ಸರ್ವಶ್ರೇಷ್ಠ ಗುರು ಡಾ.ಸರ್ವಪಲ್ಲಿ ರಾಧಾಕೃಷ್ಣನ್

ಆದ್ಯೋತ್ ಸುದ್ದಿನಿಧಿ:

ರಷ್ಯಾ ದೇಶದಲ್ಲಿನ ಭಾರತೀಯ ರಾಯಭಾರಿಯೊಬ್ಬರ ಬೀಳ್ಕೊಡುಗೆ ಸಮಾರಂಭದಲ್ಲಿ ಅಂದಿನ ಅಧ್ಯಕ್ಷರಾಗಿದ್ದ ‘ಸ್ಟಾಲಿನ್’ ರವರು “ತಾವೊಬ್ಬರೇ ನನ್ನನ್ನು ಒಬ್ಬ ಮನುಷ್ಯರಂತೆ ಕಂಡವರು. ನೀವು ನಮ್ಮನ್ನು ಬಿಟ್ಟು ಹೋಗುತ್ತಿರುವದು ನನಗೆ ತುಂಬಾ ದುಃಖ ತಂದಿದೆ. ನಾನು ಹೆಚ್ಚು ಕಾಲ ಬದುಕಲಾರೆ. ಆದರೆ ತಾವು ದೀರ್ಘಕಾಲ ಬಾಳಬೇಕೆಂಬುದೇ ನನ್ನ ಆಸೆ. ತಮ್ಮೊಂದಿಗೆ ನನ್ನ ನೈಜವರ್ತನೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ”. ಎಂದು ತುಂಬಾ ನೋವಿನಿಂದ ಸ್ಟಾಲಿನ್ ನುಡಿದಾಗ ತಕ್ಷಣವೇ ಆ ರಾಯಭಾರಿ ಅತ್ಯಂತ ವಿನಯದಿಂದ “ಬೇಸರಿಸದಿರಿ, ನಮ್ಮ ದೇಶದಲ್ಲೂ ಒಬ್ಬ ಕ್ರೂರ ರಾಜನಿದ್ದ. ಒಮ್ಮೆ ಕಳಿಂಗ ದೇಶದ ಯುದ್ದದಲ್ಲಾದ ಅಪಾರ ಸಾವು-ನೋವನ್ನು ಕಣ್ಣಾರೆ ಕಂಡು ಉಕ್ಕಿಬರುವ ಕಂಬನಿ ಜೊತೆಗೆ ಖಡ್ಗವನ್ನು ಕೈಬಿಟ್ಟವನೆ ‘ತಾನೆಂದೂ ಶಸ್ತ್ರ ತೊಡಲಾರೆ’ ಎಂದು ನೋವಿನಿಂದ ನುಡಿದವನು ಮುಂದೆ ಒಬ್ಬ ಕರುಣಾಮಯಿ ರಾಜನಾದ.ತನ್ನ ಸುಧೀರ್ಘ ಜೀವನದುದ್ದಕ್ಕೂ ಇಡೀ ಭರತ ಖಂಡವನ್ನು ಸತ್ಯ,ಶಾಂತಿ, ಪ್ರೀತಿ,ಅಹಿಂಸೆ ಯ ಮೂಲಕ ರಾಜ್ಯವಾಳಿದ. ‘ದೇವನಾಂಪ್ರಿಯ ಚಕ್ರವರ್ತಿ’ ‘ಸಾಮ್ರಾಟ ಅಶೋಕ’ ನೆಂಬ ಹೆಸರಿನಿಂದ ಸದಾಕಾಲವೂ ಗೌರವಿಸುವ ಮಹಾನ್ ವ್ಯಕ್ತಿಯಾದ. ಹಾಗೆಯೇ ತಾವೂ ಕೂಡ ಒಬ್ಬ ಕರುಣಾಮಯಿ ವ್ಯಕ್ತಿಯಾಗುವಿರಿ.” ಎಂದು ನಯವಾಗಿ ನುಡಿದು ಸ್ಟಾಲಿನನ ಕಲ್ಲು ಹೃದಯವನ್ನೂ ಗೆದ್ದರು. ಇದು ಅಂದಿನ ಇತಿಹಾಸ ಅರಿತವರಿಗೆ
ರಷ್ಯಾದ ಅಧ್ಯಕ್ಷರಾಗಿದ್ದ ಈ ಸ್ಟಾಲಿನ್ ಬಗ್ಗೆ ಗೊತ್ತಿರಬಹುದು. ಅವನೊಬ್ಬ ಸರ್ವಾಧಿಕಾರಿ ಮನೋಭಾವದ ನಾಯಕ. ಅವರ ಎದುರಿಗೆ ಯಾವ ಅಧಿಕಾರಿ, ಸಿಬ್ಬಂದಿಗಳೂ ತುಟಿಪಿಟಿಕ್ ಎನ್ನದೇ ತಲೆ ತಗ್ಗಿಸಿಕೊಂಡೆ ಇರುತ್ತಿದ್ದರು. ಇಂತಹ ಕಲ್ಲುಹೃದಯದ ವ್ಯಕ್ತಿಯ ಮನಸ್ಸಲ್ಲೂ ಮಂದಹಾಸದ ಹೂ ಅರಳಿಸಿದ ವ್ಯಕ್ತಿ ಬೇರೆ ಯಾರೂ ಅಲ್ಲ. ಅವರೇ ಡಾ. ಎಸ್. ರಾಧಾಕೃಷ್ಣನ್. ರಾಧಾಕೃಷ್ಣನ್ ಕೇವಲ ಒಬ್ಬ ರಾಯಭಾರಿ ಮಾತ್ರವಲ್ಲ. ಅವರೊಬ್ಬ ಮಹಾನ್ ಮೇದಾವಿ.ಅತ್ಯುತ್ತಮ ವಾಗ್ಮಿ, ಬಹುಭಾಷಾ ಪಂಡಿತ, ಶ್ರೇಷ್ಠ ತತ್ವಜ್ಞಾನಿ. ಜ್ಞಾನದ ಗಣಿ. ಅಷ್ಟೇ ಅಲ್ಲ ಸಾವಿರಾರು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಜಗತ್ತಿನ ಒಬ್ಬ ಸರ್ವ ಶ್ರೇಷ್ಠ ಗುರುವಾಗಿದ್ದವರು.

