ಆದ್ಯೋತ್ ಸುದ್ದಿನಿಧಿ:ಉತ್ತರಕನ್ನಡ ಲೋಕಸಭಾಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ
ಕಳೆದ ಮೂರು- ನಾಲ್ಕು ವರ್ಷದಿಂದ ಸಕ್ರೀಯ ರಾಜಕಾರಣದಿಂದ ದೂರವಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಅನಂತಕುಮಾರರ ತಟಸ್ಥ ನಿಲುವಿನಿಂದಾಗಿ ಜಿಲ್ಲೆಯ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹೀನಾಯವಾಗಿ ಸೋತಿತ್ತು.ವಲಸೆ ಹಾಗೂ ಮೂಲ ಕಾರ್ಯಕರ್ತರ ಒಳಜಗಳಗಳು ಮಿತಿಮೀರಿ ಕಾರ್ಯಕರ್ತರು ಬೇರೆ ಪಕ್ಷದ ಕಡೆಗೆ ಮುಖಮಾಡಿದ್ದರು.
ಇಂತಹ ಸಮಯದಲ್ಲಿ ಅನಂತಕುಮಾರ ಹೆಗಡೆ ಪಕ್ಷದಲ್ಲಿ ಸಕ್ರೀಯವಾಗಬೇಕು ಎಂದು ಮೂಲ ಕಾರ್ಯಕರ್ತರು ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಅನಂತಕುಮಾರ ಹೆಗಡೆ ನಿರಾಸಕ್ತಿಯನ್ನೆ ತೋರಿಸಿದ್ದರು. ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುತ್ತಲೆ ಬಂದಿದ್ದರು.
ಜಿಲ್ಲೆಯ ಬೇರೆ ಬೇರೆ ತಾಲೂಕಿನ ಕಾರ್ಯಕರ್ತರು ಹಟಕ್ಕೆ ಬಿದ್ದು
ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲೇಬೇಕು ಎಂದು ಒತ್ತಾಯಿಸಿ ರವಿವಾರ ಶಿರಸಿಯ ಸಂಸದರ ಮನೆಯ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಮಾತನಾಡಿ,ನೀವು ಇನ್ನೊಮ್ಮೆ ಚುನಾವಣೆಗೆ ಸ್ಪರ್ಧಿಸಬೇಕು. ಹಿಂದೂತ್ವಕ್ಕಾಗಿ ನೀವು ಇದ್ದೀರಿ. ಹಿಂದೂಳಿದ ವರ್ಗದವರು ಬೇರೆ- ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ನಿಮ್ಮ ನಿರ್ಣಯದಿಂದ ಅವರು ಪಕ್ಷದಲ್ಲಿ ಉಳಿಯುತ್ತಾರೆ. ಸ್ವಾರ್ಥಕ್ಕಾಗಿ ರಾಜಕಾರಣ ಮಾಡುವವರನ್ನು ನೋಡಿದ್ದೆವೆ. ನೀವು ನಮ್ಮ ನಾಯಕರು . ನಿಮ್ಮ ಜೊತೆ ಸಂಘಟನೆಯೊಂದಿಗೆ ಪಕ್ಷ, ಹಾಗೂ ಅಭಿಮಾನಿಗಳು ಇದ್ದಾರೆ. ತಮ್ಮ ತೀರ್ಮಾನ ತಿಳಿಸಬೇಕು. ಎಂದು ಆಗ್ರಹಿಸಿದರು.
ಹೊನ್ನಾವರದ ವೆಂಕಟರಮಣ ಹೆಗಡೆ(ಪುಟ್ಟ ಹೆಗಡೆ) ಮಾತನಾಡಿ, ತಾವು ಸಕ್ರೀಯ ರಾಜಕಾರಣಕ್ಕೆ ಮರಳಬೇಕು. ಪಕ್ಷವು ನಿಮಗೆ ಉತ್ತಮ ಸ್ಥಾನಮಾನ ಒದಗಿಸಬೇಕೆಂದು ಪಕ್ಷಕ್ಕೆ ನಮ್ಮ ಆಗ್ರಹವಿರುತ್ತದೆ. ಈ ಸಲ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಮುಂಬರುವ ದಿನದಲ್ಲಿ ಬೇರೆ ನಾಯಕರನ್ನು ಬೆಳೆಸಿ ಎಂದರು. ಹಿಂದುತ್ವ ಉಳಿಸಲು ಚುನಾವಣೆಗೆ ಸ್ಪರ್ಧಿಸಬೇಕು ಎಂದರು.
