ಸಿದ್ದಾಪುರದ ಶ್ರೀವಿನಾಯಕ ಸೌಹಾರ್ದ ಸೊಸೈಟಿಗೆ ಉತ್ತಮ ಸೌಹಾರ್ದ ಸಹಕಾರಿ ಪುರಸ್ಕಾರ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರದ ಶ್ರೀವಿನಾಯಕ ಸೌಹಾರ್ದ ಕ್ರೆಡಿಟ್ ಕೋ-ಆಪ್ ಸೊಸೈಟಿಗೆ,ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆ ಪ್ರತಿವರ್ಷ ನೀಡುವ ಉತ್ತಮ ಸೌಹಾರ್ದ ಸಹಕಾರಿ ಪುರಸ್ಕಾರವನ್ನು ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಆನಂದ ನಾಯ್ಕ,ಎರಡು ದಶಕದ ಸಾಧನೆ, ಪ್ರಾಮಾಣಿಕ ಸೇವೆ, ಸದಸ್ಯರ ಹಿತ ಕಾಪಾಡಿದ ಹಿರಿಮೆ ಹಾಗೂ ಸಮಾಜಮುಖಿ ಕಾರ್ಯವನ್ನು ಗುರುತಿಸಿ ಉತ್ತಮ ಸೌಹಾರ್ದ ಸಹಕಾರಿ ಪುರಸ್ಕಾರವನ್ನು ನೀಡಲಾಗಿದೆ.ಆ.೨೩ರಂದು ಬೆಂಗಳೂರಿನ ಅರಮನೆ ಮೈದಾನದ ಸಭಾಂಗಣದಲ್ಲಿ ಸಚಿವ
ಎಚ್.ಕೆ.ಪಾಟೀಲ,ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನಗೌಡ, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಪಾಟೀಲ,ಉತ್ತರಕನ್ನಡ ವಿಭಾಗದ ಸಂ.ಸಹಕಾರಿ ನಿರ್ದೇಶಕ ಮೋಹನದಾಸ ನಾಯಕ ಸೇರಿದಂತೆ ಸಂಯುಕ್ತ ಸಹಕಾರಿಯ, ಸೌಹಾರ್ದ ಸಹಕಾರಿಯ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದದ್ದು ನಮಗೆ ಹೆಮ್ಮೆ ತಂದಿದೆ ಎಂದರು.

೨೦೦೪ರಲ್ಲಿ ೫ ಲಕ್ಷ ರೂ.ಬಂಡವಾಳ, ೫೦೦ ಸದಸ್ಯರೊಂದಿಗೆ ಆರಂಭಗೊಂಡ ಸೊಸೈಟಿ ಈಗ ತನ್ನ ಕಾರ್ಯವ್ಯಾಪ್ತಿಯನ್ನು ರಾಜ್ಯವ್ಯಾಪ್ತಿಗೆ ವಿಸ್ತರಿಸಿದೆ.ಸಿದ್ದಾಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು ಸಿದ್ದಾಪುರ,ಶಿರಸಿ, ಭಟ್ಕಳ, ಸಾಗರ,ಹೊನ್ನಾವರ,ಕುಮಟಾಗಳಲ್ಲಿ ಸುಸಜ್ಜಿತವಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ೧೨ ನಿರ್ದೇಶಕರ ಆಡಳಿತ ಮಂಡಳಿ,೪೭ ಸಿಬ್ಬಂದಿಗಳನ್ನೊಳಗೊಂಡು ಸಹಕಾರಿ ನಿಯಮಗಳ ಅನ್ವಯ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ೨೧೨೯೩ ಸದಸ್ಯರುಗಳಿದ್ದು ೮೪,೨೫,೯೦೦ ರೂ.ಶೇರು ಬಂಡವಾಳ ಹೊಂದಿದ್ದು ೨೦೨೩-೨೪ನೇ ಸಾಲಿನಲ್ಲಿ ೫೪,೭೫,೩೯೯ ರೂ. ಲಾಭ ಗಳಿಸಿದ್ದು ಸದಸ್ಯರಿಗೆ ಶೇ.೧೫ ಲಾಭಾಂಶ ಶಿಫಾರಸ್ಸು ಮಾಡಲಾಗಿದೆ ಎಂದರು.

