ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ರಾಘವೇಂದ್ರ ಮಠದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಿದ್ದಾಪುರ ಶಾಖೆಯು ಆಯೋಜಿಸಿದ್ದಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮಣ್ಣ ನಾಯ್ಕ, ಸರ್ಕಾರದ ಕಾರ್ಯಕ್ರಮ ಹಾಗೂ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕೆಂದರೆ ಸರ್ಕಾರಿ ನೌಕರರ ಪಾತ್ರ ಮುಖ್ಯವಾಗಿದ್ದು, ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು.ಸರ್ಕಾರದ ಕಾರ್ಯಕ್ರಮ ಸರಿಯಾಗಿ ಅನುಷ್ಠಾನಕ್ಕೆ ಬರಲು ನೌಕರರ ಪಾತ್ರ ದೊಡ್ಡದಿದೆ. ನಿಮ್ಮ ಅವಧಿಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ಏಳನೆ ವೇತನ ಆಯೋಗದ ಅನುಷ್ಠಾನ ಹಾಗೂ ಹಳೆ ಪಿಂಚಣಿ ಯೋಜನೆ ಜಾರಿಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಸರ್ಕಾರದ ಕೆಲಸವನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಮಾಡುವ ಮೂಲಕ ಸಾರ್ವಜನಿಕರಿಗೆ ಸ್ಪಂದಿಸಬೇಕು ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಸಮಸ್ತ ನೌಕರರು ಸಹಕಾರ ನೀಡುವಂತೆ ಸೂಚಿಸಿದರು.
ಸಂಘದ ಅಧ್ಯಕ್ಷ ರಾಜೇಶ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಸರ್ಕಾರಿ ನೌಕರರ ಏಳನೆ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಸರ್ಕಾರದ ಗಮನ ತಂದು ಜಾರಿಗೆ ಪ್ರಯತ್ನಿಸಬೇಕು, ಎನ್.ಪಿ.ಎಸ್ ರದ್ಧುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ನೂತನ ಶಾಸಕರಾದ ಭೀಮಣ್ಣ ನಾಯ್ಕ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ಹಾಗೂ ನಿವೃತ್ತ ನೌಕರರನ್ನು ಸಂಘದ ಪರವಾಗಿ ಅಭಿನಂದಿಸಲಾಯಿತು. ಎಸ್.ಎಸ್.ಎಲ್.ಸಿಯಲ್ಲಿ 95% ಕ್ಕಿಂತ ಅಧಿಕ ಹಾಗೂ ಪಿಯುಸಿಯಲ್ಲಿ 90% ಕ್ಕಿಂತ ಅಧಿಕ ಅಂಕ ಗಳಿಸಿದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ಮಾತನಾಡಿದರು. ಈ ವೇಳೆ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಪ್ರಶಾಂತ ಜಿ.ಎಸ್., ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ನಾಯ್ಕ, ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜಪ್ಪ ಉಪಸ್ಥಿತರಿದ್ದರು.
ಸರ್ಕಾರಿ ನೌಕರರ ಸಂಘದ ಖಜಾಂಚಿ ತೇಜಸ್ವಿ ನಾಯ್ಕ ಸ್ವಾಗತಿಸಿದರು. ಭೂಮಾಪನ ಇಲಾಖೆಯ ಉಷಾ ಪ್ರಶಾಂತ ನಾಯ್ಕ ನಿರೂಪಿಸಿದರು. ಪರಶುರಾಮ ನಾಯ್ಕ ಕಡಕೇರಿ ವಂದಿಸಿದರು.
########
ಮಳೆಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ವಿತರಣೆ
ಕಳೆದ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಸರ್ಕಾರದ ಪರಿಹಾರ ಹಾಗೂ ಮಂಜೂರಾತಿ ಪತ್ರವನ್ನು ಶಾಸಕ ಭೀಮಣ್ಣ ನಾಯ್ಕ ವಿತರಿಸಿದರು.
ಸಿದ್ದಾಪುರ ತಾಲೂಕಿನಲ್ಲಿ 1ಮನೆ ಸಂಪೂರ್ಣ ಹಾನಿಯಾಗಿದ್ದು, 3 ಮನೆಗಳಿಗೆ ತೀವ್ರ ಹಾನಿಯಾಗಿದೆ. 23 ಭಾಗಶಃ ಹಾನಿಯಾಗಿದ್ದು, ಪೂರ್ತಿ ಹಾನಿಯಾದ ಮನೆಗೆ 5 ಲಕ್ಷ ಪರಿಹಾರ, ಭಾಗಶಃ ಹಾನಿಯಾದ ಮನೆಗೆ 50 ಸಾವಿರ ಪರಿಹಾರವನ್ನು ಸರ್ಕಾರ ಘೋಷಿಸಿದೆ.
ಭೀಮಣ್ಣ ನಾಯ್ಕ ಮಾತನಾಡಿ, ಸಿದ್ದರಾಮಯ್ಯ ನೇತೃತ್ವ
ದ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ. ಈ ಮೊದಲು ಭಾಗಶಃ ಹಾನಿಯಾದ ಮನೆಗೆ 4 ಸಾವಿರರೂ. ನೀಡಲಾಗುತಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ 50 ಸಾವಿರ ರೂ.ಗೆ ಹೆಚ್ಚಿಸಿದ್ದಾರೆ. ಪೂರ್ಣ ಹಾನಿಯಾದ ಮನೆಗೆ 1.20 ಲಕ್ಷ ರೂ. ನೀಡಲಾಗುತಿತ್ತು. ಅದನ್ನು 5 ಲಕ್ಷರೂ.ಗೆ ಹೆಚ್ಚಿಸಲಾಗಿದೆ.ತಹಶೀಲ್ದಾರ ಖಾತೆಗೆ ಜಮಾ ಮಾಡಲಾಗಿದ್ದು, ಹಂತ ಹಂತವಾಗಿ ಫಲಾನುಭವಿ ಖಾತೆಗೆ ಜಮಾ ಆಗಲಿದೆ. ಸರ್ಕಾರ ಸಂತ್ರಸ್ಥರಿಗೆ ಧೈರ್ಯ ತುಂಬುವುದರ ಮೂಲಕ ನೊಂದವರ ಪರ ಇದೆ ಎನ್ನುವುದು ಸಾಬೀತಾಗಿದೆ. ಸರ್ಕಾರದ ಕಾರ್ಯಕ್ರಮಗಳು ಜನಪರವಾಗಿರಬೇಕು. ಫಲಾನುಭವಿಗಳು ಸರ್ಕಾರದ ಸಹಾಯಧನದ ಪ್ರಯೋಜನ ಪಡೆದುಕೊಳ್ಳಬೇಕು. ಹಿಂದಿನ ಸರಕಾರ ಐದು ಲಕ್ಷ ರೂ. ಕೊಡಲಾಗುವುದು ಎಂದು ಹೇಳಿ 1.20 ಲಕ್ಷ ರೂ.ಕೊಟ್ಟು ಕೈತೊಳೆದುಕೊಂಡಿತ್ತು. ಆದರೀಗ ಕಾಂಗ್ರೆಸ್ ಸರ್ಕಾರ ತಾಲೂಕಾಡಳಿತದ ಖಾತೆಗೆ ಜಮಾ ಮಾಡಿದೆ ಎಂದು ಹೇಳಿದರು.