಮತಟ್ಟು ಮಾಡಿ ಕೆಳಗೆ ಇಣುಕಿದರೆ ಅಪಾಯವಾಗದಂತೆ ತಡೆ ನಿರ್ಮಿಸಲಾಗಿದೆ. ಗೋಲಬಾವಿಯ ಒಳಗಡೆ ಸಹ ಇದೇರೀತಿಯ ತಡೆ ನಿರ್ಮಿಸಿದ್ದು ಮಕ್ಕಳು ಸಹ ಒಳಭಾಗಕ್ಕೆ ಹೋಗಿ ಗೋಲಬಾವಿಯ ಸೌಂರ‍್ಯವನ್ನು ಸವಿಯುವಂತಾಗಿದೆ. ಐತಿಹಾಸಿಕ ಸ್ಮಾರಕವಾಗಿ, ಪ್ರವಾಸೀ ತಾಣವಾಗಿ ಕಂಗೊಳಿಸಬೇಕಿದ್ದ ಗೋಲಬಾವಿ ಪುನ: ತನ್ನ ಗತಕಾಲದ ವೈಭವವನ್ನು ಸಾರುವಂತಾಗಲಿ.

ರತ್ನತ್ರಯ ಬಸದಿ:
ಬಿಳಗಿಯ ಸುಪ್ರಸಿದ್ಧ ರತ್ನತ್ರಯ ಬಸದಿಯನ್ನು ಒಬ್ಬರೇ ರಾಜರು ಕಟ್ಟಿಸಿದಂತಿಲ್ಲ. ಕ್ರಿ.ಶ.೧೪೯೬ ರಲ್ಲಿ ಮುಂಡಣ್ಣ ಭೂಪಾಲನು ಐಸೂರಿನಿಂದ ತನ್ನ ರಾಜಧಾನಿಯನ್ನು ಬಿಳಗಿಗೆ ವರ್ಗಾಯಿಸಿದ್ದು ನಿತ್ಯ ಪೂಜೆಗಾಗಿ ಪಾರ್ಶ್ವನಾಥನ ಪ್ರತಿಮೆಯನ್ನು ಸ್ಥಾಪಿಸಿ ಗುಡಿ ಕಟ್ಟಿದನೆಂದು ಹೇಳಲಾಗುತ್ತದೆ. ಮುಂದಣ್ಣನ ನಂತರ ಆತನ ಹಿರಿಯ ಮಗ ಭೈರವೇಂದ್ರ ಈ ಗುಡಿಯನ್ನು ಶಿಲಾಮಯಗೊಳಿಸಿದನೆಂದು ತಿಳಿದುಬರುತ್ತದೆ. ನಂತರ ಆತನ ಕಿರಿಯ ತಮ್ಮ ನರಸಿಂಹ ಭೂಪಾಲಕ ಆಡಳಿತ ವಹಿಸಿಕೊಂಡಿದ್ದು ತಿಮ್ಮರಸನೆಂಬ ಪ್ರಭಾವೀ ಹಿರಿಯ ಅಣ್ಣ ಅಲ್ಪಾಯುಷಿಯಾಗಿ ತೀರಿಕೊಂಡಿದ್ದರಿಂದ ಅತ್ತಿಗೆ ತಿಮ್ಮಾಂಬಿಕೆಯು ಸಹಗಮನ ಮಾಡಿದ್ದು ಅಣ್ಣ ಹಾಗೂ ಅತ್ತಿಗೆಯರನ್ನು ಪಾರ್ಶ್ವನಾಥರ ಸಮಾನರೆಂದು ಭಾವಿಸಿದ್ದ ಇಮ್ಮಡಿ ನರಸಿಂಹ ಭೂಪಾಲಕ ಕ್ರಿ.ಶ.೧೫೫೬ ರಲ್ಲಿ ಗುಡಿಗೆ ಮೂರು ಮುಕುಟಗಳನ್ನು ಕಟ್ಟಿಸಿ ರತ್ನತ್ರಯ ಬಸದಿ ಎಂದು ಹೆಸರಿಟ್ಟನೆಂದು ಹೇಳಲಾಗಿದೆ.
ವಾಸ್ತುಶಿಲ್ಪದ ದೃಷ್ಟಿಯಿಂದ ಚಿತ್ತಾಕರ್ಷಕ, ಸುಂದರ ಶಿಲಾಮಯ ರತ್ನತ್ರಯಬಸದಿಯು ಈಶಾನ್ಯಕ್ಕೆ ಅಭಿಮುಖವಾಗಿದೆ. ಪ್ರಮುಖ ದ್ವಾರದ ಮೂಲಕ ಒಳಹೋದರೆ ಚಂದ್ರಶಾಲೆ ಸಿಗುತ್ತದೆ. ಚಂದ್ರಶಾಲೆಯ ಎಡಬಲಗಳಲ್ಲಿ ಚಂದ್ರಪ್ರಭ ತೀರ್ಥಂಕರರ ವಿಗ್ರವಿದೆ. ರತ್ನತ್ರಯ ಬಸದಿಯ ಗರ್ಭಗೃಹದಲ್ಲಿ ಮಧ್ಯದಲ್ಲಿ ಪಾರ್ಶ್ವನಾಥ ತೀರ್ಥಂಕರ,ಎಡಬಲಭಾಗಗಳಲ್ಲಿ ನೇಮೀಶ್ವರ ಮತ್ತು ವರ್ಧಮಾನ ಮಹಾವೀರರ ವಿಗ್ರಹಗಳಿವೆ. ನವರಂಗದ ಬಲಭಾಗದಲ್ಲಿ ಗರ್ಭಗೃಹವೊಂದಿದ್ದು ತೀರ್ಥಂಕರರ ವಿಗ್ರಹವಿಲ್ಲ. ಸಂಪೂರ್ಣ ಶಿಲಾಮಯವಾಗಿರುವ ರತ್ನತ್ರಯ ಬಸದಿಯು ಶಿಲಾ ಕಲೆಯ ಉತ್ತುಂಗದ ದರ್ಶನ ಮಾಡಿಸುತ್ತದೆ. ಶಿಲೆಯಲ್ಲಿ ಗೋಡೆಗಳಿಗೆ ಕಡೆದ ಚಿತ್ತಾರಗಳು, ಮೂರ್ತಿಗಳು ಅತ್ಯಂತ ಆಕರ್ಷಕವಾಗಿವೆ. ಕಂಬಗಳು ನುಣುಪಾಗಿದ್ದು ಫಳ-ಫಳ ಹೊಳೆಯುತ್ತವಲ್ಲದೇ ಕೆತ್ತನೆಗಳು ಗಮನಸೆಳೆಯುತ್ತವೆ. ಕಾಲನತುಳಿತಕ್ಕೆ ಸಿಕ್ಕ ಭಾಗಶ: ಭಗ್ನಗೊಂಡ ಅನೇಕ ವಿಗ್ರಗಳನ್ನು ಬಸದಿಯ ಗೋಡೆಗೆ ಆತು ಇಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಬಸದಿ ಎನಿಸಿಕೊಂಡ ಬಿಳಗಿಯ ರತ್ನತ್ರಯ ಬಸದಿ (ಜೈನ ಬಸದಿ) ಪುರಾತತ್ವ ಇಲಾಖೆಯ ವಶದಲ್ಲಿದ್ದು ಇದರ ಆಕರ್ಷಣೆಯಿಂದಾಗಿ ಇದನ್ನು ಪ್ರವಾಸೀ ಕೇಂದ್ರವನ್ನಾಗಿ ಮಾರ್ಪಡಿಸುವಲ್ಲಿ ವಿಶೇಷ ಶ್ರಮ ವಹಿಸಬೇಕಾಗಿಲ್ಲ. ಆಡಳಿತ ಇಚ್ಛಾಶಕ್ತಿಯಿಂದ ಗಮನಹರಿಸುವುದು ಸೂಕ್ತವೆನಿಸುತ್ತದೆ.
ಶ್ರೀ ಮಾರಿಕಾಂಬೆ: ಬಿಳಗಿ ಶ್ರೀ ಮಾರಿಕಾಂಬೆಯು ಗ್ರಾಮದೇವತೆ ಎನಿಸಿಕೊಂಡಿದ್ದು ದೇವಿಯ ಪ್ರತಿಷ್ಠಾಪನೆಯ ಕುರಿತಾದ ನಿರ್ಧಿಷ್ಟ ಶಕವರುಷದ ಮಾಹಿತಿ ಲಭ್ಯವಿಲ್ಲ. ಕ್ರಿ.ಶ.೧೭೭೦ ರಲ್ಲಿ ಬಿಳಗಿ ಸಂಸ್ಥಾನದ ಅಧಿಪತಿಯಾಗಿದ್ದ ಮೊದಲನೇ ಚಂದ್ರಶೇಖರ ರಾಯನ ಕಾಲದಲ್ಲಿ ಶ್ರೀ ಮಾರಿಕಾಂಬೆಯ ಪ್ರತಿಷ್ಠಾಪನೆಯಾದ ಕುರಿತು ತಿಳಿದುಬರುತ್ತದೆ. ಬಿಳಗಿ ರಾಜವಂಶದ ಮಹಾಲಿಂಗ ರುದ್ರಗೌಡ ಬಂಗಾರದ ಒಡವೆಗಳನ್ನು ಶ್ರೀದೇವರಿಗೆ ಮಾಡಿಸಿಕೊಟ್ಟಿದ್ದು ಅವನ್ನು ನವರಾತ್ರಿ ಹಾಗೂ ಜಾತ್ರಾ ಸಮಯದಲ್ಲಿ ದೇವರಿಗೆ ತೊಡಿಸಲಾಗುತ್ತದೆ.

