ಸಿದ್ದಾಪುರ: ನೆಲೆಮಾವುಮಠದ ನೂತನ ಯತಿಗಳ ಪಟ್ಟಾಭಿಷೇಕದ ಧರ್ಮಸಭೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ನೆಲೆಮಾವು ಮಠದ 26ನೇ ಯತಿವರ್ಯರಾಗಿ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿಯವರ ಪೀಠಾರೋಹಣ ಸಮಾರಂಭದ ಅಂಗವಾಗಿ ಶ್ರೀಜಗದ್ಗುರು ಶಂಕರಾಚಾರ್ಯ ವೇದಿಕೆಯಲ್ಲಿ ಧರ್ಮಸಭೆ ನಡೆಯಿತು.

ಧರ್ಮಸಭೆಯ ಸಾನ್ನಿಧ್ಯವಹಿಸಿದ್ದ ಶೃಂಗೇರಿ ಶಂಕರ ಮಠಧ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಭಗವಂತ ಪರಮೇಶ್ವರ ಅಥವಾ ನಾರಾಯಣರಿಂದ ಪ್ರಾರಂಭವಾಗಿರುವುದು ಗುರು ಪರಂಪರೆ. ಅದಕ್ಕೆ ಮಾನ್ಯತೆ ಬಂದಿದ್ದ ಶಂಕರ ಭಗವತ್ಪಾದರಿಂದ. ಆ ಪರಂಪರೆಯಂತೆ ಬಂದ ಜ್ಞಾನದ ಹಿತವನ್ನು ಶಿಷ್ಯರಿಗೆ ಉಂಟುಮಾಡುವುದು ಗುರುವಿನ ಕರ್ತವ್ಯ ಕೇವಲ ಮನುಷ್ಯನಾಗಿ ಹುಟ್ಟುವುದರಿಂದ ಜೀವನ ಸಾರ್ಥಕವಾಗುವುದಿಲ್ಲ. ಅದಕ್ಕಾಗಿ ಶಾಸ್ತ್ರಜ್ಞರಾಗಿರುವ ಗುರುವನ್ನು ಆಶ್ರಯಿಸಿ, ಅನುಸರಿಸಬೇಕು. ಪರಿಪಾಲಿಸಬೇಕು. ಗುರು ಎಂಬ ಪದಕ್ಕೆ ಗಂಭೀರವಾದ ಅರ್ಥವಿದೆ. ಆತ ತನಗಿಷ್ಟ ಬಂದಂತೆ ತತ್ವಗಳನ್ನು ಬದಲಾಯಿಸಬಾರದು ಎಂದು ಗುರುಪರಂಪರೆಗೆ ಕಿವಿಮಾತು ಹೇಳಿದರು.

ಮನುಷ್ಯನಿಗೆ ಧರ್ಮಾಚರಣೆಗೆ ಪ್ರೇರಣೆ ಕೊಡುವ ವಿಷಯಗಳಿಗಿಂತ ಆ ಮಾರ್ಗದಿಂದ ದೂರ ಎಳೆಯುವ ಪ್ರಸಂಗಗಳೇ ಹೆಚ್ಚಿವೆ. ಧರ್ಮದ ಮಾರ್ಗ ಅತ್ಯಂತ ಕಠಿಣವಾಗಿದೆ. ಆಧುನಿಕ ವಿಷಯಗಳಲ್ಲಿ ಮುಂದೆ ಹೋಗುವಂತೆ ಧಾರ್ಮಿಕ ವಿಷಯದಲ್ಲಿ ಹಿಂದೆ ಹೋಗುತ್ತಿದ್ದೇವೆ ಎಂದರು.

ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಆಶೀರ್ವಚನ ನೀಡಿ, ತಪಸ್ಸೇ ಮಠದ ಮೂಲ ಶಕ್ತಿ. ಜಪ, ಪೂಜೆ, ಸದ್‌ಗ್ರಂಥಗಳ ಅಧ್ಯಯನಗಳು ಇದರ ಮೂಲ ಮುಖಗಳು. ಇವುಗಳಿಂದ ಶುಕ್ಲಧರ್ಮ ಎಂದರೆ ಪುಣ್ಯ ಉಂಟಾಗುತ್ತದೆ ಎಂದು ವೇದಗಳು ಹೇಳುತ್ತವೆ. ಯತಿಗಳು ತಮ್ಮ ಆಚರಣೆ ಮತ್ತು ಜ್ಞಾನಗಳ ಮೂಲಕವೇ ಸಮಾಜವನ್ನು ಸೆಳೆಯಬೇಕು. ಸದ್ಭಕ್ತರಿಂದ, ಬಾಹ್ಯ ಸೌಂದರ್ಯದಿಂದ, ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳಿಂದಲೂ ಅಲ್ಲ.ಹಾಗೆಂದು ಮಠಗಳಿಂದ ಸಮಾಜ ಸೇವೆ ಬೇಡ ಎಂದಲ್ಲ. ಆದರೆ, ಅದೇ ಮುಖ್ಯವಾಗಬಾರದು. ಭಕ್ತರೂ ಅದನ್ನು ಹೆಚ್ಚಾಗಿ ಬಯಸಬಾರದು ವ್ಯಾವಹಾರಿಕ ಚಿಂತೆ ಯತಿಗಳಿಗೆ ಬೀಳದಂತೆ ಶಿಷ್ಯಂದಿರು ನೋಡಿಕೊಳ್ಳಬೇಕು.

ಸಮಾಜ ಮೌಲ್ಯಗಳನ್ನು ಕಳೆದುಕೊಂಡು ಅನೈತಿಕತೆಯತ್ತ ವಿಚಿತ್ರವಾದ ದಾರಿಯಲ್ಲಿ ಸಾಗುತ್ತಿದೆ. ಪರಲೋಕ, ಪುನರ್ಜನ್ಮಗಳ ಬಗ್ಗೆ ಶ್ರದ್ಧೆ ಕಡಿಮೆಯಾಗುತ್ತಿರುವ ಈ ದಿನದಲ್ಲಿ ಯಜ್ಞ ಮತ್ತು ತಪಸ್ಸುಗಳ ಪರಂಪರೆ ಬಹಳ ಮುಖ್ಯ. ಇದರಿಂದ ಲೋಕ ಹಿತ ಇರುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಭಕ್ತಿ ಯೋಗ, ಕರ್ಮ ಯೋಗ, ಜ್ಞಾನ ಯೋಗಗಳ ದಾರಿಯಲ್ಲಿ ನಾವು ಸಾಗಬೇಕಿದೆ. ಅವುಗಳನ್ನು ಕೊಡುವ ಕೆಲಸ ಮಠಗಳಿಂದ ಆಗಬೇಕು.26 ನೇ ಯತಿಗಳಾಗಿ ಪೀಠ ಸ್ವೀಕರಿಸಲಿರುವ ಮಾಧವಾನಂದ ಭಾರತೀ ಸ್ವಾಮಿಗಳು ನೆಲೆ ಕಳೆಕೊಂಡಿದ್ದ ನೆಲೆಮಾವು ಮಠಕ್ಕೆ ಸೆಲೆಯಾಗಿ ಬರುತ್ತಿದ್ದಾರೆ. ಅವರು ಮಠಕ್ಕಷ್ಟೆ ಅಲ್ಲದೆ, ಸಮಾಜಕ್ಕೂ ನೆಲೆಯಾಗುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.


ಮಾಧವಾನಂದ ಭಾರತೀ ಸ್ವಾಮೀಜಿಗಳಿಗೆ ಸನ್ಯಾಸ ದೀಕ್ಷೆ ನೀಡಿದ ಶೃಂಗೇರಿ ಶಿವಗಂಗಾ ಮಠದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳು. ಮಠದ ನಿಯೋಜಿತ ಸ್ವಾಮೀಜಿ ಮಾಧವಾನಂದರು, ಪಟ್ಟಾಭಿಷೇಕ ಮಹೋತ್ಸವದ ಗೌರವ ಅಧಿಕಾರಿ ವಿ.ಆರ್.ಗೌರಿಶಂಕರ, ಸ್ವರ್ಣವಲ್ಲೀ ಮಠದ ಆಡಳಿತ ಸಮಿತಿ ಅಧ್ಯಕ್ಷ ವಿ.ಎನ್.ಹೆಗಡೆ, ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಉಪಸ್ಥಿತರಿದ್ದರು.
ಮಠದ ಆಡಳಿತ ಸಮಿತಿ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು ದಂಪತಿ ಸ್ವಾಮಿಗಳ ಪಾದಪೂಜೆ ನೆರವೇರಿಸಿದರು.
ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಶ್ರೀಗಳಿಗೆ ಫಲ ತಾಂಬೂಲ ಅರ್ಪಿಸಿದರು. ಹೇರೂರು ಸೀಮಾ ವಿಪ್ರರು ವೇದಘೋಷದೊಂದಿಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು.

About the author

Adyot

Leave a Comment