ಆದ್ಯೋತ್ ಸುದ್ದಿನಿಧಿ
ಈಗ ಐದಾರು ವರ್ಷದ ಹಿಂದಿನ ಸಂಗತಿ. ಬೆಳಿಗ್ಗೆ 8-9 ಗಂಟೆ ಸುಮಾರಿಗೆ ಮನೆಯೆದುರಿನ ಅಂಗಳದಲ್ಲಿ ಏನೋ ಕೆಲಸದಲ್ಲಿದ್ದೆ. ಬಹುಷ: ಹಣ್ಣುಗೋಟು ಬಿಸಿಲಿಗೆ ಹರವುತ್ತಿದ್ದೆ. ಮೊಬೈಲಿಗೆ ಒಂದು ಕರೆ ಬಂತು. ನಂಬರ್ ಮಾತ್ರ ಇತ್ತು. ಎತ್ತಿದೆ. ಆ ಕಡೆಯಿಂದ ಸಣ್ಣದಾದರೂ, ಧ್ವನಿಯಲ್ಲಿ ಗಡಚುತನ ಇರುವ ಸ್ವರ ‘ಕೊಳ್ಗಿಯವರೆ. ನಾನು ಚಂದ್ರಶೇಖರ ಪಾಟೀಲ ಅಂದ್ರೆ ಚಂಪಾ. ಆರಾಮದಿರೇನೂ..’ ಅಂದಿತು. ನಾನು ಬೆವರಲಿಲ್ಲ. ಬೆರಗಾದೆ!. ಸುಮಾರು ಮುಕ್ಕಾಲುಗಂಟೆ ಮಾತನಾಡಿದ ಚಂಪಾ ಸರ್ ನನ್ನ ಆರೋಗ್ಯ, ಕೆಲಸ,ಕಾರ್ಯ,ಮನೆ,ಮಡದಿ,ಮಗನ ಬಗ್ಗೆ ವಿಚಾರಿಸಿಕೊಳ್ಳುತ್ತಲೇ ಒಂದಷ್ಟು ಅವರದ್ದೇ ಆದ ವಿಶಿಷ್ಠ ಜೋಕ್,ಫನ್‍ಗಳನ್ನು ಮಾಡಿದ್ದರು. ಆಗಲೂ, ಕೊನೆಯ ಬಾರಿ ಭೇಟಿಯಾದಾಗಲೂ ಸಿದ್ದಾಪುರಕ್ಕೆ ಬರಬೇಕು ಎಂದಾಗ ಬರ್ತೀನ್ರಿ, ಒಂದೆರಡು ಬಾರಿ ಬಂದ ನೆನಪಿದೆ. ನೀವ್ ಕರೆದಾಗ ಬರದೇ ಇರ್ತೀನಾ, ಕುರಕುರಿ, ಸತೀಶ ಜೋಡಿಲೇ ಬರ್ತೀನಿ ಎಂದಿದ್ದರು. ಬರಲೇ ಇಲ್ಲ.
ಹಿರಿಯ ಕವಿ, ಸಂಘಟಕ ಹಾವೇರಿಯ ಸತೀಶ ಕುಲಕರ್ಣಿ ಒಂದು ವಿಚಾರ ಸಂಕಿರಣವನ್ನ ಸಮಾನಮನಸ್ಕರು ಸೇರಿ ರೂಪಿಸಿಕೊಂಡ ಅವರ ಸ್ಕೂಲ್‍ನಲ್ಲಿ ಆಯೋಜಿಸಿದ್ದರು. ನನಗೂ ಆಮಂತ್ರಣ ಇತ್ತು. ಅಷ್ಟರಲ್ಲೇ ಆತ್ಮೀಯರು, ಹಿರಯರಾದರೂ ಗೆಳೆಯರಂತಿರುವ ಪ್ರೊ| ಧರಣೇಂದ್ರ ಕುರಕುರಿಯವರು ಫೋನ್ ಮಾಡಿ ಬರ್ರೀ, ಕಾರ್ಯಕ್ರಮಕ್ಕೆ ಹೋಗೋಣ ಅಂತ ಹುರಿದುಂಬಿಸಿದರು. ಹೋದೆ. ಆ ಬೆಳಿಗ್ಗೆ ಆ ಶಾಲೆಯ ಅಂಗಳದ ತುಂಬ ಕಲರವ. ಮಕ್ಕಳದ್ದಲ್ಲ; ಸಾಹಿತ್ಯಾಸಕ್ತರದ್ದು, ಸಾಹಿತಿಗಳದ್ದು ಮಾತ್ರ ಅಲ್ಲ. ನಮ್ಮ ಪ್ರಕಾರ ಜನ ಸಾಮಾನ್ಯರು ಅಂತೀವಲ್ಲ, ಆ ಮಹಾನುಭಾವರನ್ನು ಸೇರಿಕೊಂಡ ದೊಡ್ಡ ಕೂಟ ಚಂಪಾರನ್ನು ಸುತ್ತುವರಿದಿತ್ತು. ಬಲಗೈಯಲ್ಲಿ ಒಂದಿಷ್ಟು ಪುಸ್ತಕಗಳ ಪಿಂಡಿ ಹಿಡಿದಿಕೊಂಡು, ಅವರ ಜೊತೆ ಕುಶಲವಾಗೇ ಮಾತನಾಡುತ್ತಿದ್ದ ಚಂಪಾರನ್ನು ಜನಸಂದಣಿ ಕಡಿಮೆಯಾದ ನಂತರ ಕುರಕುರಿಯವರು ನನ್ನನ್ನ ಪರಿಚಯಿಸಿದರು. ಎಡಗೈಯಿಂದ ನನ್ನ ಹೆಗಲು ತಟ್ಟಿದ ಚಂಪಾ ಮತ್ತೊಮ್ಮೆ ಕಿವಿಯಾನಿಸಿ ನನ್ನ ಹೆಸರು,ಊರು ಕೇಳಿಸಿಕೊಂಡರು. ಅವತ್ತಿನ ನನ್ನ ಪರಿಚಯದ ಕುರುಹನ್ನು ನೆನಪಿಟ್ಟುಕೊಂಡು ಅದಾಗಿ ಒಂದು ವಾರದ ನಂತರ ನನಗೆ ಕರೆ ಮಾಡಿ ಮತ್ತಷ್ಟು ಮಾತನಾಡಿದ್ದರು. ನನಗೇ ನಾನೇ ದೂಷಿಸಿಕೊಳ್ಳುವಂತಾಯಿತು. ಕನ್ನಡದ ಬಹುತೇಕ, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಶಿವರಾಮ ಕಾರಂತ,ಕೆ.ವಿ.ಸುಬ್ಬಣ್ಣ, ಧರಣೇಂದ್ರ ಕುರಕುರಿ, ಆರ್.ಪಿ.ಹೆಗಡೆಯವರಂಥ ಹಿರಿಯರಿಂದ ಹೊಸ ತಲೆಮಾರಿನ ಜಯಂತ್ ಕಾಯ್ಕಿಣಿಯಂಥವರ ಸಮೀಪ ಸಾಂಗತ್ಯ ಪಡೆದವನು ಇವರನ್ನೆಲ್ಲಿ ತಪ್ಪಿದೆ? ಎನ್ನಿಸಿಬಿಟ್ಟಿತು. ಅದಕ್ಕೂ ಕಾರಣಗಳಿವೆ ಎಂದು ಸಮಾಧಾನಿಸಿಕೊಂಡೆ.
