ಆದ್ಯೋತ್ ಸುದ್ದಿನಿಧಿ:
ಪುರಾಣ ಪ್ರಸಿದ್ದ ಗೋಕರ್ಣದ ಅಶೋಕೆಯ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರದಲ್ಲಿ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ “ಸಂಘಟನಾ ಚಾತುರ್ಮಾಸ್ಯ” ಸೋಮವಾರ ವ್ಯಾಸಪೂಜೆಯೊಂದಿಗೆ ಪ್ರಾರಂಭವಾಯಿತು.
ಚಾತುರ್ಮಾಸ್ಯದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು,ಗುರುವನ್ನು ಪೂಜಿಸುವುದು ಗುರುಪೂರ್ಣಿಮೆಯ ಮಹತ್ವ. ಗುರು ಎಂದರೆ ಅಮಾವಾಸ್ಯೆ ಅಲ್ಲ,ಅಷ್ಟಮಿಯೂ ಅಲ್ಲ, ಗುರು ಅಂದರೆ ಪೂರ್ಣಿಮೆ. ಅಪೂರ್ಣದಿಂದ ನಮ್ಮನ್ನು ಪೂರ್ಣರನ್ನಾಗಿ ಮಾಡುವುದು ಗುರುವಿನ ವಿಶೇಷ. ಗುರು ಎಂದರೆ ತಂಪು ಮತ್ತು ಬೆಳಕು. ಗುರು ಬೀರುವ ಕರುಣೆಯ ತಂಪು ಎಷ್ಟು ಕಷ್ಟದ ಶಾಖವನ್ನಾದರೂ ತಂಪಾಗಿಸುತ್ತದೆ ಎಂದು ಹೇಳಿದರು.
ನಾವು ಸಂಘಟಿತರಾದಷ್ಟೂ ಬಲಿಷ್ಠರಾಗುತ್ತೇವೆ. ದೇಶವನ್ನು ಬಲಿಷ್ಠಗೊಳಿಸಬೇಕಾದರೆ ನಮ್ಮ ಸಂಘಟನೆ ಬಲಗೊಳ್ಳಬೇಕು
ಎಲ್ಲ ಕಾಯಕಗಳಿಗೂ ಸೇವಕರು ಇರಬೇಕು ಎನ್ನುವುದು ಸಂಘಟನಾ ಚಾತುರ್ಮಾಸ್ಯದ ಮೂಲತತ್ವ ಸೇವಾ ಅವಕಾಶ ಲಭ್ಯವಾಗದ ಕಾರ್ಯಕರ್ತರು ಸೇವಾವಕಾಶವನ್ನು ಯಾಚಿಸಿ ಪಡೆಯಬೇಕು ನಮ್ಮ ನಡೆ, ನಮ್ಮ ಸ್ವರ, ನಮ್ಮ ನುಡಿ ಎಲ್ಲವೂ ಒಂದಾಗಬೇಕು. ಈ ಮೂಲಕ ಸಂಘಟನೆ ಬಲಿಷ್ಠಗೊಳಿಸಬೇಕು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸಂಘಟನಾ ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಪ್ರತಿ ಮನೆಯಿಂದಲೂ ಕನಿಷ್ಠ ಒಬ್ಬರಂತೆ ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ವ್ಯಕ್ತಿತ್ವದಲ್ಲಿ, ಸೇವಕರ ಮಧ್ಯೆ ಹಾಗೂ ಸಮಾಜದ ನಡುವೆ ಅದ್ವೈತ ಉಂಟಾಗಬೇಕು ಎಂದು ಸ್ವಾಮೀಜಿ ಆಶಿಸಿದರು.
ಶ್ರೀಮಠದಲ್ಲಿ ಇಂದು ಸ್ವರ್ಣಪಾದುಕೆ ಅನಾವರಣಗೊಂಡು ಪ್ರಥಮ ಪೂಜೆ ಸಂದಿದೆ. ದಂತ ಸಿಂಹಾಸನ, ಚಿನ್ನದ ಮಂಟಪ ಇರುವ ಪೀಠ ನಮ್ಮದು. ಸಮಾಜಕ್ಕೆ ನಮ್ಮ ಗುರುಪರಂಪರೆ ಮಾಡಿದ ಸೇವೆಯ ಸ್ಮರಣೆಗಾಗಿ ಶಿಷ್ಯಭಕ್ತರು ಇದನ್ನು ಸಮರ್ಪಿಸಿದ್ದಾರೆ. ಗುರುಪೂರ್ಣಿಮೆಯ ಶುಭ ಅವಸರದಲ್ಲಿ ಸ್ವರ್ಣಪಾದುಕೆ ಸಮರ್ಪಣೆಯಾಗಿರುವುದು ವಿಶೇಷ ಮಹತ್ವ ಪಡೆದಿದೆ ಶ್ರೀರಾಮ ವನವಾಸದಿಂದ ಬಿಟ್ಟು ಅಯೋಧ್ಯೆಗೆ ಬರಲು ನಿರಾಕರಿಸಿದಾಗ ಭರತ ಶ್ರೀರಾಮ ಪಾದುಕೆಯನ್ನು ಪಟ್ಟದಲ್ಲಿಟ್ಟು ರಾಜ್ಯಭಾರದ ಕಾರ್ಯಭಾರ ವಹಿಸಿಕೊಂಡಂತೆ ಈ ಸ್ವರ್ಣಪಾದುಕೆ ಕೂಡಾ ಶ್ರೀಸಂಸ್ಥಾನದ ಪ್ರತಿನಿಧಿತ್ವ ವಹಿಸುತ್ತದೆ. ರಾಮರಾಜ್ಯಕ್ಕಿಂತ ಪಾದುಕಾ ಸಾಮ್ರಾಜ್ಯ ಕೂಡಾ ಮಹತ್ವ ಪಡೆದಿದೆ ಎಂದು ಹೇಳಿದರು.