ರಾಧಾಕೃಷ್ಣನ್ ರವರು ಆಂದ್ರಪ್ರದೇಶ (ಈಗಿನ ಸೀಮಾಂದ್ರ) ಮತ್ತು ತಮಿಳುನಾಡಿನ ಗಡಿಭಾಗದ ‘ತಿರುತ್ತಣಿ” ಎಂಬ ಪುಟ್ಟ ಗ್ರಾಮದಲ್ಲಿ 1888 ಸೆಪ್ಟೆಂಬರ್ 5 ರಂದು ಸುಸಂಸ್ಕೃತ ಮಾತೆ ಸೀತಮ್ಮ ಮತ್ತು ವೀರಾಸ್ವಾಮಿ ದಂಪತಿಗಳ ಮಗನಾಗಿ ಜನಿಸಿದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಕಲಿಕೆಗಿರಲಿಲ್ಲ. ತಂದೆ, ತಾಯಿ ಮಕ್ಕಳ ಓದಿಗೆ ಕೈಲಾದ ಅವಕಾಶ ಕಲ್ಪಿಸಿದ್ದರು. ಬಾಲ್ಯದಿಂದಲೂ ಜ್ಞಾನದಾಹಿಯಾದ ರಾಧಾಕೃಷ್ಣನ್ ತಿರುಪತಿಯ’ಹರ್ಮನ್ಸ್ ಬರ್ಗ್ ಕ್ರಿಶ್ಚಿಯನ್ ಮಿಶನರಿ ಶಾಲೆಯಲ್ಲಿ ಮುಂದುವರಿಸಿದರು. ಅಲ್ಲಿನ ಶಿಸ್ತು, ಸಮಯ ಪ್ರಜ್ಞೆ, ಹಾಗೂ ಇಂಗ್ಲೀಷ್ ವಿದ್ಯಾಭ್ಯಾಸದ ಮೂಲಕ ಹೊರ ಜಗತ್ತಿನ ಜ್ಞಾನದ ಒಲವು ಅವರನ್ನು ಹೆಚ್ಚು ಆಕರ್ಷಿಸಿತು. ನಂತರ ವೆಲ್ಲೂರಿನ ‘ವೂರ್ಸ್’ ಕಾಲೇಜಿನಲ್ಲಿ ಪದವಿ ಪೂರ್ವ ವ್ಯಾಸಂಗ ಮಾಡಿ ಮುಂದೆ ಮದ್ರಾಸಿನ ( ಈಗಿನ ಚೆನ್ನೈ) ನಲ್ಲಿ ಬಿ.ಎ. ಪದವಿಯಲ್ಲಿ ಅತ್ಯಂತ ಕ್ಲಿಷ್ಟಕರವಾದ ತತ್ವಶಾಸ್ತ್ರವನ್ನು ಆಯ್ಕೆಮಾಡಿಕೊಂಡು ಅದರಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಈ ಹೊತ್ತಿಗಾಗಲೇ ಮನೆಯಲ್ಲಿ ಹಾಸಿಹೊದ್ದು ಮಲಗಿದ್ದ ಬಡತನಕ್ಕೂ ಹೆದರದೆ ಮದ್ರಾಸಿನಲ್ಲಿ ಶ್ರೀಮಂತರ ಮಕ್ಕಳಿಗೆ ಮನೆಪಾಠ( ಟ್ಯೂಶನ್) ಮಾಡಿ ತಮ್ಮ ಖರ್ಚಿನ ಹಣವನ್ನು ಸರಿದೂಗಿಸಿಕೊಂಡರು. ಊರಲ್ಲಿರುವ ತಾಯಿಗೆ ತನ್ನ ಮಕ್ಕಳು ಹೆಚ್ಚು ಓದಿ ವಿದ್ಯಾವಂತರಾಗಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಅವರು ತಮ್ಮ ಬೀದಿಯಲ್ಲಿನ ಶ್ರೀಮಂತರ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತ ಉಳಿದ ಮಕ್ಕಳ ಉದರ ತುಂಬಿಸಿ ಅವರಿಗೂ ಶಿಕ್ಷಣ ನೀಡುವಲ್ಲಿ ನಿರತಳಾಗಿದ್ದರು.

