ಆದ್ಯೋತ್ ಸುದ್ದಿನಿಧಿ
ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಬಿಜೆಪಿ ಸಿದ್ದಾಪುರ ಮಂಡಲವತಿಯಿಂದ ಬೈಕ್ ರ‍್ಯಾಲಿ ನಡೆಯಿತು. ನಗರದ ಗಂಗಾಂಬಿಕಾ ದೇವಸ್ಥಾನ ಬಳಿ ಬೈಕ್ ಜಾಥಗೆ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಹರ್ ಘರ್ ತಿರಂಗಾ ಅಭಿಯಾನ ಜಿಲ್ಲಾ ಸಂಚಾಲಕ ಗುರುಪ್ರಸಾದ ಹೆಗಡೆ ಹರ್ತೆ ಬೈಲ್ ತಿರಂಗಾ ಹಿಡಿದು ಬೈಕ್ ಜಾಥಾಗೆ ಚಾಲನೆ ನೀಡಿದರು.
ಸಿದ್ದಾಪುರದ ರಾಜಮಾರ್ಗ ಹಾಗೂ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾದಲ್ಲಿ ಕಾರ್ಯಕರ್ತರು ತೆರಳಿದರು, ಭಾರತ ಮಾತೆಗೆ ಜಯಘೋಷ ಹಾಕುತ್ತಾ ಸಾಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರುಪ್ರಸಾದ ಹೆಗಡೆ ಹಾರ್ತೆಬೈಲ್ “ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜವನ್ನು ಹಾರಿಸುವ ‘ಹರ್ ಘರ್ ತಿರಂಗಾ ಅಭಿಯಾನ’ ಆಗಸ್ಟ್ 13 ರಿಂದ 15ರ ವರೆಗೆ ನಡೆಯಲಿದೆ. ಎಲ್ಲರಲ್ಲೂ ರಾಷ್ಟ್ರೀಯತೆಯ ಜಾಗೃತಿ ಮೂಡಬೇಕು ಎಂಬ ಉದ್ದೇಶದಿಂದ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಧ್ವಜ ಸಂಹಿತೆಗೆ ತಿದ್ದುಪಡಿ ತಂದು ದೇಶದ ಪ್ರಜೆಗಳೆಲ್ಲರಿಗೂ ಧ್ವಜ ಹಾರಿಸುವ ಅವಕಾಶ ಮಾಡಿಕೊಟ್ಟಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಿಂದ ನಾವೆಲ್ಲರೂ ನಮ್ಮ ಮನೆಗಳಲ್ಲಿ ಆಗಸ್ಟ್ 13ರಿಂದಲೇ ಧ್ವಜ ಹಾರಿಸುತ್ತಾ ಇದ್ದೇವೆ, ಇದರಿಂದ ಸಾಮಾಜಿಕ ಜಾಗೃತಿಯೂ ಮೂಡಲಿದೆ, ಈ ಅಮೃತ ಕಾಲದಲ್ಲಿ ಭಾರತವನ್ನು ವಿಶ್ವಗುರುವಾಗಿಸುವ ಯೋಧರಾಗಿ ನಾವೆಲ್ಲರೂ ಕೆಲಸ ಮಾಡೋಣ” ಎಂದರು.
ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರೂ ತಮ್ಮ ತಮ್ಮ ಮನೆಗಳ ಮೇಲೆ ಧ್ವಜ ಹಾರಿಸಿ ಎಂದು ಮನವಿ ಮಾಡಿದರು. ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಜನರಲ್ಲಿ ಜಾಗೃತಿ ಮೂಡಿಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕರು ಅಭಿಯಾನದ ಸಹ ಸಂಚಾಲಕರು ರವಿಚಂದ್ರ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಎಸ್ ಕೆ ಮೇಸ್ತ, ತೋಟಪ್ಪ ನಾಯ್ಕ, ಅಭಿಯಾನದ ಪ್ರಮುಖರಾದ ಸಂಜೀವ ನಾಯ್ಕ, ದಯಾನಂದ ನಾಯ್ಕ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಂದನ ಬೋರ್ಕರ್, ಪ್ರಮುಖರಾದ ಅಣ್ಣಪ್ಪ ನಾಯ್ಕ, ಆದರ್ಶ ಪೈ, ವಿಜಯ ಹೆಗಡೆ, ಪಟ್ಟಣ ಪಂಚಾಯತ್ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.