ಅಷ್ಟರ ನಂತರ ಬ್ಯಾಡಗಿ,ಹಾವೇರಿ, ಬೆಂಗಳೂರು ಮುಂತಾದ ಕಡೆ ನಾಲ್ಕಾರು ಬಾರಿ ಭೇಟಿಯಾಗಿದ್ದೆ. ನೋಡಿದಾಕ್ಷಣ ಕೊಳ್ಗಿಯವರೇ ಅನ್ನೋ ಅಷ್ಟು ನೆನಪಿನಲ್ಲಿ ಇಟ್ಟುಕೊಂಡಿದ್ದರು. ಒಮ್ಮೆ ಹಾವೇರಿಗೆ ಹೋದಾಗ ನಡೆದ ಸಭಾ ಕಾರ್ಯಕ್ರಮದಲ್ಲಿ ನನ್ನನ್ನು ವೇದಿಕೆಯಲ್ಲಿ ಕೂರಿಸಿದ್ದರು. ತಮ್ಮ ಸಂಬೋಧನೆಯಲ್ಲಿ ಉತ್ತರ ಕನ್ನಡದ ಕೊಳ್ಗಿಯವರು.. ಅಂತಲೇ ಹೇಳಿದ್ದರು. ಬೆಂಗಳೂರಿನ ಕನ್ನಡ ಭವನದ ಎದುರು ಸಿಕ್ಕದ್ದೇ ಕೊನೆ. ನಂತರ ಅವರು ಮುಖತ: ಸಿಗಲಿಲ್ಲ. ಅವರಿಗೆ ಹುಷಾರಿಲ್ಲದಾಗ ಫೋನ್ ಮಾಡಿದಾಗ ಕ್ಷೀಣ ಧ್ವನಿಯಲ್ಲಿ ತುಸು ಮಾತನಾಡಿದ್ದರು. ಅವರಿಗೆ ತೊಂದರೆ ಬೇಡ ಅಂತ ನಾನು ನಂತರ ಕರೆ ಮಾಡಲಿಲ್ಲ. ಈಗ ಅವರಿಲ್ಲ.
ಚಂಪಾರದ್ದೇ ಕವಿತೆಯ ಸಾಲು,
ಸತ್ತವರು ಎಲ್ಲಿ ಹೋಗುತ್ತಾರೆ?
ಎಲ್ಲಿಯೂ ಹೋಗುವದಿಲ್ಲ
ಇಲ್ಲಿಯೇ ಇರುತ್ತಾರೆ
ಇದ್ದವರ ಮನದಲ್ಲಿ…
ಬುದ್ದಿ ಬಲ್ಲಾದಾಗಿನಿಂದ ಪತ್ರಿಕೆಗಳಲ್ಲಿ ಹೆಸರು ಓದುತ್ತಿದ್ದರೂ, ಫೋಟೊ ನೋಡುತ್ತಿದ್ದರೂ, ಆ ನಂತರ ಸಾಹಿತ್ಯ, ರಂಗಭೂಮಿಯ ಸಂಪರ್ಕಕ್ಕೆ ಬಂದಾಗ ಅವರ ನಾಟಕ,ಕವಿತೆಗಳನ್ನ ಓದಿದ್ದರೂ, ಕೊಡೆಗಳು, ಟಿಂಗರ ಬುಡ್ಡಣ್ಣ ಎನ್ನುವ ಅವರ ನಾಟಕಗಳನ್ನ ನಿರ್ದೇಶಿಸಿದ್ದರೂ ಚಂದ್ರಶೇಖರ ಪಾಟೀಲ ಎನ್ನುವ ಹೆಸರಿನ ವ್ಯಕ್ತಿಯನ್ನ ಕಂಡದ್ದು ತೀರಾ ಇತ್ತೀಚೆಗೆ ಎನ್ನುವದೇ ನನ್ನ ದುರದೃಷ್ಠ.
ಚಂದ್ರಶೇಖರ ಪಾಟೀಲ ಅಥವಾ ಚಂಪಾ ಎನ್ನುವ ಹಿರಿಯ ಕವಿ,ನಾಟಕಕಾರ ಮುಖ್ಯವಾಗಿ ಹೋರಾಟಗಾರ.ನಂತರದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರ ಬಗ್ಗೆ ಅಪಾರ ಗೌರವ, ಕುತೂಹಲಗಳಿದ್ದರೂ ಅವರ ಕುರಿತು ನನ್ನದೇ ಆದ ಪೂರ್ವಾಗ್ರಹವಿತ್ತು. ಈ ಪೂರ್ವಾಗ್ರಹಕ್ಕೆ ಸಾಕಷ್ಟು ಕಾರಣಗಳಿದ್ದವು. ಬೆಂಗಳೂರನ್ನು ಕೇಂದ್ರಿಕೃತ ಮಾಡಿಕೊಂಡ ಸಾಹಿತಿ,ಕಲಾವಿದರ ಕೊಡುಗೆಯೂ ಸಾಕಷ್ಟಿದೆ. ಬೆಂಗಳೂರು ಮತ್ತು ಹಳೆ ಮೈಸೂರು ಭಾಗದ ಬರೆಹಗಾರರನ್ನು ಬಿಟ್ಟರೆ ಉಳಿದವರೆಲ್ಲ ಯಕಶ್ಚಿತ ಎನ್ನುವ ಭಾವನೆ ಮೊದಲೂ ಇತ್ತು, ಈಗಲೂ ಇದೆ. ಅಂಥ ಅನುಭವಗಳು ಸಾಕಷ್ಟಾಗಿರುವ ಕಾರಣಕ್ಕೆ ಹೇಳಲೇಬೇಕಿದೆ.
ನಾನೊಮ್ಮೆ ಕರ್ನಾಟಕ ಫಿಲಂ ಚೇಂಬರ್ ಆಯೋಜಿಸಿದ್ದ ಚಲನಚಿತ್ರ ಸಾಹಿತ್ಯ ಬರವಣಿಗೆ(ಸ್ಕ್ರಿಪ್ಟ ರಚನೆ)ಯ 15 ದಿನಗಳ ಕಮ್ಮಟದಲ್ಲಿ ಭಾಗವಹಿಸಿದ್ದಾಗ ಕೊನೆಯ ದಿನ ಎಲ್ಲರ ಪರವಾಗಿ ಮಾತನಾಡುವವರನ್ನ ಆಯ್ಕೆ ಮಾಡಬೇಕಾದ ನಮ್ಮದೇ ಸಭೆ ನಡೆಯಿತು. ನಾನು ಜಯಂತ್ ಕಾಯ್ಕಿಣಿ ಹೆಸರು ಸೂಚಿಸಿದೆ. ಪ್ರತಿಭಾ ನಂದಕುಮಾರ್, ರೇಖಾರಾಣಿ ಮುಂತಾದ ಮಹಾನ್ ಕವಿಯಿತ್ರಿಯರು ಹೇಗೆ ಮುಗಿಬಿದ್ದರು ಅಂದ್ರೆ ‘ ನೀವು ಉತ್ತರ ಕರ್ನಾಟಕದವರು, ಉತ್ತರ ಕನ್ನಡದವರು ಹೀಗೇ, ನಿಮ್ಮನ್ನೇ ಆರಿಸ್ಕೋತಿರಾ..’ ಅಂತೆಲ್ಲ ಕೂಗತೊಡಗಿದರು. ಅದರ ಮೊದಲು ಸಣ್ಣವನಾದ ನನ್ನನ್ನು ಸುಮ್ಮನೆ ಕೀಟಲೆ ಮಾಡುತ್ತಿದ್ದ, ಎಲ್ಲರೆದುರು ಏನೋ ಕೇಳಿ ಮಂಗ್ಯಾ ಮಾಡುತ್ತಿದ್ದ ಅವರ ಬಗ್ಗೆ ತುಂಬಾ ಸಿಟ್ಟು ಇತ್ತು. ಅದನ್ನೇ ಮನಸ್ಸಲ್ಲಿಟುಕೊಂಡು ವಾದಿಸಿದೆ; ಪರವಾಗೇ ಬಹುತೇಕ ಎಲ್ಲರೂ ಬಂದರು. ಅವತ್ತು ಗಿರೀಶ್ ಕಾರ್ನಾಡ್, ಪಾರ್ವತಮ್ಮ ರಾಜಕುಮಾರ್, ಗಿರೀಶ್ ಕಾಸರವಳ್ಳಿ ಇದ್ದ ಸಭೆಯಲ್ಲಿ ಜಯಂತ್ ನಮ್ಮೆಲ್ಲರ ಪರವಾಗಿ ಮಾತನಾಡಿದ್ದರು.
ಇದು ಯಾಕೆ ಉದಾಹರಣೆ ಅಂದರೆ ಅನಾದಿ ಕಾಲದಿಂದ ಬೆಂಗಳೂರೆಂಬ ಕೇಂದ್ರಿಕೃತ ರಾಜಧಾನಿ ಈ ಥರದ ಸೊಕ್ಕನ್ನ ಕೊಟ್ಟಿದೆ. ಉತ್ತರ ಕರ್ನಾಟಕವೆಂದರೆ ಅದು ಬಡವರ, ಕೈಲಾಗದವರದ್ದು ಅಂತ. ಚಂಪಾ ಬೆಂಗಳೂರಿಗೆ ಹೋಗಿ ಅವರಂತಯೇ ಆದರೋ ಎನ್ನುವ ಅನುಮಾನವೂ ನನ್ನೊಳಗಿತ್ತು.
ಆಗಷ್ಟೇ ಚಡ್ಡಿಯಿಂದ ಪ್ಯಾಂಟ್‍ಗೆ ಬಡ್ತಿ ಹೊಂದಿದ್ದ ಆ 80ರ ದಶಕದಲ್ಲಿ ಚಿಕ್ಕವನಿದ್ದಾಗ ಗೋಕಾಕ್ ಚಳುವಳಿ ಶುರುವಾಯ್ತು; ನಮ್ಮಂಥ ಹುಡುಗರಿಗೆ ಅದರ ಗಂಧ ಗಾಳಿ ತಿಳಿಯುತ್ತಿದ್ದಿಲ್ಲ. ಆವಾಗ ಬರುತ್ತಿದ್ದ ಸಂಯುಕ್ತ ಕರ್ನಾಟಕ, ಪ್ರಜಾವಾಣಿ .. ಮುಂತಾದ ದಿನಪತ್ರಿಕೆಗಳಲ್ಲಿ ಇದರದ್ದೇ ಹೆಡ್‍ಲೈನ್. ಹೈಸ್ಕೂಲಿಗೆ ದಿನಾ ಸಿದ್ದಾಪುರಕ್ಕೆ ಬರುತ್ತಿದ್ದ ನಾನು ನನ್ನ ಅಕ್ಕನ ಮನೆಯಲ್ಲಿ ತರಿಸುತ್ತಿದ್ದ ಪ್ರಜಾವಾಣಿಯನ್ನ ನಿತ್ಯ ಓದುತ್ತಿದ್ದೆ. ಮುಖಪುಟವಲ್ಲದೇ, ಒಳಗಿನ ಮುಖ್ಯ ಪುಟಗಳಲ್ಲೂ ಅದರದ್ದೇ. ಇಸ್ಟಿಷ್ಟಗಲದ ಫೋಟೊಗಳು, ವಿವರವಾದ ಸುದ್ದಿಗಳು. ಆಗ ಸಹಜವಾಗಿ ಪತ್ರಿಕೋದ್ಯಮದ ಬಗ್ಗೆ ಏನೂ ಗೊತ್ತಿರಲಿಲ್ಲ. ಈಗ ಅಲ್ಪಸ್ವಲ್ಪ ತಿಳಿದಿರುವ ಈಗಲೂ ಅಂದಿನ ಪೇಜಿನೇಟರ್ ಹೇಗೆ ಪುಟ ವಿನ್ಯಾಸ ಮಾಡುತ್ತಿದ್ದ ಎನ್ನುವದರ ಬಗ್ಗೆ ಕುತೂಹಲ ಇದ್ದೇಇದೆ. ಆ ಫೋಟೊ, ಕವರೇಜ್ ಕಣ್ಣಿಗೆ ಕಟ್ಟಿದಂತೆಯೇ ಇದೆ.
ಆವಾಗ ವೈಕುಂಠರಾಜು ಭಾನುವಾರದ ಸಾಪ್ತಾಹಿಕದ ಸಂಪಾದಕರಾಗಿದ್ದರು. ಕೆ.ಎನ್.ಹರಿಕುಮಾರ್ ಸಂಪಾದಕರಾಗಿದ್ದರು- ನನ್ನ ತಿಳುವಳಿಕೆಯ ಪ್ರಕಾರ- ಆ ಸಂದರ್ಭದಲ್ಲಿ ಹರಿಕುಮಾರ್ ಸುಮಾರು 15-16 ಪುಟಗಳ ಗೋಕಾಕ್ ಚಳುವಳಿ ಕುರಿತಾದ ವಿಶೇಷ ಸಂಚಿಕೆಯನ್ನ ಪ್ರಕಟಿಸಿದರು. ಮತ್ತು ಆ ಕುರಿತು ಪ್ರತಿಕ್ರಿಯಿಸುವ ಅವಕಾಶವನ್ನು ಓದುಗರಿಗೆ ಕೊಟ್ಟಿದ್ದರು. ಆ ಎಲ್ಲವನ್ನು ಓದಿ ನಾನೊಂದು ಪ್ರತಿಕ್ರಿಯೆ ಬರೆದೆ. ಅದು ಆ ಕಾಲದ ಹೆಸರಾಂತ ಲೇಖಕರ ಪ್ರತಿಕ್ರಿಯೆಗಳೊಂದಿಗೇ ಪ್ರಕಟವಾಯ್ತು. ನನ್ನ ಮೊದಲ ಪತ್ರಿಕಾ ಬರವಣಿಗೆ ಅದು.( ತುಂಬಾ ವರ್ಷ ಕಾದಿಟ್ಟುಕೊಂಡಿದ್ದೆ. ಊರು, ಮನೆ ಬದಲಾಯಿಸುವಾಗ ಎಲ್ಲಿಯೋ ಕಳೆದುಹೋಯ್ತು, ಆದರೆ ಸ್ಮøತಿಯಲ್ಲಿದೆ).
ಚಂದ್ರಶೇಖರ ಪಾಟೀಲರನ್ನು ಓದುತ್ತ ಬಂದಿದ್ದರೂ, ಅವರ ಕುರಿತು ಇನ್ನಷ್ಟು ವಿವರಗಳು, ಅವರ ಕಾರ್ಯಸಾಧನೆಗಳು ಅರಿವಿಗೆ ಬರುತ್ತಿದ್ದರೂ ಯಾಕೋ ಒಂದು ಸಣ್ಣ ತಡೆ ಅವರ ಕುರಿತಾಗಿತ್ತು. ಅವರು ಬರಹಗಾರರ ಒಕ್ಕೂಟ ಮಾಡಿದಾಗಿನ, ಬಂಡಾಯ ಸಾಹಿತ್ಯದ ಕುರಿತಾದ ವೇದಿಕೆ ಮಾಡಿದಾಗಿನ, ಜಾತಿ ವಿನಾಶ ಸಮ್ಮೇಳನ ಮಾಡಿದಾಗಿನ ಬಗ್ಗೆ ಅಲ್ಲದಿದ್ದರೂ ಅವರು ಕಟ್ಟುವವರಲ್ಲ, ಕೆಡವುವವರು ಎನ್ನುವ ಅನಿಸಿಕೆ ನನ್ನದಾಗಿತ್ತು. ( 40 ವರ್ಷದ ಹಿಂದೆ ಆ ಬಗ್ಗೆ ಹೋರಾಟ ನಡೆದಿದ್ದರೂ ಇಂದು ಯಾವುದು ಬದಲಾಗಿಲ್ಲ. ಜಾತ್ಯಾತೀತ ಎನ್ನುವವರೇ ಬೇರೆ ಜಾತಿಗಳ ಬಗ್ಗೆ ಬೈಯುತ್ತಾರೆ, ಬರೆಯುತ್ತಾರೆ. ತಮ್ಮ ಬಗ್ಗೆ ಉಸಿರಿಲ್ಲ. ಇದು ಇಂದಿನ ಸೋಕಾಲ್ಡ ಜಾತ್ಯಾತೀತತೆ).