ಶ್ರೀದುರ್ಗಾಂಬಿಕೆ: ಬಿಳಗಿ ಅರಸರು ಆಡಳಿತ ನಡೆಸಿದ್ದ ಧಾರ್ಮಿಕ, ಐತಿಹಾಸಿಕ ತಾಣವಾದ ಬಿಳಗಿಯ ಶ್ರೀ ದುರ್ಗಾಂಬಿಕಾ ದೇವಿಯ ಹಿನ್ನೆಲೆ ಕುರಿತು ವಿಶೇಷ ಮಾಹಿತಿ ಲಭ್ಯವಾಗುತ್ತಿಲ್ಲ. ಹೊಸಮಂಜು ಗ್ರಾಮದ ಸಂಕಸಾಲೆ ಹೊಳೆಯ ದಡದ ಮೇಲಿದ್ದ ಗ್ರಾಮ ದೇವತೆಯಾಗಿದ್ದ ಶ್ರೀ ದುರ್ಗಾಂಬಿಕಾ ದೇವಿಯ ಪಾದುಕೆಯ ಮೇಲೆ ತಾತ್ಪೂರ್ತಿಕ ಮೂರ್ತಿಯೊಂದನ್ನಿಟ್ಟು ಗ್ರಾಮ ಹಬ್ಬ ಆಚರಿಸಲಾಗುತ್ತಿತ್ತೆಂದೂ ಮಾರ್ಗಶೀರ ಮಾಸದ ಕೊನೆಯ ಶುಕ್ರವಾರ ಆಚರಿಸುವ ಈ ಹಬ್ಬದಲ್ಲಿ ಹುಲಿಯ ವಾಹನದ ಮೇಲೆ ಮೂರು ಗೇಣು ಎತ್ತರದ ದುರ್ಗಾಂಬಿಕಾ ಮೂರ್ತಿಯನ್ನು ಸ್ಥಾಪಿಸಿ ಮೂರು ವರ್ಷಗಳಿಗೊಮ್ಮೆ ಹಬ್ಬ ಆಚರಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಕ್ರಿ.ಶ. ೧೯೩೭ ರ ತನಕವೂ ಇದೇ ಪರಿಪಾಠ ಮುಂದುವರಿದುಬAದಿದ್ದು ತಾರಖಂಡ ಸೀತಾರಾಮ ಹೆಗಡೆ, ಹೂವಿನಮನೆ ಶಿವಪ್ಪ ಶಿವರಾಮ ಹೆಗಡೆ ಹಾಗೂ ಬಿಳಗಿಯ ವಾಮನ ದಾಸಪ್ಪ ಶೆಣೈ ಅವರುಗಳ ಸಹಕಾರದಿಂದ ದೇವಸ್ಥಾನ ನಿರ್ಮಿಸಿ ದುರ್ಗಾಂಬಿಕೆಯನ್ನು ಬಿಳಗಿ ಸೀಮೆಯ ದೇವತೆಯೆಂದು ಗುರುತಿಸಲಾಯಿತು. ಮಾರಿಕಾಂಬೆ ಹಾಗೂ ದುರ್ಗಾಂಬಿಕೆ ಜಾತ್ರೆಗಳನ್ನು ೩ ವರ್ಷಕ್ಕೊಮ್ಮೆ ಪರ್ಯಾಯವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮಾಘಮಾಸದ ಮೊದಲ ಮಂಗಳವಾರ ಶ್ರೀ ಮಾರಿಕಾಂಬಾ ಜಾತ್ರೆ ಹಾಗೂ ಮಾಘಮಾಸದ ಮೊದಲ ಶುಕ್ರವಾರ ಶ್ರೀ ದುರ್ಗಾಂಬಿಕೆಯ ಜಾತ್ರೆ ಆರಂಭವಾಗುತ್ತದೆ. ಪ್ರಾಣ ಪ್ರತಿಷ್ಠೆಯನ್ನು ಬಿಳಗಿ ಹೊಳೆಯ ಗದ್ದುಗೆಯ ಮೇಲೆ ಆಚರಿಸಲಾಗುತ್ತಿದೆ. ಹೊಸಮಂಜು, ದಾಸನಗದ್ದೆ, ಕುರವಂತೆ, ಕಲ್ಕಣಿ, ಅಬ್ಬಿಗದ್ದೆ ಹೀಗೆ ಐದು ಗ್ರಾಮಗಳ ಜನರು ದುರ್ಗಾಂಬಿಕಾ ಹಾಗೂ ಮಾರಿಕಾಂಬೆ ದೇವಿಯರ ಆರಾಧನೆಯನ್ನು ಮೊದಲಿನಿಂದಲೂ ನಡೆಸಿಕೊಂಡು ಬರುತ್ತಿದ್ದು ಬಿಳಗಿ ಗ್ರಾಮದ ಗಡಿಯಲ್ಲಿ ದೇವಿಯ ಪಾದುಕೆ ಸ್ಥಾಪಿತವಾಗಿದ್ದರೂ ಉತ್ಸವಗಳಲ್ಲಿ ತಮ್ಮ ನಿಶ್ಚಿತ ಸೇವೆ, ನಿಷ್ಠೆ, ಭಕ್ತಿಯನ್ನು ತೋರುತ್ತಿದ್ದಾರೆ. ದುರ್ಗಾಂಬಿಕೆಯು ಜಗನ್ಮಾತೆ ಪಾರ್ವತಿ ದೇವಿಯ ಒಂದು ಅವತಾರವೆನ್ನಲಾಗಿದ್ದು ಆರಾಧನಾ ಕ್ರಮದಲ್ಲಿ ಪೂಜಾ ಕಾರ್ಯವನ್ನು ನೆರವೇರಿಸಲಾಗುತ್ತದೆ. ಬಿಳಗಿ ಶ್ರೀ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವವು ಮಾಘ ಶುಕ್ಲ ಷಷ್ಠಿ ೨೭-೧-೨೩ ರ ಶುಕ್ರವಾರದಿಂದ ಪ್ರಾರಂಭವಾಗಿದ್ದು ೪-೨-೨೩ ರ ಶನಿವಾರದವರೆಗೂ ವಿಜೃಂಭಣೆಯಿAದ ಜರುಗಲಿದೆ.