ಬಡತನವನ್ನೇ ಸವಾಲಾಗಿ ಸ್ವೀಕರಿಸಿದ ಯುವಕ ರಾಧಾಕೃಷ್ಣನ್ ಸತತವಾಗಿ ಅಧ್ಯಯನ ಶೀಲರಾಗಿದ್ದಲ್ಲದೆ ತತ್ವಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದು ಹೊರಬಂದು ಮದ್ರಾಸಿನ ಶಿಕ್ಷಣ ಇಲಾಖೆಯ ಉಪ ಸಹಾಯಕ ಇನ್ ಸ್ಪೆಕ್ಟರ್ ಆಗಿ ಸೇವೆ ಆರಂಬಿಸಿದರು.. ತದನಂತರ ಅಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉಪನ್ಯಾಸರಾಗಿ, ಅನಂತರ ಟೀಚರ್ಸ್ ಟ್ರೇನಿಂಗ್ ಸೆಂಟರ್ ಕಾಲೇಜಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅನಂತರ ಆಂದ್ರಪ್ರದೇಶದ ಅನಂತಪುರ ಮತ್ತು ರಾಜಮಂಡ್ರಿಯ ಸರಕಾರಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಸಂಶೋಧನೆ ಮಾಡುವುದರೊಂದಿಗೆ ವಿದ್ವಾಂಸರ ಸಹಾಯದಿಂದ ಸಂಸ್ಕೃತ ಭಾಷೆಯನ್ನು ಕಲಿತರು. ಈ ನಡುವೆ ರಾಷ್ರಪಿತ ಮಹಾತ್ಮಾ ಗಾಂಧೀಜಿ ಯವರನ್ನು ಭೇಟಿ ಮಾಡಿ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿ ಹಲವಾರು ಲೇಖನಗಳನ್ನು ಬರೆದರು. ‌ ಈ ನಡುವೆ ಮೈಸೂರು ವಿಶ್ವವಿದ್ಯಾನಿಲಯದ ಉಪ ಪ್ರಾಧ್ಯಾಪಕರಾಗಿದ್ದಾಗ ಇವರ ಸೇವೆಯನ್ನು ಇಡೀ ದೇಶವೇ ಸ್ತುತಿಸಿತ್ತು. ಇವರ ವಿಷಯ ಪ್ರಭುತ್ವ, ಸ್ಪಷ್ಟವಾದ ನಿರರ್ಗಳ ಮಾತುಗಾರಿಕೆ, ಆಕರ್ಷಕ ಬೋಧನಾ ವಿಧಾನ, ಸತತ ಅಧ್ಯಯನ ಶೀಲತೆ ವಿದ್ಯಾರ್ಥಿಗಳಷ್ಟೇ ಅಲ್ಲ ವಿಶ್ವವಿದ್ಯಾಲಯದ ಇತರ ಬೋಧಕರನ್ನೂ ಆಕರ್ಷಿಸಿತ್ತು. ಅಪಾರವಾದ ವಿಷಯ ಪಾಂಡಿತ್ಯ, ಪ್ರಾಸಂಗಿಕ ಹಾಸ್ಯ,ವಿನೋದ ಪ್ರಜ್ಞೆ ,ಪ್ರಬುದ್ದ ಮಟ್ಟದ ಬೋಧನೆಯನ್ನು ಕೇವಲ ಆಯಾ ತರಗತಿ ವಿದ್ಯಾರ್ಥಿಗಳಷ್ಟೇ ಅಲ್ಲದೆ ಇತರ ವಿಭಾಗದ ವಿದ್ಯಾರ್ಥಿಗಳು, ಇತರೆ ಬೋಧಕರೂ ತರಗತಿ ಕೋಣೆಯ ಹಿಂಭಾಗದಲ್ಲಿ ನಿಂತು ಕೇಳಿ ಜ್ಞಾನಸುಧೆ ಅನುಭವಿಸುತ್ತಿದ್ದರೆಂದರೆ ಅವರ ಜ್ಞಾನ ಸಾಗರದಾಳವೆಷ್ಟಿತ್ತೆಂಬುದು ಗಮನಾರ್ಹ.
