ಸಿದ್ದಾಪುರ: ಶ್ರೀಮನ್ನೆಲೆಮಾವುಮಠದ 26ನೇ ಯತಿಗಳ ಪಟ್ಟಾಭಿಷೇಕ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಶ್ರೀಮನ್ನೆಲೆಮಾವುಮಠದ 26ನೇ ಯತಿಗಳಾದ ಶ್ರೀಮಾಧವಾನಂದ ಭಾರತೀ ಸ್ವಾಮೀಜಿಯವರ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ದಿವ್ಯಸಾನ್ನಿಧ್ಯವಹಿಸಿದ್ದ ಶೃಂಗೇರಿ ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ,
ಜ್ಞಾನ ಎನ್ನುವುದು ವಿಶ್ವದ ಎಲ್ಲಾ ಕಡೆ ಇರಬಹುದು ಆದರೆ ಭಾರತ ದೇಶಕ್ಕೆ ಜ್ಞಾನಭೂಮಿ ಎಂದು ಹೆಸರಿದ್ದು ಇಲ್ಲಿರುವುದು ಕೇವಲ ಜ್ಞಾನವಲ್ಲ ಉತ್ಕೃಷ್ಟ ಜ್ಞಾನವಾಗಿದೆ.ವಿದೇಶದಲ್ಲಿ ಸಿಗುವ ಜ್ಞಾನ ಲೌಕಿಕವಾದುದು ಅದು ಶರೀರ ಭೂಮಿಯ ಮೇಲೆ ಇರುವಲ್ಲಿಯವರೆಗೆ ಮಾತ್ರ ಪ್ರಯೋಜನವಾದುದು ಆದರೆ ನಮ್ಮ ಜ್ಞಾನ ಶರೀರ ಬಿಟ್ಟ ನಂತರವೂ ಪ್ರಯೋಜನಕ್ಕೆ ಬರುವಂತಹದ್ದು.ಮೋಕ್ಷವನ್ನು ಪಡೆಯುವಂತಹದ್ದು ಇಂತಹ ಜ್ಞಾನವನ್ನು ನೀಡುವವರು ಗುರು ಎನಿಸಿಕೊಳ್ಳುತ್ತಾರೆ ಗಡ್ಡಬಿಟ್ಟವರೆಲ್ಲರೂ ಗುರುಗಳು ಎನಿಸಿಕೊಳ್ಳುವುದಿಲ್ಲ ಗುರು ಜ್ಞಾನಿಯಾಗಿರಬೇಕು ಶಿಷ್ಯರನ್ನು, ಸಮಾಜವನ್ನು ಮೋಕ್ಷದ ಕಡೆಗೆ ಕರೆದುಕೊಂಡು ಹೋಗುವಂತಹವನಾಗಿರಬೇಕು ನಾವು ಗುರುವನ್ನು ಆಯ್ಕೆ ಮಾಡಿಕೊಳ್ಳುವಾಗ ಅವರ ವೇಷ ಭೂಷಣವನ್ನು ನೋಡಬಾರದು ಅವರಲ್ಲಿ ಜ್ಞಾನ ಎಷ್ಟಿದೆ ಎಂದು ನೋಡಬೇಕು ಎಂದು ಹೇಳಿದರು.


ಶಂಕರ ಭಗವತ್ಪಾದರು ಎಲ್ಲಾಗುರುಗಳಿಗೂ ಗುರುಗಳು ಅವರ ಅಸಾದಾರಣ ಕೆಲಸವನ್ನು ಬೇರೆಯವರು ಮಾಡಲು ಬರುವುದಿಲ್ಲ ಭಕ್ತಿಮಾರ್ಗ,ಕರ್ಮಮಾರ್ಗದ ಮೂಲಕ ಜ್ಞಾನ ಮಾರ್ಗವನ್ನು ಪಡೆಯುವ ಬಗೆಯನ್ನು ಅವರು ತೋರಿಸಿದವರು. ಅದ್ವೈತ ಸಿದ್ದಾಂತ ಎನ್ನುವುದು ಒಂದು ತತ್ವ ಅದನ್ನು ಸಾಕ್ಷಾತ್ಕರಿಸಲು ಭಗವಂತನು ಶಂಕರರ ರೂಪದಲ್ಲಿ ಭೂಮಿಗೆ ಬಂದಿದ್ದನು.ಸನಾತನ ಧರ್ಮವೂ ಎಲ್ಲಾ ಮೂಲಗಳಿಗೂ ತಲುಪಲಿ ಎಂಬ ಉದ್ದೇಶದಿಂದ ಅವರು ಚತುರನಾಮ್ನಾಯ ಮಠಗಳ ಸ್ಥಾಪನೆ ಗ್ರಂಥಗಳ ರಚನೆ,ದೇಶಪ್ರವಾಸ ಮಾಡಿ ಪ್ರಚಾರದಲ್ಲಿರುವಂತೆ ಮಾಡಿದರು ಎಂದು ಹೇಳಿದರು.