ಸಂಸದ ಅನಂತಕುಮಾರ ಹೆಗಡೆ ಮಾತನಾಡಿ,15 ವರ್ಷದಿಂದ ರಾಜಕಾರಣದಿಂದ ದೂರವಾಗುವ ಬಗ್ಗೆ ಹೇಳುತ್ತಾ ಬಂದಿದ್ದೆ. ನನ್ನ ನಿರ್ಣಯ ಭಾವಾವೇಶಕ್ಕೆ ಒಳಗಾಗಿ ಇರಲಿಲ್ಲ. ನನ್ನ ವೈಯಕ್ತಿಕ ಕಾರಣದಿಂದ ಹೇಳಿದ್ದೆ. ಬೇರೆ ನಾಯಕರಿಗೂ ಬೆಳೆಯಲು ಆಗುವುದಿಲ್ಲ. ಸಂಘಟನೆ ಕಾರ್ಯಕರ್ತರು ಚುನಾವಣೆಗೆ ಸ್ಪರ್ಧಿಸಲು ಯಾರಿಗೆ ಸೂಚಿಸತ್ತೊ ಅವರಿಗೆ ಬೆಂಬಲ ನೀಡುತ್ತೆನೆ. ನನಗೆ ತೀರ್ಮಾನ ಕೈಗೊಳ್ಳಲು ಕಾಲಾವಕಾಶ ಬೇಕು.ಯಾರೋ ಹೇಳಿದ್ದಕ್ಕೆ, ಮುನಿಸಿಕೊಂಡು ಹೋದ ತೀರ್ಮಾನವಾಗಿಲ್ಲ. ತುಂಬಾ ಬಲವಾಗಿ ವೈಯಕ್ತಿಕವಾಗಿ ತೆಗೆದುಕೊಂಡ ತೀರ್ಮಾನವಾಗಿದ್ದರಿಂದ ಈಗ ನಿರ್ಣಯ ಕೈಗೊಳ್ಳಲು ಸ್ವಲ್ಪ ಸಮಯ ಬೇಕು. ದೇಶ ಕಟ್ಟುವ ವಿಷಯದಲ್ಲಿ ರಾಜಕಾರಣ ಮಾಡಲಿಲ್ಲ. ರಾಷ್ಟ್ರೀಯ ಭದ್ರತೆ ವಿಷಯದಿಂದ ಜಾರಿಕೊಂಡಿಲ್ಲ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಕುಮಾರ ಹೆಗಡೆ,ವೈಯಕ್ತಿಕ ಕಾರಣದಿಂದ ಹಾಗೂ ಆರೋಗ್ಯ ಸಮಸ್ಯೆಯಿಂದ ಚುನಾವಣೆ ಹಾಗೂ ಪಕ್ಷ ರಾಜಕಾರಣದಿಂದ ದೂರ ಉಳಿದಿದ್ದೆ.ಆದರೆ ಇತ್ತೀಚಿನ ದಿನಗಳಲ್ಲಿ ಕಾರ್ಯಕರ್ತರ ಬಲವಾದ ಬೇಡಿಕೆಗಳು ಬರುತ್ತಿದೆ ಏನು ಮಾಡಬೇಕೆನ್ನುವುದು ನನಗೂ ಗೊತ್ತಿಲ್ಲ. ಕಾರ್ಯಕರ್ತರ ಒತ್ತಡವಿದೆ ಬದಲಾದ ಸ್ಥಿತಿಯಲ್ಲಿ ನೋಡಬೇಕು.ವಿಧಾನಸಭಾ ಚುನಾವಣೆಯಲ್ಲಿ ಸಣ್ಣಪುಟ್ಟ ಕಾರಣಗಳಿಂದ ಹಿನ್ನಡೆಯಾಗಿದೆ ಪಕ್ಷ ಗಟ್ಟಿಯಾಗಿದೆ.ಸಿದ್ದರಾಮಯ್ಯನವರ ದುರಹಂಕಾರಿ ಸರ್ಕಾರ ಹೆಚ್ಚು ದಿವಸ ಉಳಿಯುವುದಿಲ್ಲ ಹಿಂದೂ ವಿರೋಧಿ ಸರ್ಕಾರ ಕರ್ನಾಟಕದಲ್ಲಿರಲು ಸಾಧ್ಯವಿಲ್ಲ ಅವರಿಗೆ ಅದನ್ನು ಬಿಟ್ಟು ಬೇರೆ ದಾರಿ ಇಲ್ಲ .ಅವರು ಬದುಕಬೇಕೆಂದರೆ ಮುಸಲ್ಮಾನರ ಹಿಜಾಬ ಹಿಡಿದುಕೊಂಡು ಓಡಬೇಕು. ಹಿಜಾಬ್ ಹಿಂದೆ ತಿರುಗುವ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ ಎಂದರು.