ಈ ನಡುವೆ ಡಾ. ರಾಧಾಕೃಷ್ಣನ್ ರವರು ಮೈಸೂರಿನಿಂದ ಕೊಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನ ಜನರು ಅವರಿಗೆ ನೀಡಿದ ಬೀಳ್ಕೊಡುಗೆ ಪ್ರಪಂಚದ ಯಾವ ಪ್ರಸಿದ್ಧ ವ್ಯಕ್ತಿಗೂ ದೊರೆತಿರಲಾರದು. ಮಹಾರಾಜ ಕಾಲೇಜಿನ ಆವರಣದಿಂದ ರೈಲು ನಿಲ್ದಾಣದವರೆಗೂ ಅವರನ್ನು ಹೊತ್ತೊಯ್ಯುವ ಕುದುರೆಸಾರೋಟಿಗೆ ಕುದುರೆ ಕಟ್ಟಲಿಲ್ಲ.! ಬದಲಾಗಿ ಭಕ್ತರು ದೇವರ ರಥವನ್ನೆಳೆದಂತೆ ವಿದ್ಯಾರ್ಥಿಗಳೇ ರಥೋತ್ಸವದಲ್ಲಿ ಭಾಗವಹಿಸಿ ಸಾರೋಟನ್ನು ಎಳೆಯುತ್ತ ಜಯಕಾರ ಹಾಕುತ್ತಿದ್ದರು. ಅವರು ಪ್ರಯಾಣಿಸುವ ಕಂಪಾರ್ಟ್ ಮೆಂಟ್ ನಲ್ಲಿ ರತ್ನಗಂಬಳಿ ಹಾಸಿ, ಒರಗುದಿಂಬು ಜೋಡಿಸಿ ಹೂವಿನ ಅಲಂಕಾರದೊಂದಿಗೆ ಸಿಂಗರಿಸಿದ್ದು ವಿಶೇಷವಾಗಿತ್ತು. ಅಲ್ಲಿ ವೈಭವಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಹೃದಯಾಂತರಾಳದ ‘ಗುರುಪ್ರೇಮ’ ಎದ್ದು ಕಾಣುತ್ತಿತ್ತು.
ಹೀಗೆ ಸುಮಾರು ಇಪ್ಪತೈದಕ್ಕೂ ಹೆಚ್ಚು ವರ್ಷಗಳ ಕಾಲ ನಿರಂತರ ಶಿಕ್ಷಕರಾಗಿ,ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳ ಪಾಲಿನ ಹೃದಯ ಗೆದ್ದ ಗುರುಪುರುಷೋತ್ತಮರಾಗಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರದಲ್ಲೂ ಪಾಶ್ಚಿಮಾತ್ಯರು ಭಾರತೀಯರನ್ನು ಅತ್ಯಂತ ತಾತ್ಸಾರದಿಂದ ಕಾಣುತ್ತಿದ್ದರು. ಭಾರತೀಯರೆಂದರೆ ಮೂಡನಂಬಿಕೆಗಳ ಅಂಧರು,ಅನಕ್ಷರಸ್ಥರೆಂದು ನಮಗೆ ಮನ್ನಣೆ ನೀಡುತ್ತಿರಲಿಲ್ಲ. ಈ ಕಲ್ಪನೆಯನ್ನು ತೊಡೆದು ಹಾಕಲು ತಮ್ಮ ಹರಿತವಾದ ಬರವಣಿಗೆಯ ಮೂಲಕ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರು. ಭಾರತದ ಪ್ರತಿನಿಧಿಯಾಗಿ ಇಂಗ್ಲೆಂಡ್, ಅಮೇರಿಕಾ, ರಷ್ಯಾ ಮುಂತಾದ ಹಲವಾರು ದೇಶಗಳಲ್ಲಿ ಸಂಚರಿಸಿ ವಿವಿಧ ದೇಶಗಳ ಧರ್ಮಗಳನ್ನು ಅಧ್ಯಯನ ಮಾಡಿದರು. ಅಲ್ಲಿ ಭಾರತದ ಗುರು ಪರಂಪರೆ, ಹಿಂದೂ ಧಾರ್ಮಿಕ ಸಂಸ್ಕೃತಿ, ತತ್ವಶಾಸ್ತ್ರ, ಅವಿಭಕ್ತ ಕುಟುಂಬಗಳಲ್ಲಿನ ಐಕ್ಯತೆ, ಶೃದ್ದಾಭಕ್ತಿ ಕುರಿತು ಮಾರ್ಗಗಳ ದರ್ಶನ ಮಾಡಿಸಿದರು.
“ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಅತ್ಯಂತ ಹತ್ತಿರದಿಂದ ಅರಿತುಕೊಂಡ ಅವರು ವಿದೇಶಗಳಲ್ಲಿ ಹಿಂದೂ ಧರ್ಮದ ವೈಚಾರಿಕ ಪ್ರಜ್ಞೆ ಎತ್ತಿಹಿಡಿದರು.” ಹಿಂದೂ ಧರ್ಮವು ಒಂದು ವೈಚಾರಿಕ ಜೀವನ ಮಾರ್ಗ, ನೈತಿಕ, ಕೌಟುಂಬಿಕ, ರಕ್ಷಣಾತ್ಮಕ ಮಾರ್ಗವಾಗಿದ್ದು ಮಾನವನ ಆಂತರಿಕ ಜೀವನದ ಭಾಗವೇ ಆಗಿದೆ. ಹಿಂದೂ ಧರ್ಮವಾಗಲಿ, ವೇದಾಂತವಾಗಲಿ ಎಂದಿಗೂ ಅಸತ್ಯವನ್ನು ಹೇಳಿಲ್ಲ. ಕೆಲವರು ಸ್ವಾರ್ಥಕ್ಕೆ ಅಲ್ಲೊಮ್ಮೆ ಇಲ್ಲೊಮ್ಮೆ ತಿರುಚಿರಬಹುದು. ಆದರೆ ಪ್ರತಿ ವ್ಯಕ್ತಿಗಳ ಜೀವನದಾಳದ ನಾಡಿ ಮಿಡಿತ ಗಳನ್ನು ಸೂಕ್ಷ್ಮವಾಗಿ ತಿಳಿಸುತ್ತದೆ’ ಎಂದರು.
ಇಲ್ಲಿನ ವರೆಗಿನ ಭಾರತೀಯ ಶಿಕ್ಷಣ ಪದ್ದತಿಯ ಏಕರೂಪತೆಯ ದೋಷವನ್ನು ತಿದ್ದುವಲ್ಲಿ ಭಾರತದಲ್ಲೂ ಸಹ ಪಾಶ್ಚಾತ್ಯ ದೇಶಗಳಂತೆ ಸಮಾನವಾಗಿ ಸರ್ವರಿಗೂ ಶಿಕ್ಷಣ ನೀಡಬೇಕೆಂದು ಒತ್ತಿ ಹೇಳಿದ್ದಾರೆ.
“ಶಿಕ್ಷಣವು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದ್ದು ಅದು ಜನರನ್ನು ಪರಿಪೂರ್ಣತೆ ಮತ್ತು ಸುಸಂಸ್ಕೃತ, ಭಾವೈಕ್ಯತೆಯತ್ತ ಕರೆದೊಯ್ಯುವಲ್ಲಿ ಅನಿವಾರ್ಯ ಎಂದು ಗಮನಿಸಿದರು.
ಹಲವಾರು ಅಂತರಾಷ್ಟ್ರೀಯ ರೆಡಿಯೋ ಪ್ರಸಾರ ಭಾಷಣದ ಮೂಲಕ “ಮಾನವೀಯತೆಯೇ ವಿಶ್ವ ಅನುಸರಿಸಬೇಕಾದ ಮೂಲ ಮಾರ್ಗವಾಗಿದೆ.” ಎಂದರು. ದ್ವೇಷ, ಅಸೂಯೆ, ಅಮಾನವೀಯತೆ ,ಯುದ್ದ ವಿಶ್ವದ ಕಂಠಕಗಳು ಎಂದು ಸಾರಿದ್ದಾರೆ. ಪರಸ್ಪರ ಸಹೋದರತ್ವ, ಸತ್ಯ, ಶಾಂತಿ, ಅಹಿಂಸಾ ಮಾರ್ಗಗಳನ್ನು ಸಾರುವ ಮೂಲಕ ದೇಶದ ಮೌಲ್ಯ ಎತ್ತಿಹಿಡಿದಿದ್ದಾರೆ.
ಡಾ. ರಾಧಾಕೃಷ್ಣನ್ ಅವರ ಅಪಾರ ಜ್ಞಾನಸಂಪತ್ತು, ವಿದ್ವತ್ಪೂರ್ಣ ಲೇಖನಗಳು, ಬಹುಮುಖ ಪ್ರತಿಭೆಯನ್ನು ಅತ್ಯಂತ ಹತ್ತಿರದಿಂದ ತಿಳಿದಿದ್ದ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಇವರನ್ನು ‘ರಷ್ಯಾದ ರಾಯಭಾರಿ’ ಯನ್ನಾಗಿ ನೇಮಿಸಿದರು. ಅಲ್ಲಿನ ಅಧ್ಯಕ್ಷ ‘ಸ್ಟಾಲಿನ್’ ಜೊತೆಗಿನ ಸ್ನೇಹಪೂರ್ಣತೆಯ ಫಲವಾಗಿ ಭಾರತ-ರಷ್ಯಾ ಬಾಂಧವ್ಯ ವೃದ್ಧಿಗೆ ಕಾರಣರಾದರು. ನಂತರ ನೆಹರೂ ಅವರು ಇವರ ದೂರದೃಷ್ಟಿತ್ವ, ಮೇದಾವಿತನ, ದಕ್ಷತೆ ಗುರುತಿಸಿ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮಕರಣ ಮಾಡಿ ದಕ್ಷಿಣ ಭಾರತೀರಗೂ ಅವಕಾಶ ನೀಡಿದ್ದನ್ನು ಗೌರವಪೂರ್ವಕವಾಗಿ ಸ್ವೀಕರಿಸಿದರು. ನಂತರ ಅವಿರೊಧವಾಗಿ ನಮ್ಮ ಭಾರತದ ಪ್ರಥಮ ಪ್ರಜೆಯಾಗಿ ಅಂದರೆ ‘ರಾಷ್ಟ್ರಪತಿ’ ಹುದ್ದೆ ಇವರನ್ನು ಅರಸಿ ಬಂದಾಗ ಪ್ರೀತಿಯಿಂದ ಅಲಂಕರಿಸಿ ವಿಶ್ವದ ಶ್ರೇಷ್ಠ ‘ರಾಷ್ಟ್ರಪತಿ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಅವಧಿಯಲ್ಲಿ ವಿವಿಧ ದೇಶಗಳ ನಡುವೆ ಸ್ನೇಹ ಸಂಬಂಧ ಹೊಂದಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ, ಸೌಹಾರ್ದ ಕಾಪಾಡಲು ಕಾರಣೀಕರ್ತರಾಗಿದ್ದನ್ನು ಮರೆಯುವಂತಿಲ್ಲ.
ಮತ್ತೊಂದು ವಿಶೇಷವೆಂದರೆ ಇವರು ರಾಷ್ಟ್ರಪತಿ ಹುದ್ದೆ ಯ ವೇತನವಾಗಿ ಬರುತ್ತಿದ್ದ ಹತ್ತು ಸಾವಿರ ರೂಪಾಯಿಗಳಲ್ಲಿ ತಮ್ಮ ಜೀವನಕ್ಕಾಗಿ ಕೇವಲ ಕಾಲು ಭಾಗ ಅಂದರೆ (2500)ಎರಡುವರೆ ಸಾವಿರ ಮಾತ್ರ ಪಡೆದು ಉಳಿದ ಏಳುವರೆ ಸಾವಿರ( 7500) ರೂಪಾಯಿಗಳನ್ನು ‘ಪ್ರಧಾನ ಮಂತ್ರಿ ಪರಿಹಾರ ನಿಧಿ’ಗೆ ಮರಳಿಸಿ ಅಂದಿನ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಲ್ಲಿರುವ ಭಾರತ ಮಾತೆಯ ಬಡವರ ಕಲ್ಯಾಣಕ್ಕಾಗಿ ಉಪಯೋಗಿಸುವಂತೆ ತಿಳಿಸಿದ್ದರು‌. ಇದು ಇವರು ದೇಶವಾಸಿಗಳಿಗೆ, ರಾಜಕಾರಣಿ, ಅಧಿಕಾರಿಗಳು, ಧನಿಕರಿಗೆ ಮೌನವಾಗಿ ನೀಡಿದ ಸಂದೇಶ. ಮುಂದೆ ಇವರ ಮಾದರಿಯನ್ನು ಹಲವಾರು ಕೆಳ ಹಂತದ ಪ್ರಾಮಾಣಿಕ ಅಧಿಕಾರಿಗಳು, ರಾಜಕಾರಣಿಗಳು ಅನುಸರಿಸಿದ್ದರೆಂಬುದನ್ನು ಗಮನಿಸಬಹುದು. ಇವರ ಕ್ರಿಯಾಶೀಲತೆ, ನಿರಂತರ ಅಧ್ಯಯನ ಶೀಲತೆ, ಸಮಯ ಪ್ರಜ್ಞೆ, ಆದರ್ಶ ಜೀವನ, ಸರಳತೆಯ ಶೈಲಿ ದೇಶದ ಇಂದಿನ ಎಲ್ಲಾ ನಾಯಕರಿಗೂ ಒಂದು ಪಾಠವಾಗಿದೆ.
