ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಹೊಸೂರು ಶಂಕರಮಠದಲ್ಲಿ ಸ್ಥಳೀಯ ಸಂಸ್ಕೃತಿ ಸಂಪದ ಸಂಸ್ಥೆ, ಸಾಕೇತ ಪ್ರತಿಷ್ಠಾನ, ಸುಷಿರ ಸಂಗೀತ ಪರಿವಾರದ ಸಹಕಾರದೊಂದಿಗೆ ಖ್ಯಾತ ಆಧ್ಯಾತ್ಮಿಕ ಚಿಂತಕಿ ಡಾ.ವೀಣಾ ಬನ್ನಂಜೆಯವರಿಂದ ೭ ದಿನಗಳ ಶ್ರೀಮದ್ಭಾಗವತ ಸಪ್ತಾಹ ಕಾರ್ಯಕ್ರಮ ಪ್ರಾರಂಭವಾಯಿತು.
ಡಾ.ವೀಣಾ ಬನ್ನಂಜೆ ಉಪನ್ಯಾಸ ನೀಡಿ,ಸನಾತನ ಧರ್ಮದ ಅವಿಭಾಜ್ಯ ಅಂಗ ಶ್ರೀಮದ್ಭಾಗವತವಾಗಿದೆ ಸನಾತನ ಅಂದರೆ ಅಳಿಯದೇ ಉಳಿಯುವದು, ಸಕಲ ಸಂಗತಿಗಳಿಂದ ಪರಮ ಸತ್ಯವನ್ನು ಕಂಡುಕೊಂಡದ್ದು ಎಂದಾಗುತ್ತದೆ
ಜ್ಞಾನ ಎನ್ನುವದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತಲುಪಬೇಕು. ಇಲ್ಲವಾದರೆ ಅದು ಜ್ಞಾನ ಅಲ್ಲ. ಮತ್ತು ಕಾಲದಿಂದ ಕಾಲಕ್ಕೆ ಅದು ಸರಳವಾಗಬೇಕು ಎನ್ನುವದನ್ನು ನನ್ನ ಗುರುಗಳು ತಿಳಿಸಿದ್ದರು. ಈಗಿನ ಸಂದರ್ಭದಲ್ಲಿ ಜಾತಿ,ಮತ,ಅಂತಸ್ತು,ಲಿಂಗ ಹೀಗೆ ಎಲ್ಲರೂ ಅರಿತುಕೊಳ್ಳಬೇಕಾದದ್ದು ಶ್ರೀಮದ್ಭಾಗವತವನ್ನು. ಇದು ಕಥೆಗಳಿಗಿಂತ ಮುಖ್ಯವಾಗಿ ಮೌಲ್ಯವನ್ನು ತೋರಿಸುತ್ತದೆ. ವಿಸ್ಮೃತಿಗೆ ಸರಿದಿರುವ ಭಗವಂತನನ್ನು ತಲುಪುವ ನಮ್ಮ ಒಳಗಿನ ಜ್ಞಾನ,ವೈರಾಗ್ಯ ಭಕ್ತಿಗಳನ್ನು ಎಚ್ಚರಿಸುವ ಶಕ್ತಿ ಭಾಗವತದಲ್ಲಿದೆ ಎಂದು ಹಲವು ನಿದರ್ಶನಗಳ ಮೂಲಕ ಅವರು ವಿವರಿಸಿದರು.
ಭಾರತದ ಪ್ರಾಚೀನ ಪರಂಪರೆಯಿಂದ ಈವರೆಗೆ ಅದೆಷ್ಟೋ ವಿಶಿಷ್ಠವಾದ ಅನಾವರಣಗಳಾಗಿವೆ.
ರಾಮಾಯಣ,ಮಹಾಭಾರತ,ಪುರಾಣ, ಶ್ರೀಮದ್ಭಾಗವತ ಸೇರಿದಂತೆ ಅಪೂರ್ವ ಗ್ರಂಥಗಳಿವೆ. ಸನಾತನ ಪರಂಪರೆಯ ಹಿರಿಮೆಯನ್ನು ಇವು ಹೆಚ್ಚಿಸಿವೆ. ಸನಾತನದ ಬಗ್ಗೆ ಅವಹೇಳನ ಸನ್ನಿವೇಶದಲ್ಲಿ ತಾವೆಲ್ಲ ಭಾಗವತವನ್ನು ಅರಿಯಲು ಬಂದಿರುವದು ತುಂಬ ಮಹತ್ವದ ಸಂಗತಿ ಎಂದು ಬನ್ನಂಜೆ ಹೇಳಿದರು.
ಸಾಕೇತ ಪ್ರತಿಷ್ಠಾನದ ವಿ|ಶೇಷಗಿರಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಪತಿ ಹೆಗಡೆ ಗುಂಜಗೋಡ ಸ್ವಾಗತಿಸಿದರು. ಸುಧೀರ ಬೆಂಗ್ರೆ ಶ್ರೀ ಕೃಷ್ಣನ ಕುರಿತಾದ ಹಾಡು ಹಾಡಿದರು.