ಚಂಪಾ ಬಗ್ಗೆ ಇದ್ದ ನನ್ನೊಳಗೆ ಇದ್ದ ಕೆಲವೊಂದು ಭಿನ್ನಾಭಿಪ್ರಾಯಗಳು ಅವರ ಕೃತಿಗಳನ್ನು ಓದುವ, ಅವರ ಮಾತನ್ನು ಕೇಳುವದಕ್ಕೆ ಯಾವತ್ತೂ ಅಡ್ಡಿಯಾಗಲಿಲ್ಲ. ನನಗೆ ಹಳೆಯ ಧಾರವಾಡ ಅಪರಿಚಿತವೇನಲ್ಲ; ಗೆಳೆಯನ ಸೈಕಲ್ ಹೊಡಕೊಂಡು ಇಡೀ ಧಾರವಾಡ ಅಡ್ಡಾಡಿದವನು. ಈಗೆಲ್ಲ ಬದಲಾಗಿದೆ. ಚಂಪಾ ಮನೆಯನ್ನೂ ನೋಡಿದ್ದೆ. ಹುಚ್ಚಾಸ್ಪತ್ರೆ ಪಕ್ಕ. ಅಲ್ಲಿ ನನ್ನ ಊರಿನ ಒಬ್ಬರು ಡಾಕ್ಟರ್ ಆಗಿದ್ರು.( ಚಂಪಾ ಮನೆಗೂ, ನಮ್ಮೂರಿನ ಡಾಕ್ಟರ್ ಮನೆಗೂ ಹೋಗಿಲ್ಲ). ಜಗತ್‍ಪ್ರಸಿದ್ಧವಾದ ಅವರ ಮತ್ತು ಬೇಂದ್ರೆಯವರ ಜಗಳ, ಅವರು ವಿನಾ:ಕಾರಣ ಇನ್ನುಳಿದ ಬರಹಗಾರರ ಜೊತೆಗೆ ನಡೆಸುತ್ತಿದ್ದ ವಾಟಾಘಾಟ್ ಇವೆಲ್ಲ ಎಷ್ಟೋ ದಿನಗಳ ನಂತರ ಕಿವಿಗೆ ಬೀಳುತ್ತಿದ್ದವು.ಅದನ್ನು ನಾವು ಎಂಜಾಯ್ ಮಾಡುತ್ತಿದ್ದೆವು.( ಈಗಿನಂತೆ ಆಗ ಅದೃಷ್ಟವಶಾತ್ ಸಾಮಾಜಿಕ ಜಾಲತಾಣ ಇರಲಿಲ್ಲ.)
