ಆದ್ಯೋತ್ ಸುದ್ದಿನಿಧಿ:
ದೇಶದ ಮೂರು ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ನಗರದ ದೇವಿಕೆರೆ ಬಳಿ ಬಿಜೆಪಿ ಶಿರಸಿ ನಗರ ಮಂಡಲ ವತಿಯಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು. ಪಟಾಕಿ ಸಿಡಿಸಿ, ಘೋಷಣೆ ಹಾಕಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.
ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ರಾಷ್ಟ್ರೀಯ ವಿಚಾರಗಳಿಗೆ ಎಲ್ಲೆಡೆ ಮನ್ನಣೆ ಸಿಗುತ್ತಿರುವುದಕ್ಕೆ ಈ ಫಲಿತಾಂಶವೇ ಸಾಕ್ಷಿ. ನಮ್ಮ ಕಾರ್ಯವಿಸ್ತಾರ ಆಗುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ಹೇಳಿದರು.
ಇತ್ತೀಚೆಗೆ ನಡೆದ ಹತ್ತು ಚುನಾವಣೆಗಳ ಪೈಕಿ ಬಿಜೆಪಿ ಎಂಟು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ, ಬಿಜೆಪಿಯ ಜನಪರ ಆಡಳಿತ, ಹಾಗೂ ಸ್ವೀಕಾರಾರ್ಹತೆಗೆ ಇದು ನಿದರ್ಶನ; ಜನತೆ ಇಂದು ಬಿಜೆಪಿಯ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಮತ್ತು ಅಪ್ಪಿಕೊಂಡಿದ್ದಾರೆ ಈ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದೆ, ರಾಜ್ಯದಲ್ಲಿಯೂ ಬಿಜೆಪಿಯೇ ಭರವಸೆ ಎಂಬುದು ಮತದಾರರಿಗೆ ಸ್ಪಷ್ಟವಿದೆ, ಹಾಗಾಗಿ ಉತ್ತರ ಕನ್ನಡ ಜಿಲ್ಲೆಯ ಆರಕ್ಕೆ – ಆರೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಸಾಧಿಸಲಿದ್ದು ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಮಿಷನ್ 150 ಕ್ಕೆ ಕೊಡುಗೆ ನೀಡಿಲಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಫಲಿತಾಂಶದ ದಿನ ರಾಷ್ಟ್ರೀಯ ಕಾರ್ಯಾಲಯಕ್ಕೆ ಮೋದಿ ಭೇಟಿ ನೀಡಿದಾಗ ಕಾರ್ಯಕರ್ತರಿಂದ ಅವರಿಗೆ ಸಿಕ್ಕ ಸಂಭ್ರಮದ ಸ್ವಾಗತವಂತೂ ಅಭೂತಪೂರ್ವವಾದುದು ಈಗಾಗಲೇ ಚುನಾವಣೆಯ ಪ್ರಚಾರದ ವಿಡಿಯೋ ವಾಹನ ‘ಪ್ರಗತಿ ರಥಗಳು’ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಿ ಜನಜಾಗೃತಿ ಮಾಡುತ್ತಿದೆ, ವಿಜಯ ಸಂಕಲ್ಪ ಯಾತ್ರೆಯ ರಾಜ್ಯದ ಪ್ರಮುಖರ ತಂಡ ಜಿಲ್ಲೆಗೆ ಆಗಮಿಸಿ ಮತ್ತಷ್ಟು ಹುಮ್ಮಸ್ಸು ತುಂಬಲಿದೆ, ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ಒಂದರಂತೆ ಬಿಜೆಪಿಯ ಮೋರ್ಚಾಗಳ ಬೃಹತ್ ಸಮಾವೇಶಗಳು ನಡೆಯಲಿದೆ ಎಂದರು.
ನಗರ ಮಂಡಲ ಅಧ್ಯಕ್ಷ ರಾಜೇಶ ಶೆಟ್ಟಿ ಸ್ವಾಗತಿಸಿ, ಕಾಂಗ್ರೆಸ್ ಮುಕ್ತ ಭಾರತಕ್ಕೆ ಮುನ್ನುಡಿ ಬರೆದು ಆಗಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯದೇ ಸರ್ಕಾರ ಬರಲಿದೆ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಆನಂದ ಸಾಗರ ಮಾತನಾಡಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದ್ದರೂ ರಾಜ್ಯದಲ್ಲಿ ಅಧಿಕಾರದ ಕನಸು ಕಾಣುತ್ತಿದೆ.
ಬಿಜೆಪಿಯ ವಿರುದ್ಧ ಅಪಪ್ರಚಾರದ ತಂತ್ರ ಮಾಡುತ್ತಿರುವ ಕಾಂಗ್ರೆಸ್ಸನ್ನು ಜನ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ ದುರಾಡಳಿತದ ಸಂಪೂರ್ಣ ಅರಿವು ಜನರಿಗೆ ಇದೆ ಎಂದರು.
ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸಿ ಮೋದಿ ಸ್ವಚ್ಚ ಭಾರತದ ಆಶಯಕ್ಕೆ ತಕ್ಕಂತೆ ಬಿಜೆಪಿಯ ಪ್ರಮುಖರು ಮತ್ತು ಕಾರ್ಯಕರ್ತರು ನಡೆದುಕೊಂಡರು.
ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ ತಿರುಮಲೆ, ಜಗದೀಶ ನಾಯ್ಕ, ನಗರ ಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರು – ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷ ದೀಪಾ ಮಹಾಲಿಂಗಣ್ಣವರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ಆನಂದ ಸಾಲೇರ್, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶಾಲ ಮರಾಠೆ, ರಮಾಕಾಂತ ಭಟ್, ರವಿಚಂದ್ರ ಶೆಟ್ಟಿ ಉಪಸ್ಥಿತರಿದ್ದರು.