ಸಂಪರ್ಕರಸ್ತೆಗೆ ವಿಶೇಷ ಅನುದಾನ : ಬೆಳೆ ಹಾನಿ ಪರಿಹಾರಕ್ಕೆ ಪ್ರಥಮ ಆದ್ಯತೆ–ಬಸವರಾಜ ಬೊಮ್ಮಾಯಿ

ಆದ್ಯೋತ್ ಸುದ್ದಿನಿಧಿ:
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಪ್ರವಾಹ ಪೀಡಿತ ಉತ್ತರಕನ್ನಡ ಜಿಲ್ಲೆಗೆ
ಭೇಟಿಕೊಟ್ಟಿರುವ ಬಸವರಾಜ ಬೊಮ್ಮಾಯಿವರ ನಡೆ ಸಾರ್ವಜನಿಕರ ಪ್ರಶಂಸೆ ಕಾರಣವಾಗಿದೆ.
ಗುರುವಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಅಲ್ಲಿಂದ ಯಲ್ಲಾಪುರದ
ಪ್ರವಾಹ ಪೀಡಿತ ಪ್ರದೇಶಗಳಾದ ಕಳಚೆ,ಅರೆಬೈಲ್ ಘಾಟ್ ಹಾಗೂ ಗುಳ್ಳಾಪುರಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ,ಉ.ಕ.ಜಿಲ್ಲೆಯಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ.ಮನೆಗಳು ಕುಸಿದಿವೆ.ತೋಟ,ಗದ್ದೆಗಳಿಗೆ ನಷ್ಟವಾಗಿದೆ.ರಸ್ತೆಗಳು,ಸೇತುವೆಗಳು ನಾಶವಾಗಿದೆ ಈ ಎಲ್ಲದರ ಸಮೀಕ್ಷೆ ನಡೆಸಿ ವರದಿ ಕೊಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.ಬೆಳೆಹಾನಿಗೆ ಪರಿಹಾರ ಹಾಗೂ ಸಂಪರ್ಕರಸ್ತೆಗಳ ದುರಸ್ತಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ಕೇಂದ್ರದಿಂದ ಎನ್.ಡಿ.ಆರ್.ಎಪ್.ಫಂಡ್ ನಿಂದ 695ಕೋಟಿರೂ. ಬಂದಿದೆ ಜಿಲ್ಲಾಧಿಕಾರಿಗಳಲ್ಲಿ ಹಣವಿದೆ ಅದನ್ನು ವಿನಿಯೋಗಿಸಿ ಪರಿಹಾರ ನೀಡಲಾಗುವುದು.ಕೆಲವು ಮನೆಗಳು ಅರಣ್ಯಪ್ರದೇಶದಲ್ಲಿದೆ ಅವುಗಳಿಗೆ ಯಾವ ರೀತಿ ಪರಿಹಾರ ನೀಡುವುದು ಎನ್ನುವುದನ್ನು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ‌.

ಗುಳ್ಳಾಪುರ ಸೇತುವೆ ಯಲ್ಲಾಪುರ-ಅಂಕೋಲಾ ತಾಲೂಕನ್ನು ಸಂಪರ್ಕಿಸುವ ಸೇತುವೆ ಇದು ಪಶ್ಚಿಮಘಟ್ಟ ಪ್ರದೇಶದಲ್ಲಿ ಬರುವುದರಿಂದ ಸೂಕ್ಷ್ಮವಾಗಿದೆ. ಇದರ ಬಗ್ಗೆ ತಜ್ಞರ ಜೊತೆಗೆ ಚರ್ಚಿಸಿ ಕ್ರಮತೆಗೆದುಕೊಳ್ಳಲಾಗುವುದು‌ ಎಂದು ಬೊಮ್ಮಾಯಿ ಹೇಳಿದರು.
ಯಲ್ಲಾಪುರ ತಾಲೂಕಿನ ಸರಕಾರಿ ಆಸ್ಪತ್ರೆಯ ನೂತನ ಡಯಾಲಿಸಿಸ್ ಸೆಂಟರ್ ಹಾಗೂ ಶಾಸಕರ ನಿಧಿಯಿಂದ ಬಂದ 2 ಅಂಬುಲೇನ್ಸ್ ಉದ್ಘಾಟನೆಯನ್ನು ಬೊಮ್ಮಾಯಿ ನೆರವೇರಿಸಿದರು

ಬಿ.ಜೆ.ಪಿ ಶಾಸಕರಾದ ಸುನೀಲ ನಾಯ್ಕ,ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ವಾಯುವ್ಯ ಕರ್ನಾಟಕ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷ ವಿ.ಎಸ್ ಪಾಟೀಲ, ವಿಕೇಂದ್ರೀಕರಣ ಯೋಜನೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಉಪಸ್ಥಿತರಿದ್ದರು.
ಯಲ್ಲಾಪುರದಿಂದ ಅಂಕೋಲಾಕ್ಕೆ ಆಗಮಿಸಿದ ಬಸವರಾಜ ಬೊಮ್ಮಾಯಿ ತಹಸೀಲ್ದಾರ ಕಚೇರಿಯಲ್ಲಿ ನರೇಂದ್ರ ಮೋದಿಯವರ ವಿಡಿಯೋ ಕಾನ್ಪರೆನ್ಸ್ ನಲ್ಲಿ ಭಾಗವಹಿಸಿದರು.ಶಿರೂರುನಖಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು.

ನಂತರ ನಡೆದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ,2019ರಲ್ಲಿ ಪ್ರವಾಹ ಬಂದು ಮನೆ ಕಳೆದುಕೊಂಡವರಿಗೆ ಯಡಿಯೂರಪ್ಪನವರು ತಕ್ಷಣದಲ್ಲಿ ಹತ್ತುಸಾವಿರರೂ. ಕೊಡಲು ಸೂಚಿಸಿದ್ದರು ಅದೇ ರೀತಿ ಈಗಲೂ ಹತ್ತುಸಾವಿರರೂ.ನೀಡಲಾಗುವುದು.ಪ್ರವಾಹದಿಂದ ಹಾಳಾಗಿರುವ ಗ್ರಾಮೀಣ ರಸ್ತೆ ಪುನರನಿರ್ಮಾಣಕ್ಕೆ100ಕೋಟಿರೂ.ಹಾಗೂ ರಾಜ್ಯಹೆದ್ದಾರಿ ದುರಸ್ಥಿಗೆ 100ಕೋಟಿರೂ.ಒಟ್ಟೂ 200 ಕೋಟಿರೂ.ನಾಳೆಯೇ ಬಿಡುಗಡೆ ಮಾಡಲು ಆದೇಶ ನೀಡಲಾಗುವುದು.ಅರಬೈಲ್ ಘಾಟ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ತಕ್ಷಣ ರಾಜ್ಯ ಸರಕಾರದಿಂದ 10 ಕೋಟಿರೂ. ಬಿಡುಗಡೆ ಮಾಡಲಾಗುವುದಲ್ಲದೆ 35ಕೋಟಿರೂ. ಕೇಂದ್ರದಿಂದ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು.ಯಲ್ಲಾಪುರದ ಕಳಚೆ ಗ್ರಾಮವನ್ನು ಸಂಪೂರ್ಣ ಸ್ಥಳಾಂತರಗೊಳಿಸಲಾಗುವುದು ಎಂದು ಬೊಮ್ಮಾಯಿ
ಘೋಷಿಸಿದರು.

About the author

Adyot

Leave a Comment