ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನ ಶ್ರೀಮನ್ನೆಲೆಮಾವಿನಮಠಕ್ಕೆ ನೂತನ ಮಠಾಧಿಶರಾಗಿರುವ ಶ್ರೀಮಾಧವಾನಂದ ಭಾರತೀ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ ಫೆ.೨೨ರಿಂದ ೨೪ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನೆರವೇರಲಿದೆ.
ಈ ಕುರಿತು ಮಾಹಿತಿ ನೀಡಿದ ಪೀಠಾರೋಹಣ ಸಮಿತಿಯ ಗೌರವಾಧ್ಯಕ್ಷ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,
ಸುಮಾರು ಏಳುನೂರು ವರ್ಷಗಳಷ್ಟು ಇತಿಹಾಸ ಇರುವ ಶೃಂಗೇರಿ ಜಗದ್ಗುರುಗಳಿಂದ ಅನುಗ್ರಹೀತರಾದ ೨೫ ಯತಿವರ್ಯರಿಂದ ಅಧಿಷ್ಠಿಸಲ್ಪಟ್ಟಿದೆ. ೨೦ವರ್ಷಗಳಿಂದ ಮಠವು ರಿಕ್ತವಾಗಿತ್ತು . ಈಗ ಶ್ರೀಜಗದ್ಗುರುಗಳವರ ಪೂರ್ಣಾನುಗ್ರಹಗಳಿಂದ ನೂತನವಾಗಿ ೨೬ನೇ ಯತಿಗಳಾಗಿ ಶೃಂಗೇರಿಯ ಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ಹಾಗೂ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಅನುಗ್ರಹದಿಂದ ಶೃಂಗೇರಿ ಶಿವಗಂಗಾ ಮಠಾಧೀಶ್ವರರಾದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳಿಂದ ಸನ್ಯಾಸದೀಕ್ಷೆ ಪಡೆದ ಶ್ರೀಮಾಧವಾನಂದ ಭಾರತೀ ಸ್ವಾಮಿಗಳಿಗೆ ನೆಲೆಮಾವುಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ.
ಫೆ.೨೨ರಂದು ಸಂಜೆ ಶ್ರೀಮಾಧವಾನಂದ ಭಾರತೀ ಸ್ವಾಮಿಗಳವರ ಪುರಪ್ರವೇಶ ನಡೆಯಲಿದ್ದು ಹೇರೂರಿನ ಸಿದ್ಧಿವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ನೆಲೆಮಾವುಮಠಕ್ಕೆ ಭವ್ಯಮೆರವಣಿಗೆ ಹಾಗೂ ಫೂರ್ಣಕುಂಬದೊAದಿಗೆ ಸ್ವಾಗತಿಸಲಾಗುತ್ತದೆ.
೨೩ರಂದು ಬೆಳಗ್ಗೆ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು ಸಂಜೆ ೫ಕ್ಕೆ ಶೃಂಗೇರಿಯ ಜಗದ್ಗುರು ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಗಳು, ಶೃಂಗೇರಿ ಶಿವಗಂಗಾ ಮಠಾಧೀಶ್ವರರಾದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳು ಹಾಗೂ ಸ್ವರ್ಣವಲ್ಲಿ ಶ್ರೀ ಗಂಗಾಧರೇAದ್ರ ಸರಸ್ವತೀ ಮಹಾಸ್ವಾಮಿಗಳು ಆಗಮಿಸಲಿದ್ದಾರೆ. ನಂತರ ಶ್ರೀಗಳಿವರಿಂದ ಆಶೀರ್ವಚನ ನಡೆಯಲಿದೆ.
ಫೆ.೨೪ರಂದು ಬೆಳಗ್ಗೆ ೯ರಿಂದ ೯.೩೦ರ ಮೀನಲಗ್ನದ ಶುಭಮೂಹೂರ್ತದಲ್ಲಿ ಜಗದ್ಗುರು ಶ್ರೀವಿಧುಶೇಖರ ಭಾರತೀ ಸನ್ನಿದಾನಂಗಳವರ ಅಮೃತಹಸ್ತದಿಂದ ನೂತನ ಯತಿಗಳಾದ ಶ್ರೀಮಾಧವಾನಂದ ಭಾರತೀ ಸ್ವಾಮಿಗಳಿಗೆ ಪಟ್ಟಾಭಿಷೇಕ ನಡೆಯಲಿದೆ. ಬಿನ್ನವತ್ತಳೆ ಸಮರ್ಪಣೆ, ಗುರುವಂದನೆ, ನೂತನ ಮಠಾಧಿಪತಿಗಳಿಂದ ಆಶೀರ್ವಚನ, ಜಗದ್ಗುರುಗಳಿಂದ ಅನುಗ್ರಹ ಭಾಷಣ, ಮಂತ್ರಾಕ್ಷತೆ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶೃಂಗೇರಿ ಶಂಕರಮಠದ ಆಡಳಿತಾಧಿಕಾರಿ ಹಾಗೂ ಪೀಠಾರೋಹಣ ಸಮಿತಿಯ ಗೌರವಾಧ್ಯಕ್ಷರಾದ ಡಾ.ವಿ.ಆರ್.ಗೌರೀಶಂಕರ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಆರ್.ವಿ.ದೇಶಪಾಂಡೆ, ಸುನಿಲ್ ನಾಯ್ಕ, ದಿನಕರ ಶೆಟ್ಟಿ, ಗಣಪತಿ ಉಳ್ವೇಕರ, ಶಾಂತಾರಾಮ ಸಿದ್ದಿ, ಶಶಿಭೂಷಣ ಹೆಗಡೆ ದೊಡ್ಮನೆ, ಆರ್.ಎಂ.ಹೆಗಡೆ ಬಾಳೇಸರ, ಶಾಂತಾರಾಮ ಹೆಗಡೆ ಶಿಗೇಹಳ್ಳಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಠದ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು,ಜಿ.ಬಿ.ಭಟ್ಟ ನೆಲೆಮಾವು, ಎಂ.ಎಲ್.ಭಟ್ಟ ಉಂಚಳ್ಳಿ, ನರಸಿಂಹಮೂರ್ತಿ ಹೆಗಡೆ ತ್ಯಾರಗಲ್ ಹಾಗೂ ಮಠದ ಅಡಳಿತ ಮಂಡಳಿ ಮತ್ತು ಪೀಠಾರೋಹಣ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳಿದ್ದರು.