ಸ್ವರ್ಣಪಾದುಕೆ ಮುಂದೆ ಶ್ರೀಸಂಸ್ಥಾನದ ಪ್ರಾತಿನಿಧ್ಯದ ಪ್ರತೀಕ.
ಸ್ವರ್ಣಭಿಕ್ಷೆಯ ಪರಿಕಲ್ಪನೆಯನ್ನೂ ಶ್ರೀಗಳು ಅನಾವರಣಗೊಳಿಸಿದರು. ಸ್ವರ್ಣ ಪಾದುಕಾಪೂಜೆ, ಸ್ವರ್ಣ ಮಂಟಪ ಸಹಿತ ಸ್ವರ್ಣ ಭಿಕ್ಷೆಗೆ ಅವಕಾಶ ನೀಡಲಾಗುತ್ತದೆ. ಸ್ವರ್ಣ ಪಾದುಕೆಗೆ ಇಟ್ಟ ಪ್ರತಿಯೊಂದು ಕಾಣಿಕೆಯೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ದೇಣಿಗೆಯಾಗುತ್ತದೆ. ವಿವಿವಿ ಸಫಲ, ಸಬಲ ಹಾಗೂ ಸಂಪನ್ನವಾಗುವವರೆಗೂ ಇದಕ್ಕೆ ಸಮರ್ಪಣೆಯಾದ ಸಮಸ್ತ ಸಂಪತ್ತು ವಿವಿವಿಗೆ ಸೇರುತ್ತದೆ ಎಂದು ವಿವರಿಸಿದರು.
ಈ ಹಿಂದೆ ಮಹಾಮಂಡಲ, ಮಂಡಲ, ವಲಯಗಳಲ್ಲಿ ಸೇವೆ ಸಲ್ಲಿಸಿದ ಪದಾಧಿಕಾರಿಗಳು ವಿಶ್ವವಿದ್ಯಾಪೀಠದ ಸೇವೆಗೆ ಅಣಿಯಾಗಬೇಕು ಎಂದು ಆಶಿಸಿದರು.
ಬಂದಗದ್ದೆ ನಾಗರಾಜ್ ರಚಿಸಿದ ಶ್ರೀಮದಾತ್ಮಲಿಂಗ ವೈಭವಂ ಎಂಬ ಮಹಾಕಾವ್ಯ ಲೋಕಾರ್ಪಣೆಯನ್ನು ಈ ಸಂದರ್ಭದಲ್ಲಿ ನೆರವೇರಿಸಲಾಯಿತು.
ಪಾದೆಕಲ್ಲು ವಿಷ್ಣುಭಟ್ ಕೃತಿ ಪರಿಚಯ ಮಾಡಿಕೊಟ್ಟರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗೌರವಾಧ್ಯಕ್ಷ ಡಿ.ಡಿ.ಶರ್ಮಾ ಅತಿಥಿಗಳಾಗಿದ್ದರು.
ಇದೇ ಸಂದರ್ಭದಲ್ಲಿ ನೂತನ ಹವ್ಯಕ ಮಹಾಮಂಡಲದ ಉದ್ಘೋಷಣೆಯನ್ನು ಸೇವಾ ಖಂಡದ ಮಾರ್ಗದರ್ಶಕ ಮಹೇಶ್ ಚಟ್ನಳ್ಳಿ ಮಾಡಿದರು. ಹವ್ಯಕ ಮಹಾಮಂಡಲದ ನೂತನ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಗೌರವ ಕಾರ್ಯದರ್ಶಿಯಾಗಿ ಪಿದಮಲೆ ನಾಗರಾಜ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಉದಯಶಂಕರ ಭಟ್ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ನೂತನ ಮಹಾಮಂಡಲ ಪದಾಧಿಕಾರಿಗಳಿಗೆ ನಿರೂಪ ನೀಡಲಾಯಿತು.
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ ಮತ್ತಿತರರು ಉಪಸ್ಥಿತರಿದ್ದರು. ಗಣೇಶ ಜೋಶಿ ವಂದಿಸಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಗಣಪತಿ ಭಟ್ ಸಭಾಪೂಜೆ ನೆರವೇರಿಸಿದರು.