ಚಂಪಾ ಅವರಿಗೆ ಒಂದು ವಿಶಿಷ್ಠವಾದ ಶಕ್ತಿ ಇತ್ತು. ಅದು ಅಂತರಂಗದಲ್ಲೂ, ಬಹಿರಂಗದಲ್ಲೂ. ತನ್ನ ನಿಲುವನ್ನ ಅವರು ಎಲ್ಲಿಯೂ ಸ್ಪಷ್ಟವಾಗಿಯೇ ವ್ಯಕ್ತಪಡಿಸುತ್ತಿದ್ದರು.ಅವರ ಸಾಹಿತ್ಯ ಕೃಷಿ, ಹೋರಾಟ ಇವುಗಳ ಬಗ್ಗೆ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ತಮ್ಮ ತೀಕ್ಷ್ಣ, ಹರಿತ,ವ್ಯಂಗ್ಯಗಳ ಜೊತೆಗೇ ಹಾಸ್ಯ,ವಿಡಂಬನೆಗಳನ್ನೂ ತಮ್ಮ ಮಾತು, ಬರಹಗಳಲ್ಲಿ ಒಳಗೊಳ್ಳುತ್ತಿದ್ದರು. ಅವರ ಮೊನಚಾದ, ಘಾಸಿಯಾಗುವ ಬರಹಗಳನ್ನ ಓದಿಅನುಭವಿಸಿದಾತ ಅವರು ಜನರೊಂದಿಗೆ ನಡೆದುಕೊಳ್ಳುತ್ತಿದ್ದ ನಡವಳಿಕೆ, ಅವರ ಜೊತೆಗಿನ ಹತ್ಪೂರ್ವಕ ಮಾತುಕಥೆ, ಅಲ್ಲಿನ ಹಾಸ್ಯ, ಕುಟುಕುವಿಕೆ ಕೇಳಿದರೆ ಖಂಡಿತಾ ಈತ ಚಂಪಾ ಅಲ್ಲ ಎನ್ನುವಂತಿರುತ್ತಿತ್ತು. ಹಾಗಂಥ ಅವರದ್ದು ದ್ವಿವ್ಯಕ್ತಿತ್ವ ಅನ್ನೋ ಅರ್ಥದಲ್ಲಿ ಅಲ್ಲ. (ಇಟ್ಟುಕೊಂಡ ಕಲ್ಪನೆಯೇ ತಿರುಗುಮುರುವಾದ ನಾನೇ ಒಂದು ಉದಾಹರಣೆ).
ಕನ್ನಡ ನಾಡಿನ, ನುಡಿಯ ಕುರಿತಾಗಿ ಸ್ಪಷ್ಟ ಅಭಿಪ್ರಾಯಗಳಿದ್ದ, ಕನ್ನಡದ ಕುರಿತಾಗಿ ಯಾವತ್ತೂ ಎಚ್ಚರಿಕೆಯ ಶಕ್ತಿಯಾಗಿದ್ದ, ಹುಟ್ಟು ಹೋರಾಟಗಾರರಂತೆ ಅಸಂಬದ್ಧ ವರ್ತನೆಯ ಹೊರತಾಗಿ ನಿರ್ಧಿಷ್ಟ ದಿಕ್ಸೂಚಿಯನ್ನು ಹೋರಾಟಕ್ಕೆ ನೀಡುತ್ತಿದ್ದ ಚಂಪಾ ಇಲ್ಲ.
ಆದರೆ ಅವರು ಕಳೆದ 53 ವರ್ಷಗಳಲ್ಲಿ ನಿರಂತರವಾಗಿ ಸಂಪಾದಿಸಿದ ಸಂಕ್ರಮಣ ಸಾಹಿತ್ಯ ಸಂಕಲನ ಪತ್ರಿಕೆ, ಅವರ ಕವಿತೆ, ನಾಟಕ ಮುಂತಾದ ಸಾಹಿತ್ಯ, ಅವರ ನಾಡು,ನುಡಿಗಾಗಿನ ಹೋರಾಟ ಜೀವಂತವಾಗಿರುತ್ತದೆ. ವೈಯುಕ್ತಿಕವಾಗಿ ನನಗೆ ಕಿರು ಅವಧಿಯಲ್ಲಿ ಕೊಟ್ಟ ಜೀವದ್ರವ್ಯ ನಾನಿರುವ ತನಕ ನನ್ನ ಹೃದಯ,ಮನಸ್ಸಿನಲ್ಲಿರುತ್ತದೆ.
#####
ಗಂಗಾಧರ ಕೊಳಗಿ