ಸಿದ್ದಾಪುರ:ಚುನಾವಣಾ ಬಹಿಷ್ಕಾರ ಫಲಕ ಅಳವಡಿಸಿದ ಕಾನಸೂರು ಶ್ರೀನಿವಾಸಜಡ್ಡು ಗ್ರಾಮಸ್ಥರು.

ಆದ್ಯೋತ್ ಸುದ್ದಿನಿಧಿ:
ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದಿದೆ.ಅಮೃತಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ಆದರೆ ಅಭಿವೃದ್ಧಿ ಎಂಬುದು ಇನ್ನೂ ಕೆಲವು ಕಡೆ ಮರಿಚಿಕೆಯಾಗಿದೆ.
ಇದು ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಪಂ ವ್ಯಾಪ್ತಿಯ ಕೆಳಗಿನ ಹೊಸಕೊಪ್ಪ ಗ್ರಾಮದ ಶ್ರೀನಿವಾಸಜಡ್ಡು ಗ್ರಾಮದ ವ್ಯಥೆ-ಕತೆ.

ತಮ್ಮ ಗ್ರಾಮಕ್ಕೆ ಮೂಲ ಸೌಲಭ್ಯ ಕೊಡಿ ಎಂದು ಸ್ಥಳೀಯ ಗ್ರಾಪಂ ಸದಸ್ಯರಿಂದ ಹಿಡಿದು ಶಾಸಕ,ಸಂಸದರವರೆಗೆ ಮನವಿ ಸಲ್ಲಿಸಿದ್ದಾರೆ.ತಹಸೀಲ್ದಾರ,ತಾಪಂ ಮುಖ್ಯಾಧಿಕಾರಿಯಿಂದ ಹಿಡಿದು ಜಿಲ್ಲಾಧಿಕಾರಿಗಳಿಗೆ ಜಿಪಂ ಸಿಓ ವರಗೆ ಮನವಿ ಸಲ್ಲಿಸಿದ್ದಾರೆ ಆದರೆ ಪ್ರಯೋಜನ ಇಲ್ಲವಾಗಿದ್ದು ಈಗ ಚುನಾವಣಾ ಬಹಿಷ್ಕಾರ ಎಂಬ ಅಸ್ತ್ರವನ್ನು ಹಿಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ‌.
ತಾಲೂಕಿನ ಕೊನೆಯ ಭಾಗದಲ್ಲಿರುವ ಶ್ರೀನಿವಾಸ ಜಡ್ಡಿಯಲ್ಲಿ 11 ಮನೆಗಳಿವೆ 5೦-70 ಜನಸಂಖ್ಯೆ ಇದೆ. ಇದರಲ್ಲಿ 3೦ ಮತದಾರರಿದ್ದಾರೆ. ಆದರೆ ಈ ಊರಿಗೆ ಮೂಲಭೂತ ಸೌಲಭ್ಯವೇ ಇಲ್ಲ. ಈ ಗ್ರಾಮದ ಪ್ರತಿಯೊಂದು ಸರಕಾರಿ ಕೆಲಸಕ್ಕಾಗಲಿ,ವ್ಯವಹಾರ ನಡೆಸುವುದಕ್ಕಾಗಲಿ ಕಾನಸೂರು ಗ್ರಾಮಕ್ಕೆ ಬರಬೇಕು ಅಲ್ಲದೆ ಕೋಡಸರ ಗ್ರಾಮದ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಪಕ್ಕದ ಗ್ರಾಮದ ಕೂಲಿಕೆಲಸಕ್ಕೆ ಹೋಗುವವರು 7-8 ಕಿ.ಮಿ.ಸುತ್ತುವರಿದು ಬರಬೇಕು ಅದೂ ಕಚ್ಚಾರಸ್ತೆಯ ಮೂಲಕ. ಇನ್ನೊಂದು ಸಮೀಪದಲ್ಲಿ ರಸ್ತೆ ಇದೆ ಆದರೆ ಅದಕ್ಕೆ ಅಡ್ಡಲಾಗಿ ಅಘನಾಶಿನಿ ನದಿಯ ಒಂದು ಭಾಗ ಹರಿಯುತ್ತದೆ. ಇದಕ್ಕೆ ಅಡ್ಡಲಾಗಿ ಮರಗಳ ಕಾಲುಸಂಕವನ್ನು ಊರಿನವರೇ ನಿರ್ಮಿಸಿಕೊಂಡಿದ್ದಾರೆ ಇದರಲ್ಲಿ ಹೋದರೆ ಕೇವಲ 3 ಕಿ.ಮಿಯಲ್ಲಿ ಎಲ್ಲಾ ಊರುಗಳನ್ನು ಸಂಪರ್ಕಿಸಬಹುದು.
ಮಳೆಗಾಲದಲ್ಲಿ ಈ ಕಾಲುಸಂಕದ ಮೇಲೆ ನೀರು ಹರಿಯುತ್ತದೆ. ಹೆಚ್ಚಿನ ನೀರು ಬಂದರೆ ಕೊಚ್ಚಿಯು ಹೋಗುತ್ತದೆ ಅಂತಹ ಸಮಯದಲ್ಲಿ ಇವರು ಸುತ್ತುವರಿದು ಓಡಾಡಬೇಕಾದ ಅನಿವಾರ್ಯತೆಯಾಗಿದೆ.

ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ಹೋಗುವಂತಿಲ್ಲ,ಜನರು ಕೂಲಿ ಕೆಲಸಕ್ಕೆ ಹೋಗುವಂತಿಲ್ಲ ಇದರ ಜೊತೆಗೆ ಇಲ್ಲಿಯ ರಸ್ತೆಗಳು ಮಳೆಗಾಲದಲ್ಲಿ ಕೊಚ್ಚಿ ಹೋಗಿವೆ ಪುನಃ ಮಳೆಗಾಲ ಸಮೀಪಿಸುತ್ತಿದ್ದರೂ ರಸ್ತೆ ದುರಸ್ತಿಯಾಗಿಲ್ಲ. ಸರಕಾರ ಬೆಳಕು ಯೋಜನೆ ಜಾರಿಗೆ ತಂದಿದೆ ಎಲ್ಲರಿಗೂ ಬೆಳಕು ನೀಡಲಾಗುವುದು ಎಂದು ಘೋಷಣೆ ಮಾಡುತ್ತಿದೆ ಆದರೆ ಈ ಗ್ರಾಮದ ಎರಡು ಮನೆಯವರಿಗೆ ವಿದ್ಯುತ್ ಸಂಪರ್ಕವೇ ಇಲ್ಲ.
ಕಳೆದ 1೦ ವರ್ಷದಿಂದ ತಮಗೆ ಸೇತುವೆ ನಿರ್ಮಿಸಿಕೊಡಿ ಎಂದು ಇಲ್ಲಿಯ ಜನರು ಅಧಿಕಾರಿಗಳಿಗೆ,ಗ್ರಾಪಂ ಸದಸ್ಯರಿಂದ ಹಿಡಿದು ಶಾಸಕರು,ಸಂಸದರವರಗೆ ಮನವಿಯ ಮೇಲೆ ಮನವಿ ಸಲ್ಲಿಸಿದ್ದಾರೆ ಆದರೆ ಪ್ರಯೋಜನವೇ ಇಲ್ಲವಾಗಿದೆ. ಈಗ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬೃಹತ್ ನಾಮಫಲಕವನ್ನು ಹಾಕಿದ್ದು,”ರಾಜಕಾರಣಿಗಳೆ ನಿಮಗೆ ನಮ್ಮ ಊರಿಗೆ ಪ್ರವೇಶವಿಲ್ಲ. ನಾವು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ” ಎಂದು ನಾಮಫಲಕದಲ್ಲಿ ಹಾಕಲಾಗಿದೆ.
ಚುನಾವಣಾ ಬಹಿಷ್ಕಾರದ ನಾಮಫಲಕ ಹಾಕಿರುವ ವಿಷಯ ತಿಳಿದು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ

ತಹಸೀಲ್ದಾರ ಮಂಜುನಾಥ ಮುನ್ನೊಳ್ಳಿ,ತಾಪಂ ಮುಖ್ಯಾಧಿಕಾರಿ ಪ್ರಶಾಂತರಾವ್ ಸೇರಿದಂತೆ ಹಲವು ಅಧಿಕಾರಿಗಳು ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದರು.ಕಚ್ಚಾ ರಸ್ತೆಯ ದುರಸ್ತಿ,ವಿದ್ಯುತ್ ಸಂಪರ್ಕ ನೀಡುವುದನ್ನು ಒಂದು ವಾರದಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು ಆದರೆ ತೂಗುಸೇತುವೆ ನಿರ್ಮಾಣದ ಬಗ್ಗೆ ಪಟ್ಟು ಹಿಡಿದಿರುವ ಗ್ರಾಮಸ್ಥರು ಫಲಕ ತೆರವುಗೊಳಿಸಲು ನಿರಾಕರಿಸಿದ್ದಾರೆ

2016ರಲ್ಲಿ ಶ್ರೀನಿವಾಸಜಡ್ಡುಗ್ರಾಮಸ್ಥರು ಲೋಕಸಭಾ ಸದಸ್ಯರಿಗೆ ಸಲ್ಲಿಸಿರುವ ಮನವಿ

2016ರಲ್ಲಿ ಶ್ರೀನಿವಾಸಜಡ್ಡುಗ್ರಾಮಸ್ಥರು ಶಾಸಕರಿಗೆ ಸಲ್ಲಿಸಿರುವ ಮನವಿ

About the author

Adyot

Leave a Comment