ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಜನರಿಂದ ಆಯ್ಕೆಗೊಂಡ ಪ್ರತಿನಿಧಿಗಳು ತಾವೇನು ಮಾಡಿದ್ದೇವೆ? ಯಾವ ಜನಪರ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಜನರಿಗೆ ಉತ್ತರ ಕೊಡಬೇಕು. ಆ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ತಮ್ಮ ಕೇಂದ್ರ ಸರಕಾರ ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಯಾವೆಲ್ಲ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎನ್ನುವದನ್ನ ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮದ ಮೂಲಕ ದೇಶದ ಪ್ರತಿ ಗ್ರಾಮ ಪಂಚಾಯತಗಳಿಗೂ ತಲುಪಿಸುತ್ತಿದೆ ಸ್ವಾತಂತ್ರ್ಯ ಬಂದು ೭೦ ವರ್ಷಗಳಲ್ಲಿ ಆಗಿರದ ಅಭಿವೃದ್ಧಿಯನ್ನು ಮೋದಿ ನೇತೃತ್ವದ ಸರಕಾರ ಒಂಬತ್ತೂವರೆ ವರ್ಷಗಳಲ್ಲಿ ದುಪ್ಪಟ್ಟು ಮಾಡಿ ತೋರಿಸಿದೆ. ಉಜ್ವಲ ಗ್ಯಾಸ್,ಆಯುಷ್ಮಾನ್ ಕಾರ್ಡ,ಪ್ರಧಾನಿ ಆವಾಸ್ ಯೋಜನೆ,ಜಲಮಿಷನ್ ಯೋಜನೆ,ದೀನ್ ದಯಾಳ್ ವಿದ್ಯುದೀಕರಣ ಯೋಜನೆ, ದೂರಸಂಪರ್ಕ,ಜನೌಷಧಿ ಮುಂತಾದ ಜನಸಾಮಾನ್ಯರಿಗೆ ಅತ್ಯಗತ್ಯವಾದ ಪ್ರಯೋಜನಗಳ ಜೊತೆಗೆ ರೇಲ್ವೇ, ವಿಮಾನ ನಿಲ್ದಾಣ, ರಾಷ್ಟ್ರೀಯಹೆದ್ದಾರಿ, ಬಂದರುಗಳ ಅಭಿವೃದ್ಧಿ ಮುಂತಾಗಿ ದೇಶದ ಅಭಿವೃದ್ಧಿಗೆ ಅಗತ್ಯವಾದ ಕಾರ್ಯಗಳನ್ನು ಮಾಡಿತೋರಿಸಿದೆ. ಮಹಳೆಯರಿಗೆ ಶೇ.೩೩ ಮೀಸಲಾತಿ, ಶಿಕ್ಷಣ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬುವ ರಾಷ್ಟೀಯ ಶಿಕ್ಷಣ ನೀತಿ ಕೇಂದ್ರದ ಬಹುದೊಡ್ಡ ಕೊಡುಗೆ. ಪ್ರತಿ ಮನೆಗೆ,ಪ್ರತಿ ವ್ಯಕ್ತಿಗೆ ಕೇಂದ್ರ ಸರಕಾರದ ಇಂಥ ಹಲವು ಯೋಜನೆಗಳು ತಲುಪುವಂತೆ ಆಗಿದೆ.
ಮುಂದುವರಿದ ದೇಶಗಳೇ ಕಂಗಾಲಾಗಿದ್ದಾಗ ಕೊರೊನಾ ಲಸಿಕೆ ಸಂಶೋಧಿಸಿದ್ದು, ಜಿ೨೦ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ವಿಶ್ವದಲ್ಲೇ ಭಾರತ ನಾಯಕ ಎನ್ನಿಸಿಕೊಂಡಿದ್ದು ಮೋದಿಯವರ ಶ್ರಮದಿಂದ. ನೆರೆಹೊರೆಯ ಶತ್ರು ದೇಶಗಳಿಂದ, ಉಗ್ರಗಾಮಿಗಳಿಂದ ದೇಶವನ್ನು ಸುರಕ್ಷಿತಾಗಿರಲು ಅವರ ಕೊಡುಗೆ ಹೆಚ್ಚಿನದು. ಈಗಲೂ, ಭವಿಷ್ಯದಲ್ಲೂ ಜಗತ್ತಿಗೆ ನಾಯಕತ್ವ ಕೊಡಲು ನರೇಂದ್ರ ಮೋದಿ ಅಗತ್ಯ. ಈ ಕಾರ್ಯಕ್ರಮದಲ್ಲಿ ಜನರು ಪಾಲ್ಗೊಂಡು ತಮಗೆ ದೊರೆಯದ ಸೌಲಭ್ಯಗಳ ಕುರಿತು ಮಾಹಿತಿ ಪಡೆದು,ಅದನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದ್ದು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ನಡೆಯುತ್ತಿದ್ದು ಈವರೆಗೆ ನಡೆದ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳ ನಿರಾಸಕ್ತಿ ಕಂಡಿದೆ. ರಾಜ್ಯ ಸರಕಾರವೂ ಈಬಗ್ಗೆ ಇಶ್ಚಾಶಕ್ತಿ ತೋರಿಸುತ್ತಿಲ್ಲ.ಫಲಾನುಭವಿಗಳು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವದು ಮುಖ್ಯ. ಆದರೆ ಆ ನಿಟ್ಟಿನಲ್ಲಿ ಅಧಿಕಾರಿಗಳು ಸ್ಪಂದಿಸಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ವಿಶ್ವೇಶ್ವರ ಹೆಗಡೆ ಹೇಳಿದರು.