ಟಿಎಂಎಸ್ ಸರ್ವಸಾದಾರಣ ಸಭೆ,ರೈತರು ಅನುತ್ಪಾದಕ ವೆಚ್ಚ ಕಡಿಮೆ ಮಾಡಬೇಕು — ಆರ್.ಎಂ.ಹೆಗಡೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಪ್ರತಿಷ್ಠಿತ ಟಿಎಂಎಸ್ ಸಂಸ್ಥೆಯ
ಸದಸ್ಯರ ಸರ್ವ ಸಾದಾರಣ ಸಭೆ ನಡೆಯಿತು‌

ಸಭೆಯನ್ನುದ್ದೇಶಿಸಿ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಮಾತನಾಡಿ,ಎಲ್ಲಡೆ ಅಡಿಕೆ ತೋಟದ ಪ್ರಮಾಣ ಹೆಚ್ಚುತ್ತಿದ್ದು ರೈತರು ಕೇವಲ ಅಡಿಕೆ ಬೆಳೆಯನ್ನೇ ನೆಚ್ಚಿಕೊಂಡಿರಬಾರದು. ಅಡಿಕೆಯ ಜೊತೆ ಕಾಳುಮೆಣಸು, ಏಲಕ್ಕಿಯಂತಹ ಬೆಳೆಗಳನ್ನೂ ಬೆಳೆಯಲು ಮುಂದಾಗಬೇಕು. ಹೈನುಗಾರಿಕೆಯತ್ತಲೂ ಗಮನಹರಿಸಬೇಕು.ನಮ್ಮ ಸದಸ್ಯರಿಗೆ ಕೌಟುಂಬಿಕ ಬಜೆಟ್ ಇಲ್ಲ. ಹೀಗಾಗಿ ಸಾಲದ ಪ್ರಮಾಣ ಹೆಚ್ಚುತ್ತಿದೆ. ಅನುತ್ಪಾದಕ ವೆಚ್ಚಗಳೂ ಹೆಚ್ಚುತ್ತಿವೆ. ಈ ವರ್ಷವಂತೂ ವಿಪರೀತ ಮಳೆಯಿಂದಾಗಿ ಅಡಿಕೆ ಬೆಳೆಯಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಹೀಗಾಗಿ ಎಚ್ಚರಿಕೆಯಿಂದ ವ್ಯವಹಾರ ನಡೆಸಬೇಕು ಎಂದು ಹೇಳಿದರು.

ಒಂದು ಕಾಲದಲ್ಲಿ ಅತ್ಯಂತ ಕಡಿಮೆ ಭಂಡವಾಳದಲ್ಲಿ ಪ್ರಾರಂಭವಾಗಿರುವ ಟಿಎಂಎಸ್ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದ್ದು ೩ ಸಾವಿರಕ್ಕೂ ಹೆಚ್ಚು ಸದಸ್ಯರನ್ನು, ೨ ಸಾವಿರಕ್ಕೂ ಹೆಚ್ಚು ನಾಮಿನಲ್ ಸದಸ್ಯರನ್ನು ಹೊಂದಿದೆ. ಸಂಸ್ಥೆಯಲ್ಲಿ ಕಡುಬಡವರು, ಬಡವರು ಹಾಗೂ ಸಾಮಾನ್ಯ ಜನತೆ ಹೆಚ್ಚಾಗಿ ವ್ಯವಹರಿಸುತ್ತಿದ್ದಾರೆ. ಮಾರ್ಚ ೩೧ ಕ್ಕೆ ಮುಗಿದ ಆರ್ಥಿಕ ವರ್ಷ ೨೦೨೩-೨೪ ನೇ ಸಾಲಿನಲ್ಲಿ ನಿಧಿಗಳನ್ನು ತೆಗೆದಿರಿಸಿದ ನಂತರದಲ್ಲಿ ಸಂಸ್ಥೆ ೪.೩೪ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.

ಕಾನಸೂರು ಹಾಗೂ ಶಿರಸಿಯಲ್ಲಿ ಶಾಖೆಗಳನ್ನು ಹೊಂದಿರುವ ಸಂಘ ೨೦೨೩-೨೪ ನೆಯ ಸಾಲಿನಲ್ಲಿ ೫೬,೫೫೪ ಕ್ವಿಂಟಲ್ ಅಡಿಕೆ, ೩೮೯ ಕ್ವಿಂಟಲ್ ಕಾಳುಮೆಣಸು ಹಾಗೂ ೨,೭೯೨ ಕ್ವಿಂಟಲ್ ಹಸಿ ಅಡಿಕೆ ವಿಕ್ರಿಮಾಡಿದ್ದು, ಸಂಘದ ವಹಿವಾಟು ರೂ. ೨೩೩.೦೫ಕೋಟಿ ಆಗಿದೆ. ದುಡಿಯುವ ಭಂಡವಾಳ ೨೧೮.೬೧ಕೋಟಿಗೂ ಅಧಿಕವಾಗಿದೆ. ಸಂಚಿತ ನಿಧಿಗಳ ಮೊತ್ತ ೬೦.೭೯ ಕೋಟಿಯಷ್ಟಿದೆ. ೧೦೮.೨೯ಕೋಟಿ ಠೇವುಗಳನ್ನು ಸಂಗ್ರಹಿಸಲಾಗಿದೆ ಎಂದರು. ೨೦೨೩-೨೪ ನೇ ಸಾಲಿನಲ್ಲಿ ಸದಸ್ಯರಿಗೆ ಶೇ.೧೫ ಡಿವಿಡೆಂಡ್ ಹಂಚಿಕೆ ಮಾಡಲು ಆಡಳಿತ ಮಂಡಳಿಯು ನಿರ್ಣಯಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಯ್ದ ಹಿರಿಯ ಸದಸ್ಯರನ್ನು ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪತ್ತು ಮತ್ತು ಮಾರಾಟ ಜೋಡಣೆಯಲ್ಲಿ ಹೆಚ್ಚಿನ ಸಾಧನೆ ಮಾಡಿದ ದೊಡ್ಮನೆ ಸೇವಾ ಸಹಕಾರಿ ಸಂಘ, ತಾರೇಹಳ್ಳಿ-ಕಾನಸೂರ ಸಂಘ, ಹೆಗ್ಗರಣಿ ಸೇವಾ ಸಹಕಾರಿ ಬ್ಯಾಂಕ್ ಇವುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು. ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಧಾನ ವ್ಯವಸ್ಥಾಪಕ ಸತೀಶ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ ಸ್ವಾಗತಿಸಿದರು. ಸಂಘದ ಉಪವ್ಯವಸ್ಥಾಪಕ ಪ್ರಸನ್ನ ಭಟ್ಟ ಕೆರೆಹೊಂಡ ಹಾಗೂ ಜಿ.ಜಿ.ಹೆಗಡೆ ಬಾಳಗೋಡ ನಿರ್ವಹಿಸಿದರು. ನಿರ್ದೇಶಕ ಜಿ.ಎಂ.ಭಟ್ಟ ಕಾಜಿನಮನೆ ವಂದಿಸಿದರು.

ಸಭೆಯ ನಂತರ ಯಕ್ಷಸಿರಿ ಬೆಂಗಳೂರು (ರಿ) ಇವರಿಂದ “ಕೃಷ್ಣಾರ್ಜುನ ಕಾಳಗ” ಪೌರಾಣಿಕ ಯಕ್ಷಗಾನ ಪ್ರದರ್ಶಿಸಲಾಯಿತು.

About the author

Adyot

Leave a Comment