ಇವರ ವಿಶ್ವಮಟ್ಟದ ಸಾಧನೆಗಳನ್ನು ಗುರುತಿಸಿ ಭಾರತ ಸರ್ಕಾರವುಇವರ ಅಪಾರವಾದ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳು ಅವರಿಗೆ ಬಂದಿವೆ. 1954 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ವನ್ನು ನೀಡಲಾಯಿತು. 1931 ರಲ್ಲಿ ಶಿಕ್ಷಣಕ್ಕಾಗಿ ಅವರು ಮಾಡಿದ ಸೇವೆಗಳಿಗಾಗಿ ಕಿಂಗ್ ಜಾರ್ಜ್ ಅವರಿಂದ ‘ನೈಟ್ ಪದವಿ’ ಪಡೆದರು. ಜರ್ಮನಿಯಿಂದ 1954 ರಲ್ಲಿ ವಿಜ್ಞಾನ ಮತ್ತು ಕಲೆಗಾಗಿ ವಿಶೇಷ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬ್ರಸೆಲ್ಸ್ ನ ಶ್ರೇಷ್ಠ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು , ಭಾರತೀಯ ವಿದ್ಯಾ ಭವನವು ‘ಬ್ರಹ್ಮ ವಿದ್ಯಾಭಾಸ್ಕರ’ ಪ್ರಶಸ್ತಿ ನೀಡಿ ಗೌರವಿಸಿವೆ. ದೇಶವಿದೇಶಗಳ ಹತ್ತು ಹಲವು ಸರಕಾರಗಳು, ಸಂಘ ಸಂಸ್ಥೆಗಳು, ಅನೇಕ ಪದವಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಇವರು ರಾಷ್ಟ್ರಪತಿ ಯಾದ ನಂತರ ಇವರ ಜನ್ಮದಿನದಂದು ಮೊದಲ ಭಾರಿಗೆ ಇವರ ಕಛೇರಿಯ ಅಧಿಕಾರಿಗಳು ಸಿಬ್ಬಂದಿಗಳು ಹುಟ್ಟು ಹಬ್ಬದ ಶುಭಾಶಯ ಹೇಳಿ ಜನುಮ‌ದಿನ ಆಚರಿಸುವ ಬ್ರಹತ್ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಮತಿಗಾಗಿ ಇವರ ಬಳಿ ಹೋದಾಗ ಈ ಜನ್ಮ ದಿನಾಚರಣೆ ತನಗೆ ಇಷ್ಟವಿಲ್ಲವೆಂದರು. ಅದಕ್ಕೆ ಸಿಬ್ಬಂದಿಯವರು ಪ್ರೀತಿಯಿಂದ ಒತ್ತಾಯ ಮಾಡಿದಾಗ ಒಂದು ಮಾತು ಹೇಳಿದ್ದನ್ನು ಗಮನಿಸಲೇಬೇಕು.”ನಾನು ಮೂಲತಃ ಒಬ್ಬ ಶಿಕ್ಷಕ. ನಮ್ಮ ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವವರು ನಮ್ಮ ದೇಶದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಗುರುಗಳು. ಅಂತಹ ಲಕ್ಷಾಂತರ ಗುರುಗಳ ಹೆಸರಿನಲ್ಲಿ ಈ ದಿನದಂದು ‘ಶಿಕ್ಷಕರ ದಿನಾಚರಣೆ’ ಆಚರಿಸಿ. ತನಗೆ ಬೇಡ” ಎಂದು ಹೇಳಿದ್ದು ಗುರುಸ್ಥಾನಕ್ಕೆ ಇವರು ಇಟ್ಟಿದ್ದ ಗೌರವ ಶ್ಲಾಘನೀಯ. ಅಂದಿನಿಂದ ಅಂದರೆ 1962 ಸೆಪ್ಟೆಂಬರ್ 5 ರಿಂದ ನಮ್ಮ ದೇಶದ ಶಿಕ್ಷಕರ ಹೆಸರಿನಲ್ಲಿ ‘ರಾಷ್ಟ್ರೀಯ ದಿನಾಚರಣೆ’ ಎಂದು ಆಚರಿಸಲಾಗುತ್ತದೆ.