——
ಬಿಳಗಿ ಸುತ್ತ-ಮುತ್ತಲಿನ ಪ್ರವಾಸಿ ತಾಣಗಳು; ಬಿಳಗಿಯಿಂದ ೭ಕಿ.ಮಿ.ದೂರದಲ್ಲಿ ಬುರುಡೆ ಜೋಗಫಾಲ್ಸ್ ಇದೆ.ಉಂಚಳ್ಳಿ ಜಲಪಾತ ೧೩ಕಿ.ಮಿ,ಜೋಗಜಲಪಾತ ೨೬ ಕಿ.ಮಿ., ಕನ್ನಡ ತಾಯಿ ಭುವನೇಶ್ವರಿಯ ದೇವಾಲಯ ೫ ಕಿ.ಮಿ.ಚಂದ್ರಗುತ್ತಿ ರೇಣುಕಾಂಬಾ ದೇವಾಲಯ ೨೬ ಕಿ.ಮಿ. ಬನವಾಸಿ ಮಧುಕೇಶ್ವರ ದೇವಾಲಯ ೪೫ಕಿ.ಮಿ. ಇದಲ್ಲದೆ ಇನ್ನೂ ಅನೇಕ ಪ್ರವಾಸಿ ತಾಣಗಳು ಇಲ್ಲಿದ್ದು ಪ್ರವಾಸಿಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.
—-
ಲೇಖಕರು—ಕೆಕ್ಕಾರ ನಾಗರಾಜ ಭಟ್

########### ########### ##########

#####

#####

About the author

Adyot

Leave a Comment