ಆದ್ಯೋತ್ ಸುದ್ದಿನಿಧಿ:
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿ ಬಳಿ ಗುಡ್ಡಕುಸಿದಿದ್ದ ಸ್ಥಳಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ,ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಘಟನೆಗಳು ಏನೇ ಇರಲಿ, ಇಂತಹ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಖುದ್ದು ಪರಿಶೀಲಿಸಬೇಕು. ಬೆಂಗಳೂರಿನಲ್ಲಿ ಕೂತು ಆದೇಶ ನೀಡುವುದಲ್ಲ.
ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಎಂದು ರಾಜ್ಯ ಸರ್ಕಾರ ರಾಜಕಾರಣ ಮಾಡಬಾರದು. ಹಾನಿಯಾದ ಕುಟುಂಬದ ಜೊತೆ ಸರ್ಕಾರ ಇರಬೇಕು ಎಂದು ಹೇಳಿದರು.
ಘಟನೆ ಆಗಿದ್ದರ ಬಗ್ಗೆ ನನಗೆ ಬೇಸರವಿದೆ.ನಾನು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿದ್ದರೂ ನನ್ನ ಮನಸ್ಸು ಇಲ್ಲಿಯೇ ಇತ್ತು.ನನಗೆ ಆಶ್ಚರ್ಯ ತಂದಿರುವುದು ರಾಜ್ಯದಲ್ಲಿ ಇವತ್ತು ಹಲವಾರು ಪ್ರದೇಶಗಳಲ್ಲಿ ನೀರಿನಲ್ಲಿ ಜನ ಮುಳುಗಡೆಯಾಗಿದ್ದಾರೆ ಮನೆಗಳು ಬಿದ್ದು ಹೋಗಿದ್ದಾವೆ ಆದರೆ
ನಮ್ಮ ಕಂದಾಯ ಸಚಿವರು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡುತ್ತಾರೆ.ಅವೈಜ್ಞಾನಿಕ ಕಾಮಗಾರಿಯಿಂದ ಘಟನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರೀಯಾ ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಒಂದೇ ಕುಟುಂಬದ ಐವರು ಮೃತಪಟ್ಟಿರುವುದು ದುರಂತ.
2018 ರಲ್ಲಿ ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಭೂ ಕುಸಿತ ಆಗಿತ್ತು. ಆಗ ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ಹಣ ಕೊಟ್ಟಿದ್ದೆವು ಎಂದು ತಮ್ಮ ಅವಧಿಯಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡರು.