ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ರಾಜಿನಾಮೆಗೆ ಶಾಂತಾರಾಮ ಸಿದ್ದಿ ಆಗ್ರಹ

ಆದ್ಯೋತ್ ಸುದ್ದಿನಿಧಿ:
ಚುನಾವಣೆಯ ಸಂದರ್ಭದಲ್ಲಿ ತಟಸ್ಥರಾಗಿದ್ದು,ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂದು ಆರೋಪಿಸಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಹಾಗೂ ಬಿಜೆಪಿ ಪ್ರಮುಖರು ಆಗ್ರಹಿಸಿದ್ದಾರೆ

ಈ ಕುರಿತು ಯಲ್ಲಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಶಾಂತಾರಾಮ ಸಿದ್ದಿ,ಶಾಸಕ ಶಿವರಾಮ ಹೆಬ್ಬಾರ ತಲಾಖ್ ಸಂಸ್ಕೃತಿಯನ್ನು ಅನುಸರಿಸುತ್ತಿದ್ದು, ಯಾರನ್ನು ಅಪ್ಪಿಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬುದನ್ನು ತಿಳಿಯದಾಗಿದ್ದಾರೆ.ಅತ್ತ ಕಾಂಗ್ರೆಸ್ ಪಕ್ಷಕ್ಕೆ ಹೋಗದೆ, ಇತ್ತ ಬಿಜೆಪಿಯಲ್ಲೂ ಇರದೇ, ಎರಡೂ ಪಕ್ಷಗಳಿಗೂ ಹಾಗೂ ಕಾರ್ಯಕರ್ತರಿಗೂ ಗೊಂದಲ ಮೂಡಿಸಿದ್ದು, ತಕ್ಷಣ ರಾಜೀನಾಮೆ ನೀಡಬೇಕು.ಅವರು ಸ್ಪಷ್ಟ ನಿಲುವನ್ನು ಪ್ರದರ್ಶಿಸಬೇಕು ಮೋಸದ ರಾಜಕೀಯ ಮಾಡದೆ ಮನೆಯಲ್ಲಿರಬೇಕು ಎಂದು ಆಗ್ರಹಿಸಿದರು.

ಯಲ್ಲಾಪುರ ಮುಂಡಗೋಡ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಇಲ್ಲಿ ವ್ಯಕ್ತಿ ಆಧಾರಿತ ಚುನಾವಣೆ ಮಾಡುವ ಪ್ರಮೇಯ ಬರುವುದಿಲ್ಲ. ಸಂಘಟನೆಯನ್ನು ಬೆಳೆಸುವ ಉದ್ದೇಶದಿಂದ ಇರುವ ಕಾರ್ಯಕರ್ತರು ಪಕ್ಷದಲ್ಲಿಯೇ ಇದ್ದಾರೆ. ಅಧಿಕಾರವನ್ನು ಅರಸಿ ಬಂದವರೆಲ್ಲ ಪಕ್ಷದಿಂದ ಹೊರ ನಡೆದಿದ್ದಾರೆ. ಇನ್ನು ಮುಂದೆ ಎಲ್ಲಾ ಚುನಾವಣೆಯಲ್ಲೂ ಕಾರ್ಯಕರ್ತರು ಇದೇ ರೀತಿ ಕಾರ್ಯ ನಿರ್ವಹಿಸಿ, ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ,
ದೇಶವನ್ನು ಕಟ್ಟಲು ಬಿಜೆಪಿಯ ಕೊಡುಗೆ ಅಪಾರ. ಇಂತಹ ನಾಯಕತ್ವಕ್ಕೆ ಹಾಗೂ ಪಕ್ಷಕ್ಕೆ ಶಿವರಾಮ ಹೆಬ್ಬಾರ ಮೋಸ ಮಾಡಿದ್ದಾರೆ. ಪಕ್ಷ ಅವರನ್ನು ಅತ್ಯಂತ ಗೌರವದಿಂದ ನೋಡಿಕೊಂಡಿದೆ.ಆದರೂ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬಂತೆ, ಬಿಜೆಪಿ ಪಕ್ಷದ ಪ್ರತಿನಿಧಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಮಾಡಿರುವುದನ್ನು ಯಲ್ಲಾಪುರ ಮಂಡಲ ಖಂಡಿಸುತ್ತದೆ.ಅವರ ಹೊರತಾಗಿಯೂ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತದ ಅಂತರದಿಂದ ನಮ್ಮ ಅಭ್ಯರ್ಥಿ ಕಾಗೇರಿ ಅವರು ಜಯ ಸಾಧಿಸಿದ್ದಾರೆ. ಬಿಜೆಪಿ ಹಿಂದಿನ ಎಲ್ಲಾ ಚುನಾವಣೆಯನ್ನು ಕಾರ್ಯಕರ್ತರ ಆಧಾರದ ಮೇಲೆ ಗೆಲ್ಲುತ್ತಾ ಬಂದಿದ್ದು, ಮುಂದೆಯೂ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ಹೀಗಾಗಿ ಶಾಸಕರು ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವು ಪ್ರತಿಭಟನೆ ನಡೆಸಲಿದ್ದೇವೆ ಎಂದರು.

About the author

Adyot

Leave a Comment