ಸಿದ್ದಾಪುರ: ವಡ್ಡಿನಗದ್ದೆಯಲ್ಲಿ ದೇವದಾರು ಬನ ಪುನರ್ ಉತ್ಪತ್ತಿ ಹಾಗೂ ಮನೆಗೊಂದು ಹಣ್ಣಿನ ಗಿಡ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನ ವಡ್ಡಿನಗದ್ದೆಯಲ್ಲಿ ಸ್ಥಳೀಯ ಭಾರತಿ ಸಂಪದ,ಸಂಸ್ಕೃತಿ ಸಂಪದ,ಪ್ರಯೋಗ ಸ್ವಯಂ ಸೇವಾ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ದೇವದಾರು ಬನ ಪುನರ್ ಉತ್ಪತ್ತಿ ಹಾಗೂ ಮನೆಗೊಂದು ಹಣ್ಣಿನ ಗಿಡ ಕಾರ್ಯಕ್ರಮ ನಡೆಯಿತು.

ದೇವದಾರು ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಪ್ರವೀಣ ಕುಮಾರ ಬಸ್ರೂರು ಮಾತನಾಡಿ,ನಾವು ವಿಜ್ಞಾನವೇ ಸತ್ಯ ಎಂದು ನಂಬುತ್ತಿದ್ದು ಇದಕ್ಕೂ ಮಿರಿದ ಅನುಭವವಿದ್ದು ಅದು ಪ್ರಕೃತಿ ವಿಜ್ಞಾನವಾಗಿದೆ. ನಮ್ಮ ಹಿರಿಯರು ಈ ಪ್ರಕೃತಿ ವಿಜ್ಞಾನವನ್ನು ಅರಿತಿದ್ದರು. ಪರಿಸರವನ್ನು ಉಳಿಸುವುದು ಇಲಾಖೆಯಲ್ಲಿರುವ ನಮ್ಮ ಕರ್ತವ್ಯವಾಗಿದೆ ಆದರೆ ಗಣಪತಿ ಹೆಗಡೆಯಂತಹ ಪರಿಸರ ಪ್ರೇಮಿಗಳಿಗೆ ಇದು ಧರ್ಮವಾಗಿದೆ ಸಸ್ಯಗಳಲ್ಲೂ ಸಂಘರ್ಷ ಇರುತ್ತವೆ ಅವು ಮನುಷ್ಯರಂತೆ ವರ್ತಿಸುತ್ತವೆ ಕಾರಣ ಗಿಡಮರಗಳು ನಮ್ಮಂತೆ ಪಂಚತತ್ವವನ್ನು ಹೊಂದಿರುತ್ತದೆ ಪ್ರಕೃತಿ ಪೂಜೆ ನಮ್ಮ ಧರ್ಮವಾಗಿದೆ ಇದಕ್ಕೆ ಕಾರಣ ಪ್ರಕೃತಿಯ ಮೂಲಕ ನಾವು ನಮ್ಮ ಒಳಗಿನ ತತ್ವವನ್ನು ಅರಿಯುತ್ತೇವೆ ಎಂದು ಹೇಳಿದರು.

ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ಮಾತನಾಡಿ,ಮನುಷ್ಯ ಅಭಿವೃದ್ಧಿಯ ನೆಪ ಹೇಳಿ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ ಹಿಂದೆ ಪಶ್ಚಿಮ ಘಟ್ಟದಲ್ಲಿ ಹುಟ್ಟುವುದು ಪುಣ್ಯ ಮಾಡಿರುವವನು ಎನ್ನಲಾಗುತ್ತಿತ್ತು ಆದರೆ ಈಗ ಪರಿಸ್ಥಿತಿ ಹಾಗೇ ಇಲ್ಲ ಅನೇಕ ಸಸ್ಯ ಸಂಕುಲಗಳು ಕಣ್ಮರೆಯಾಗಿದೆ. ಇದನ್ನು ಉಳಿಸುವ ಕೆಲಸ ಮಾಡುವುದಕ್ಕೆ ವನಮಹೋತ್ಸವ ನಿತ್ಯೋತ್ಸವ ಆಗಬೇಕು ಎಂದು ಹೇಳಿದರು.

ಪರಿಸರ ತಜ್ಞ ಎಂ.ಬಿ.ನಾಯ್ಕ ಮಾತನಾಡಿ, ದೇವದಾರು ಮರ ಪ್ರಕೃತಿಯ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುವ ವೃಕ್ಷ,ಇದರ ನಾಶವನ್ನು ತಡೆಯಬೇಕಾಗಿದೆ ಇದರಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಯುಳ್ಳ ಡೈಸೀಜನ್ ಆಮ್ಲವಿದೆ. ಈಗಾಗಲೇ ಪಶ್ಚಿಮಘಟದಲ್ಲಿದ್ದ 6೦೦-7೦೦ ಔಷಧಿಯ ಸಸ್ಯ ನಾಶವಾಗಿದೆ ಸುಮಾರು 3೦೦ ವಿಧದ ಅಪ್ಪೆಮಾವಿನ ಮಿಡಿಯ ತಳಿಗಳು ನಶಿಸುತ್ತಿವೆ ಇದನ್ನು ಉಳಿಸುವ ಕೆಲಸವಾಗಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಭಾರತಿ ಸಂಪದ ಸಂಸ್ಥೆಯ ಮುಖ್ಯಸ್ಥ ಗಣಪತಿ ಹೆಗಡೆ ವಡ್ಡಿನಗದ್ದೆ, ಹಲವು ಸಂಘಟನೆಗಳ ಸಹಯೋಗದಿಂದ ಪ್ರತಿವರ್ಷ ನಾಶದ ಅಂಚಿನಲ್ಲಿರುವ ಸಸ್ಯ ಸಂಕುಲವನ್ನು ರಕ್ಷಿಸುವ ಕೆಲಸವನ್ನು ಮಾಡಲಾಗುತ್ತಿದೆ ಪರಿಸರ ದಿನಾಚರಣೆಯ ಅಂಗವಾಗಿ ಅರಣ್ಯ ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ ಈ ವರ್ಷ ಪ್ರಕೃತಿಯ ಅಪರೂಪದ ವೃಕ್ಷಗಳಲ್ಲಿ ಒಂದಾಗಿರುವ ದೇವದಾರು ವೃಕ್ಷ ಅಳಿವಿನ ಅಂಚಿನಲ್ಲಿದೆ ಇದನ್ನು ಉಳಿಸುವ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಅದೇ ರೀತಿ ಹಿಂದೆ ಈ ಭಾಗದಲ್ಲಿ ಇದ್ದ ಬರಕಬಾಳೆ ಎನ್ನುವ ಗಿಡವನ್ನು ಪುನರುತ್ಥಾನ ಮಾಡಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಲಗೇರಿ ಸಸ್ಯಪಾಲನಾ ವಾಚಮನ್ ಪರಮೇಶ್ವರ ಗೊಂಡರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಬಸವರಾಜ ಬುಚೊಳ್ಳಿ,ಆಡಿಆರ್‌ಎಪ್‌ಓ ಮಂಜುನಾಥ ಚನ್ನಣ್ಣನವರ್ ಪಿ.ಬಿ.ಹೊಸುರು, ಫಾರೆಸ್ಟ್ ಮಂಜುನಾಥ,ಮಧುಮತಿ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment