ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ಸಮೀಪ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಗ್ಯಾಸ್ ತುಂಬಿಸಿಕೊಂಡು ಪ್ರಯಾಣಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.
ಎದುರಗಡೆಯಿಂದ ಬಂದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಒಮ್ಮೆಲ್ಲೆ ಬ್ರೇಕ್ ಹಾಕಿದ ಪರಿಣಾಮ ಟ್ಯಾಂಕರ್ ಪಲ್ಟಿಯಾಗಿ ಸಮೀಪದಲ್ಲೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ವಿದ್ಯುತ್ ಕಂಬ ತುಂಡಾಗಿದೆ.
ಗ್ಯಾಸ್ ಟ್ಯಾಂಕರ್ ಸೋರಿಕೆಯಾಗುವ ಭೀತಿಯಿಂದ ಅಗ್ನಿಶಾಮಕ ಹೆಸ್ಕಾಂ ಪೊಲೀಸ್ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕಾಗಮಿಸಿ ಸೋರಿಕೆ ಆಗುತ್ತಿದೆಯಾ ಎಂದು ಪರಿಶೀಲನೆ ನಡೆಸಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡರು.
ಅಗ್ನಿಶಾಮಕ ಸಿಬ್ಬಂದಿಗಳು ನೀರು ಸಿಂಪರಣೆ ನಡೆಸಿ ಸುರಕ್ಷತಾ ಕ್ರಮ ಕೈಗೊಂಡಿದ್ದು. ಕ್ರೇನ್ ಮೂಲಕ ಟ್ಯಾಂಕರನ್ನು
ಪಕ್ಕಕ್ಕೆ ಸರಿಸಿ ಸಂಚಾರ ಸುಗಮಗೊಳಿಸಿದರು. ಟ್ಯಾಂಕರ್ ಚಾಲಕ ಹಾಗೂ ನಿರ್ವಾಹಕ ಸಣ್ಣಪುಟ್ಟ ಗಾಯಗೊಂಡಿದ್ದು, ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಟ್ಯಾಂಕರ್ ಪಲ್ಟಿಯಾದ ಹಿನ್ನಲೆ ಸುತ್ತಮುತ್ತಲಿನ 1 ಕೀ.ಮೀ ವ್ಯಾಪ್ತಿಯಲ್ಲಿ ಹೊಟೇಲ್ ಮನೆಗಳಲ್ಲಿ ಗ್ಯಾಸ್ ಬಳಸದಂತೆ ಸೂಚನೆ ನೀಡಲಾಗಿದೆ.