ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಸಿದ್ದಾಪುರ ಹೇರೂರಿನಲ್ಲಿ ಯುಗಾದಿ ಉತ್ಸವದ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ ಹಾಗೂ ಹೇರೂರು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಉತ್ತರ ಪ್ರಾಂತ ಧರ್ಮಜಾಗರಣ ಸಮನ್ವಯ ಸಂಯೋಜಕ ದೀಲಿಪ ವೆರ್ಣೇಕರ್ ಮುಖ್ಯವಕ್ತಾರರಾಗಿ ಮಾತನಾಡಿ,ಭಾರತವನ್ನು ಪ್ರೀತಿಸುವವರು ಎಲ್ಲರೂ ಹಿಂದುಗಳೇ, ಭಾರತವನ್ನು ಭಾರತದ ಸಂಸ್ಕೃತಿಯನ್ನು ವಿರೋಧಿಸುವವರು ಹಿಂದೂಗಳಲ್ಲ.ಅಪರಾಧದ ವಿರೋಧ ಮಾಡದ, ಅನ್ಯಾಯದ ವಿರುದ್ಧ ಹೋರಾಟ ಮಾಡದವರು ಸಜ್ಜನರಾಗಿದ್ದೂ ಪ್ರಯೋಜನವಿಲ್ಲ. ಅನ್ಯಾಯದ ವಿರುದ್ಧ ಹೋರಾಡುವಂತಹ ವ್ಯಕ್ತಿಗಳು ಇಂದಿನ ಕಾಲದಲ್ಲಿ ನಮಗೆ ಬೇಕು ಅಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ಕೆಲಸವನ್ನು ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಗಿ 97 ವರ್ಷವಾಗಿದ್ದು, 2025ಕ್ಕೆ ನೂರು ವರ್ಷ ಪೂರೈಸಲಿದೆ. 60,000 ಗಿಂತ ಹೆಚ್ಚು ಶಾಖೆಗಳು ಪ್ರತಿನಿತ್ಯ ದೇಶದಲ್ಲಿ ನಡೆಯುತ್ತಿವೆ. ಸಂಘ ಸಂಸ್ಥಾಪಕ ಡಾಕ್ಟರ್ ಕೇಶವ ಬಲಿರಾಮ ಹೆಡಗೆವಾರ್ ಕಟ್ಟಿದ ಸಂಘಟನೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ವೈದ್ಯಕೀಯ ಪದವಿ ಮುಗಿಸಿದ ತಕ್ಷಣ ಡಾಕ್ಟರ್ ಜೀ ಹೊರ ದೇಶಗಳಿಂದ ಉದ್ಯೋಗದ ಕುರಿತು ಪ್ರಸ್ತಾವನೆಗಳು ಬಂದರೂ ಭಾರತ ವಿಶ್ವಗುರು ಆಗಬೇಕೆಂಬ ಉದ್ದೇಶದಿಂದ ಈ ಎಲ್ಲಾ ಅವಕಾಶಗಳನ್ನು ತಿರಸ್ಕರಿಸಿ ಸಂಘಟನೆಯಲ್ಲಿ ತೊಡಗಿಕೊಂಡರು ಎಂದು ಹೇಳಿದರು.
ಪರಮ ವೈಭವಶಾಲಿ ಭಾರತವನ್ನು ನಿರ್ಮಾಣ ಮಾಡುವುದು ಸಂಘದ ಗುರಿ. ದೇಶಕ್ಕಾಗಿ ಬದುಕುವಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ಮಹತ್ತರ ಕಾರ್ಯ ಸಂಘದಿಂದ ನಡೆಯುತ್ತಿದೆ. ಸಂಘದ ಕಾರ್ಯದ ಪರಿಣಾಮವಾಗಿ ಹಿಂದೂಗಳಲ್ಲಿ ತಾವು ಸ್ವಾಭಿಮಾನದಿಂದ ಬದುಕಬಲ್ಲ ಆತ್ಮಸ್ಥೈರ್ಯ ಹೆಚ್ಚುತ್ತಿದೆ. ಹಿಂದೂಗಳು ಬಹುಸಂಖ್ಯಾತರಾಗಿ ಇರದೇ ಇದ್ದಲ್ಲಿ ಭಾರತ ಭಾರತವಾಗಿ ಉಳಿಯುವುದಿಲ್ಲ. ಮತಾಂತರ ಕೇವಲ ವ್ಯಕ್ತಿ ಮತ್ತು ಕುಟುಂಬಗಳ ವಿರುದ್ಧ ಅಷ್ಟೇ ಅಲ್ಲ, ಇದು ದೇಶದ ವಿರುದ್ಧದ ದೊಡ್ಡ ಷಡ್ಯಂತ್ರ. ಹಿಂದೂಗಳ ಮತಾಂತರವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು.ಈ ದೇಶದ ಯಾವುದೇ ಮೂಲೆಯಲ್ಲೂ ಕೂಡ ಭಗವಾಧ್ವಜವನ್ನು ಹಾರಿಸಲು ನಾನು ಬಿಡುವುದಿಲ್ಲ ಎಂದು ಹೇಳಿದ್ದ ನೆಹರೂ ಮುಂದೆ ಸಂಘದ ಕಾರ್ಯವನ್ನು ಕಣ್ಣಾರೆ ಕಂಡು ಸ್ವಯಂಸೇವಕರಿಗೆ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದರು.ಡಾ. ಅಂಬೇಡ್ಕರ್ ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಸಮಗ್ರ ದೇಶದ ಕಲ್ಪನೆಯ ಭಾರತವನ್ನು ಆರ್.ಎಸ್.ಎಸ್. ಬಯಸುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಮ ಮರಿಯಾ ಗೌಡ ಕಾರಗುಳಿ, ಆರೆಸ್ಸೆಸ್ ಎಂದರೆ ರಾಷ್ಟ್ರಪ್ರೇಮ, ಶಿಸ್ತು ಮತ್ತು ಬದ್ಧತೆ ಎಂಬುದು ನನ್ನಂತೆಯೇ ಅನೇಕರಿಗೆ ಅನುಭವ ಅರಿವಿಗೆ ಬಂದಿದೆ ಕೊರೋನ ಸಂದರ್ಭದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ತಮ್ಮ ಜೀವದ ಹಂಗು ತೊರೆದು ಜನರ ಸೇವೆಯಲ್ಲಿ ತೊಡಗಿದ್ದರು ಎಂದರೆ ಸಂಘದ ಶಿಕ್ಷಣ ಯಾವರೀತಿಯದು ಎಂದು ನಮಗೆ ತಿಳಿದು ಬರುತ್ತದೆ.ಇಂತಹ ಆರೆಸ್ಸೆಸ್ ನಿಂದ ದೇಶಕ್ಕೆ ಒಳಿತಾಗಲಿ, ಸಂಘಟನೆಗೆ ಯಾವುದೇ ಕೆಟ್ಟ ದೃಷ್ಠಿ ತಾಗದಿರಲಿ ಎಂದರು.
ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರವಿ ಹಿರೇಹದ್ದ,ನಿರ್ವಹಣೆ ಮಾಡಿದರು.ಸತ್ಯನಾರಾಯಣ ಬಿಳೆಕಲ್ ವಂದನಾರ್ಪಣೆ ಮಾಡಿದರು.