ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಸ್ಪಂದನ ಸೇವಾ ಸಂಸ್ಥೆ(ರಿ) ಪಟ್ಟಣದ ಸಾಯಿನಗರದ ನಾಗಶ್ರೀ ನಿಲಯದಲ್ಲಿ ಕಥಾ ಪುಸ್ತಕಗಳ ಅವಲೋಕನ ಮತ್ತು ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ,ಕಾವ್ಯ ಕೇವಲ ಪದ್ಯವಲ್ಲ. ಅದು ಅನ್ವೇಷಣೆಯ ಮಾರ್ಗವೂ ಕೂಡ. ಕವಿತೆ ನೋವು,ತಲ್ಲಣಗಳಿಗೆ ಧ್ವನಿಯಾಗುತ್ತದೆ ಕಾವ್ಯಾನುಭೂತಿ ಸದಾ ಇರಬೇಕು. ಆತ್ಮವಿಮರ್ಶೆಯ ಕಾಲ ಇದು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಮಾತನಾಡಿ, ಸಾಹಿತ್ಯಕ್ಕೆ ಎಲ್ಲರನ್ನೂ ಸೆಳೆಯುವ ಶಕ್ತಿ ಇದೆ. ಅಕ್ಷರ ಪ್ರೀತಿ, ಸಾಹಿತ್ಯ ಪ್ರೀತಿಮುಖ್ಯವಾದದ್ದು. ಭಾವನೆಗಳ ಜೊತೆ ಸ್ಪಂದನೆಯನ್ನು ಮುಂದುವರಿಸಿಕೊಂಡುಬಂದಿರುವ ಈ ಸಂಸ್ಥೆ ಹೊಸ ಬರಹಗಾರರಿಗೆ ವೇದಿಕೆ ಕಲ್ಪಿಸುತ್ತಿರುವದು ಶಾಘ್ಲನೀಯ ಎಂದರು.
ಕವಿಗೋಷ್ಠಿಯ ಆಶಯ ನುಡಿಗಳನ್ನಾಡಿದ ಕವಿ ಕೆ.ಬಿ.ವೀರಲಿಂಗನಗೌಡ್ರು ಕವಿತೆ ಎನ್ನುವದು ನಾಲ್ಕು ಸಾಲುಗಳಲ್ಲ. ಕವಿ ಎನ್ನುವ ಭ್ರಮೆ ನಮಗಿರಬಾರದು.ಬರೆಯುವಾಗ ತುಂಬ ಎಚ್ಚರಿಕೆ ಬೇಕು. ಹೇಳಬೇಕಾದುದನ್ನು ಸೂಕ್ಷ್ಮವಾಗಿ ಬರೆಯಬೇಕು.ನಕಾರಾತ್ಮಕತೆಯನ್ನು ಸಕಾರಾತ್ಮಕವಾಗಿ ಒಳಗೊಳ್ಳುವ ಹೊಸದಾರಿ ಹುಡುಕಬೇಕು. ಬರೆಯುವದಕ್ಕಿಂತ ಹೆಚ್ಚು ಉತ್ತಮ ಕೃತಿಗಳನ್ನು ಓದಬೇಕು ಎಂದರು.
ಸಾಹಿತಿ ಗಂಗಾಧರ ಕೊಳಗಿಯವರ ಮಿಸ್ಡ ಕಾಲ್ ಕಥಾಸಂಕಲನದ ಕಥೆಗಳ ಕುರಿತು ರೇಷ್ಮಾ ನಾಯ್ಕ ಹಾಗೂ ನೂತನ ನಾಯ್ಕ, ಬರಹಗಾರ್ತಿ ಸುಧಾ ಎಂ.ಅವರ ಅಪೂರ್ಣರಲ್ಲ ಕಥಾ ಸಂಕಲನದ ಕಥೆಗಳ ಕುರಿತು ಲಕ್ಷ್ಮಣ ಬಡಿಗೇರ ಅವಲೋಕಿಸಿದರು. ಗಂಗಾಧರ ಕೊಳಗಿ, ಸುಧಾ ಎಂ.ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಸಂಗೀತ ಶಿಕ್ಷಕಿ ಶಾಂತಾ ಸದಾನಂದ ನಿಲೇಕಣಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕವಿಗೋಷ್ಠಿಯಲ್ಲಿ ಕಾಳಿಪ್ರಸಾದ ನಾಯ್ಕ,ಸುಜಾತಾ ದಂಟಕಲ್,ನೂತನಾ ನಾಯ್ಕ,ಹನುಮಂತ ನಾಯ್ಕ, ವಿಠ್ಠಲ ಅವರಗುಪ್ಪ, ಡಾ|ಚೈತ್ರಿಕಾ ಪಿ.ಹೊಸೂರು, ಯಶಸ್ವಿನಿಮೂರ್ತಿ, ಉಷಾ ಪ್ರಶಾಂತ ನಾಯ್ಕ,ಸುಧಾರಾಣಿ ನಾಯ್ಕ, ಶಶಿಧರ ಹೆಗಡೆ ಮುಂತಾದವರು ಕವಿತೆ ವಾಚಿಸಿದರು.
ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ಸದಸ್ಯೆ ಸುಧಾರಾಣಿ ನಾಯ್ಕ ವಂದಿಸಿದರು. ಉಷಾ ಪಿ.ನಾಯ್ಕ ನಿರೂಪಿಸಿದರು.