ನಮ್ಮ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ವಿನಾಯಕ ನಾಯ್ಕ ಎಂ.ಬಿ.ಎ.ಪದವೀಧರರಾಗಿದ್ದು ಸಂಸ್ಥೆಗೆ ಆಧುನಿಕ ದೃಷ್ಟಿಕೋನದ ಸ್ಪರ್ಶ ನೀಡಿದ್ದಾರೆ. ಸೊಸೈಟಿಯ ವ್ಯಾಪ್ತಿ ವಿಸ್ತರಿಸುವಲ್ಲಿ, ಹೊರ ಊರುಗಳಲ್ಲಿಯೂ ಶಾಖೆ ಆರಂಭವಾಗುವಲ್ಲಿ ಅವರ ದೂರದೃಷ್ಟಿತ್ವ ಮಹತ್ವದ್ದು.ಪ್ರಧಾನ ವ್ಯವಸ್ಥಾಪಕರಾದ ಶ್ರೀಧರ ಹೆಗಡೆ ಸಂಸ್ಥೆಯ ಎಲ್ಲ ಹಂತದ ಕಾರ್ಯಗಳನ್ನು ಕಾಯ್ದೆ,ನಿಯಮಗಳ ಕಟ್ಟುನಿಟ್ಟಿನ ಪಾಲನೆ, ಸಮನ್ವಯತೆಯ ಮೂಲಕ ಸಂಸ್ಥೆಯ ಉನ್ನತಿಗೆ ಕಾರಣರಾಗಿದ್ದಾರೆ. ನಿರ್ದೇಶಕರ, ಎಲ್ಲ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಸಂಸ್ಥೆ ಏಳಿಗೆ ಹೊಂದುತ್ತಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ವಿನಾಯಕ ನಾಯ್ಕ ಮಾತನಾಡಿ ಬಡತನದ ಕುಟುಂಬದಲ್ಲಿ ಜನಿಸಿದ ಸಂಸ್ಥೆಯ ಅಧ್ಯಕ್ಷ ಆನಂದ ನಾಯ್ಕ ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದಿದ್ದರೂ ಜೀವನಾನುಭವ,ವ್ಯಾವಹಾರಿಕ ಅನುಭದದಿಂದ ಇಂದು ಹಲವು ಉದ್ಯಮದಲ್ಲಿ ಯಶಸ್ಸು ಕಂಡಿದ್ದಾರೆ.ಸಮಾಜಮುಖಿ ವ್ಯಕ್ತಿತ್ವದ ಅವರು ಸಹಕಾರಿ ತತ್ವವನ್ನು ಅಳವಡಿಸಿಕೊಂಡು ಸಂಸ್ಥೆಯ ಅಭಿವೃದ್ಧಿಗೆ ಮೂಲಕಾರಣರಾಗಿದ್ದಾರೆ. ಸಂಸ್ಥೆಯು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ವಿದ್ಯಾರ್ಥಿಗಳಿಗೆ,ರೋಗಿಗಳಿಗೆ,ದೇವಾಲಯಗಳಿಗೆ ಧನಸಹಾಯ, ನೀರಿನ ಕೊರತೆಯಾದಲ್ಲಿ ಉಚಿತ ನೀರು ಪೂರೈಕೆ, ಅನಾಥಾಶ್ರಮಗಳಿಗೆ ಪ್ರತಿವರ್ಷ ಆರ್ಥಿಕ ಸಹಾಯ ನೀಡುತ್ತ ಬಂದಿದೆ. ಮುಂದೆಯೂ ಅದನ್ನು ಅನುಸರಿಸಿಕೊಂಡು ಬರಲಾಗುತ್ತದೆ ಎಂದರು.
ಪ್ರಧಾನ ವ್ಯವಸ್ಥಾಪಕ ಶ್ರೀಧರ ಹೆಗಡೆ ಪ್ರಾಸ್ತಾವಿಕ ಮಾತನ್ನಾಡಿದರು.ಶಾಖಾ ವ್ಯವಸ್ಥಾಪಕ ಪ್ರಶಾಂತ ನಾಯ್ಕ ಸ್ವಾಗತಿಸಿದರು. ಉಪಾಧ್ಯಕ್ಷರು,ನಿರ್ದೇಶಕರುಗಳು ಉಪಸ್ಥಿತರಿದ್ದರು.

About the author

Adyot

Leave a Comment