ಡಾ. ರಾಧಾಕೃಷ್ಣನ್ ಅವರು ಇಷ್ಟೆಲ್ಲಾ ಸಾಧನೆ ಮಾಡಿರಬೇಕಾದರೆ ಅದು ಸುಲಭ ಸಾಧನೆಯಲ್ಲ. ಅಪಾರವಾದ ಕಲಿಕಾಸಕ್ತಿ, ಅಧ್ಯಯನ ಶೀಲತೆಯೇ ಕಾರಣ. ಅಷ್ಟೇ ಅಲ್ಲ ಇವರೊಬ್ಬ ಪ್ರಬುದ್ದ ಮಟ್ಟದ ಬರಹಗಾರರೂ ಕೂಡ ಆಗಿದ್ದರು. ಅವರು ಹಲವಾರು ಮೌಲ್ಯಯುತ ಕೃತಿಗಳನ್ನು ರಚಿಸಿದ್ದಾರೆ. ‘ಇಂಡಿಯನ್ ಫಿಲಾಸಫಿ’, ‘ದಿ ಹಿಂದೂ ವ್ಯೂ ಆಪ್ ಲೈಪ್’, ‘ಯೆನ್ ಇಂಡಿಯನ್ ವ್ಯೂ ಆಪ್ ಲೈಫ್’, ಈಸ್ಟ್ ಎಂಡ್ ವೆಸ್ಟ್ ಇನ್ ರಿಲಿಜನ್’, ಕಂಟೆಂಪರರಿ ಇಂಡಿಯನ್ ಫಿಲಾಸಫಿ’, ಮುಂತಾದ ಮೌಲ್ಯಯುತ ಪುಸ್ತಕಗಳನ್ನು ರಚಿಸಿ ಭಾರತದ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಜ್ಞಾನವಂತರಿವರು.
ಕಡು ಬಡತನದಲ್ಲಿ ಜನಿಸಿ ಸ್ವ ಸಾಮರ್ಥ್ಯದಿಂದಲೇ ವ್ಯಾಸಂಗ ಮಾಡಿ ಸಾಮಾನ್ಯ ಶಿಕ್ಷಕ ಹುದ್ದೆಯಿಂದ ತಮ್ಮ ನಿರಂತರ ಅಧ್ಯಯನ ಶೀಲತೆ, ಕ್ರಿಯಾಶೀಲತೆ, ಸರಳಜೀವನ, ಪ್ರಾಮಾಣಿಕತೆ, ದಕ್ಷತೆ ಹಾಗೂ ಸದಾ ಲವಲವಿಕೆಯಿಂದ ಮಾಡುವ ಕೆಲಸದಲ್ಲಿ ನೈಪುಣ್ಯತೆ ಸಾಧಿಸುತ್ತ ಬಂದ ಇವರು ರಾಷ್ಟ್ರಪತಿ ಹುದ್ದೆಯ ವರೆಗೆ ಏರಿದ ಮಹಾನ್ ಗುರುವಾದವರು. ಮುಂದೆ ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದ ಮೇಲೂ ಸಹ ದೇಶದ ಅಭಿವೃದ್ಧಿ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಬಲವರ್ಧನೆ ಕುರಿತು ಸಾವಿರಾರು ಉಪನ್ಯಾಸ, ಭಾಷಣ, ಬರಹಗಳ ಮೂಲಕ ಜಗತ್ತಿಗೆ ದಾರಿದೀಪವಾಗಿದ್ದವರು ಸಾ.ಶ. 1975 ರಲ್ಲಿ ಮರಣಹೊಂದಿದರು. ಜಗತ್ತಿನ ಕೆಲವೇ ಕೆಲವು ಅಗ್ರಗಣ್ಯ ಜ್ಞಾನಿಗಳ ಸಾಲಿಗೆ ಸೇರಿದ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ವಿಶ್ವಮಟ್ಟದ ಶ್ರೇಷ್ಠ ಗುರುವಾಗುದ್ದು ನಮ್ಮೆಲ್ಲ ಭಾರತೀಯರ ಸೌಭಾಗ್ಯ.
(ಆಧಾರ: ಕೆ.ಎಸ್. ರತ್ನಮ್ಮ ವಿರಚಿತ ಡಾ.ಎಸ್. ರಾಧಾಕೃಷ್ಣನ್- ಜೀವನ ಸಾಧನೆ ಕೃತಿ ಹಾಗೂ ಇತರೆ ಕೃತಿಗಳು)

ಬರಹ:- ಗೋಪಾಲ ನಾಯ್ಕ ಭಾಶಿ
ಕನ್ನಡ ಭಾಷಾ ಶಿಕ್ಷಕರು
ಸಿದ್ದಾಪುರ( ಉ.ಕ.)
ಮೊ-8277742013

About the author

Adyot

Leave a Comment