ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಶಂಕರಮಠದಲ್ಲಿ “ಧರ್ಮಶ್ರೀ ಫೌಂಡೇಶನ್” ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಗೇಗಾರಿನ ಶ್ರೀಪಾದ ಹೆಗಡೆ ಅವರು ಬರೆದ ಸ್ವಾತಂತ್ರ್ಯ ಹೋರಾಟಗಾರರ ಕತೆ ಹೇಳುವ “ಹಾವಿನ ಹಂದರದಿಂದ ಹೂವ ತಂದವರು” ಕಾದಂಬರಿಯ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾದಂಬರಿ ಲೋಕಾರ್ಪಣೆಗೊಳಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ,
ಸ್ವಾತಂತ್ರ್ಯಹೋರಾಟಗಾರರು ಹಾಗೂ ಸಾಹಿತಿಗಳು ಎಂದಿಗೂ ದಿವಂಗತರಾಗುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಮೂಲಕ ಚರಿತ್ರೆಯಲ್ಲಿ ಅಜರಾಮರರಾಗಿದ್ದರೆ, ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಜೀವಂತವಾಗಿರುತ್ತಾರೆ.ಸಿದ್ದಾಪುರದಲ್ಲಿ ನಡೆದ ಅಪ್ರತಿಮ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನು ಓದಿದರೆ ಈ ತಾಲೂಕಿನ ಕುರಿತು ಗೌರವ ವೃದ್ಧಿಸುತ್ತದೆ. ಪ್ರಸ್ತುತ ಕೃತಿಯಲ್ಲಿ ಹೂವಿನಮನೆ ತಿಮ್ಮಯ್ಯ ಹೆಗಡೆಯವರ ಹೋರಾಟದ ಮಜಲುಗಳು, ಆಧ್ಯಾತ್ಮಿಕ ಹಿನ್ನೆಲೆ, ತ್ಯಾಗ ಮನೋಭಾವ, ನ್ಯಾಯದಾನದ ಪರಿ ಇವುಗಳನ್ನು ಪ್ರಾದೇಶಿಕ ನುಡಿಗಳಲ್ಲಿ, ಅಪ್ಪಟ ಹವಿಗನ್ನಡದಲ್ಲಿ ಕಟ್ಟಿಕೊಡಲಾಗಿದೆ. ಸತ್ಯ ಹರಿಶ್ಚಂದ್ರನ ಕಥೆಯನ್ನು ಹೋಲುವ ಈ ಕೃತಿಯನ್ನು ಎಲ್ಲಡೆ ಪ್ರಸರಣವಾಗುವಂತೆ ಮಾಡುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಹಿರಿಯ ಸಾಹಿತಿ ಶಾ.ಮಂ.ಕೃಷ್ಣರಾವ್ ಮಾತನಾಡಿ, ಕಾದಂಬರಿ ಎನ್ನುವಂತಹುದು ಹೀಗೇ ಇರಬೇಕೆಂಬ ಚೌಕಟ್ಟನ್ನು ಹೊಂದಿಲ್ಲ. ದುರ್ಗಾಸ್ತಮಾನದಂತಹ ಕಾದಂಬರಿಯಲ್ಲಿಯೂ ಕಾಲ್ಪನಿಕ ಸನ್ನಿವೇಶಗಳಿವೆ. ಉತ್ತರ ಕನ್ನಡದವರು ಶಿಸ್ತಿನಿಂದ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರಾದರೂ ದಾಖಲೆ ಇಡುವಲ್ಲಿ ಹಿಂದೆ ಬೀಳುತ್ತಾರೆ. ಸಿದ್ದಾಪುರ ಸೇರಿದಂತೆ ಜಿಲ್ಲೆಯಾದ್ಯಂತ ನಡೆದ ಸ್ವಾತಂತ್ರ್ಯ ಸಂಗ್ರಾಮದ ಸಮಗ್ರ ಚರಿತ್ರೆಯನ್ನು ಹೊರತರುವಂತಾಗಬೇಕು. ಈ ಕುರಿತು ಸಮೀತಿ ರಚನೆಯಾಗಬೇಕು. ಸತ್ಯವಲ್ಲದ್ದು ಇತಿಹಾಸವಾಗಬಾರದು ಎಂದರು.
ಶಂಕರಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ ನಾವಿಂದು ಸ್ವಾತಂತ್ರ್ಯದ ಸುಖ ಅನುಭವಿಸುವಲ್ಲಿ ಹಿರಿಯರ ತ್ಯಾಗವೇ ಕಾರಣ. ಮುಂದಿನ ತಲೆಮಾರಿಗೆ ಹಿರಿಯರ ಹೋರಾಟದ ಚಿತ್ರಣ ನೀಡಲು ಪಠ್ಯಪುಸ್ತಕಗಳಲ್ಲಿ ವಿಷಯಗಳನ್ನು ಅಳವಡಿಸಬೇಕು ಎಂದರು.
ಖ್ಯಾತ ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ಮಾತನಾಡಿದರು.
ಆಕಾಶವಾಣಿ ಕೇಂದ್ರದ ನಿವೃತ್ತ ಅಧಿಕಾರಿ ದಿವಾಕರ ಹೆಗಡೆ ಕೆರೆಹೊಂಡ ಕೃತಿಯನ್ನು ಪರಿಚಯಿಸಿದರು. ಕೃತಿಕಾರ ಶ್ರೀಪಾದ ಹೆಗಡೆ ಕೃತಿಯನ್ನು ಹೊರತರುವಲ್ಲಿ ಮಾಹಿತಿ ನೀಡಿದವರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಕರನಿರಾಕರಣೆ ಚಳವಳಿಯಲ್ಲಿ ಪ್ರಮುಖವಾಗಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಗೌರವಿಸಲಾಯಿತು. ಕೃತಿಕಾರ ಶ್ರೀಪಾದ ಹೆಗಡೆ ಮಗೇಗಾರ ಹಾಗೂ ಸಿದ್ದಾಪುರದ ಸ್ವಾತಂತ್ರ್ಯ ಸಂಗ್ರಾಮ ಕುರಿತು “ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು” ಕೃತಿ ಬರೆದ ಕೆಕ್ಕಾರ ನಾಗರಾಜ ಭಟ್ಟರನ್ನು “ಧರ್ಮಶ್ರೀ ಫೌಂಡೇಶನ್” ವತಿಯಿಂದ ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು “ಧರ್ಮಶ್ರೀ ಫೌಂಡೇಶನ್”ನ ಗೌರವಾಧ್ಯಕ್ಷ ರಾಮಮೋಹನ ಹೆಗಡೆ ವಹಿಸಿದ್ದರು.
ಜಗದ್ಗುರು ಮುರುಘರಾಜೇಂದ್ರ ಅಂಧರ ಶಾಲೆಯ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ “ಧರ್ಮಶ್ರೀ ಫೌಂಡೇಶನ್” ಕಾರ್ಯಾಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ಪ್ರಾಸ್ತಾವಿಕ ಮಾತನಾಡಿ ಫೌಂಡೇಶನ್ ನಡೆಸಿಕೊಂಡು ಬಂದ ಕಾರ್ಯಕ್ರಮಗಳನ್ನು ವಿವರಿಸಿ, ಮುಂದಿನ ದಿನಗಳಲ್ಲಿ ಸಿದ್ದಾಪುರದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಬೆಳಕಿಗೆ ತರುವ ಜೊತೆ, ಸ್ಮಾರಕ ಭವನ ನಿರ್ಮಿಸುವ ದಿಸೆಯಲ್ಲಿ ಪ್ರಯತ್ನಶೀಲರಾಗೋಣ ಎಂದರು.
ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ವೇ. ಪರಮೇಶ್ವರಯ್ಯ ಕಾನಳ್ಳಿಮಠ ಸ್ವಾಗತಿಸಿದರು. ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಹಾಗೂ ರಂಗನಟ ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು. “ಧರ್ಮಶ್ರೀ ಫೌಂಡೇಶನ್”ನ ಕಾರ್ಯದರ್ಶಿ ಶ್ಯಾಮಲಾ ಹೆಗಡೆ ವಂದಿಸಿದರು.