ಹಿಜಾಬ್ ಬಗ್ಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನವರ ಹೇಳಿಕೆ ಆತಂಕಕಾರಿ ಬೆಳವಣಿಗೆಗೆ ಕಾರಣವಾಗುತ್ತದೆ.ಸರಕಾರ ಒಂದು ಚೌಕಟ್ಟಿನಲ್ಲಿ ಆಡಳಿತ ನಡೆಸಬೇಕು.ಅವರು ಹಿಜಾಬ್ ಧರಿಸಿಬಂದರೆ ನಮ್ಮವರು ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ ಇದು ಸಂಘರ್ಷಕ್ಕೆ ಕಾರಣವಾಗುತ್ತದೆ.ಅಲ್ಪಸಂಖ್ಯಾತರ ಓಟು ಇಲ್ಲದೆ ಕಾಂಗ್ರೆಸನವರಿಗೆ ರಾಜಕಾರಣ ಮಾಡಲು ಸಾಧ್ಯವಿಲ್ಲ.
ಟಿಪ್ಪು ಈ ರಾಜ್ಯದ ಜನತೆ ತೆಗೆದು ಇಟ್ಟಿರುವಂತಹ ವ್ಯಕ್ತಿಯಾಗಿದ್ದಾನೆ .ಟಿಪ್ಪು ಈ ರಾಜ್ಯವನ್ನು ಸಂಪೂರ್ಣವಾಗಿ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ತೊಂದರೆಗೀಡು ಮಾಡಿದಂತಹ ವ್ಯಕ್ತಿಯಾಗಿದ್ದಾನೆ. ಅವನದೇ ಹೆಸರು ತೆಗೆದುಕೊಂಡು ಕಾಂಗ್ರೆಸ್ ಇನ್ನೂ ರಾಜಕಾರಣ ಮಾಡುತ್ತಿದೆ ಅಂದರೆ ಬಹುತೇಕ ಕಾಂಗ್ರೆಸ್ ಗೆ ಮುಂದಿನ ದಿನದಲ್ಲಿ ಜನ ಉತ್ತರ ಕೊಡುತ್ತಾರೆ ಈ ಬಗ್ಗೆ ಯೋಚನೆ ಮಾಡಬೇಕು. ಎಂದರು.
ಆರ್ಥಿಕ ಸುಭದ್ರತೆಯ ಕಲ್ಪನೆ ಇಲ್ಲದಂತಹ ಕಾಂಗ್ರೆಸ್ ಮಾಡಿದ ಉಪದ್ರವ ಗ್ಯಾರಂಟಿ ಯೋಜನೆಯಾಗಿದೆ ಜನರಿಗೆ ಫ್ರೀ ಬೇಕಾಗಿಲ್ಲ, ಆದರೂ ಅವರ ಮೇಲೆ ಹೇರಿದ್ದಾರೆ. ಇದರ ಪರಿಣಾಮ ಅಭಿವೃದ್ಧಿಗೆ ಹಣವಿಲ್ಲ. ಸರ್ಕಾರದ ಕೈಗೊಂಡ ಅನೇಕ ಅಭಿವೃದ್ಧಿ ಯೋಜನೆಗಳು ಕುಂಠಿತವಾಗುತ್ತಿದೆ.ಇದೊಂದು ಹುಚ್ಚುಮಹಮ್ಮದ ಸರಕಾರವಾಗಿದೆ ಎಂದು ಹೇಳಿದರು.
ರಾಮಮಂದಿರ ನಿರ್ಮಾಣ ಹಿಂದೂ ಸಮಾಜದ ವಿಜಯವಾಗಿದೆ ರಾಮ ಜನ್ಮಭೂಮಿ ದೇವಸ್ಥಾನ ತಲೆಯೆತ್ತಿ ನಿಂತಿದೆ ಸಂಪೂರ್ಣ ಸಹಕಾರ ನೀಡಿದ, ಹಾಗೂ ಕಾನೂನು ತಿದ್ದುಪಡಿ ಮಾಡುವ ಮೂಲಕ ಭವ್ಯ ಮಂದಿರ ನಿರ್ಮಾಣಕ್ಕೆ ಕಾರಣಕರ್ತರಾದ ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಬೇಕು ಇದು ಹಿಂದೂ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆಯ ಗುರುತಾಗಿದೆ ಎಂದರು.