ಸನ್ಯಾಸ ಸ್ವೀಕಾರ ಮಾಡಿ ಆ ಧರ್ಮವನ್ನು ಪಾಲಿಸುವುದು ಕಷ್ಟದ ಕೆಲಸ ಅದರಲ್ಲೂ ಸನ್ಯಾಸ ಸ್ವೀಕಾರ ಮಾಡಿ ಲೌಕಿಕರ ಮಧ್ಯದಲ್ಲಿ ಪೀಠಾಧಿಪತಿಯಾಗಿರುವುದು ಇನ್ನೂ ಕಷ್ಟದ ಕೆಲಸ
ಇಲ್ಲಿಯ ನೂತನ ಯತಿ ಶ್ರೀಮಾಧವಾನಂದ ಭಾರತೀ ಸ್ವಾಮೀಜಿಯವರು ಒಂದು ವರ್ಷದ ಹಿಂದೆ ಸನ್ಯಾಸ ಸ್ವೀಕರಿಸಿ ಸನ್ಯಾಸ ಧರ್ಮವನ್ನು ಅಭ್ಯಸಿಸಿದ್ದಾರೆ. ಈಗ ಪೀಠವನ್ನು ಏರುವ ಮೂಲಕ ಶಿಷ್ಯರಿಗೆ, ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಮಾಡಲಿದ್ದಾರೆ ಇಲ್ಲಿಯ ಸಂಪ್ರದಾಯನುಸಾರವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಹೊರತು ಪಡಿಸಿ ಶಾಸ್ತ್ರ
ಗೋಷ್ಠಿ,ವೇದಸಭೆ,ವೇದಾಂತ ಸಭೆ,ಪುರಾಣ ಪ್ರವಚನಗಳನ್ನು ಏರ್ಪಡಿಸಿ ತನ್ಮೂಲಕ ಸಮಾಜಕ್ಕೆ ಜ್ಞಾನದ ಪ್ರಸರಣ ಮಾಡುವುದರ ಜೊತೆಗೆ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಬೇಕು ಮಠದ ಶಿಷ್ಯರು,ಭಕ್ತರು ಇದಕ್ಕೆ ಸಂಪೂರ್ಣ ಸೇವೆ ಸಲ್ಲಿಸುವ ಮೂಲಕ ಮಠದ ಉತ್ತರೋತ್ತರ ಅಭಿವೃದ್ಧಿಗೆ ಕಾರಣರಾಗಬೆಕು ಎಂದು ಹೇಳಿದರು.

ಶ್ರೀಮಾಧವಾನಂದ ಭಾರತೀ ಸ್ವಾಮೀಜಿ ಮಾತನಾಡಿ,ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಲು ಗುರುವಿನ ಅವಶ್ಯಕತೆ ಇರುತ್ತದೆ. ಗುರುವಿನ ಜೊತೆಗೆ ಮೋಕ್ಷದ ಕಡೆಗೆ ಹೋಗುವ ಗುರಿಯೂ ನಮಗಿರಬೇಕು. ಶ್ರೀಮನ್ನೇಲೆಮಾವು ಮಠವನ್ನು ಧಾರ್ಮಿಕ ಕೇಂದ್ರವನ್ನಾಗಿಸುವಲ್ಲಿ ನಮ್ಮೆಲ್ಲ ಶಿಷ್ಯರೊಂದಿಗೆ ಸೇರಿ ಜಗದ್ಗುರು ಶೃಂಗೇರಿ ಗುರುಗಳ ಅನುಗ್ರಹದೊಂದಿಗೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಉಪಸ್ಥಿತರಿದ್ದ ಶಿವಗಂಗಾ ಮಠದ ಶ್ರೀಪುರುಷೋತ್ತಮ ಭಾರತೀ ಸ್ವಾಮೀಜಿಯವರು ಮಾತನಾಡಿದರು.
ಶೃಂಗೇರಿ ಕ್ಷೇತ್ರದ ಆಡಳಿತಾಧಿಕಾರಿ.ವಿ.ಆರ್.ಗೌರೀಶಂಕರ ಮಾತನಾಡಿ,ಶ್ರೀಮನ್ನಲೆಮಾವು ಮಠದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ ಸನಾತನ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ನಮ್ಮಲ್ಲಿರುವ ಒಳಜಗಳಗಳು ಅನ್ಯಧರ್ಮೀಯರಿಗೆ ಅನುಕೂಲವಾಗಿಬಿಡುತ್ತದೆ ಕೆಲವು ಸನ್ನಿವೇಶಗಳು ಮುಜಗರಕ್ಕೆ ಈಡಾಗುವಂತೆ ಮಾಡುತ್ತದೆ ಆದ್ದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಉಪಸ್ಥಿತರಿದ್ದ ಡಾ.ಶಶಿಭೂಷಣ ಹೆಗಡೆ ಮಾತನಾಡಿದರು.ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ,ಹವ್ಯಕ ಮಹಾಸಭಾ ಉಪಾಧ್ಯಕ್ಷ ಎಸ್.ವಿ.ಭಟ್ಟ ಆಸ್ಥಾನ ವಿದ್ವಾಮಸ ಮಹಾಬಲೇಶ್ವರ ಭಟ್ಟ ಉಪಸ್ಥಿತರಿದ್ದರು.
ಮಠದ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನುರು ಸ್ವಾಗತಿಸಿದರು.

About the author

Adyot

Leave a Comment