ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಆಡಳಿತ ಸೌಧದಲ್ಲಿ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಸರಿಯಾದ ಮಾಹಿತಿ ನೀಡದ ಅಧಿಕಾರಿಗಳುಗೆ ಎಚ್ಚರಿಕೆ ನೀಡಿದರು.
ಶಿರಸಿ,ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಾಗೂ ಪಟ್ಟಣದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ ಆದರೆ ಅಧಿಕಾರಿಗಳು ಈ ಬಗ್ಗೆ ಎಲ್ಲವು ಸರಿಯಿದೆ ಎಂದು ಸರಕಾರಕ್ಕೆ ಹೇಳುತ್ತಾರೆ.ಜನರ ಸಮಸ್ಯೆ ಅರಿಯದೆ ಸಭೆಗೆ ಮಾಹಿತಿ ನೀಡಬಾರದು ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ತತ್ವಾರವಿದೆ. ಗ್ರಾಮೀಣ ಭಾಗದ ಹಲವೆಡೆ ಸಮಸ್ಯೆ ಉಲ್ಬಣಿಸುತ್ತಿದೆ. ಶಿರಸಿ, ಸಿದ್ದಾಪುರ ನಗರ ಪ್ರದೇಶಗಳ ನೀರಿನ ಮೂಲಗಳು ಬತ್ತಿವೆ. ಶಾಶ್ವತ ಪರಿಹಾರವಿಲ್ಲದೆ ಜನರು ಕಂಗಾಲಾಗಿದ್ದಾರೆ. ಶಿರಸಿಯ ಲಾಲಗೌಡನಗರದಲ್ಲಿ ಹಲವು ತಿಂಗಳುಗಳಿಂದ ನೀರಿನ ಸಮಸ್ಯೆಯಿದೆ. ಈ ಬಗ್ಗೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸ್ವತಃ ನನ್ನ ಗಮನಕ್ಕೆ ಬಂದಿದೆ. ಸಭೆಯಲ್ಲಿ ಕೇಳಿದರೆ, ಎಲ್ಲವೂ ಸರಿಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಇಂಥ ಕಾರ್ಯವೈಖರಿ ಸರಿಯಲ್ಲ. ಈ ಕ್ಷಣವೇ ಸ್ಥಳಕ್ಕೆ ತೆರಳಿ ಸಮಸ್ಯೆ ನೋಡೋಣವೇ? ಎಂದು ಅಧಿಕಾರಿಗಳ ಬಳಿ ಅವರು ಪ್ರಶ್ನಿಸಿದರು.
ನೀರಿನ ಸಮಸ್ಯೆ ಇರುವ ಕಾಲಘಟ್ಟದಲ್ಲಿ ಸ್ಥಳ ಪರಿಶೀಲಿಸದೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಬಾರದು ಮೂರು ದಿನಗಳಲ್ಲಿ ಸ್ಥಳ ಪರಿಶೀಲಿಸಿ ಸಮಗ್ರ ವರದಿ ಕೊಡ ಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಣ್ಣ ನಾಯ್ಕ,ಕೆಲವು ಕಿಡಗೆಡಿಗಳು ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಇಂತಹ ಚಟುವಟಿಕೆಗಳು ಇಂದಿನಿಂದಲೇ ಬಂದ್ ಆಗಬೇಕು.ಎಲ್ಲಾ ಸಮಾಜದವರು ಪ್ರೀತಿ,ವಿಶ್ವಾಸದಿಂದ ಇರುವ ಅಗತ್ಯವಿದೆ,ರಾಜ್ಯದಲ್ಲಿ, ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಒಳ್ಳೆಯ ಆಡಳಿತದ ನಿರೀಕ್ಷೆಯಲ್ಲಿ ರೈತರು, ಕೂಲಿಕಾರರು, ಜನಸಾಮಾನ್ಯರಿದ್ದಾರೆ. ಇದರಿಂದ ಜನರು ಇಷ್ಟು ದೊಡ್ಡ ಪ್ರಮಾಣದಲ್ಲಿ ಶಕ್ತಿಯನ್ನು ನೀಡಿದ್ದಾರೆ. ಕಾಂಗ್ರೆಸ್ ಉತ್ತಮ ಆಡಳಿತ ನೀಡಲಿದೆ. ಸರ್ಕಾರ ಆಡಳಿತಕ್ಕೆ ಬಂದ ಮೇಲೆ ವಿವಿಧ ಇಲಾಖೆಗಳ ಸಭೆ ನಡೆಸಿ ಅಭಿವೃದ್ಧಿಗೆ ವೇಗ ಹೆಚ್ಚಿಸಲಾಗುವುದು.
ಎಂದು ಹೇಳಿದರು.
13 ವರ್ಷ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಯಾವತ್ತೂ ಏನಾದರೂ ಮಾಡಿಕೊಡಿ ಎಂದು ಕೇಳಲಿಲ್ಲ. ಏರು ಧ್ವನಿಯಲ್ಲಿ ಮಾತಾಡಿಲ್ಲ. ಪಕ್ಷದ ವರಿಷ್ಠರಿಗೆ ನಿಷ್ಠೆಯಿಂದ ಇದ್ದೇನೆ. ಏನು ಹೇಳಿದ್ದಾರೋ ಅದನ್ನು ಮಾಡಿದ್ದೇನೆ. ಈಗಲೂ, ಮುಂದೆಯೂ ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದರು.