ಆದ್ಯೋತ್ ಸುದ್ದಿನಿಧಿ:
ಪಂಚರತ್ನ ಯಾತ್ರೆ ಎಂಬ ಗಿಮಿಕ್ ಮಾಡುವ ಮೂಲಕ ಉತ್ತರಕನ್ನಡ ಜಿಲ್ಲೆಗೆ ಬಂದಿರುವ ಕುಮಾರಸ್ವಾಮಿಯವರು ಹೊಣೆಗೇಡಿ ಹೇಳಿಕೆಗಳನ್ನು ನೀಡುತ್ತ ಪಂಕ್ಚರ್ ಆಗಿರುವ ಜೆಡಿಎಸ್ ಟ್ಯೂಬಿಗೆ ಗಾಳಿ ತುಂಬುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಕಿಡಿಕಾರಿದ್ದಾರೆ.
2018ರಲ್ಲೂ ಬಂದಿದ್ದ ಕುಮಾರಣ್ಣ ಉತ್ತರ ಕನ್ನಡ ಜಿಲ್ಲೆಗೆ ಅದನ್ ಮಾಡ್ತೀನಿ – ಇದನ್ ಮಾಡ್ತೀನಿ ಅಂತ ಏನೇನೋ ಬಡಬಡಿಸಿ ಹೋಗಿದ್ದರು.ಕರಾವಳಿ ಜನರಿಗೆ ತಿಳುವಳಿಕೆ ಕಮ್ಮಿ ಎಂದದ್ದು ಇದೇ ಕುಮಾರಸ್ವಾಮಿ. ಇವರ ನಾಟಕ ಅರಿತ ಬುದ್ಧಿವಂತ ಜನರು ಅವರ ಸ್ಥಾನವನ್ನು ತೋರಿಸಿಕೊಟ್ಟಿದ್ದರು.
ಹಿಂದೂ ಸಮಾಜದ ಅವಹೇಳನ ಮಾಡುತ್ತ ತುಷ್ಟೀಕರಣದ ತೆವಲಿಗೆ ಜೆಡಿಎಸ್ ಗೆದ್ದರೆ ಮುಸ್ಲಿಂ ಮುಖ್ಯಮಂತ್ರಿ ಎಂದು ಹೇಳುವ ಇವರ ಮನದಲ್ಲಿ ಬಹುಸಂಖ್ಯಾತ ಹಿಂದೂಗಳ ಬಗ್ಗೆ ಏನಿದೆ ಎಂಬುವುದು ಸ್ಪಷ್ಟವಾಗುತ್ತದೆ. ಬ್ರಾಹ್ಮಣ ಸಮಾಜಕ್ಕೆ ಅವಮಾನ ಮಾಡುವ ಇವರು ನಾಳೆ ಇನ್ನೊಂದು ಸಮಾಜಕ್ಕೆ ಅವಮಾನ ಮಾಡುತ್ತಾರೆ.ಯಾವುದೇ ವೈಚಾರಕ ಹಿನ್ನೆಲೆ ಇಲ್ಲದೆ ಇದ್ದಾಗ ಮತ್ತು ನಮ್ಮ ನೆಲದ ಸಾಂಸ್ಕೃತಿಕ ಗರಿಮೆಯ ಬಗ್ಗೆ ಆತ್ಮಗೌರವ ಇರದೇ ಇದ್ದಾಗ ಇಂತಹ ದುರಂತ ಆಗುತ್ತದೆ.
ನಮ್ಮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ದೊಡ್ಮನೆಯ ಹೆಮ್ಮೆಯ ಪುತ್ರ, ನಾಡಿನ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಕೆಟ್ಟದಾಗಿ ನಡೆಸಿಕೊಂಡ ನಿಮ್ಮ ಜೆಡಿಎಸ್ಸನ್ನು ಜಿಲ್ಲೆಯಲ್ಲಿ ಎಲ್ಲಿಡಬೇಕೊ ಅಲ್ಲಿ ಜನರು ಇಟ್ಟಿದ್ದಾರೆ ಈಗ ಪ್ರಲ್ಹಾದ ಜೋಶಿ ಅವರ ಬಗ್ಗೆ, ಬ್ರಾಹ್ಮಣ ಸಮಾಜದ ಬಗ್ಗೆ ಬೇಕಂತಲೇ, ದುರುದ್ದೇಶದಿಂದ ನಾಲಿಗೆ ಹರಿಬಿಟ್ಟಿದ್ದೀರಿ.
ಜಾತಿಯ ಬಗ್ಗೆ ಬಡಬಡಾಯಿಸುವ ಕುಮಾರಸ್ವಾಮಿಯವರು
ಜಾತ್ಯತೀತ ಜನತಾ ದಳದ ನಾಯಕರು. ಜಾತಿಯ ಬಗ್ಗೆಯೇ ಸದಾ ಮಾತಾಡುವುದರಿಂದ ಇವರು ಇವರ ಪಕ್ಷ ಹೇಗೆ
ಜಾತ್ಯತೀತರಾಗುತ್ತಾರೆ? ಎಂದು ಗುರುಪ್ರಸಾದ ಹೆಗಡೆ ಲೇವಡಿ ಮಾಡಿದ್ದಾರೆ.